ಸೋಮವಾರ, ನವೆಂಬರ್ 18, 2019
25 °C

ಅಂಧರನ್ನು ಎಳೆದಾಡಿದ ‘ಖಾಕಿ’ಗಳು!

Published:
Updated:
Prajavani

ಬೆಂಗಳೂರು: ಅವರಿಬ್ಬರೂ ಅಂಧರು. ಬೆನ್ನಿಗೆ ಚೀಲ ಸಿಕ್ಕಿಸಿಕೊಂಡು ವಿಶ್ವೇಶ್ವರಯ್ಯ ಟವರ್‌ ಮುಂಭಾಗದ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನ ಭಿಕ್ಷೆ ಬೇಡುತ್ತಿದ್ದರು. ಅದೇ ವೇಳೆ ಅಲ್ಲಿಗೆ ಬಂದ ವಿಧಾನಸೌಧ ಠಾಣೆಯ ಪೊಲೀಸರು ಅವರಿಬ್ಬರನ್ನೂ ತಳ್ಳಾಡಿದ ದೃಶ್ಯ ಅಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು!

ವಾಹನಗಳ ಮಧ್ಯೆ ನುಸುಳಿಕೊಂಡು ಚಾಲಕರ ಬಳಿ ಕೈ ಚಾಚುತ್ತಿದ್ದ ಆ ಯುವಕರಿಬ್ಬರನ್ನೂ ಪೊಲೀಸರು ಕತ್ತು ಹಿಡಿದು ವಾಹನದ ಒಳಗೆ ತಳ್ಳಲು ಮುಂದಾಗುತ್ತಿದ್ದಂತೆ ಅಲ್ಲಿದ್ದ ಜನರು ಮೂಕಪ್ರೇಕ್ಷಕರಂತೆ ವೀಕ್ಷಿಸುತ್ತಿದ್ದರು. ಏನಾಗುತ್ತಿದೆ ಎಂದು ತಕ್ಷಣಕ್ಕೆ ಅರಿಯಲು ಸಾಧ್ಯವಾಗದ ಅವರಿಬ್ಬರೂ, ಕೆಲ ಕ್ಷಣ ಸುಧಾರಿಸಿಕೊಂಡು ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳಲು ಪರದಾಡಿದರು.

ವಾಹನ ಹತ್ತಲು ನಿರಾಕರಿಸಿದ ಇಬ್ಬರನ್ನೂ ಸ್ಥಳದಲ್ಲಿದ್ದ ಟ್ರಾಫಿಕ್‌ ಕಾನ್‌ಸ್ಟೆಬಲ್‌ ಒಬ್ಬರ ನೆರವಿನಿಂದ ಪೊಲೀಸರು ಬಲವಂತವಾಗಿ ಒಳಗೆ ತಳ್ಳಿದರು. ಸುಮಾರು 20 ನಿಮಿಷ ಆ ಅಂಧರನ್ನು ಪೊಲೀಸರು ಎಳೆದಾಡಿದರು.

ಆದರೆ, ವಾಹನ ಹತ್ತಲು ಮುಂದಾಗದ ಅಂಧನೊಬ್ಬ, ಬೈಕ್‌ ಪ್ರಯಾಣಿಕನೊಬ್ಬನ ಹಿಂಬದಿ ಸೀಟಿನಲ್ಲಿ ಕುಳಿತು ಪೊಲೀಸರ ಕಣ್ಣು ತಪ್ಪಿಸಿಕೊಂಡ. ಆದರೆ, ಇನ್ನೊಬ್ಬನನ್ನು ವಾಹನದೊಳಗೆ ಕುಳ್ಳಿರಿಸಿಕೊಂಡು ಪೊಲೀಸರು ಠಾಣೆಗೆ ಕರೆದೊಯ್ದರು.

ಪ್ರತಿಕ್ರಿಯಿಸಿ (+)