ಚಾಲಕನ ಕೊಂದಿದ್ದ ಆರೋಪಿ ಕಾಲಿಗೆ ಗುಂಡೇಟು

7

ಚಾಲಕನ ಕೊಂದಿದ್ದ ಆರೋಪಿ ಕಾಲಿಗೆ ಗುಂಡೇಟು

Published:
Updated:
Deccan Herald

ಬೆಂಗಳೂರು: ಹೆಣ್ಣೂರು ಬಳಿ ಲಾರಿ ಚಾಲಕ ಕೇಶವ್‌ (30) ಎಂಬುವರನ್ನು ಕೊಂದು ಪರಾರಿಯಾಗಿದ್ದ ಆರೋಪಿ ಅಭಿಷೇಕ್‌ನನ್ನು (19), ಹೆಣ್ಣೂರು ಇನ್‌ಸ್ಪೆಕ್ಟರ್ ಎಚ್‌.ಡಿ. ಕುಲಕರ್ಣಿ ಅವರು ಗುಂಡು ಹೊಡೆದು ಸೆರೆ ಹಿಡಿದಿದ್ದಾರೆ.

‘ಕೇಶವ್‌ ಜೊತೆ ನ. 30ರಂದು ತಡರಾತ್ರಿ ಜಗಳ ತೆಗೆದಿದ್ದ ಆರೋಪಿ, ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಸೋಮವಾರ ರಾತ್ರಿ ಆತನನ್ನು ಬಂಧಿಸಲು ಹೋದಾಗ ಪಿಎಸ್‌ಐ ಸಂತೋಷ್‌ ಮೇಲೆಯೇ ಚಾಕುವಿನಿಂದ ಹಲ್ಲೆ ಮಾಡಿದ್ದ. ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಅವರು ಗುಂಡು ಹೊಡೆದು ಬಂಧಿಸಿದ್ದಾರೆ’ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಹೆಣ್ಣೂರು ನಿವಾಸಿಯಾದ ಅಭಿಷೇಕ್‌ನ ಕಾಲಿಗೆ ಗುಂಡು ತಗುಲಿದ್ದು, ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಪಿಎಸ್ಐ ಸಂತೋಷ್‌ ಅವರಿಗೂ ಗಾಯವಾಗಿದ್ದು, ಹೆಣ್ಣೂರು ಬಳಿಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಅವಮಾನ ಮಾಡಿದನೆಂದು ಕೃತ್ಯ: ‘ಕೊಲೆಯಾಗಿದ್ದ ಲಾರಿ ಚಾಲಕ ಕೇಶವ್, ಹೆಣ್ಣೂರು ನಿವಾಸಿ. ಅವರು ವಾಸವಿದ್ದ ಪ್ರದೇಶದಲ್ಲಿ ಗಣೇಶ ಹಬ್ಬದ ಮೆರವಣಿಗೆ ಇತ್ತು. ಅಲ್ಲಿಗೆ ಆರೋಪಿ ಅಭಿಷೇಕ್ ಹಾಗೂ ಆತನ ಸ್ನೇಹಿತರು ಸಹ ಬಂದಿದ್ದರು’ ಎಂದು ಪೊಲೀಸರು ಹೇಳಿದರು.

‘ಅಭಿಷೇಕ್‌ ಹಾಗೂ ಕೇಶವ್ ನಡುವೆ ಜಗಳ ಶುರುವಾಗಿತ್ತು. ಯುವತಿಯೊಬ್ಬರ ಮುಂದೆಯೇ ಸ್ಥಳೀಯರೆಲ್ಲರೂ ಸೇರಿ ಅಭಿಷೇಕ್‌ಗೆ ಹೊಡೆದು ಕಳುಹಿಸಿದ್ದರು. ಕೋಪಗೊಂಡಿದ್ದ ಅಭಿಷೇಕ್‌, ಕೇಶವ್‌ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ’.

‘ನ. 30ರಂದು ರಾತ್ರಿ 9 ಗಂಟೆ ಸುಮಾರಿಗೆ ಹೆಣ್ಣೂರು ಬಂಡೆ ಮುಖ್ಯ ರಸ್ತೆಯಲ್ಲಿ ಕೇಶವ್‌, ಲಾರಿ ತೆಗೆದುಕೊಂಡು ಹೊರಟಿದ್ದರು. ಅದೇ ವೇಳೆ ಅಡ್ಡಗಟ್ಟಿದ್ದ ಅಭಿಷೇಕ್ ಹಾಗೂ ಆತನ ಸಹಚರರು, ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು’ ಎಂದು ವಿವರಿಸಿದರು.

ಕ್ಯಾಬ್‌ ಚಾಲಕನ ಮೇಲೂ ಹಲ್ಲೆ: ಕೊತ್ತನೂರು ಬಳಿ ಕ್ಯಾಬ್‌ ಚಾಲಕರೊಬ್ಬರಿಗೆ ಅಭಿಷೇಕ್ ಚಾಕುವಿನಿಂದ ಇರಿದಿದ್ದ. ಆ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !