ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಕ್ಯಮಂಟಪದಲ್ಲಿ ಅಸ್ಪೃಶ್ಯತೆ: ಅಂಬಿಗರ ಗುರುಪೀಠದ ಸ್ವಾಮೀಜಿ ಆರೋಪ

Last Updated 28 ಜನವರಿ 2018, 11:33 IST
ಅಕ್ಷರ ಗಾತ್ರ

ಹಾವೇರಿ: ‘ತಳಸಮುದಾಯಗಳಿಗೆ ತಮ್ಮದೇ ಗುರುಪೀಠಗಳನ್ನು ಕಲ್ಪಿಸಿದ ಪರಿಣಾಮ ಸಮಾಜದಲ್ಲಿ ಸಮಾನತೆ ಮೂಡುತ್ತಿದೆ. ತಾರತಮ್ಯ ಮತ್ತು ಅಸ್ಪೃಶ್ಯತೆಗಳು ಸಡಿಲಿಕೆ ಆಗುತ್ತಿವೆ’ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರು ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ  ಹೇಳಿದರು.  

ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರ ಈ ಚಿಂತನೆಯಿಂದಾಗಿ ಶೋಷಣೆಗೆ ಒಳಗಾಗುತ್ತಿದ್ದ ಸಮುದಾಯಗಳಿಗೆ ಧಾರ್ಮಿಕ ನ್ಯಾಯ, ಸ್ವಾತಂತ್ರ್ಯ ದೊರಕುತ್ತಿದೆ. ಸ್ವಂತ ಗುರುಪೀಠಗಳ ಮೂಲಕ ತಳ ಸಮುದಾಯಗಳಲ್ಲಿ ಸ್ವಾತಂತ್ರ್ಯದ ಭಾವನೆ ಮೂಡುತ್ತಿದೆ’ ಎಂದ ಅವರು, ‘ಹೊಂದಾಣಿಕೆ ಮಾಡದೇ ಉಳಿಗಾಲ ಇಲ್ಲ ಎಂಬುದು ಪುರೋಹಿತಶಾಹಿ ವರ್ಗಕ್ಕೂ ಅರ್ಥವಾಗುತ್ತಿದೆ. ಹೀಗಾಗಿ ಬದ್ಧತೆ ಇಲ್ಲದಿದ್ದರೂ, ಹೊಂದಿಕೊಳ್ಳುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

‘ಅಂಬಿಗರ ಚೌಡಯ್ಯನವರು ಡಾಂಬಿಕತೆ, ವೈದಿಕತೆಯ ವಿರೋಧಿಗಳು. ಅವರು ಅನುಸರಿಸಿದ ಶರಣ ಧರ್ಮವು ಅತ್ಯಂತ ಕನಿಷ್ಠ ವ್ಯಕ್ತಿಯೂ ಆಚರಿಸುವಷ್ಟು ಸರಳ ಮತ್ತು ಶ್ರೇಷ್ಠವಾಗಿದೆ. ಹೀಗಾಗಿ, ಜಿಲ್ಲೆಯ ಚೌಡಯ್ಯದಾನಪುರದಲ್ಲಿನ ಅವರ ಐಕ್ಯಮಂಟಪದಲ್ಲಿ ಕೂಡಲ ಸಂಗಮದ ಮಾದರಿಯಂತೆ ಸಹಜ ಆರಾಧನೆ, ವಚನ ಪಠಣಗಳು ನಡೆಯಬೇಕು. ಹೋಮ ಹವನ, ಕುಂಕುಮಾರ್ಚನೆ, ಮಂಗಳಾರತಿ, ಪೂಜೆಗಳು ನಡೆಯಬಾರದು’ ಎಂದು ಒತ್ತಾಯಿಸಿದರು.  

‘ಆದರೆ, ಮಕರ ಸಂಕ್ರಾಂತಿಯಂದು (2018ರ ಜನವರಿ 14)ನನಗೆ ಐಕ್ಯಮಂಟಪವನ್ನು ಮುಟ್ಟಲೂ ಅವಕಾಶ ನೀಡದೇ, ಕೆಲವರು ಅಸ್ಪೃಸ್ಯತೆ ತೋರಿದರು. ವಾಪಾಸಾಗುವ ವೇಳೆ ಕಾರಿನ ಮೇಲೆ ಕಲ್ಲು ತೂರಿ, ಜೊತೆಗಿದ್ದ ಧರ್ಮದರ್ಶಿಯ ಮೇಲೆ ಹಲ್ಲೆ ನಡೆಸಿರುವುದೂ ವಿಷಾದನೀಯ. ಅಲ್ಲದೇ, ಗುರುಪೀಠದ ಆಡಳಿತ ಮಂಡಳಿಯು ನನ್ನನ್ನೇ ಕತ್ತಲಲ್ಲಿ ಇಟ್ಟಿದೆ ಎನ್ನುತ್ತಿರುವ ಆರೋಪಗಳೂ ಖಂಡನೀಯ’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT