ಒಬ್ಬನ ಸೆರೆ: 3 ಕರು, 11 ಹಸುಗಳು ವಶಕ್ಕೆ

7
ಹಸುಗಳ ಎಂಟು ಕಳ್ಳತನ ಪ್ರಕರಣ ಭೇದಿಸಿದ ಪೋಲಿಸರು, ಐವರು ಆರೋಪಿಗಳಿಗೆ ಹುಡುಕಾಟ

ಒಬ್ಬನ ಸೆರೆ: 3 ಕರು, 11 ಹಸುಗಳು ವಶಕ್ಕೆ

Published:
Updated:
Deccan Herald

ಚಾಮರಾಜನಗರ: ಹಸುಗಳನ್ನು ಕಳ್ಳತನ ಮಾಡಿರುವ ಎಂಟು ಪ್ರಕರಣಗಳನ್ನು ಭೇದಿಸಿರುವ ಚಾಮರಾಜನಗರ ಪೊಲೀಸರು, ಷಫೀವುಲ್ಲಾ ಶರೀಫ್‌ ಎಂಬಾತನನ್ನು ಗುರುವಾರ ಬಂಧಿಸಿದ್ದಾರೆ.

ಕಾರ್ಯಾಚರಣೆಯ ಸಂದರ್ಭದಲ್ಲಿ ಮೂರು ಕರುಗಳು ಹಾಗೂ 11 ಹಸುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳ ಮೌಲ್ಯ ₹ 4 ಲಕ್ಷ ಎಂದು ಅಂದಾಜಿಸಲಾಗಿದೆ.

‘ಇದೊಂದು ತಂಡದ ಕೃತ್ಯವಾಗಿದ್ದು, ಐವರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ. ಆರೋಪಿಗಳ ಪೈಕಿ ಬಂಧಿತ ಸೇರಿದಂತೆ ನಾಲ್ವರು ಚಾಮರಾಜನಗರದ ಗಾಳಿಪುರದ ನಿವಾಸಿಗಳು. ಇನ್ನಿಬ್ಬರು ಮೈಸೂರಿನವರು’ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಮರಾಜನಗರ, ಸೋಮವಾರಪೇಟೆ, ಮಲ್ಲಯ್ಯನಪುರ, ಮೂಡ್ಲುಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇತ್ತೀಚೆಗೆ ಹಸುಗಳ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಧರ್ಮೇಂದರ್‌ ಕುಮಾರ್‌ ಮೀನಾ ಅವರು ವಿಶೇ‌ಷ ತಂಡ ರಚಿಸಿದ್ದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಹಾಗೂ ಡಿವೈಎಸ್‌ಪಿ ಸಿ.ಟಿ. ಜಯಕುಮಾರ್‌ ಮಾರ್ಗದರ್ಶನದಲ್ಲಿ ಗ್ರಾಮಾಂತರ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ರಾಜೇಂದ್ರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಮುತ್ತತ್ತಿ ಬಳಿಯ ಜಮೀನೊಂದರಲ್ಲಿ ಕದ್ದ ಹಸುಗಳನ್ನು ಇರಿಸಲಾಗಿದೆ ಎಂಬ ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರ ತಂಡ ಸ್ಥಳಕ್ಕೆ ಹೋಗಿ ತಪಾಸಣೆ ನಡೆಸಿದಾಗ ಹಸುಗಳು ಹಾಗೂ ಕರುಗಳು ಪತ್ತೆಯಾಗಿದ್ದವು. 

‘ಆರೋಪಿಗಳು ಆ ಜಮೀನಿನ ಮಾಲೀಕರಿಗೆ ಹಸುಗಳನ್ನು ಮಾರಾಟ ಮಾಡಿದ್ದರು. ಮಾಲೀಕರನ್ನು ವಿಚಾರಿಸಿದಾಗ ಹಸುಗಳನ್ನು ಮಾರಾಟ ಮಾಡಿರುವವರ ಮಾಹಿತಿ ತಿಳಿಸಿದ್ದರು. ಇದರ ಆಧಾರದಲ್ಲಿ ಗಾಳಿಪುರದಲ್ಲಿ ಷಫೀವುಲ್ಲಾನನ್ನು ಬಂಧಿಸಲಾಗಿದೆ. ನಾಪತ್ತೆಯಾಗಿರುವ ಆರೋಪಿಗಳನ್ನೂ ಶೀಘ್ರದಲ್ಲಿ ಬಂಧಿಸುತ್ತೇವೆ’ ಎಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ರಾಜೇಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾರ್ಯಾಚರಣೆಯಲ್ಲಿ ರಾಮಸಮುದ್ರ ಪೊಲೀಸ್‌ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬಿ.ಪುಟ್ಟಸ್ವಾಮಿ, ಸಿಬ್ಬಂದಿ ಸೈಯದ್‌ ಇಮ್ತಿಯಾಜ್‌ ಹುಸೇನ್‌, ಚಂದ್ರ, ನಿಂಗರಾಜು, ಜಗದೀಶ್‌, ಕುಮಾರಸ್ವಾಮಿ, ಬಂಟಪ್ಪ, ಮಹೇಶ್‌, ವೆಂಕಟೇಶ್‌, ಚಾಲಕರಾದ ರಾಜು, ಮಹೇಶ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !