ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಯೆಂಬುದು ಕುಲುಮೆಯಲ್ಲ, ಒಲುಮೆ!

Learing not a barden
Last Updated 30 ಜನವರಿ 2018, 12:14 IST
ಅಕ್ಷರ ಗಾತ್ರ

ಮಂಕಾಗಿ ಎದುರಿಗೆ ಕುಳಿತಿದ್ದ ವಿದ್ಯಾರ್ಥಿ. ಅಪ್ಪ-ಅಮ್ಮನದು ಒಂದೇ ದೂರು, ಅವನು ಸರಿಯಾಗಿ ಓದುತ್ತಿಲ್ಲವೆಂದು. ಅವರಿಬ್ಬರನ್ನು ಆಚೆಗೆ ಕಳುಹಿಸಿ ವಿದ್ಯಾರ್ಥಿಯೊಂದಿಗೆ ಮಾತಿಗೆ ತೊಡಗಿದೆ. ಅವನಿಗೆ ವಿದ್ಯಾವಂತನಾಗಬೇಕೆಂಬ ಆಸಕ್ತಿಯೇನೋ ಇತ್ತು. ಆದರೆ ಕೆಲವು ಆಕ್ಷೇಪಗಳಿದ್ದವು. ಅದರಲ್ಲಿ ಮುಖ್ಯವಾದದ್ದು ಅವನ ಗಣಿತದ ಅಧ್ಯಾಪಕರು ಅವನಿಗೆ ತರಗತಿಯಲ್ಲಿ ಮಾಡಿದ ಅವಮಾನ, ಅದೂ ಒಂದನೇ ತರಗತಿಯಿಂದಲೇ ಅವನಿಗೆ ಆ ವಿಷಯದಲ್ಲಿ ನಿರಾಸಕ್ತಿ ಮೂಡಿಸಿಬಿಟ್ಟಿತ್ತು. ಪ್ರತಿಷ್ಠಿತ ಶಾಲೆಯೇನೋ ಹೌದು. ಆದರೆ ಅಲ್ಲಿನ ಅಧ್ಯಾಪಕರು ಎಂಥವರು ಎಂದು ತಿಳಿಯದೆ ಸೇರಿಸಿಬಿಟ್ಟಿದ್ದರು.

ಒಂದನೆಯ ತರಗತಿಯ ಮಗು ಲೆಕ್ಕ ತಪ್ಪು ಮಾಡಿದರೆ ಆ ಟೀಚರ್‌ ಕೊಡುತ್ತಿದ್ದ ಶಿಕ್ಷೆ ಏನು ಗೊತ್ತೆ? ಮಗುವಿನ ಜುಟ್ಟು ಹಿಡಿದು ಅದರ ತಲೆಯನ್ನು ಗೋಡೆಗೆ ಜಪ್ಪುವುದು! ಈ ಕಹಿ ಅನುಭವದ ಹಿನ್ನೆಲೆಯಲ್ಲಿ ಗಣಿತದ ಬಗ್ಗೆ ಹೀಕರಿಕೆ ಹುಟ್ಟಿತ್ತು ಅವನಲ್ಲಿ. ಅದಾದ ಬಳಿಕವೂ ಅವನಿಗೆ ಆ ವಿಷಯದಲ್ಲಿ ಆಸಕ್ತಿ ಮೂಡಿಸದೆ `ರಿಪೇರಿ' ಮಾಡುತ್ತಲೇ ಬಂದಿದ್ದರು ಶಿಕ್ಷಕರು. ಸ್ವಲ್ಪಮಟ್ಟಿಗಿನ ಭಯವಿರಬೇಕು, ಶಿಸ್ತು ಬೇಕು ನಿಜ. ಈ ಭಯವಾಗಲೀ ಶಿಸ್ತಾಗಲೀ ಮಗುವಿನ ರಕ್ಷಣೆಗೇ ಹೊರತು ಹಿಂಸೆಗಲ್ಲ. ಜೊತೆಗೆ ಯಾವ ಮಗುವೂ ಯಾವ ವಿಷಯವನ್ನೂ ಇಷ್ಟಪಟ್ಟು ಕಲಿಯುವುದಿಲ್ಲವೆಂಬುದೂ ನಿಜ.

ಪ್ರತಿಯೊಬ್ಬರಲ್ಲೂ ಕಲಿಕೆ ಒಂದು ಸವಾಲೇ ಆಗಿರುತ್ತದೆ. ಒಂದು ಭಾಷೆಯ ಕಲಿಕೆ ಮತ್ತು ಸಾಪೇಕ್ಷಸಿದ್ಧಾಂತದ ಕಲಿಕೆ ಭಿನ್ನವಲ್ಲವೆ? ಎರಡಕ್ಕೂ ಮೂಲದ್ರವ್ಯವಾದ ಮನಸ್ಸು ಸ್ಪಂದಿಸುವ ರೀತಿ ಭಿನ್ನವಾಗಿರುತ್ತದೆ. ಕಲಿಕೆ ಕುತೂಹಲದ ಬುನಾದಿಯ ಮೇಲೆ ನಡೆಯಬೇಕು. ಅದರಲ್ಲೂ ಪ್ರಾಥಮಿಕ ಶಿಕ್ಷಣ ವಿದ್ಯಾರ್ಥಿಯ ಆಸಕ್ತಿಯನ್ನು ಕೆರಳಿಸಿ, ಮಗು ತಾನೇ ತನ್ನ ಇಷ್ಟದ ಕ್ಷೇತ್ರವನ್ನು ಆಯ್ದುಕೊಳ್ಳುವಲ್ಲಿ ನೆರವಾಗಬೇಕು. ಆದರೆ ಎಷ್ಟೊಂದು ಪ್ರಕರಣಗಳಲ್ಲಿ ಹೀಗಾಗುವುದೇ ಇಲ್ಲ. ಜೀವನವಿಡೀ ವ್ಯವಸ್ಥೆಯನ್ನು ಶಪಿಸುತ್ತ ಬದುಕುವ ಉದಾಹರಣೆಗಳೇ ಅಧಿಕ.

ಸಮಾಜವೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಆಲ್ಬರ್ಟ್‌ ಐನ್‍ಸ್ಟೀನ್ ಹೀಗೆನ್ನುತ್ತಾರೆ: ‘ಸಮಾಜದ ಉನ್ನತಿ ಎಂಬುದು ಅದರ ಶಾಲೆಗಳಲ್ಲಿ ಕಲಿಸುವ ಮಗ್ಗಿ ಅಥವಾ ಪೀರಿಯಾಡಿಕ್ ಟೇಬಲ್‍ಗಳ ಮೇಲೆ ಅವಲಂಬಿತವಾಗಿರದೆ ಆಲೋಚನೆ ಮತ್ತು ಸೃಜನಶೀಲತೆಗಳನ್ನು ಎಷ್ಟರಮಟ್ಟಿಗೆ ಪ್ರಚೋದಿಸುತ್ತವೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ’ (A society`s competitive advantage will come not from how well its schools teach the multiplication and periodic tables, but from how will they stimulate imagination and creativity) ಕಲಿಕೆಯೆಂಬುದು ಕುದಿವ ಕುಲುಮೆಯಾಗಿರಬೇಕಿಲ್ಲ. ಅದು ಉತ್ಸಾಹದ ಚಿಲುಮೆಯಾಗಿರುವಲ್ಲಿ ಯಥಾಪ್ರಕಾರ ಪೋಷಕ-ವಿದ್ಯಾರ್ಥಿ-ಶಿಕ್ಷಕ ಎಂಬೀ ಮೂರು ಬಿಂದುಗಳು ಒಂದಕ್ಕೊಂದು ಪೂರಕವಾಗಿ ವರ್ತಿಸಬೇಕು.

ಪೋಷಕರಾದವರು ಮಗುವಿನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ದೈಹಿಕ, ಮಾನಸಿಕ ನ್ಯೂನತೆಗಳು ಕಂಡುಬಂದಲ್ಲಿ ಗಾಬರಿಗೊಳ್ಳದೆ ಸೂಕ್ತ ವೈದ್ಯಕೀಯ ನೆರವು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಬಹುತೇಕ ಬಾರಿ ಪೋಷಕರಿಗೇ ಹೆಚ್ಚಿನ ಆಪ್ತಸಲಹೆಯ ಆವಶ್ಯಕತೆಯಿರುತ್ತದೆ. ಮೊದಲಿಗೆ ಅವರು ಅಂತಹ ನ್ಯೂನತೆಗಳಿದ್ದರೆ ಅದನ್ನು ಒಪ್ಪಿಕೊಳ್ಳಬೇಕು. ಶಿಕ್ಷಕರು ಮಗುವಿನ ಕಲಿಕೆಯಲ್ಲಿ ಪ್ರಗತಿ ಕಾಣದಿದ್ದಾಗ ಮಗುವನ್ನು ಸೂಕ್ತ ಮನೋವೈದ್ಯರಲ್ಲೋ ಇಲ್ಲ ಆಪ್ತಸಲಹೆಗಾರರಲ್ಲೋ ತೋರಿಸಿ ಎಂದಾಗ ಬರುವ ಮೊದಲ ಪ್ರತಿಕ್ರಿಯೆ, ‘ಹಾಗಾದರೆ ನಮ್ಮ ಮಗು ನಾರ್ಮಲ್ ಅಲ್ಲವಾ? ನಮಗೇನೋ ಹಾಗೆನ್ನಿಸ್ತಿಲ್ಲವಲ್ಲ!’ ನಿಜ ಹೆತ್ತವರಿಗೆ ಹಾಗೆನಿಸುತ್ತದೆ, ತಮ್ಮ ಮಗು ಎಲ್ಲರಂತೆಯೇ ಇದೆ ಎಂದು. ಆದರೆ ಈ ನಿರಾಕರಣೆಯ ನಿಲುವಿನಲ್ಲೇ ಹೆಚ್ಚು ದಿನ ಕಳೆದರೆ ಅದರಿಂದ ಮಗುವಿಗೆ ಹೆಚ್ಚಿನ ತೊಂದರೆಯೇ ಹೊರತು ಲಾಭವೇನಿಲ್ಲ. ದೈಹಿಕ ತೊಂದರೆಯಾಗಲಿ, ಮಾನಸಿಕ ತೊಂದರೆಯಾಗಲಿ ಎಷ್ಟು ಬೇಗ ಪತ್ತೆಹಚ್ಚಲಾಗುತ್ತದೋ, ಎಷ್ಟು ಬೇಗ ಚಿಕಿತ್ಸೆ ದೊರೆಯುತ್ತದೋ ಅಷ್ಟು ಬೇಗ ಗುಣ ಕಾಣುತ್ತದೆ. ತಡ ಮಾಡಿದಷ್ಟೂ ಚಿಕಿತ್ಸೆಯ ಅವಧಿ ಹೆಚ್ಚುತ್ತದೆ. ಆದುದರಿಂದ ಇಂತಹ ಸೂಚನೆಗಳು ಬಂದಾಗ ತಡಮಾಡದೆ ತಜ್ಞರ ಸಹಾಯವನ್ನು ಪಡೆದುಕೊಳ್ಳಬೇಕು.

‘ಮನೋವೈದ್ಯರಲ್ಲಿಯೋ ನಿಮಾನ್ಸ್‌ನಲ್ಲಿಯೋ ತೋರಿಸಿ’ – ಎಂದಾಗ ಬಹಳಷ್ಟು ಮಂದಿ ಪೋಷಕರು ಹಿಂಜರಿಯುತ್ತಾರೆ. ದೇಹಕ್ಕೆ ಕಾಯಿಲೆಗಳು ಅಡರುವಂತೆ ಮನಸ್ಸಿಗೂ ಕಾಯಿಲೆಗಳು ತಗುಲುತ್ತವೆ ಎಂಬ ವಾಸ್ತವವನ್ನು ತಿಳಿದುಕೊಳ್ಳಬೇಕು. ಮೆದುಳು ಮೇಲ್ನೋಟಕ್ಕೆ ಒಂದೇ ರೀತಿ ತೋರಿದರೂ ಅದರ ಸೂಕ್ಷ್ಮತೆ ವ್ಯಕ್ತಿಯಿಂದ ವ್ಯಕ್ತಿಗೆ ಬೇರೆಯಾಗಿರುತ್ತದೆ. ದೇಹದ ಹಾರ್ಮೋನುಗಳು ರಾಸಾಯನಿಕಗಳು ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಇವು ವಿದ್ಯಾರ್ಥಿಯ ಆಲೋಚನೆ, ವರ್ತನೆ, ಕಲಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಕೇವಲ ಆಪ್ತಸಮಾಲೋಚನೆಯಿಂದ ಗುಣವಾಗದ ಸಂದರ್ಭದಲ್ಲಿ ಮನೋವೈದ್ಯಕೀಯ ಚಿಕಿತ್ಸೆ ಅವಶ್ಯವೂ ಅನಿವಾರ್ಯವೂ ಆಗಿರುತ್ತದೆ. ಈ ಕುರಿತು ಸಾಮಾಜಿಕ ನಿಂದನೆಗೆ ಹೆದರಿ ಮನೋವೈದ್ಯರಲ್ಲಿ ತೋರಿಸದೆ ಇರುವುದು ತಪ್ಪಾಗುತ್ತದೆ. ಇತ್ತೀಚೆಗೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಮಾಲೋಚಕರನ್ನು ನೇಮಿಸುತ್ತಿರುವುದು ಒಂದು ಸ್ವಾಗತಾರ್ಹ ಬದಲಾವಣೆಯಾಗಿದೆ.

ವಿದ್ಯಾರ್ಥಿಯು ಕಲಿಕೆಯ ಬಗ್ಗೆ ಸಕಾರಾತ್ಮಕ ಧೋರಣೆಯನ್ನು ಹೊಂದಿರಬೇಕು. ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ಮೂಡಿಸಿದ ಆಸಕ್ತಿಯನ್ನು ಉಳಿಸಿ ಬೆಳೆಸಿಕೊಳ್ಳಬೇಕು. ಸ್ವಲ್ಪ ಕಷ್ಟ ತೊಂದರೆಗಳಿಲ್ಲದೆ ಕಲಿಕೆ ಅಸಾಧ್ಯ. ಏಕೆಂದರೆ ಕಲಿಕೆ ಎಂಬುದೇ ಹೊಸ ವಿಚಾರವನ್ನು ಅರಿಯುವುದು. ಆಗ ಸಹಜವಾಗಿಯೇ ದೇಹ-ಮನಸ್ಸುಗಳು ಪ್ರತಿಭಟಿಸುತ್ತವೆ, ಸೋಲುಗಳು ಎದುರಾಗುತ್ತವೆ. ಸೋಲಿಗೆ ಹೆದರದೆ ಮುಂದುರಿಯಬೇಕು. ಇದು ಜೀವನವಿಡಿ ನಡೆಯುವಂತಹದ್ದು. ಜಾನ್ ಗಾರ್ಡನರ್ ಹೀಗೆ ಹೇಳುತ್ತಾರೆ: ‘There is no learning without some difficulty and fumbling. If you want to keep on learning, you must keep on risking failure - all your life’. ಕಲಿಕೆಯ ಮಟ್ಟ ಏರಿದಂತೆಲ್ಲ ಸವಾಲುಗಳು ಎತ್ತರವಾಗುತ್ತ ಹೋಗುತ್ತವೆ. ಆದರೆ ಮೂಲಭೂತ ಆಕಾಂಕ್ಷೆ ಮತ್ತು ಆಶಯಗಳನ್ನು ಯಥಾವತ್ತಾಗಿ ಕಾಪಾಡಿಕೊಂಡು ಬರಬೇಕು ವಿದ್ಯಾರ್ಥಿ. ಹೊಸವಿಚಾರಗಳನ್ನು ಮನಸ್ಸು ಪ್ರತಿರೋಧಿಸುತ್ತದಾದ್ದರಿಂದ ಮನಸ್ಸಿನ ಆಟಗಳನ್ನು ಮುಂದಾಗಿಯೇ ಅರಿತು ಪಟ್ಟು ಹಿಡಿದು ಅದನ್ನು ಪಳಗಿಸಬೇಕು. ಓದುವುದು ಬೇಸರವಾದಾಗ ಬರೆಯುವುದು, ಬರೆಯುವುದು ಬೇಸರವಾದಾಗ ಓದುವುದು, ಇವೆರಡೂ ಬೇಸರವೆನಿಸಿದರೆ ತಾನೇ ಓದಿದ್ದನ್ನು ಧ್ವನಿಮುದ್ರಿಸಿ ಕೇಳುವುದು, ಆಗಾಗ ಪ್ರಶ್ನಪತ್ರಿಕೆಯನ್ನು ಬಿಡಿಸುವುದು – ಹೀಗೆ ಮನಸ್ಸನ್ನು ಸದಾ ಅಧ್ಯಯನಶೀಲವಾಗಿಸುವುದನ್ನು ಕಲಿಯಬೇಕು.

ಇವೆಲ್ಲವೂ ಹೇಳಿದಷ್ಟು ಸುಲಭವಲ್ಲ ಮಾಡುವುದು. ಮೊದಲಿಗೆ ನಿದ್ದೆ ಹಾಗೂ ಏಳುವ ಸಮಯ ನಿಗದಿಯಾಗಬೇಕು. ದೇಹ ಮನಸ್ಸುಗಳು ಚೈತನ್ಯವನ್ನು ಪಡೆದುಕೊಳ್ಳುವುದು ನಿದ್ದೆಯಲ್ಲಿ. ಮೊಬೈಲ್ ರೀಚಾರ್ಜ್ ಆದಂತೆ ಇದು. ನಿದ್ದೆ ಎಷ್ಟು ಬೇಕೋ (6-8 ತಾಸು) ಅವರವರ ಅವಶ್ಯಕತೆಗೆ ತಕ್ಕಂತೆ ಮಾಡಬೇಕು. ಉಳಿದ ಸಮಯವನ್ನು ಕ್ಲುಪ್ತವಾಗಿಯೂ ಉಪಯುಕ್ತವಾಗಿಯೂ ಬಳಸುವುದನ್ನು ವಿದ್ಯಾರ್ಥಿಯು ಅಭ್ಯಾಸ ಮಾಡಬೇಕು. ಮನಸ್ಸಿನ ಏಕಾಗ್ರತೆಯನ್ನು ಕಲಿಸದಿರುವುದು ಸಾಮಾನ್ಯಶಿಕ್ಷಣದ ಮೂಲದೋಷ. ಅದೊಂದನ್ನು ಕಲಿಸದೆ ಇನ್ನೇನನ್ನು ಕಲಿಸಿದರೂ ಪ್ರಯೋಜನವಿಲ್ಲ. ಅಥವಾ ಅದನ್ನು ಕಲಿಸಿಬಿಟ್ಟರೆ ಮತ್ತೇನನ್ನೂ ಕಲಿಸುವ ಶ್ರಮಪಡಬೇಕಾಗಿಲ್ಲ. ಏಕೆಂದರೆ ಅಂತಹ ಏಕಾಗ್ರ ಮನಸ್ಸನ್ನು ಬಳಸಿ ವಿದ್ಯಾರ್ಥಿಯು ತನಗೆ ಬೇಕಾದ ವಿಷಯವನ್ನು ಚೆನ್ನಾಗಿ ಗ್ರಹಿಸಬಲ್ಲ. ಆದುದರಿಂದ ಯೋಗ, ಪ್ರಾಣಯಾಮಗಳಂಥವವನ್ನು ಅಭ್ಯಸಿಸಿ, ಏಕಾಗ್ರತೆಯನ್ನೂ ವಿದ್ಯಾರ್ಥಿ ಕಲಿಯಬೇಕು.

ಶಿಕ್ಷಕನಾದವನು ಕಲಿಕೆಯ ಬಹು ಮುಖ್ಯ ಅಂಗ. ಇವನನ್ನು, ಸಮಾಜ, ಪೋಷಕ, ವಿದ್ಯಾರ್ಥಿ ಎಲ್ಲರೂ ನಂಬಿರುತ್ತಾರೆ. ಈ ವಿಶ್ವಾಸಕ್ಕೆ ದ್ರೋಹ ಬಾರದಂತೆ ನಡೆದುಕೊಳ್ಳುವುದು, ತನ್ನ ಕರ್ತವ್ಯವನ್ನು ನಿರ್ವಹಿಸುವುದು ಬಹಳ ಮುಖ್ಯ. ಐನ್‍ಸ್ಟೀನ್ ‘ನಾನು ನನ್ನ ವಿದ್ಯಾರ್ಥಿಗಳಿಗೆ ಕಲಿಸುವುದಿಲ್ಲ, ಕಲಿಕೆಗೆ ಪೂರಕವಾದ ವಾತಾವರಣವನ್ನಷ್ಟೆ ಅವರಿಗೆ ನಿರ್ಮಿಸಿಕೊಡುತ್ತೇನೆ’ ( I never teach my pupils, I only provide the conditions in which they can learn) ಎಂದಿದ್ದಾರೆ. ಪಠ್ಯ, ಪಾಠ, ಕರಿಹಲಗೆ, ಪ್ರಶ್ನಪತ್ರಿಕೆ, ಮೌಲ್ಯಮಾಪನ, ವಾರ್ಷಿಕ ಬಡ್ತಿ-ಭತ್ಯೆ ಹೆಚ್ಚಳದ ಲೆಕ್ಕಾಚಾರ – ಇವಷ್ಟಕ್ಕೇ ಸೀಮಿತವಾಗಿರಬಾರದು ಶಿಕ್ಷಕನ ಬದುಕು. ವಿದ್ಯಾರ್ಥಿಯ ಪ್ರಗತಿಯ ಬಗ್ಗೆ ನಿರಂತರ ತುಡಿತವಿಲ್ಲದಿದ್ದವರು ಶಿಕ್ಷಕರಾಗಲೇಬಾರದು. ಪ್ರೀತಿ, ಅಮಿತ ಸಹನೆ, ಪ್ರಾಮಾಣಿಕತೆ, ಶ್ರದ್ಧೆ – ಇಲ್ಲದ ಶಿಕ್ಷಕರು ವಿದ್ಯಾರ್ಥಿಗಳ ಅಪಹಾಸ್ಯದ ವಸ್ತುವಾಗುತ್ತಾರೆ. ಇವಿಷ್ಟೂ ಗುಣಗಳು ಇರುವ ಶಿಕ್ಷಕರನ್ನು ವಿದ್ಯಾರ್ಥಿಗಳು ಜೀವನವಿಡೀ ನೆನಪಿಟ್ಟುಕೊಳ್ಳುತ್ತಾರೆ. ದಂಡನೆ, ದೂಷಣೆ, ನಿಂದನೆ, ಅವಮಾನ, ಕ್ರೋಧ – ಇವಾವುವೂ ವಿದ್ಯಾರ್ಥಿಗಳ ಮೇಲೆ ಪ್ರಯೋಗವಾಗಬಾರದು. ಒತ್ತಡದ ಪರಿಸ್ಥಿತಿಗೆ ವಿದ್ಯಾರ್ಥಿಗಳನ್ನು ದೂಡಬಾರದು.

ವಿದ್ಯಾರ್ಥಿಗಳ ಮನಸ್ಸು ಬಹು ಸೂಕ್ಷ್ಮ. ಅವರ ಭಾವಲೋಕವೇ ಬೇರೆ. ಅವರ ಲೆಕ್ಕಾಚಾರಗಳೇ ಬೇರೆ. ಒಮ್ಮೆ ಒಬ್ಬ ವಿದ್ಯಾರ್ಥಿಯನ್ನು ದಂಡಿಸಬೇಕಾಗಿ ಬಂತು, ದಂಡಿಸಿದೆ. ಅವನನ್ನು ತರಗತಿಗೆ ಬಾರದಂತೆ ಸಸ್ಪೆಂಡ್ ಮಾಡಿಸಿದ ಆದೇಶ ಹೊರಡಿಸಿದೆ. ಆದೇಶವನ್ನು ಅವನ ತರಗತಿಯಲ್ಲಿ ಓದಿ ಹೇಳಲಾಯಿತು. ಬಳಿಕ ಅವನನ್ನು ಅಧ್ಯಾಪಕರ ಕೊಠಡಿಗೆ ಬರಹೇಳಿದೆ. ಅವನು ಬಂದು ತಲೆತಗ್ಗಿಸಿ ನಿಂತ. ‘ಏನಯ್ಯ ನೀನು ಮಾಡಿದ ತಪ್ಪಿನ ಅರಿವಾಯಿತೆ?’ ಎಂದೆ.

ಆ ವೇಳೆಗಾಗಲೇ ಅವನಿಗೆ ಪಶ್ಚಾತ್ತಾಪವಾಗಿತ್ತೆನಿಸುತ್ತದೆ. ‘ಹೌದು ಸಾರ್, ಅರಿವಾಗಿದೆ... ಸಾರ್... ಸಸ್ಪೆಂಡ್ ಆದೇಶದ ಪ್ರತಿಯನ್ನು ಎಲ್ಲ ತರಗತಿಗಳಲ್ಲೂ ಓದಿಸಿ ಸಾರ್, ಬೇರೆ ವಿದ್ಯಾರ್ಥಿಗಳಿಗೂ ಗೊತ್ತಾಗಲಿ ಇಂತಹ ತಪ್ಪು ಮಾಡಬಾರದು ಅಂತ’. ಈಗ ನಾನೇ ಕರಗಿಹೋದೆ. ಆದೇಶವನ್ನು ಅಂದು ಎಲ್ಲ ತರಗತಿಗಳಲ್ಲಿ ಓದಲಾಯಿತಾದರೂ ಅವನಿಂದ ಮುಚ್ಚಳಿಕೆ ಬರೆಸಿಕೊಂಡು ಮರುದಿನವೇ ಅವನ ಅಮಾನತ್ತಿನ ಆದೇಶವನ್ನು ಹಿಂಪಡೆಯಲಾಯಿತು. ಕಠಿಣತೆ ಇರಬೇಕು, ಆದರೆ ಕ್ರೌರ್ಯ ಇರಬಾರದು ಎಂಬುದೇ ಈ ಪ್ರಸಂಗದ ನಿರೂಪಣೆಯ ಸಾರಾಂಶ.

ಶಿಕ್ಷೆ ನೀಡಿದ ಬಳಿಕ, ತಪ್ಪಿನ ಅರಿವಾದ ಬಳಿಕ, ತಪ್ಪಿತಸ್ಥನಿಗೆ ಪಶ್ಚಾತ್ತಾಪವಾದ ಬಳಿಕ ಶಿಕ್ಷೆ ಮುಂದುವರೆದರೆ ಅದು ‘ಹಿಂಸಾರಸಿಕತೆ’ (Sadism) ಎನಿಸಿಕೊಳ್ಳುತ್ತದೆಯೇ ಹೊರತು ಶಿಸ್ತುಪಾಲನೆಯೆನಿಸಿಕೊಳ್ಳುವುದಿಲ್ಲ. ಅಧ್ಯಾಪಕನಾದವನಿಗೆ ಮೂರು ಬಗೆಯ ಪ್ರೇಮವಿರಬೇಕು; ಕಲಿಕೆಯಲ್ಲಿ ಪ್ರೇಮ, ಕಲಿಯುವವರ ಬಗ್ಗೆ ಪ್ರೇಮ, ಮತ್ತು ಮೊದಲೆರಡು ಪ್ರೇಮಗಳನ್ನು ಒಟ್ಟುಗೂಡಿಸುವುದರಲ್ಲಿ ಪ್ರೇಮ. ಹೀಗೆ ಕುಲಮೆಯಾಗದಿರಲಿ ಕಲಿಕೆ, ಒಲುಮೆಯಾಗಲಿ ಜ್ಞಾನದ ಅನುಸಂಧಾನ.

*


-ರಘು ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT