ಯುವಕನ ಬಟ್ಟೆ ಹರಿದು ಥಳಿಸಿದ ಪೊಲೀಸರು?

7

ಯುವಕನ ಬಟ್ಟೆ ಹರಿದು ಥಳಿಸಿದ ಪೊಲೀಸರು?

Published:
Updated:

ಬೆಂಗಳೂರು: ‘ಹೊಸ ಸ್ಕೂಟರ್‌ಗೆ ನಂಬರ್ ಪ್ಲೇಟ್ ಹಾಕಿಲ್ಲ ಎಂಬ ಕಾರಣಕ್ಕೆ ಕೆ.ಜಿ.ಹಳ್ಳಿ ಸಂಚಾರ ಠಾಣೆಯ ಎಎಸ್‌ಐ ರಾಘವೇಂದ್ರ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳು ನನ್ನ ಬಟ್ಟೆ ಹರಿದು ಹಲ್ಲೆ ಮಾಡಿದರು’ ಎಂದು ಹರೀಶ್ ಕುಮಾರ್ ಎಂಬುವವರು ಆರೋಪಿಸಿದ್ದಾರೆ.

‘ಆನ್‌ಲೈನ್‌ನಲ್ಲಿ ಆರ್ಡರ್ ಪಡೆದು ಮನೆ ಬಾಗಿಲಿಗೆ ಆಹಾರ ಪೂರೈಸುವ ‘ಸ್ವಿಗ್ಗಿ’ ಸಂಸ್ಥೆಯಲ್ಲಿ ಕೆಲಸ ಮಾಡುವ ನಾನು, ಮೂರು ದಿನಗಳ ಹಿಂದಷ್ಟೇ ಸ್ಕೂಟರ್ ಖರೀದಿಸಿದ್ದೆ. ಅದಕ್ಕೆ ನಂಬರ್ ಪ್ಲೇಟ್ ಹಾಕಿಸಿರಲಿಲ್ಲ. ಸುಲ್ತಾನಪಾಳ್ಯದ ಗ್ರಾಹಕರೊಬ್ಬರು, ನಾಗರಬಾವಿಯ ‘ಸಬ್‌ವೇ ರೆಸ್ಟೊರೆಂಟ್‌’ನಲ್ಲಿ ಊಟ ಆರ್ಡರ್ ಮಾಡಿದ್ದರು. ಮಧ್ಯಾಹ್ನ 12.30ರ ಸುಮಾರಿಗೆ ಆ ಹೋಟೆಲ್‌ಗೆ ತೆರಳಿ ಪಾರ್ಸಲ್ ತೆಗೆದುಕೊಂಡು, ಗ್ರಾಹಕರಿಗೆ ತಲುಪಿಸಲು ಸುಲ್ತಾನಪಾಳ್ಯಕ್ಕೆ ತೆರಳುತ್ತಿದ್ದೆ’ ಎಂದು ಹರೀಶ್ ಕುಮಾರ್ ವಿವರಿಸಿದರು.

‘ಮಾನ್ಯತಾ ಟೆಕ್‌ಪಾರ್ಕ್‌ ಬಳಿ ನನ್ನನ್ನು ತಡೆದ ಪೊಲೀಸರು, ಸ್ಕೂಟರ್‌ನ ದಾಖಲೆಗಳನ್ನು ಕೇಳಿದರು. ಎಲ್ಲ ದಾಖಲೆ ಕೊಟ್ಟರೂ ನಂಬರ್ ಪ್ಲೇಟ್ ಇಲ್ಲವೆಂದು ₹ 100 ದಂಡ ವಿಧಿಸಿದ ಅವರು, ಚೀಟಿಗೆ ಸಹಿ ಮಾಡು ವಂತೆ ಸೂಚಿಸಿದರು. ಅದರಲ್ಲಿ 'miss behave' ಎಂದು ಬರೆದಿ ದ್ದರಿಂದ ನಾನು ಸಹಿ ಮಾಡಲು ಒಪ್ಪಲಿಲ್ಲ. ‘ಹಾಗಾದರೆ ಸ್ಕೂಟರ್ ಬಿಟ್ಟು ಹೋಗು’ ಎಂದರು. ಅಂತೆಯೇ ಅಲ್ಲೇ ಸ್ಕೂಟರ್ ಬಿಟ್ಟು ಅದರ ಒಂದು ಫೋಟೊ ತೆಗೆದುಕೊಂಡೆ.’ ‘ಇದರಿಂದ ಕೆರಳಿದ ಎಎಸ್‌ಐ ಹಾಗೂ ಮೂವರು ಕಾನ್‌ಸ್ಟೆಬಲ್‌ಗಳು, ‘ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಳ್ಳುತ್ತಿದ್ದೀಯಾ’ ಎನ್ನುತ್ತ ಥಳಿಸಿ, ಬಟ್ಟೆಯನ್ನೂ ಹರಿದರು. ಕೊನೆಗೆ ಸ್ಥಳದಲ್ಲೇ ದಂಡ ಕಟ್ಟಿಸಿಕೊಂಡು, ಸ್ಕೂಟರ್ ಸಹ ಜಪ್ತಿ ಮಾಡಿದರು. ಈ ಸಂಬಂಧ ಶನಿವಾರ ಹಿರಿಯ ಅಧಿಕಾರಿಗಳಿಗೆ ದೂರು ಕೊಡುತ್ತೇನೆ’ ಎಂದರು. ‘ಅಂಥ ಯಾವುದೇ ಘಟನೆ ನಡೆದಿಲ್ಲ’ ಎಂದು ಕೆ.ಜಿ.ಹಳ್ಳಿ ಸಂಚಾರ ಪೊಲೀಸರು ಹೇಳಿದ್ದಾರೆ. ಆದರೆ, ಸಿಬ್ಬಂದಿ ಹರೀಶ್ ಜತೆ ವಾಗ್ವಾದ ನಡೆಸಿದ್ದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅದು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಪೊಲೀಸರ ನಡೆಗೆ ಆಕ್ರೋಶ ವ್ಯಕ್ತವಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !