ಸಾಮರ್ಥ್ಯ ವ್ಯಾಖ್ಯಾನದ ಕ್ರೀಡಾಕೂಟ

7
ಮೂರು ದಿನಗಳ ಪೊಲೀಸ್‌ ಕ್ರೀಡಾ ಕೂಟಕ್ಕೆ ಚಾಲನೆ

ಸಾಮರ್ಥ್ಯ ವ್ಯಾಖ್ಯಾನದ ಕ್ರೀಡಾಕೂಟ

Published:
Updated:
Prajavani

ಚಾಮರಾಜನಗರ: ‌ಜಿಲ್ಲಾ ಪೊಲೀಸ್‌ ಇಲಾಖೆಯ ವಾರ್ಷಿಕ ಕ್ರೀಡಾಕೂಟಕ್ಕೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಶುಕ್ರವಾರ ಚಾಲನೆ ನೀಡಿದರು.

ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕ್ರೀಡಾಕೂಟ ಎಂಬುದು ನಮ್ಮಲ್ಲಿರುವ ಎಲ್ಲ ಸಾಮರ್ಥ್ಯವನ್ನು ವ್ಯಾಖ್ಯಾನ ಮಾಡುವ ಕಾರ್ಯಕ್ರಮ. ಇಲ್ಲಿ ಭಾಗವಹಿಸುವುದು ಮುಖ್ಯವೇ ವಿನಾ ಗೆಲುವಲ್ಲ’ ಎಂದು ಹೇಳಿದರು.

‘ಕ್ರೀಡೆಗೂ, ಪೊಲೀಸರಿಗೂ ಹಲವು ಸಾಮ್ಯತೆಗಳಿವೆ. ಕ್ರೀಡೆಯಲ್ಲಿ ಯಶಸ್ಸು ಸಾಧಿಸಲು ಶಿಸ್ತು ಬಹಳ ಮುಖ್ಯ. ಪೊಲೀಸ್‌ ಉದ್ಯೋಗದಲ್ಲಿ ಶಿಸ್ತಿಗೆ ಪ್ರಾಧಾನ್ಯ. ಕ್ರೀಡೆಯಲ್ಲಿ ತ್ಯಾಗ ಮತ್ತು ತಂಡ ಸ್ಫೂರ್ತಿಗೂ ಮಹತ್ವ ಇದೆ. ಅದೇ ರೀತಿ ಪೊಲೀಸ್‌ ಕೆಲಸದಲ್ಲೂ ತ್ಯಾಗ ಮತ್ತು ತಂಡ ಸ್ಫೂರ್ತಿಯೂ ಮುಖ್ಯ’ ಎಂದರು.

ಮಲೆಮಹದೇಶ್ವರ ವನ್ಯಧಾಮದ ಉಪ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಮಾತನಾಡಿ, ‘ಸಮಾಜದದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಸಮಾಜದಲ್ಲಿ ಒಂದು ಸಕಾರಾತ್ಮಕ ಮನೋಭಾವನೆ ಬಿತ್ತಲು ಪೊಲೀಸರು ದಿನದ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ’ ಎಂದರು.

‘ಯಾವುದೇ ವ್ಯಕ್ತಿ ವೈಯಕ್ತಿಕವಾಗಿ ಪ್ರಗತಿ ಹೊಂದಲು ಹಾಗೂ ಯಾವುದೇ ಒಂದು ತಂಡವಾಗಿ ಅಭಿವೃದ್ಧಿ ಹೊಂದಲು ಕ್ರೀಡೆ ನೆರವಾಗುತ್ತದೆ. ಆ ನಿಟ್ಟಿನಲ್ಲಿ ಪೊಲೀಸರು ಕ್ರೀಡೆಯಲ್ಲಿ ತೊಡಗಿಕೊಳ್ಳುವುದು ಮುಖ್ಯವಾಗುತ್ತದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‌ ಕುಮಾರ್‌ ಮಾತನಾಡಿ, ‘ಸಮಾಜದ ನೆಮ್ಮದಿಗೆ, ಶಾಂತಿ ಕಾ‍ಪಾಡುವುದಕ್ಕಾಗಿ ಪೊಲೀಸರು ಒತ್ತಡ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

‘ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಮತ್ತು ದೈಹಿಕ ಕ್ಷಮತೆ ಇಲ್ಲದಿದ್ದರೆ ಪೊಲೀಸರಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಇಂತಹ ಕ್ರೀಡಕೂಟ ಪೊಲೀಸರಿಗೆ ಸಹಕಾರಿಯಾಗಲಿದೆ’ ಎಂದರು.

ಪಥಸಂಚಲನ: ಇದಕ್ಕೂ ಮೊದಲು, ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಪೊಲೀಸರು ಐದು ತಂಡಗಳಾಗಿ ಮೈದಾನದಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ಕ್ರೀಡಾಕೂಟದ ಸಮಾರೋಪ ಭಾನುವಾರ ಸಂಜೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !