ಮಂಗಳವಾರ, ಅಕ್ಟೋಬರ್ 22, 2019
25 °C
ಗ್ರಾಮೀಣ, ನಗರ ಪ್ರದೇಶಗಳಿಗೆ ಅನ್ವಯ, ₹25 ಲಕ್ಷದವರೆಗಿನ ಕೈಗಾರಿಕೆ ಸ್ಥಾಪಿಸಲು ಅವಕಾಶ

ಪಿಎಂಇಜಿಪಿ: ಜಿಲ್ಲೆಯಲ್ಲಿ 258 ಮಂದಿ ಅರ್ಜಿ

Published:
Updated:
Prajavani

ಚಾಮರಾಜನಗರ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸ್ವಯಂ ಉದ್ಯೋಗ ಮಾಡಲು ಬಯಸುವವರಿಗೆ ನೆರವಾಗಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ (ಪಿಎಂಇಜಿಪಿ) ಅಡಿಯಲ್ಲಿ ಸಾಲ ಸೌಲಭ್ಯಕ್ಕಾಗಿ ಜಿಲ್ಲೆಯಲ್ಲಿ 258 ಮಂದಿ ಅರ್ಜಿ ಸಲ್ಲಿಸಿದ್ದಾರೆ. 

ಕೇಂದ್ರೀಯ ಖಾದಿ ಗ್ರಾಮೋದ್ಯೋಗ ಆಯೋಗ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಗಳು ಜಂಟಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿವೆ. 2008ರಿಂದ ಈ ಯೋಜನೆ ಜಾರಿಯಲ್ಲಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕೈಗಾರಿಕಾ ಮತ್ತು ಸೇವಾ ಚಟುವಟಿಕೆಗಳನ್ನು ನಡೆಸಲು ಪ್ರೋತ್ಸಾಹ ನೀಡುವುದು ಯೋಜನೆ ಪ್ರಮುಖ ಉದ್ದೇಶ. ಯೋಜನೆಗಾಗಿ ರಾಷ್ಟ್ರೀಕೃತ ಬ್ಯಾಂಕುಗಳು/ ಸಹಕಾರಿ/ಗ್ರಾಮೀಣ/ ಖಾಸಗಿ ಶೆಡ್ಯೂಲ್‌ ಬ್ಯಾಂಕುಗಳಿಂದ ಸಾಲ ಕೊಡಿಸಲಾಗುತ್ತದೆ. ಗರಿಷ್ಠ ₹25 ಲಕ್ಷದವರೆಗಿನ ಕೈಗಾರಿಕೆ ಸ್ಥಾಪಿಸಲು ಅವಕಾಶ ಇದೆ. 

ಜಿಲ್ಲೆಯಲ್ಲಿ ಕೈಗಾರಿಕಾ ಕೇಂದ್ರದ ಮೇಲ್ವಿಚಾರಣೆಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 2018ರ ಆಗಸ್ಟ್‌ನಿಂದ 2019ರ ಜೂನ್‌ವರೆಗೆ ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ 258 ಮಂದಿ ಅರ್ಜಿ ಸಲ್ಲಿಸಿದ್ದಾರೆ (ಕೈಗಾರಿಕಾ ಕೇಂದ್ರಕ್ಕೆ 168 ಅರ್ಜಿಗಳು ಬಂದಿದ್ದರೆ, ಗ್ರಾಮೋದ್ಯೋಗ ಮಂಡಳಿಗೆ 71 ಹಾಗೂ ಗ್ರಾಮೋದ್ಯೋಗ ಆಯೋಗಕ್ಕೆ 19 ಅರ್ಜಿಗಳು ಬಂದಿವೆ). ಜಿಲ್ಲಾಡಳಿತಕ್ಕೆ 90 ಫಲಾನುಭವಿಗಳನ್ನು ಆಯ್ಕೆ ಮಾಡುವ ಗುರಿ ನೀಡಲಾಗಿದೆ. 

ಕಡಿಮೆ ಅರ್ಜಿ: ಅರ್ಜಿದಾರರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿದ ನಂತರ ಅವರ ಸಂದರ್ಶನ ನಡೆಸಿ, ನಿಗದಿತ ಗುರಿಯ 1:3ರ ಅನುಪಾತದಲ್ಲಿ ಅರ್ಜಿದಾರರನ್ನು ಆಯ್ಕೆ ಮಾಡಬೇಕು ಎಂಬುದು ನಿಯಮ.  90ರ ಗುರಿಗೆ 1:3ರ ಅನುಪಾತದ ಅಂದರೆ ಕನಿಷ್ಠ 270 ಅರ್ಜಿದಾರರನ್ನು ಆಯ್ಕೆ ಮಾಡಬೇಕು. ಆದರೆ, ಇಲ್ಲಿ 258 ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಆನ್‌ಲೈನ್‌ನಲ್ಲೇ ಅರ್ಜಿ: ಹೊಸದಾಗಿ ಕೈಗಾರಿಕೆಗಳನ್ನು ಸ್ಥಾಪಿಸಲು, ಸೇವಾ ‌ಚಟುವಟಿಕೆಗಳನ್ನು ಆರಂಭಿಸಲು ಇಚ್ಛಿಸುವ 18 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಅರ್ಜಿ ಸಲ್ಲಿಸಲು ಅರ್ಹರು. ಆನ್‌ಲೈನ್‌ನಲ್ಲಿ (https://www.kviconline.gov.in/pmegpeportal)  ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇದೆ. 

ಬ್ಯಾಂಕುಗಳು ಸಾಲ ಮಂಜೂರು ಮಾಡುವುದಕ್ಕೂ ಮುನ್ನ, ಕೈಗಾರಿಕಾ ಕೇಂದ್ರ ಫಲಾನುಭವಿಗಳಿಗೆ ಎರಡು ವಾರಗಳ ಉದ್ಯಮ ಶೀಲತಾ ತರಬೇತಿ ನೀಡುತ್ತದೆ. ಇದನ್ನು ಪಡೆಯುವುದು ಕಡ್ಡಾಯ.

ಎಷ್ಟು ಸಾಲ?: ಗರಿಷ್ಠ ₹25 ಲಕ್ಷ ಕೈಗಾರಿಕಾ ಚಟುವಟಿಕೆಗಳು ಹಾಗೂ ₹10 ಲಕ್ಷ ವೆಚ್ಚದ ಸೇವಾ ಚಟುವಟಿಕೆಗಳನ್ನು ಯೋಜನೆಯ ಅಡಿಯಲ್ಲಿ ಸ್ಥಾಪಿಸಲು ಅವಕಾಶ ಇದೆ. ₹10 ಲಕ್ಷಕ್ಕಿಂತಲೂ ಹೆಚ್ಚಿನ ವೆಚ್ಚದ ಕೈಗಾರಿಕೆ ಹಾಗೂ ₹5 ಲಕ್ಷಕ್ಕೂ ಹೆಚ್ಚಿನ ಮೊತ್ತ ಸೇವಾ ಚಟುವಟಿಕೆ ಆರಂಭಿಸಿಸಲು ಬಯಸುವವರು ಕನಿಷ್ಠ 8ನೇ ತರಗತಿವರೆಗಿನ ವಿದ್ಯಾರ್ಹತೆ ಹೊಂದಿರಬೇಕು.

ಸಾಮಾನ್ಯ ವರ್ಗದ ಅರ್ಜಿದಾರರು ಒಟ್ಟು ಯೋಜನಾ ವೆಚ್ಚದ ಶೇ 10ರಷ್ಟು ಮತ್ತು ಇತರರು (ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಅಂಗವಿಕಲರು, ಮಾಜಿ ಸೈನಿಕರು, ಮಹಿಳೆಯರು) ಶೇ 5ರಷ್ಟು ಬಂಡವಾಳ ಹಾಕಬೇಕು.

ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯ ವರ್ಗಕ್ಕೆ ಯೋಜನಾ ವೆಚ್ಚದ ಶೇ 15 ರಷ್ಟು ಹಾಗೂ ಇತರಲಿಗೆ ಶೇ 25ರಷ್ಟು ಸಹಾಯಧನ ನೀಡಲಾಗುತ್ತದೆ. ನಗರ ಪ್ರದೇಶಗಳಲ್ಲಿ ಸಾಮಾನ್ಯ ವರ್ಗದವರಿಗೆ ಶೇ 25 ಹಾಗೂ ಇತರರಿಗೆ ಶೇ 35ರಷ್ಟು ಸಹಾಯಧನ ಸಿಗಲಿದೆ. ಬ್ಯಾಂಕುಗಳು ನೀಡುವ ಸಾಲಕ್ಕೆ ಸಾಮಾನ್ಯ ಬಡ್ಡಿದರ ಇರಲಿದ್ದು, ಮೂರು ವರ್ಷಗಳಿಂದ ಏಳು ವರ್ಷಗಳ ಅವಧಿಯ ನಡುವೆ ಪಾವತಿಸಬೇಕಾಗುತ್ತದೆ.

ನಿಷೇಧಿತ ಚಟುವಟಿಕೆಗಳು

ಕೆಲವು ಕೈಗಾರಿಕೆಗಳಿಗೆ ಹಾಗೂ ಸೇವಾ ಚಟುವಟಿಕೆಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಅವುಗಳನ್ನು ಸರ್ಕಾರ ಪಟ್ಟಿ ಮಾಡಿದೆ.

* ಮದ್ಯ ಮಾರಾಟ, ಸಂಬಂಧಿಸಿದ ಚಟುವಟಿಕೆಗಳು, ಅಮಲು ಬರಿಸುವಂತಹ ವಸ್ತುಗಳು, ಬೀಡಿ, ಪಾನ್‌, ಸಿಗಾರ್‌, ಸಿಗರೇಟ್‌, ತಂಬಾಕು ಮುಂತಾದ ವಸ್ತುಗಳ ತಯಾರಿಕೆ ಮತ್ತು ಮಾರಾಟ

* ಮಾಂಸ ಸಂಸ್ಕರಣೆ, ಪರಿಷ್ಕರಣೆ ಹಾಗೂ ಸಂಬಂಧಿಸಿದ ಉತ್ಪನ್ನಗಳು ಹಾಗೂ ಮಾರಾಟ

* ಪರಿಸರ ಮಾಲಿನ್ಯ ಉಂಟು ಮಾಡುವ ಉದ್ದಿಮೆಗಳು

* ಕೃಷಿ ಬೆಳೆ, ರಬ್ಬರ್‌, ಟೀ, ಕಾಫಿ ತೋಟ, ಪಶು ಸಂಗೋಪನೆ, ಮೀನುಗಾರಿಕೆ, ರೇಷ್ಮೆ ಕೃಷಿ, ಹಂದಿ–ಕೋಳಿ–ಕುರಿ ಸಾಕಾಣಿಕೆ, ತೋಟಗಾರಿಕೆ, ಪುಷ್ಪೋದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳು, ಕಟಾವು ಮಾಡುವ ಯಂತ್ರ

* ಖಾದಿ, ಪಾಲಿ ವಸ್ತ್ರ, ರೇಷ್ಮೆ, ಎಣ್ಣೆ ಉದ್ದಿಮೆ

* 20 ಮೈಕ್ರಾನ್‌ಗಿಂತಲೂ ತೆಳುವಾದ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ, ಮಾರಾಟ

* ಗ್ರಾಮೀಣ ಸಾರಿಗೆ ವಾಹನಗಳು 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)