ಗುಲಬರ್ಗಾ ವಿ.ವಿ: ಮತ್ತೊಂದು ಪರೀಕ್ಷಾ ಅವ್ಯವಸ್ಥೆ!

7
ಒಂದು ಗಂಟೆ ತಡವಾಗಿ ತಲುಪಿದ ಪ್ರಶ್ನೆ ಪತ್ರಿಕೆಗಳು, ವಿದ್ಯಾರ್ಥಿಗಳ ಪರದಾಟ

ಗುಲಬರ್ಗಾ ವಿ.ವಿ: ಮತ್ತೊಂದು ಪರೀಕ್ಷಾ ಅವ್ಯವಸ್ಥೆ!

Published:
Updated:
ರಾಯಚೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪರೀಕ್ಷೆ ಬರೆದರು

ರಾಯಚೂರು: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಮಂಗಳವಾರ ಸರಿಯಾದ ಸಮಯಕ್ಕೆ ಪರೀಕ್ಷೆ ಬರೆಯಲು ಸಾಧ್ಯವಾಗದೆ ಪರದಾಡಿದ ಪ್ರಸಂಗ ನಡೆಯಿತು.

ರಾಯಚೂರಿನ ಯರಗೇರಾದಲ್ಲಿರುವ ಸ್ನಾತಕೋತ್ತರ ಕೇಂದ್ರ, ಮಸ್ಕಿ ಹಾಗೂ ಸಿಂಧನೂರು ಸ್ನಾತಕೋತ್ತರ ಕೇಂದ್ರಗಳಲ್ಲೂ ವಿದ್ಯಾರ್ಥಿಗಳು ಕೂಡಾ ಇದೇ ತೊಂದರೆ ಅನುಭವಿಸಿದ್ದಾರೆ.

ರಾಜ್ಯಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗಗಳ ಎರಡನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ಕಳುಹಿಸಬೇಕಾಗಿದ್ದ ಪ್ರಶ್ನೆಪತ್ರಿಕೆಗಳನ್ನು ಗುಲಬರ್ಗಾ ವಿಶ್ವವಿದ್ಯಾಲಯದಿಂದ ಸಕಾಲಕ್ಕೆ ಕಳುಹಿಸಿಲ್ಲ ಹಾಗೂ ಬೇರೆ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಿರುವುದು ಪರೀಕ್ಷೆಗಳು ವಿಳಂಬವಾಗಿ ಆರಂಭವಾಗುವುದಕ್ಕೆ ಕಾರಣವಾಯಿತು.

ಪರೀಕ್ಷೆ ಆರಂಭಿಸಲು ನಿಗದಿತ ಸಮಯ ಬೆಳಿಗ್ಗೆ 10 ಗಂಟೆ. ಇದಕ್ಕೂ ಪೂರ್ವದಲ್ಲಿಯೆ ಆಯಾ ಸ್ನಾತಕೋತ್ತರ ಕೇಂದ್ರದ ಮುಖ್ಯಸ್ಥರು ವಿಶ್ವವಿದ್ಯಾಲಯದಿಂದ ಕಳುಹಿಸಿದ್ದ ಪ್ರಶ್ನೆಪತ್ರಿಕೆ ಇರುವ ಇ–ಮೇಲ್‌ ಪರಿಶೀಲಿಸಿದ್ದಾರೆ. ರಾಯಚೂರು ಸ್ನಾತಕೋತ್ತರ ಪರೀಕ್ಷೆ ಬರೆಯಬೇಕಿದ್ದ ವಿಷಯದ ಪ್ರಶ್ನೆಪತ್ರಿಕೆ ಜಾಗದಲ್ಲಿ ಬೇರೆ ವಿಷಯದ ಪ್ರಶ್ನೆಪತ್ರಿಕೆಗಳನ್ನು ಕಳುಹಿಸಲಾಗಿತ್ತು. ಕೂಡಲೇ ಎಚ್ಚೆತ್ತುಕೊಂಡು, ಸಂಬಂಧಿಸಿದ ವಿಷಯದ ಪ್ರಶ್ನೆಪತ್ರಿಕೆ ಕಳುಹಿಸುವುದಕ್ಕೆ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ಮುಖ್ಯಸ್ಥರಿಗೆ ಕೋರಲಾಗಿತ್ತು.

ಪ್ರಶ್ನೆಪತ್ರಿಕೆಗಳು ಅದಲು ಬದಲಾಗಿ ತಲುಪಿರುವುದು ಗಮನಕ್ಕೆ ಬಂದ ಮೇಲೆಯೂ ಸರಿಯಾದ ಪ್ರಶ್ನೆಪತ್ರಿಕೆ ಇ–ಮೇಲ್‌ ಕಳುಹಿಸುವುದಕ್ಕೆ ಒಂದು ಗಂಟೆಗೆ ಹೆಚ್ಚು ಸಮಯವನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ತೆಗೆದುಕೊಂಡಿದ್ದಾರೆ. ಇದರಿಂದ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳು ಉತ್ಸಾಹವು ಕಡಿಮೆಯಾಯಿತು. ಒಂದು ಗಂಟೆ ತಡವಾಗಿ ಇ–ಮೇಲ್‌ ಮೂಲಕ ಬಂದಿದ್ದ ಪ್ರಶ್ನೆಪತ್ರಿಕೆಯನ್ನು ಮುದ್ರಿಸಿ, ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿ ಪರೀಕ್ಷೆ ಬರೆಸಲಾಯಿತು.

‘ಎಂ.ಎ ರಾಜ್ಯಶಾಸ್ತ್ರ ಹಾಗೂ ಎಂ.ಕಾಂ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳು ಸೆಮಿಸ್ಟರ್‌ನಲ್ಲಿ ಓದಲು ಕೆಲವು ವಿಷಯಗಳನ್ನು ಐಚ್ಛಿಕವಾಗಿ ನೀಡಲಾಗಿದೆ. ಎಲ್ಲ ಸ್ನಾತಕೋತ್ತರ ಕೇಂದ್ರಗಳಲ್ಲೂ ಒಂದೇ ರೀತಿಯ ವಿಷಯ ಆಯ್ಕೆಯನ್ನು ವಿದ್ಯಾರ್ಥಿಗಳು ಮಾಡಿರುವುದಿಲ್ಲ. ಈ ಕಾರಣದಿಂದ ಪ್ರತಿವರ್ಷವೂ ಪ್ರಶ್ನೆಪತ್ರಿಕೆ ಕಳುಹಿಸುವಾಗ ಗೊಂದಲ ಏರ್ಪಡುತ್ತದೆ. ನಿಗದಿತ ಸಮಯಕ್ಕಿಂತ ಪೂರ್ವದಲ್ಲಿ ಪ್ರಶ್ನೆಪತ್ರಿಕೆ ಪರಿಶೀಲಿಸುವುದಕ್ಕೆ ಅವಕಾಶ ಇರುವುದಿಲ್ಲ. ಪರಿಸ್ಥಿತಿ ಸುಧಾರಿಸಲು ವಿಶ್ವವಿದ್ಯಾಲಯ ಮಟ್ಟದಲ್ಲಿ ಈ ಬಗ್ಗೆ ಕ್ರಮ ಜರುಗಿಸಬೇಕು’ ಎಂದು ಕಾಲೇಜಿನ ಉಪನ್ಯಾಸಕರು ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !