ನಿನ್ನ ಗೊಡವೆ ನನಗೆ ಬೇಡ

7

ನಿನ್ನ ಗೊಡವೆ ನನಗೆ ಬೇಡ

Published:
Updated:
Prajavani

ಅಯ್ಯಾ ಅಯ್ಯಪ್ಪ
ದೂರ ಗಿರಿಯಾರತಿ
ಮಿಥ್ಯೆಯೋ ತಥ್ಯವೋ?
ಬಿಡು,
ಅದು ನಂಬಿದವರ ನಾಕ ನರಕದ ಪ್ರಶ್ನೆ
ಬೇತಾಳನನ್ನು ಹೊತ್ತ ವಿಕ್ರಮರು
ಮತ್ತದೇ ಇಪ್ಪತ್ತೊಂದು ಮೆಟ್ಟಿಲುಗಳು
ಅದಕ್ಕೂ ಮುಂಚಿನ ಭವದ ದಾರಿ
ದಾರಿಯುದ್ದಕ್ಕೂ ಭವದ ಮಾಯೆಯ ಸರಕುಗಳು
ಹೆಂಡದ ಸೀಸೆ, ಸಿಗರೇಟು, ಬೀಡಿ, ಬಿರಿಯಾನಿಗಳ ಮೆರವಣಿಗೆ
ಏನುಂಟು ಏನಿಲ್ಲ
ಹುಲು ಬಯಕೆ ಬಾ ಎನಲು ಓ ಎಂದು
ಓಗೊಟ್ಟವರು
ಮೈಲಿಗೆ ಮನದ್ದೋ ಮೈಯಿನದೋ ಅರಿಯದ ಭಕ್ತಾಗ್ರಣಿಗಳು

ತ್ರಿಕಾಲ ಜ್ಞಾನಿ ನೀನು ಬಾಯಿ ಬಿಟ್ಟರೆ
ಭಕ್ತರು ತಿರು ತಿರುಗಿ
ನೇತಾಡಬೇಕು ಭವದ ಮರಕ್ಕೆ, ಕಾಡುವ ಮೈಲಿಗೆಯ ನರಕಕ್ಕೆ

ಭಕ್ತರಾಧೀನ ನೀನು
ಮುಚ್ಚಿದ ಬಾಯಿ ತೆರೆದ ಕಣ್ಣು
ಹಸನ್ಮುಖದ ಮುದ್ರೆ
ಅಭಯ ಹಸ್ತ
ಪುರುಷಾಕಾರಗಳೆಲ್ಲ
ಹತ್ತಿ ಹತ್ತಿ ಹತ್ತಿ
ಇಳಿದಿಳಿದು
ಹೆಣ್ಣ ಮೈಲಿಗೆಯಲ್ಲಿ ಬಂದಿಗಳು
ಪಾರು ಮಾಡಯ್ಯಾ ಹೆಣ್ಣನ್ನು
ಗಂಡು ಮೈಲಿಗೆಯಿಂದ
ಬೇಡ ಬಿಡು
ಮೈಲಿಗೆಯೇ ಇಲ್ಲದ ಪಾವನ ಗಂಗೆಯರು ನಾವು

ಮುಟ್ಟಲ್ಲೇ ಹುಟ್ಟಿ
ಗರ್ಭದಲಿ ಮಡಿಯಾಗಿ
ಲೋಕ ಕಂಡವನೇ ಅಯ್ಯಪ್ಪಾ
ಮಾಸಿದ ತಲೆಯ ಮಡಿ ಮಾಡುವ ತಾಯ, ತಾಯ ಮುಟ್ಟ
ಹೊಲೆ ಎನ್ನುವ ಹೊಲೆತನ ಬಂದದ್ದು ಎಲ್ಲಿಂದ ಮಾರಾಯ?
ತಾಯ ಕವಚ ವಜ್ರ ಕವಚ

ಎಲ್ಲವಳು?
ಮಧುಬಾಂಡದ ಅಕ್ಷಯದಲಿ ನಿನ್ನ
ಮೀಯಿಸಿದವಳು
ನ ಲಜ್ಜಾ ನ ಭಯಾ
ಜೀವ ಜೀವಿತದ ಆಸೆ ನಿಂದಂತೆ
ಮಡುಗೊಂಡ ಸುಖಭಂಡಾರ
ಜೀವೋತ್ಕಟತೆಯ ಮರುಹುಟ್ಟು
ಮೈಲಿಗೆಯೆ? ಪರುಷದ ಸೋಂಕೆ?

ಅಯ್ಯಾ ನೀ ಕೇಳಿದರೇ ಕೇಳು
ಕೇಳದಿದ್ದರೆ ಮಾಣು
ಸಂಗ ಸಮರಸದ ಲಜ್ಜೆಗೆಟ್ಟ ಬೆಳಗನೊಮ್ಮೆ ಉಟ್ಟು ನೋಡು
ಕಳೆದೀತು ಮೈಮನದ ಮೈಲಿಗೆಯ ಹೊಲೆ

ಅಲ್ಲಿಯ ತನಕ
ನಿನ್ನ ಗೊಡವೆ ನನಗೆ ಬೇಡ
ನನ್ನ ಚಿಂತೆ ನಿನಗೂ ಬೇಡ
ನಮಸ್ಕಾರ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !