ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗ ಚಟುವಟಿಕೆ ನಿತ್ಯ ನಿರಂತರ ಪ್ರಕ್ರಿಯೆ

Last Updated 30 ಜನವರಿ 2018, 8:42 IST
ಅಕ್ಷರ ಗಾತ್ರ

ಕೋಲಾರ: ‘ರಂಗ ಚಟುವಟಿಕೆಯು ನಿರಂತರ ನಡೆಯುವ ಪ್ರಕ್ರಿಯೆ. ಹೀಗಾಗಿ ರಂಗಭೂಮಿಯನ್ನು ಪಠ್ಯೇತರ ಚಟುವಟಿಕೆಯಾಗಿ ನೋಡಬೇಕಿಲ್ಲ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.

ಶಿವಮೊಗ್ಗ ರಂಗಾಯಣ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ರಾಷ್ಟ್ರೀಯ ಪಠ್ಯಕ್ರಮ ನೀತಿಯಲ್ಲಿ ಶೈಕ್ಷಣಿಕವಾಗಿ ಸಾಂಸ್ಕೃತಿಕ ಚಟುವಟಿಕೆ ಹೇಗೆ ನಡೆಯಬೇಕೆಂದು 15 ಪುಟಗಳ ವಿವರಣೆಯಿದೆ. ಸಂಸತ್‌ನಲ್ಲಿ ಇದನ್ನು ಒಪ್ಪಿದ್ದೇವೆ. ಆದರೆ, ಶೈಕ್ಷಣಿಕ ಚಟುವಟಿಕೆಯ ಭಾಗವಾಗಿ ನೀತಿ ಅನುಷ್ಟಾನಕ್ಕೆ ಬಂದಿಲ್ಲ ಎಂದು ವಿಷಾದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಾರ್ಯಕ್ರಮಕ್ಕಾಗಿ ಕಾರ್ಯಕ್ರಮ ನಡೆಸುವ ಅವಿವೇಕತನ ಮತ್ತು ಬುದ್ಧಿಹೀನತೆ ತೋರುತ್ತಿದೆ. ಸರ್ಕಾರದಿಂದ ಯಾವುದೇ ಸಂಸ್ಕೃತಿ ಬೆಳೆಯಲ್ಲ. ಸಂಸ್ಕೃತಿಯನ್ನು ಸಮು ದಾಯ ಪೋಷಿಸಬೇಕು. ಸರ್ಕಾರಿ ಪ್ರಾಯೋಜಿತ ಕೃತಕ ಉಸಿರಾಟದಲ್ಲಿ ಸಂಸ್ಕೃತಿ ಬೆಳೆಯಲು ಸಾಧ್ಯವಿಲ್ಲ ಎಂಬ ಕನಿಷ್ಠ ಶ್ರದ್ಧೆ, ನೆಲದ ಬಗ್ಗೆ ಅಭಿಮಾನ ಹಾಗೂ ಗೌರವ ಇಲಾಖೆಗೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದ್ಯತೆ ಸಿಗುತ್ತಿಲ್ಲ: ಜಿಲ್ಲಾ ಕೇಂದ್ರದ ರಂಗಮಂದಿರದಲ್ಲಿ ರಂಗಭೂಮಿಗೆ ಹೊರತಾದ ಚಟುವಟಿಕೆಗಳಿಗೆ ಸಿಗುವ ಆದ್ಯತೆ ರಂಗಭೂಮಿಗೆ ಸಿಗುತ್ತಿಲ್ಲ. ರಂಗಮಂದಿರ ಇರುವ ರೀತಿಯಲ್ಲಿ ಇಲ್ಲ. ಅವ್ಯವಸ್ಥೆ, ಮಾಲಿನ್ಯದ ಆಗರವಾಗಿದೆ. ರಂಗ ತಾಲೀಮು ನಡೆಸಲು ವ್ಯವಸ್ಥೆಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಂಗಮಂದಿರವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವಕ್ಕೆ ನೀಡುವುದು ಸಲ್ಲದು. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಾಕಷ್ಟು ಹಣವಿದೆ. ಇತ್ತೀಚಿನ ದಿನಗಳಲ್ಲಿ ರಂಗಮಂದಿರದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ಸಿಗುತ್ತಿಲ್ಲ. ರಂಗಮಂದಿರವನ್ನು ಸಾಂಸ್ಕೃತಿಕೇತರ ಕಾರ್ಯಕ್ರಮಗಳಿಗೆ ನೀಡುವುದನ್ನು ನಿಲ್ಲಿಸದಿದ್ದರೆ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಈ ಭಾಗದಲ್ಲಿ ರಂಗಭೂಮಿ ಬೇಡುವ ತಳಹದಿ ನಿರ್ಮಾಣ ಆಗಿಲ್ಲ. ಈ ನೋವು ಜನಪ್ರತಿನಿಧಿಗಳಿಗೆ ತಿಳಿಯಬೇಕಿತ್ತು. ಆದರೆ, ಅವರ ಮನಸ್ಸಿಗೆ ಇದು ತಟ್ಟುತ್ತಿಲ್ಲ. ಅನಾದರಣೆ ಮಧ್ಯೆಯೂ ಈ ನೆಲಕ್ಕೆ ಸಲ್ಲುವ, ಸಂಸ್ಕೃತಿಯ ಚಿಂತನೆ ಮಾಡುವ ಪ್ರಜ್ಞೆಯು ರಂಗ ಕಲಾವಿದರಲ್ಲಿ ಮತ್ತಷ್ಟು ಮೂಡಲಿ ಎಂದು ಆಶಿಸಿದರು.

ಪಠ್ಯದಲ್ಲಿ ಸೇರಿಸಬೇಕು: ‘ಭಾಷೆ, ಧನಾತ್ಮಕ ಗುಣ ಬೆಳೆಸಲು, ಸಂಸ್ಕೃತಿ ಪರಿಚಯಿಸಲು, ಸಹಕಾರ ಮನೋಭಾವ ಮೂಡಲು, ಲಿಂಗ ತಾರತಮ್ಯ ನಿವಾರಿಸಲು, ಸಮಾನತೆ ಮೂಡಿಸಲು ಸಹಕಾರಿಯಾಗುವ ರಂಗಭೂಮಿ ವಿಷಯವನ್ನು ಪಠ್ಯದಲ್ಲಿ ಸೇರಿಸಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಾನಂದ ಕೆಂಪರಾಜ್ ಸಲಹೆ ನೀಡಿದರು.

ಯುವಕ ಯುವತಿಯರು ಸಿನಿಮಾ, ಟಿ.ವಿ, ಮೊಬೈಲ್ ಸಂಸ್ಕೃತಿಯಲ್ಲೇ ಮುಳುಗಿದ್ದಾರೆ. ಅಲ್ಲದೇ, ಅವು ಸೃಷ್ಟಿಸುವ ಭ್ರಮಾ ಲೋಕದಲ್ಲಿ ಮೈ ಮರೆತಿದ್ದಾರೆ. ರಂಗಭೂಮಿ ಮಾತ್ರ ವಾಸ್ತವ ಕೇಂದ್ರಿತವಾದುದ್ದನ್ನು ಹೇಳುತ್ತದೆ ಎಂದು ಅಭಿಪ್ರಾಯಪಟ್ಟರು.

ನಾಟಕ ಪ್ರದರ್ಶನ: ಮಾಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ತಂಡವು ‘ನೆಲದೇವತೆಗಳ ಹಜ್ಜೆ ಹಾಡು’, ನೇತಾಜಿ ಕಾಲೇಜು ವಿದ್ಯಾರ್ಥಿಗಳು ‘ಹಕ್ಕಿ ಹಾಡು’, ಕೋಲಾರದ ಎಸ್‌ಡಿಸಿ ಕಾಲೇಜು ವಿದ್ಯಾರ್ಥಿಗಳು ‘ಬಾ ಇಲ್ಲಿ ಸಂಭವಿಸು’, ಗೋಕುಲ ಕಾಲೇಜು ವಿದ್ಯಾರ್ಥಿಗಳು ‘ಕುಲಂ’ ಹಾಗೂ ಬಂಗಾರಪೇಟೆ ತಾಲ್ಲೂಕಿನ ಬಂಗಾರ ತಿರುಪತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ‘ಬೆಪ್ಪತಕ್ಕಡಿ ಬೋಳಿ ಶಂಕರ’ ನಾಟಕ ಪ್ರದರ್ಶಿಸಿದರು.

ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಡಿ.ಆರ್. ರಾಜಪ್ಪ, ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಮಾಜಿ ಅಧ್ಯಕ್ಷ ಎಸ್.ಮುನಿಯಪ್ಪ, ಸರ್ಕಾರಿ ಮಹಿಳಾ ಕಾಲೇಜು ಪ್ರಾಧ್ಯಾಪಕ ಶಿವಪ್ಪ ಅರಿವು, ರಂಗಕರ್ಮಿ ಮಾಲೂರು ವಿಜಿ, ಕಾಲೇಜು ರಂಗೋತ್ಸವದ ಜಿಲ್ಲಾ ಸಂಚಾಲಕ ಕೃಷ್ಣಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ಪಾಲ್ಗೊಂಡಿದ್ದರು.

* * 

ಕೋಲಾರದಲ್ಲಿ ಜಾತಿ ಸಮಾವೇಶ, ಕೆಲಸಕ್ಕೆ ಬಾರದ ಪಕ್ಷದ ಕಾರ್ಯಕ್ರಮಗಳು ಸಾಕಷ್ಟು ನಡೆಯುತ್ತವೆ. ಶಿವಮೊಗ್ಗ, ಮೈಸೂರು, ಬೆಂಗಳೂರು ಭಾಗದಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೊರತೆಯಿಲ್ಲ. ಆದರೆ, ಕೋಲಾರ ಈ ವಿಷಯದಲ್ಲಿ ಹಿಂದುಳಿದಿದೆ.
–ಕೋಟಿಗಾನಹಳ್ಳಿ ರಾಮಯ್ಯ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT