ಸರಗಳ್ಳನ ಕಾಲಿಗೆ ಗುಂಡೇಟು

7

ಸರಗಳ್ಳನ ಕಾಲಿಗೆ ಗುಂಡೇಟು

Published:
Updated:
Deccan Herald

ಬೆಂಗಳೂರು: ಎಎಸ್‌ಐ ಕೈಗೆ ಚಾಕುವಿನಿಂದ ಇರಿದು ಪರಾರಿಯಾಗುತ್ತಿದ್ದ ಸರಗಳ್ಳ ಶಾಕೀರ್ (30) ಎಂಬಾತನ ಮೇಲೆ ಚಂದ್ರಾಲೇಔಟ್ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ಸಂತೋಷ್, ಗುಂಡು ಹಾರಿಸಿದ್ದಾರೆ.

ಶನಿವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಶಾಕೀರ್‌ನ ಎಡಗಾಲಿಗೆ ಗುಂಡು ತಗುಲಿದೆ. ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉತ್ತರ ಪ್ರದೇಶದ ಮುಜಾಫರ್ ನಗರದ ನಿವಾಸಿಯಾದ ಶಾಕೀರ್, 15 ದಿನಕೊಮ್ಮೆ ನಗರಕ್ಕೆ ಬರುತ್ತಿದ್ದ. ವಸತಿಗೃಹದಲ್ಲಿ ವಾಸವಿದ್ದುಕೊಂಡು ಕೃತ್ಯ ಎಸಗಿ ವಾಪಸ್‌ ಊರಿಗೆ ಹೋಗುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. 

‘ಚಂದ್ರಾಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸರಗಳವು ನಡೆದಿತ್ತು. ಘಟನಾ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ, ಆರೋಪಿಯ ಬೈಕ್‌ನ ನೋಂದಣಿ ಸಂಖ್ಯೆ ಗೊತ್ತಾಗಿತ್ತು. ಅದನ್ನು ಆಧರಿಸಿ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು’.

‘ಜ್ಞಾನಭಾರತಿ ಬಳಿಯ ವಿಶ್ವೇಶ್ವರಯ್ಯ ಬಡಾವಣೆಯ 3ನೇ ಹಂತದ ಚಿಕ್ಕಬಸ್ತಿ ಸಮೀಪ ಬೈಕ್‌ ಓಡಾಡಿದ್ದ ಬಗ್ಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಹೋಗಿದ್ದ ವಿಶೇಷ ತಂಡ, ನಾಕಾಬಂದಿ ಹಾಕಿ ಬೈಕ್‌ಗಳ ಪರಿಶೀಲನೆ ನಡೆಸುತ್ತಿತ್ತು. ಅಲ್ಲೀಗೆ ಬಂದಿದ್ದ ಆರೋಪಿ, ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದ’

‘ಆತನನ್ನು ಬೆನ್ನಟ್ಟಿದ್ದ ವಿಶೇಷ ತಂಡದಲ್ಲಿದ್ದ ಎಎಸ್‌ಐ ಕಾಳೇಗೌಡ, ಹಿಡಿದುಕೊಳ್ಳಲು ಮುಂದಾಗಿದ್ದರು. ಅದೇ ವೇಳೆ ಆರೋಪಿ, ಅವರ ಕೈಗೆ ಚಾಕುವಿನಿಂದ ಇರಿದಿದ್ದ. ಎಎಸ್‌ಐ ರಕ್ಷಣೆಗೆ ಹೋದ ಪಿಎಸ್‌ಐ ಸಂತೋಷ್, ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಆರೋಪಿಗೆ ಸೂಚಿಸಿದ್ದರು. ಅದಕ್ಕೆ ಕ್ಯಾರೆ ಎನ್ನದ ಆರೋಪಿ, ತಪ್ಪಿಸಿಕೊಳ್ಳಲು ಯತ್ನಿಸಿದಾಗಲೇ ಆತನ ಮೇಲೆ ಪಿಎಸ್‌ಐ ಗುಂಡು ಹಾರಿಸಿ ಸೆರೆಹಿಡಿದರು’ ಎಂದು ಹಿರಿಯ ಅಧಿಕಾರಿ ವಿವರಿಸಿದರು.

₹22 ಸಾವಿರಕ್ಕೆ ಬೈಕ್‌ ಖರೀದಿ: ‘ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಆರೋಪಿ, ಸರಗಳವು ಮಾಡುತ್ತಿದ್ದ. ಅದಕ್ಕಾಗಿಯೇ ₹20 ಸಾವಿರ ಕೊಟ್ಟು ವಿ.ವಿ. ಪುರದಲ್ಲಿ ಬೈಕ್‌ ಖರೀದಿಸಿದ್ದ’ ಎಂದು ಪೊಲೀಸರು ಹೇಳಿದರು.

‘ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡಿದ್ದ ಶಾಕೀರ್‌ನ ಸಹಚರ ಮೊಹಮ್ಮದ್ ಡ್ಯಾನೀಸ್‌ನನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ. ಇಬ್ಬರೂ ಸೇರಿಕೊಂಡು ಚಂದ್ರಾ ಲೇಔಟ್, ಸಿದ್ದಾಪುರ ಹಾಗೂ ರಾಜಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಸರಗಳವು ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಆ ಪ್ರಕರಣದಲ್ಲಿ ಚಿನ್ನಾಭರಣ ಜಪ್ತಿ ಮಾಡಬೇಕಿದೆ’ ಎಂದರು. 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !