7
ವಿಶ್ವಸಂಸ್ಥೆಯ ಉಪ ಮಹಾ ಕಾರ್ಯದರ್ಶಿ

ಒತ್ತಡದ ಜಗತ್ತಿಗೆ ಯೋಗ ಮದ್ದು: ಅಮೀನಾ ಮೊಹಮ್ಮದ್ ಅಭಿಮತ

Published:
Updated:

ವಿಶ್ವಸಂಸ್ಥೆ: ಇಂದಿನ ಸಂಕೀರ್ಣ ಹಾಗೂ ಒತ್ತಡದ ಜಗತ್ತಿಗೆ ಯೋಗ ಹೆಚ್ಚು ಅಗತ್ಯವಾಗಿದೆ ಎಂದು ವಿಶ್ವಸಂಸ್ಥೆಯ ಉಪ ಮಹಾ ಕಾರ್ಯದರ್ಶಿ ಅಮೀನಾ ಮೊಹಮ್ಮದ್ ಹೇಳಿದರು. 

ವಿಶ್ವಸಂಸ್ಥೆಯಲ್ಲಿ ಭಾರತ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪ್ರಾಚೀನ ಭಾರತದ ದೈಹಿಕ ಹಾಗೂ ಮಾನಸಿಕ ಅಭ್ಯಾಸಗಳು ದೇಹದ ಆರೋಗ್ಯ ಹಾಗೂ ಶಾಂತ ಮನಸ್ಥಿತಿಗೆ ಬಹುಮುಖ್ಯ ಕೊಡುಗೆ ನೀಡುತ್ತವೆ ಎಂದರು. 

ವೈಯಕ್ತಿಕ ಯೋಗಕ್ಷೇಮ ಹಾಗೂ ವಿಶ್ವಸಂಸ್ಥೆಯ ಕಾರ್ಯನಿರ್ವಹಣೆಯ ವಿವಿಧ ಆಯಾಮಗಳಿಗೂ ಯೋಗ ನೆರವಾಗಬಲ್ಲದು ಎಂದ ಅವರು ಕಾರ್ಯಕ್ರಮ ಆಯೋಜಿಸಿದ ಭಾರತವನ್ನು ಪ್ರಶಂಸಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಾಯಭಾರಿಗಳು, ರಾಜತಾಂತ್ರಿಕರು, ಅಧ್ಯಾತ್ಮ ಗುರುಗಳು, ವಿದ್ಯಾರ್ಥಿಗಳು, ಯೋಗಾಸಕ್ತರು ಭಾಗಿಯಾಗಿದ್ದರು. ‘ಶಾಂತಿಗಾಗಿ ಯೋಗ’ ವಿಷಯದಡಿ ಉತ್ಸಾಹಿಗಳು ಮುಖ್ಯ ಕಚೇರಿ ಆವರಣದ ಹುಲ್ಲುಹಾಸಿನ ಮೇಲೆ ಎರಡು ಗಂಟೆ ಯೋಗ ಮಾಡಿದರು. 

ಯೋಗದ ಮೂಲಕ ಸುಸ್ಥಿರ ಜೀವನಶೈಲಿಯತ್ತ ಜಗತ್ತು ಹೊರಳಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದೀನ್ ಹೇಳಿದರು.

ಯೋಗಾಯೋಗ: ವಿಶ್ವಸಂಸ್ಥೆಯಲ್ಲಿ ಯೋಗ ದಿನದ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಯೋಗ ಕುರಿತ ವಸ್ತು ಪ್ರದರ್ಶನ ಜೂನ್ 18ರಿಂದಲೇ ಆರಂಭವಾಗಿದ್ದು, 22ರವರೆಗೆ ನಡೆಯಲಿದೆ. ವಿಶ್ವಸಂಸ್ಥೆ ಕೇಂದ್ರ ಕಚೇರಿಯ ಕಟ್ಟಡದ ಮೇಲೆ ಲೇಸರ್ ಮೂಲಕ ಯೋಗಾಸನದ ಭಂಗಿಗಳನ್ನು ಚಿತ್ರಿಸಲಾಯಿತು. 

ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೊವನ್ನು ಪ್ರಸಾರ ಮಾಡಲಾಯಿತು. ಬೆಂಗಳೂರು ಡೀಮ್ಸ್ ವಿಶ್ವವಿದ್ಯಾಲಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (ಎಸ್–ವ್ಯಾಸ) ಸ್ಥಾಪಕ ಎಚ್.ಆರ್. ನಾಗೇಂದ್ರ ಅವರು ಉಪನ್ಯಾಸ ನೀಡಿದರು. 

ಭಾರತದ ಕಾನ್ಸುಲೇಟ್ ಜನರಲ್ ಕಚೇರಿ ಕೂಡಾ ಯೋಗ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಯೋಗದ ಉಪಯೋಗ ಕುರಿತು ಸಂವಾದ ನಡೆಯಿತು. ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಮುಖ್ಯಸ್ಥ ವಿನಯ್ ಸಹಸ್ರಬುದ್ಧೆ ಅವರು ಭಾರತ ನಿಯೋಗದ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !