ಶುಕ್ರವಾರ, ಡಿಸೆಂಬರ್ 6, 2019
26 °C

ಪರವ ನನ್ನಯ ಕುರುಡು ಹಸಿವು

Published:
Updated:
Deccan Herald

ವಾರದ ಒಂದು ಸಂಜೆ

ಮತ್ತೆ ರಾತ್ರಿ ಬೆಳಗಿನವರೆಗೆ ದೈವನುಡಿ ನಡಿಗೆಗೆ

ನಾಲಗೆಯಾಗುವ ಪರವ

ಹೆಸರು ನನ್ನಯ

 

ಯಾವತ್ತಿನಂತೆ ಕಟ್ಟೆನೇಮದ ಅಂಗಣಕ್ಕೆ

ಕಣ್ಣಿಗೆ ಕಾಣುವಷ್ಟು ದೂರದ ಊರ ಮನೆಯಂಗಳ

ದಾಟಿ ಒಳಗೂ ಅಲ್ಲದ ಹೊರಗೂ ಅಲ್ಲದ

ಎರಡಳಿದು ಒಂದಾದ ಚಾವಡಿಯಲ್ಲಿ

ನಡೆದಾಡುವ ದೈವ ತುಂಡುಟ್ಟು ಮೈಬಿಟ್ಟು ಬತ್ತಲಾಗಿ

ಒಳಹೊರಗೆ ಸಲ್ಲಲು ಕಾದಿರುವ ಪರವ

ಬಂದು ಕುಳಿತದ್ದು

ಒಂದು ಚಿತ್ರ

 

ಮಾಮೂಲಿ ಮಾತು

ಮನೆಮಂದಿ ನೆಂಟರಿಷ್ಟರ ಬಗ್ಗೆ

ಮಳೆ ಬೆಳೆ ಹಸು ಹಲಸು ಹಾವು ಮಾವು ಇತ್ಯಾದಿ

ಎಲ್ಲ ದೈವ ಜುಮಾದಿ ಕಟ್ಟೆಕಲ್ಲುರ್ಟಿ ಹಟ್ಟಿಕೊರಗ

ಇಟ್ಟಂತೆ ಎಂದು ಮಾತು ಮುಗಿಸಿ

ತಟ್ಟೆಯ ವೀಳ್ಯಹೋಳು ಜಗಿದಂತೆ

ಬಾಯಿ ಮಾತೂ ಕೆಂಪಾಗಿ

ದೈವದ ಚಾಕರಿ ನೆನಪಾಗಿ ಪರವ

ಎದ್ದು ಹೊರಟದ್ದು

ಒಂದು ಚಿತ್ರ

 

ಚೂಪು ಮೂಗು ಹೊಳೆವ ಕಣ್ಣು ಬಣ್ಣದ ಕೆಲಸಕ್ಕೆ

ವಿಶಾಲ ಹಣೆ ಗಟ್ಟಿ ಕೈಕಾಲು

ಹೇಳಿ ಮಾಡಿಸಿದಂತಿದ್ದ ಪರವ ಬಾಹ್ಯನೋಟಕ್ಕೆ

ಮಾತು ಮೌನಕ್ಕೂ ನುಡಿವ ನಾಲಗೆ ಚುರುಕು

ಬೆಂಕಿ ಸುಟ್ಟ ಎದೆ ಭಾವ ಭಾರ

ಇಹಪರದ ಸತ್ಯಕ್ಕೆ ಸರಿಯಾಗಿ ಮಾಡಿಟ್ಟಂತೆ

ಹಿರಿಜೀವ ದೇವದಾರ

ಚೌಕಟ್ಟು ಚಿತ್ರ

 

ಭೂಮಿತೂಕದ ಭೂತಗಳನ್ನು ಹೊತ್ತು

ಮುಖದ ಮೇಲೆ ಮೊಗವಿಟ್ಟು

ಹೆಗಲ ಮೇಲೆ ಅಣಿಕಟ್ಟು

ಹರಿವ ಸತ್ಯಕ್ಕೆ ಅಣೆಕಟ್ಟಿನಂತೆ ಊರಿಗೆ

ಬೆಳೆ ಬೆಳೆದು ಹಂಚುವ ಪಾತ್ರ

ಇವ ಪರವ ನನ್ನಯ

ಇಹದ ಚಿತ್ರ

 

ನಡುರಾತ್ರಿ ಸುಡುಮದ್ದು ಗರ್ನಾಲು ಸಿಡಿವ

ತಾಸೆ ಸಮ್ಮೇಳ ವಾಲಗ ಡೋಲು ಬಡಿವ

ಬಿರಿವ ಶಬ್ದಕ್ಕೆ ನಿದ್ದೆ ಬಿರಿದು

ಕಟ್ಟೆಯಡಿ ಊರ ಜನ ನೆರೆದು

ಕಟ್ಟಿತಲೆಗೆ ಮುಂಡಾಸು ಕೈಯಲ್ಲಿ ಹಿಡಿದು

ಅಕ್ಕಿ ಹೂ ಹಿಂಗಾರ ಎಸೆದು ಮೇಲೆ

ಹುಟ್ಟುಕಟ್ಟಿನ ಪಾರಿ ನುಡಿದು

ಮಾಯಕ ಬಿಡಿಸಿ ಕಾಯ ಹಿಡಿಸುವ

ಕಟ್ಟುವಾದ್ಯದಿ ಕಟ್ಟಿಹಾಕುವ ಭೂತಗಳ

ವರ್ತಮಾನಕೆ ತರುವ ಜನಗಳ

ತವಕ ತಲ್ಲಣಗಳ

ಒಂದು ಚಿತ್ರ

 

ಎಂತವ ಏನಾದ?

ಕಣ್ಣಲ್ಲಿ ಬೆಂಕಿ ಹಣೆಯಗಲ ಉರಿ

ಅರದಲ ಬಣ್ಣ ಚುಟ್ಟಿಮುದ್ರೆ ಕರಿ

ಕಾಡಿಗೆ ಗೆರೆ ಕೆಂಗಣ್ಣು ನೆತ್ತರು ತುಟಿ

ಕಾಲು ಗಗ್ಗರ ಅಂಗಿ ಇಜಾರು ಇಳಿ ಸುತ್ತ

ಜಾರು ಹಸುರು ತಿರಿತಿರಿ ತಿತ್ತಿರಿ

ಸೊಂಟಕ್ಕೆ ಬಿಗಿದ ಜಕ್ಕೆಲಣಿ

ಎದೆಗೆ ಹಾರ ಹೂಹಿಂಗಾರ ತಲೆಗೆ

ತಲೆಮಣಿ ತಲೆಪಟ್ಟಿ ಕದಿರ್ಮುಡಿ ಬೆನ್ನ

ಹಿಂದಕ್ಕೆ ಎತ್ತರೆತ್ತರ ಹಾಳೆಅಣಿ ಸಿರಿಮುಡಿ ಚಿನ್ನ

ಬೆಳ್ಳಿ ಕೆತ್ತಿರುವ ಕಡಿತಲೆ ಖಡ್ಗ ಕೈಯಲ್ಲಿ ಅಡ್ಡಣ

ಹಿಡಿದು ಮುಗವಿಟ್ಟು ಭಾವಗಳ ಹೆಣ

ಭಾರವನು ಹೊತ್ತು ಬಲಿಸುತ್ತು ಅಂಗಣ

ಸುತ್ತು ವಾದ್ಯ ಬೇಂಡು ಭಜನೆಗೆ ಕುಣಿದು

ಕುಣಿವ ಮಣಿವ ಬಾಗುವ ಬಳುಕುವ

ಎಳೆಗರಿಯ ಪರಿಮಳವ ಚೆಲ್ಲಿ ಎಸೆವ

ಕೇವಲ ವಿಸ್ಮಯ

ಪರವ ನನ್ನಯ ಇಂತಾದ

ಪರದ ಒಂದು ಚಿತ್ರ

 

ಇಂತವ ಎಂತಾದ?

ನೋಡ ನೋಡುತ್ತಲೇ ಎತ್ತರಕೆ ಬೆಳೆದ

ನಿಂತಲ್ಲಿಂದಲೆ ಬೆರಳ ಸನ್ನೆಯ ಮಾಡಿ

ಕುಂತು ಬೇರುಬಿಟ್ಟವರನ್ನು ಎಬ್ಬಿಸಿದ ಬಹುಕಾಲ

ಮಾತು ಮರೆತಂತಿದ್ದ ಈತ

ಮಾತಿನರಮನೆಯ ಅರಸನಾದ

ಗಡಿಯಾಚೆಗಿನ ಈತ ಮಿಂದು

ಗಡಿಹಾಕಿ ಗುಡುಗಿ ಮೈಲಿಗೆ ಮಡಿಮಾಡಿದ

ಅಂಗೈಪ್ರಸಾದ ಗಂಧ ವೀಳ್ಯ ಕೊಟ್ಟು

ಮುಟ್ಟಿ ಮುಟ್ಟಿ ಜಾತಿ ಬೇಲಿಯ ಮುರಿದ

ವಿಷವ ಭಂಡಾರದಲ್ಲಿಟ್ಟು ಅಮೃತ ಹಂಚುವೆನೆಂದು

ನಂಬಿಸಿ ಗೊನೆ ಎಳನೀರು ಕಡಿಸಿ ಕುಡಿದ

ತರಿಸಿ ಪಂಚಾಮೃತ ಗೆರಸೆ ತುಂಬ

ಹಸಿವೆಯ ಚಂದ ಒಂದೇ ಎಂದು ಸಾರಿದ

ಮಾಯಕದಲಿ ನೋಡಿಕೊಂಬೆ ಎಂದ

ಒಳಗೆ ಅಳುವಂತಿದ್ದ ಎಲ್ಲವನು ಕಳಚಿ

ನೋಡುತ್ತಿದ್ದಂತೆ ಕಂಡ ಸಂಜೆಯವನಂತಾದ

ಪರವ ನನ್ನಯ ನನ್ನಂತಾದ

ನಿಜದ ಒಂದು ಚಿತ್ರ

 

ಜೀವ ಒಂದೆ ಚಿತ್ರ ಹಲವು

ಎಲ್ಲ ನಮ್ಮದೆ ಆಟವು ಬಗೆಯಲದು

ಇಹಪರ ನೋಟವು...

ಪ್ರತಿಕ್ರಿಯಿಸಿ (+)