‘ಪಾಡ್‌ ಟ್ಯಾಕ್ಸಿ ಯೋಜನೆ ಅವೈಜ್ಞಾನಿಕ’

7

‘ಪಾಡ್‌ ಟ್ಯಾಕ್ಸಿ ಯೋಜನೆ ಅವೈಜ್ಞಾನಿಕ’

Published:
Updated:
ಚರ್ಚಾಕೂಟದಲ್ಲಿ (ಎಡದಿಂದ) ವಿ.ರವಿಚಂದರ್‌ ಮಾತನಾಡಿದರು. ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಎನ್‌.ಎಸ್‌.ಮುಕುಂದ, ಪ್ರೊ.ಆಶಿಷ್‌ ವರ್ಮಾ, ವಾಸ್ತುಶಿಲ್ಪಿ ನರೇಶ್‌ ನರಸಿಂಹನ್‌, ಪ್ರಕಾಶ್‌ ಬೆಳವಾಡಿ ಮತ್ತು ನಗರ ಯೋಜನಾ ತಜ್ಞೆ ಸೊನಲ್‌ ಕುಲಕರ್ಣಿ ಭಾಗವಹಿಸಿದ್ದರು– ಪ್ರಜಾವಾಣಿ ಚಿತ್ರ

ಬೆಂಗಳೂರು: ನಗರದಲ್ಲಿ ಸಾರಿಗೆ ದಟ್ಟಣೆ ಕಡಿಮೆಗೊಳಿಸುವ ಸಲುವಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಎಲಿವೇಟೆಡ್ ಕಾರಿಡಾರ್ ಹಾಗೂ ಪಾಡ್‌ ಟ್ಯಾಕ್ಸಿ ಯೋಜನೆಗಳಿಗೆ ನಗರ ಯೋಜನಾ ತಜ್ಞರು ವಿರೋಧ ವ್ಯಕ್ತಪಡಿಸಿದ್ದಾರೆ.

ಸಿಟಿಜನ್‌ ಫಾರ್‌ ಬೆಂಗಳೂರು ಸಂಸ್ಥೆ ಶನಿವಾರ ಇಲ್ಲಿ ಆಯೋಜಿಸಿದ್ದ ‘ಎಲಿವೇಟೆಡ್ ಕಾರಿಡಾರ್ ಯೋಜನೆ, ಪಾಡ್‌ ಟ್ಯಾಕ್ಸಿ ಸಾಧಕ–ಬಾಧಕ’ ಕುರಿತ ಚರ್ಚಾಕೂಟದಲ್ಲಿ ಭಾಗವಹಿಸಿದ ತಜ್ಞರು, ಈ ಯೋಜನೆಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲಿದರು. 

‘ಪಾಡ್‌ ಟ್ಯಾಕ್ಸಿ ಯೋಜನೆಯಿಂದ ಸಾರಿಗೆ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಶುದ್ಧ ಸುಳ್ಳು. ಮುಂದಿನ ಭವಿಷ್ಯಕ್ಕೆ ಇದರಿಂದ ಯಾವ ಪ್ರಯೋಜನವೂ ಇಲ್ಲ. ತೆರಿಗೆ ಹಣವನ್ನು ದುಂದು ವೆಚ್ಚ ಮಾಡುವುದಕ್ಕೆ ಇದು ಎಡೆಮಾಡಿಕೊಡುತ್ತದೆ ಅಷ್ಟೇ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಆಶಿಷ್‌ ವರ್ಮಾ ಅಭಿಪ್ರಾಯಪಟ್ಟರು.

‘ಈ ಯೋಜನೆ ಜಾರಿಗೊಳಿಸುವ ಮುನ್ನ ಆರ್ಥಿಕವಾಗಿಯೂ ಯೋಚಿಸಬೇಕಾದ ಅಗತ್ಯವಿದೆ. ಈ ಯೋಜನೆಯನ್ನು ಈಗಲೇ ಕೈಬಿಡಬೇಕು’ ಎಂದೂ ಅವರು ಒತ್ತಾಯಿಸಿದರು.

‘ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗೆ ಐಐಎಸ್‌ಸಿ ಸಮಗ್ರ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಿದೆ. ನಗರದಲ್ಲಿ ‌ಸುಸ್ಥಿರ ಸಾರಿಗೆ ವ್ಯವಸ್ಥೆ ಹೊಂದಲು ಕೈಗೊಳ್ಳಬೇಕಾದ ಸಮಗ್ರ ಕ್ರಮಗಳ ಕುರಿತು ಈ ವರದಿ ಬೆಳಕು ಚೆಲ್ಲುತ್ತದೆ. ಇದನ್ನು ಅನುಷ್ಠಾನಗೊಳಿಸಬೇಕು’ ಎಂದರು.

‘ಜನರೊಂದಿಗೆ ಚರ್ಚಿಸಿ, ಅಭಿಪ್ರಾಯ ಪಡೆದ ನಂತರ ಸುಸ್ಥಿರ ಸಾರಿಗೆಗೆ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಪಾಡ್‌ ಟ್ಯಾಕ್ಸಿ (ಪರ್ಸನಲ್‌ ರ‍್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟಮ್‌–ಪಿಆರ್‌ಟಿಎಸ್‌) ಯೋಜನೆ ಅನುಷ್ಠಾನಕ್ಕೂ ಮೊದಲು ಇದು ನಗರಕ್ಕೆ ಪೂರಕವೇ, ಇದರಿಂದ ಸಂಚಾರ ದಟ್ಟಣೆ ತಗ್ಗಿಸಲು ಸಾಧ್ಯವೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಬೇಕು’ ಎಂದು ನಗರ ಯೋಜನಾ ತಜ್ಞ ವಿ.ರವಿಚಂದರ್‌ ಹೇಳಿದರು. 

‘ಈ ಎರಡು ಯೋಜನೆಗಳು ಸಂಪೂರ್ಣ ಅವೈಜ್ಞಾನಿಕ ಹಾಗೂ ಜನ ಹಿತಕ್ಕೆ ವಿ‌ರುದ್ಧವಾಗಿವೆ’ ಎಂದು ರಂಗಕರ್ಮಿ ಪ್ರಕಾಶ ಬೆಳವಾಡಿ ದೂರಿದರು.

‘ಈಗಿನ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಈ ಹಿಂದೆ ‘ಪಾಡ್‌ ಟ್ಯಾಕ್ಸಿ’ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದೊಂದು ‘ಲೂಟಿ ಮಾಡುವ ಯೋಜನೆ’ ಎಂದು ದೂರಿದ್ದರು. ಆದರೆ, ಇದೀಗ ಅವರ ಪಕ್ಷವೇ ಈ ಯೋಜನೆಯನ್ನು ಬೆಂಬಲಿಸುತ್ತಿರುವುದು ಬೇಸರದ ಸಂಗತಿ’ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !