ಟೆಕಿ ಕೊಂದು ಸುಟ್ಟಿದ್ದ ರೌಡಿಗಳಿಗೆ ಗುಂಡೇಟು

7
ಕೆ.ಆರ್‌.ಪುರ ಠಾಣೆ ಪೊಲೀಸರ ಕಾರ್ಯಾಚರಣೆ

ಟೆಕಿ ಕೊಂದು ಸುಟ್ಟಿದ್ದ ರೌಡಿಗಳಿಗೆ ಗುಂಡೇಟು

Published:
Updated:
Deccan Herald

ಬೆಂಗಳೂರು: ವಿಳಾಸ ಕೇಳಿದವನನ್ನೇ ಕೊಂದು ಸುಟ್ಟುಹಾಕಿದ್ದ ಪ್ರಕರಣದ ಆರೋಪಿಗಳಾದ ರೌಡಿ ನವೀನ್‌ ಕುಮಾರ್‌ ಅಲಿಯಾಸ್ ಅಪ್ಪು ಹಾಗೂ ಗಿರೀಶ್ ಅಲಿಯಾಸ್ ಗಿರಿಯನ್ನು ಕೆ.ಆರ್‌.ಪುರ ಪೊಲೀಸರು, ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.‍

ಗುಂಡೇಟಿನಿಂದ ಗಾಯಗೊಂಡಿರುವ ರೌಡಿಗಳನ್ನು ಕೆ.ಆರ್‌. ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧನದ ವೇಳೆ ರೌಡಿ ಗಿರೀಶ್‌, ಡ್ರ್ಯಾಗರ್‌ನಿಂದ ಚುಚ್ಚಿದ್ದರಿಂದಾಗಿ ಗಾಯಗೊಂಡಿರುವ ಕಾನ್‌ಸ್ಟೆಬಲ್‌ ಮುನಿರಾಜು ಅವರನ್ನು ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಬ್ಬಾಳದ ‘ಇಂಟೆಲಿನೆಟ್’ ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಎಚ್‌.ಚೇತನ್‌ (22) ಎಂಬುವರನ್ನು ಸೆ. 13ರಂದು ಕೊಂದಿದ್ದ ಆರೋಪಿಗಳು, ಅವರ ದೇಹ ದೊಡ್ಡದೇನಹಳ್ಳಿಯ ನೀಲಗಿರಿ ತೋಪಿನಲ್ಲಿ ಸುಟ್ಟಿದ್ದರು. ಸೆ. 15ರಂದು ಅರೆಬೆಂದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಹೊಸಕೋಟೆ ಪೊಲೀಸರು, ಕೃತ್ಯವೆಸಗಿದ್ದ ಸಾಯಿವರ್ಧನ್ ಅಲಿಯಾಸ್ ವರ್ಧನ್ (26) ಹಾಗೂ ಸುನೀಲ್‌ಕುಮಾರ್ (24) ಸೇರಿದಂತೆ ಆರು ಮಂದಿಯನ್ನು ಮೊಬೈಲ್ ಕರೆ ವಿವರದ (ಸಿಡಿಆರ್) ಸುಳಿವಿನ ಆಧಾರದಲ್ಲಿ ಬಂಧಿಸಿದ್ದರು.

ಪ್ರಮುಖ ಆರೋಪಿಗಳಾಗಿದ್ದ ಕೆ.ಆರ್. ಪುರದ ಅಪ್ಪು ಹಾಗೂ ಗಿರಿ, ತಲೆಮರೆಸಿಕೊಂಡು ಓಡಾಡುತ್ತಿದ್ದರು. ಅವರ ಪತ್ತೆಗೆ ವೈಟ್‌ಫೀಲ್ಡ್‌ ಡಿಸಿಪಿ ಅಬ್ದುಲ್ ಅಹದ್ ಮೂರು ವಿಶೇಷ ತಂಡಗಳನ್ನು ರಚಿಸಿದ್ದರು.

ಪೊಲೀಸರ ಜೀಪಿನತ್ತ ಗುಂಡು ಹಾರಿಸಿದ್ದ: ‘ಆರೋಪಿಗಳು, ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಬೈಕ್‌ನಲ್ಲಿ ಹೊರಟಿದ್ದ ಮಾಹಿತಿ ಕೆ.ಆರ್‌.ಪುರ ಇನ್‌ಸ್ಪೆಕ್ಟರ್ ಎಚ್‌. ಜಯರಾಜ್‌ ನೇತೃತ್ವದ ತಂಡಕ್ಕೆ ಸಿಕ್ಕಿತ್ತು. ಬೆಳಿಗ್ಗೆ 6 ಗಂಟೆ ಸುಮಾರಿಗೆ ಖಾಜಿಸೊನ್ನೆನಹಳ್ಳಿ ರಸ್ತೆಗೆ ಹೋಗಿದ್ದ ಪೊಲೀಸರು, ರಸ್ತೆ ಮಧ್ಯದಲ್ಲಿ ಜೀಪನ್ನು ನಿಲ್ಲಿಸಿ ಆರೋಪಿಗಳ ಬೈಕ್‌ ಅಡ್ಡಗಟ್ಟಿದ್ದರು’ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದರು. 

‘ಪೊಲೀಸರನ್ನು ಕಂಡ ಆರೋಪಿ ಅಪ್ಪು, ತನ್ನ ಪಿಸ್ತೂಲ್‌ನಿಂದ ಜೀಪಿನತ್ತ ಮೂರು ಸುತ್ತು ಗುಂಡು ಹಾರಿಸಿದ್ದ. ಗುಂಡುಗಳು ತಗುಲಿದ್ದರಿಂದ ಜೀಪಿನ ಮುಂಭಾಗ ಜಖಂಗೊಂಡಿತು. ಆವಾಗಲೇ ಆತ್ಮರಕ್ಷಣೆಗಾಗಿ ಜಯರಾಜ್, ಅಪ್ಪುನ ಬಲಗಾಲಿಗೆ ಗುಂಡು ಹೊಡೆದು ಸೆರೆ ಹಿಡಿದರು.’

‘ರಸ್ತೆಯಲ್ಲಿ ಬೈಕ್ ಬಿಸಾಕಿ ತಪ್ಪಿಸಿಕೊಂಡು ಓಡಲೆತ್ನಿಸಿದ್ದ ಇನ್ನೊಬ್ಬ ರೌಡಿ ಗಿರಿ, ಕಾನ್‌ಸ್ಟೆಬಲ್ ಮುನಿರಾಜು ಅವರ ಬಲಗೈಗೆ ಡ್ರ್ಯಾಗರ್‌ನಿಂದ ಚುಚ್ಚಿದ್ದ. ಅವರನ್ನು ರಕ್ಷಿಸಲು ಹೋದ ಇನ್‌ಸ್ಪೆಕ್ಟರ್ ಜಯರಾಜ್ ಅವರು ಗಿರಿ ಮೇಲೂ ಗುಂಡು ಹಾರಿಸಿ ಬಂಧಿಸಿದರು’ ಎಂದು ಅಹದ್ ಮಾಹಿತಿ ನೀಡಿದರು. 

ಇಬ್ಬರನ್ನು ಕೊಂದಿದ್ದರು: ‘ಬಂಧಿತ ರೌಡಿಗಳು, ಕೆ.ಆರ್. ಪುರ ಪಾಲಿಕೆಯ ಮಾಜಿ ಸದಸ್ಯ ಸಿರ್‌ಪುರ್ ಶ್ರೀನಿವಾಸ್ ಹಾಗೂ ಬನಶಂಕರಿ 3ನೇ ಹಂತದ ಉದ್ಯಮಿ ನವಮಣಿ ಎಂಬುವರ ಕೊಲೆ ಪ್ರಕರಣದ ಆರೋಪಿಗಳು’ ಎಂದು ಅಹದ್ ತಿಳಿಸಿದರು.

‘ಶ್ರೀನಿವಾಸ್ ಕೊಲೆ ಪ್ರಕರಣದಲ್ಲಿ ರೌಡಿಗಳನ್ನು ಕೋಕಾ ಕಾಯ್ದೆಯಡಿ ಬಂಧಿಸಲಾಗಿತ್ತು. ಸುಪಾರಿ ಪಡೆದು, ಉದ್ಯಮಿ ನವಮಣಿಯನ್ನು ರೌಡಿಗಳು ಕೊಂದಿದ್ದರು’ ಎಂದರು.

‘ಗಣೇಶ ಹಬ್ಬದ ಪ್ರಯುಕ್ತ ಸೆ. 13ರಂದು ದೇವಸಂದ್ರದ ‘ಲಿಟ್ಲ್‌ ಬ್ಲೂಮ್’ ಶಾಲೆ ಬಳಿ ಗಣೇಶಮೂರ್ತಿ ಪ್ರತಿ‌ಷ್ಠಾಪಿಸಲಾಗಿತ್ತು. ಅಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಹಾಡು ಬದಲಿಸುವ ಸಂಬಂಧ ಸ್ಥಳೀಯ ನಿವಾಸಿ ಹರೀಶ್ ಅಲಿಯಾಸ್ ಪಕ್ಕ ಹಾಗೂ ರೌಡಿ ಅಪ್ಪು ನಡುವೆ ಜಗಳವಾಗಿತ್ತು. ಹರೀಶ್, ‘ನಿನ್ನನ್ನು ಜೀವಂತವಾಗಿ ಬಿಡುವುದಿಲ್ಲ’ ಎಂದು ಅಪ್ಪುಗೆ ಬೆದರಿಕೆ ಹಾಕಿದ್ದ. ಅದೇ ಮಾರ್ಗವಾಗಿ ರಾತ್ರಿ ಮನೆಗೆ ಹೊರಟಿದ್ದ ನೆಲಮಂಗಲ ತಾಲ್ಲೂಕು ಅವರೆಹಳ್ಳಿ ಗ್ರಾಮದ ಚೇತನ್ ಅವರನ್ನೇ ಹರೀಶ್‌ ಸಹಚರ ಎಂದು ತಿಳಿದ ಅಪ್ಪು, ತನ್ನ ಸಹಚರರ ಜೊತೆ ಸೇರಿ ಕೊಲೆ ಮಾಡಿದ್ದ’ ಎಂದು ಅಹದ್ ವಿವರಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !