ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜ್ರ ಮಹೋತ್ಸವದ ಸಂಭ್ರಮದಲ್ಲಿ ಅಡ್ಡಗದ್ದೆ ಸರ್ಕಾರಿ ಶಾಲೆ

Last Updated 28 ಜನವರಿ 2018, 9:45 IST
ಅಕ್ಷರ ಗಾತ್ರ

ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗೆ ವಿದ್ಯಾಭಿಮಾನಿಗಳ, ದಾನಿಗಳ ಹಾಗೂ ಸಮರ್ಪಣಾ ಭಾವನೆಯ ಶಿಕ್ಷಕರ ಸಹಕಾರವಿದ್ದರೆ ಅದು ತಾಲ್ಲೂಕಿನಲ್ಲಿ ಮಾದರಿ ಶಾಲೆಯಾಗಿ ರೂಪಿಸಲು ಸಾಧ್ಯ ಎಂಬುದಕ್ಕೆ ವಜ್ರ ಮಹೋತ್ಸವದ ಸಂಭ್ರಮದಲ್ಲಿರುವ ಅಡ್ಡಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅತ್ಯುತ್ತಮ ಮಾದರಿ.

ಗ್ರಾಮೀಣ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ ನಿರ್ಮಾಣ ಮಾಡುವ ಕನಸು ಕಂಡ ಶಿಕ್ಷಣ ಪ್ರೇಮಿ ಕವಿಲುಕುಡಿಗೆ ಸುಬ್ಬರಾವ್‌ 1942ರಲ್ಲಿ ಅಡ್ಡಗದ್ದೆಯಲ್ಲಿ ಶಾಲೆಯನ್ನು ಸ್ಥಾಪಿಸಿದರು. ಆದರೆ ಸ್ವಂತ ಕಟ್ಟಡವಿರಲಿಲ್ಲ. ಅದಕ್ಕಾಗಿ ತಮ್ಮ ಮನೆಯಲ್ಲಿಯೇ 22 ವರ್ಷ ಶಾಲೆಯನ್ನು ನಡೆಸಿದರು. ಬಳಿಕ 1964ರಲ್ಲಿ ಶಾಲೆಗೆ ಸ್ವಂತ ಕಟ್ಟಡವನ್ನು ತರುವಲ್ಲಿ ಅವರು ವಹಿಸಿದ ಪಾತ್ರ ಅನನ್ಯವಾದುದು.

1969ರಲ್ಲಿ ಮಾಧ್ಯಮಿಕ ಶಾಲೆಯಾಗಿ ಮೇಲ್ದರ್ಜೆಗೇರಿದ ಈ ಶಾಲೆಗೆ 1979ರವರೆಗೆ ಸುಬ್ಬರಾವ್‌. ಶಾಲೆಯ ಮಹಾಪೋಷಕರಾಗಿದ್ದರು. 1992ರಲ್ಲಿ ಸುವರ್ಣ ಮಹೋತ್ಸವ ಆಚರಿಸಿದಾಗ ಕವಿಲುಕೊಡಿಗೆ ಶ್ರೀನಿವಾಸ್‍ರಾವ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು. ಜಿ.ಟಿ.ರಾಮಣ್ಣಗೌಡ, ಪದ್ಮನಾಭರಾವ್, ಸತೀಶ, ರಮೇಶ್‍ಭಟ್ ಅವರ ಮುಂದಾಳತ್ವದಲ್ಲಿ ಶಾಲೆ ಇನ್ನಷ್ಟು ಪ್ರಗತಿ ಸಾಧಿಸಿತು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಕನ್ನಡದ ಜತೆಗೆ ಇಂಗ್ಲಿಷ್‌ ಅರಿವು ಇರಬೇಕು ಎಂಬ ಉದ್ದೇಶದಿಂದ ಅತಿಥಿ ಶಿಕ್ಷಕರ ನೆರವು ಪಡೆದು ಅಂಗ್ಲ ಮಾಧ್ಯಮ ಆರಂಭಿಸಿದರು. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಯ ಅನುದಾನಗಳಿಂದ ಶಾಲೆಗೆ ತೆರೆದ ಬಾವಿ ನಿರ್ಮಾಣ, ಕಂಪ್ಯೂಟರ್ ತರಗತಿ, ಆಟದ ವಸ್ತುಗಳ ಖರೀದಿ, ನಲಿ–ಕಲಿ ಕೊಠಡಿ ನಿರ್ಮಾಣ ಮತ್ತು ಅಡುಗೆ ಕೊಠಡಿ ಮೇಲ್ಛಾವಣಿ ದುರಸ್ತಿ ಮಾಡಲಾಯಿತು.

2017ರಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಯಿತು. ದಾನಿಗಳ ಕೊಡುಗೆಯಿಂದ ರಾಷ್ಟ್ರೀಯ ನಾಯಕರ ಭಾವಚಿತ್ರಗಳನ್ನು ಅಳವಡಿಸಲಾಯಿತು. ರಾಷ್ಟ್ರೀಯ ಆವಿಷ್ಕಾರ ಅಭಿಯಾನದ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ಪಡೆದ ಬಹುಮಾನದಿಂದ ಪ್ರಯೋಗಾಲಯ ಉಪಕರಣ ಖರೀದಿಸಲಾಯಿತು. ಜಿಲ್ಲಾ ಮಟ್ಟದ ವಿಜ್ಞಾನ ಪ್ರದರ್ಶನ, ಕೆಎಸ್‍ಕ್ಯೂಎಎಸಿ ಪರೀಕ್ಷೆಯಲ್ಲಿ ಶಾಲೆಯು ಜಿಲ್ಲೆಗೆ ಪ್ರಥಮ ಸ್ಥಾನ ಸಂಪಾದಿಸಿತು. ಪಠ್ಯೇತರ ಚಟುವಟಿಕೆಯಲ್ಲೂ ಇಲ್ಲಿನ ವಿದ್ಯಾರ್ಥಿಗಳು ಮುಂದು.

ಶೃಂಗೇರಿ ಶಾರದಾ ಮಠದ ಸಹಕಾರದ ಜತೆಗೆ ದಾನಿಗಳಾದ ಹುಲಗಾರು ಸಂಪತ್‍ಕುಮಾರ್ ಹಾಗೂ ಊರ ಮಹನೀಯರ ನೆರವಿನಿಂದ ಶಾಲೆಯ ವಜ್ರ ಮಹೋತ್ಸವದ ಸವಿ ನೆನಪಿಗಾಗಿ ಭವ್ಯವಾದ ‘ವಿದ್ಯಾಭಾರತೀ’ ಸಭಾಂಗಣ ನಿರ್ಮಾಣಗೊಂಡಿದ್ದು, ಇದೇ 28ರ ಭಾನುವಾರ  ವಜ್ರ ಮಹೋತ್ಸವ ನಡೆಯ
ಲಿದೆ. ಶೃಂಗೇರಿ ಶಾರದಾ ಮಠದ ಉಭಯ ಗುರುಗಳಾದ ಭಾರತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರ ಸ್ವಾಮೀಜಿ ಅವರಿಂದ ಉದ್ಘಾಟನೆಗೊಳ್ಳಲಿದೆ. ಅಂದು ಇಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಹಾಗೂ ದಾನಿಗಳಿಗೆ ಸನ್ಮಾನ ಇದೇ 29 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT