ಬುಧವಾರ, ನವೆಂಬರ್ 13, 2019
17 °C

ಪೋಕ್ಸೊ; ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

Published:
Updated:

ಬೆಂಗಳೂರು: ಹನ್ನೆರಡು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿ ಶ್ರೀನಿವಾಸ್ (26) ಎಂಬಾತನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿ ನಗರದ 55ನೇ ಸಿಸಿಎಚ್ ನ್ಯಾಯಾಲಯ ಆದೇಶ ಹೊರಡಿಸಿದೆ.

ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶೆ ಆರ್. ಶಾರದಾ ನಡೆಸಿದ್ದರು. ಪಬ್ಲಿಕ್ ಪ್ರಾಸಿಕ್ಯೂಟರ್ ಚನ್ನಪ್ಪ ಹರಸೂರ ವಾದಿಸಿದ್ದರು.

ಪ್ರಕರಣದ ವಿವರ: ಬಾಲಕಿಯ ಪೋಷಕರು ಹೋಟೆಲ್‌ ನಡೆಸುತ್ತಿದ್ದರು. ಸ್ಥಳೀಯ ‘ಅಮಿತ್ ಕ್ಯಾಬ್ಸ್‌’ನಲ್ಲಿ ಕೆಲಸ ಮಾಡುತ್ತಿದ್ದ ಅಪರಾಧಿ ಶ್ರೀನಿವಾಸ್, ಭಜ್ಜಿ ಖರೀದಿಸಲು ಹೋಟೆಲ್‌ಗೆ ಬಂದು ಹೋಗುತ್ತಿದ್ದ. ಅದೇ ವೇಳೆ ಬಾಲಕಿ ಹಾಗೂ ಆಕೆಯ ಪೋಷಕರನ್ನು ಪರಿಚಯ ಮಾಡಿಕೊಂಡಿದ್ದ.

2016ರ ಮಾರ್ಚ್ 23ರಂದು ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದಿದ್ದ ಅಪರಾಧಿ, ಲೈಂಗಿಕ ದೌರ್ಜನ್ಯ ಎಸಗಿದ್ದ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದ ಬಾಲಕಿ ಅಸ್ವಸ್ಥಗೊಂಡಿದ್ದಳು. ಪೋಷಕರು ವಿಚಾರಿಸಿದಾಗ ವಿಷಯ ಬಾಯ್ಬಿಟ್ಟಿದ್ದಳು.

ಪೋಷಕರು ನೀಡಿದ್ದ ದೂರು ಆಧರಿಸಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಅಡಿ ಪ್ರಕರಣ ದಾಖಸಿಕೊಂಡಿದ್ದ ಬೊಮ್ಮನಹಳ್ಳಿ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ಬಿ.ಎಸ್. ಮಂಜುನಾಥ್, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರತಿಕ್ರಿಯಿಸಿ (+)