ನೆರಳು ಗೋರುತ್ತಾ...

7

ನೆರಳು ಗೋರುತ್ತಾ...

Published:
Updated:
Prajavani

ಮೂರುತಿಯೊಂದಿಗೆ ಜಗತ್ತನ್ನೇ

ಆಡಲು ಬಿಟ್ಟಿದ್ದಾಳೆ

ಬಿಕನಾಸಿ ಹುಡುಗಿ

 

ತಾನು ಮಾತ್ರ

ಕೇವಲ ಮೂರುತಿಯ

ನೆರಳು ಬಾಚಿಕೊಳಲು

ಎವೆಯಿಕ್ಕದೇ

ದಿಟ್ಟಿಸುತ್ತಾ ಕಾದಿದ್ದಾಳೆ

ಮುರುಕು ಬುಟ್ಟಿಯೊಂದಿಗೆ

 

ನೆತ್ತಿಯ ಮೇಲಣ ಸೂರ್ಯ

ದಿಕ್ಕು ತಪ್ಪಿದಂತೆಲ್ಲಾ

ಓಡುತ್ತದೆ ಮೂರುತಿಯ ನೆರಳೂ

ಮಿಸುಕದೆ ಕುಳಿತ

ಮೂರುತಿಯೇನೋ ತಟಸ್ಥ.

ಆದರೆ ಹುಡುಗಿಯ

ನಿದ್ದೆ ಕೆಡಿಸುವ ನೆರಳು

ಚಲಿಸುತ್ತದೆ ನಿದ್ದೆಗಣ್ಣಲ್ಲೂ.

 

ನೆರಳಿನಿಂಚಿಂಚೂ ಬಿಡದೆ

ಬಾಚಿ ಬಳಿದು ಗೋರಿ

ಬುಟ್ಟಿಗೆ ತುಂಬುವ

ಕಾಯಕಕ್ಕೆ ಬಿದ್ದ ಹುಡುಗಿಗೆ

ನಿಟ್ಟುಸಿರಿಡಲೂ ತಾವಿಲ್ಲದಂತೆ

ಚಲಿಸುತ್ತಲೇ ಇದೆ ನೆರಳು.

 ****

ಈ ಹುಡುಗಿಗೆ ಮೈಯೆಲ್ಲಾ

ದುರಾಸೆಯೆಂದಾಡಿಕೊಳ್ಳುತ್ತದೆ ಜಗತ್ತು.

ಆದರವಳಿಗೆಲ್ಲಿದೆ ಮಾತು ಕೇಳುವ ಪುರುಸೊತ್ತು?

ಅವಳೋ ಮಗ್ನ...

ಮೂರುತಿಯ ಸೋತ ರೆಪ್ಪೆಯ ಬಡಿತ

ಯಾವುದೋ ಸಂಕಟಕ್ಕೆ

ಒಸರಿದ ಕಣ್ಣ ಹನಿ ಮಿಡಿತ

ಒಳ ಹೊರಗೆ ಹೊಯ್ದಾಡುವ ಬಿಸಿ ಉಸಿರು

ಉದರದಾಳದಿಂದೆದ್ದ ಪ್ರೀತಿಯ ಹಸಿವು

ಒಣಗಿದ ಗಂಟಲ ದಾಹದ ಬಿಕ್ಕಳಿಕೆ

ಜಗತ್ತು ಮಗ್ಗುಲು ಬದಲಿಸೀತೆಂದು

ಕೂತಲ್ಲೇ ಕಾದು ಕೂತು ಸೋತು

ಹೊರಬಿದ್ದ ದೀರ್ಘ ಆಕಳಿಕೆ

ಯಾರದೋ ಕರುಳು ಕತ್ತರಿಸಿದ

ನೋವಿಗೆ ಚುರುಗುಟ್ಟೆದ್ದ ನರಳಿಕೆಗೆ

ಅನುರಣಿಸಿದ ಎದೆ ತೆಕ್ಕೆ...

 

ಎಲ್ಲದೆಲ್ಲದರ ನೆರಳು ಗೋರುತ್ತಾ

ಮುರುಕು ಬುಟ್ಟಿ ತುಂಬುತ್ತಾ...

****

ಕೇವಲ ನೆರಳು ತುಂಬುತ್ತಲಿದ್ದ

ಆ ಹುಡುಗಿಗೀಗ

ಕಿವುಡು ಮೂಗು ಕುರುಡು.

ಅವಳ ಬುಟ್ಟಿಯಲ್ಲೀಗ...

ಬೆಳಕೋ? ನೆರಳೋ?

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !