ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಪಾಲ ವೊಹ್ರಾಗೆ ಕಣಿವೆ ರಾಜ್ಯದ ಚುಕ್ಕಾಣಿ

ಜಮ್ಮು–ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಜಾರಿ
Last Updated 20 ಜೂನ್ 2018, 18:54 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯಪಾಲರ ಆಡಳಿತಕ್ಕೆ ಒಳಪಡಿಸಲಾಗಿದೆ. ಕಳೆದ ಒಂದು ದಶಕದಲ್ಲಿ ಈ ರಾಜ್ಯ ರಾಜ್ಯಪಾಲರ ಆಡಳಿತಕ್ಕೆ ಒಳಗಾಗುತ್ತಿರುವುದು ಇದು ನಾಲ್ಕನೇ ಬಾರಿ.

ಇಲ್ಲಿನ ಪಿಡಿಪಿ–ಬಿಜೆಪಿ ಮೈತ್ರಿ ಸರ್ಕಾರದಿಂದ ಬಿಜೆಪಿ ಹೊರಬಂದ ಬಳಿಕ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮಂಗಳವಾರ ರಾಜೀನಾಮೆ ನೀಡಿದ್ದರಿಂದ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗಿತ್ತು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ತಕ್ಷಣದಿಂದಲೇ ರಾಜ್ಯಪಾಲರ ಆಡಳಿತ ಹೇರುವುದಕ್ಕೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ’ ಎಂದು ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

ರಾಜ್ಯಕ್ಕೆ ಸಂಬಂಧಿಸಿದ ರಾಜಕೀಯ ಬೆಳವಣಿಗೆಗಳು ಮಂಗಳವಾರ ರಾತ್ರಿಯೂ ಮುಂದುವರಿದವು. ರಾಜ್ಯಪಾಲ ಎನ್‌.ಎನ್‌. ವೊಹ್ರಾ ಅವರು ರಾಷ್ಟ್ರಪತಿ ಭವನಕ್ಕೆ ವರದಿ ಕಳುಹಿಸಿದ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸುರಿನಾಮ್‌ಗೆ ಭೇಟಿ ನೀಡುವುದಕ್ಕಾಗಿ ವಿಮಾನ ಪ್ರಯಾಣದಲ್ಲಿದ್ದರು.

ಬುಧವಾರ ಬೆಳಿಗ್ಗೆ ಕೋವಿಂದ್‌ ಅವರು ಸುರಿನಾಮ್‌ ತಲುಪುವ ಹೊತ್ತಿಗೆ ರಾಜ್ಯಪಾಲರ ವರದಿಯನ್ನು ಅಲ್ಲಿಗೇ ಕಳುಹಿಸಲಾಗಿತ್ತು.

‘ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಜತೆಗೆ ರಾಜ್ಯಪಾಲರು ಸಮಾಲೋಚನೆ ನಡೆಸಿದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಲಿನ ಸಂವಿಧಾನದ ಸೆಕ್ಷನ್‌ 92ರ ಪ್ರಕಾರ ರಾಜ್ಯಪಾಲರ ಆಡಳಿತ ಹೇರುವುದಕ್ಕಾಗಿ ವರದಿಯನ್ನು ಕಳುಹಿಸಲಾಗಿದೆ’ ಎಂದು ರಾಜಭವನದ ವಕ್ತಾರರು ಶ್ರೀನಗರದಲ್ಲಿ ತಿಳಿಸಿದ್ದಾರೆ.

ವರದಿಯನ್ನು ಪರಿಶೀಲಿಸಿದ ರಾಷ್ಟ್ರಪತಿ, ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ತಮ್ಮ ಅನುಮೋದನೆಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ತಲುಪಿಸಿದ್ದಾರೆ. ಅದಾದ ಬಳಿಕ ರಾಜ್ಯಪಾಲರ ಆಡಳಿತ ಹೇರುವ ಆದೇಶವನ್ನು ಶ್ರೀನಗರಕ್ಕೆ ಕಳುಹಿಸಲಾಗಿದೆ.

ರಾಷ್ಟ್ರಪತಿ ಅಲ್ಲ, ರಾಜ್ಯಪಾಲರ ಆಳ್ವಿಕೆ

ಭಾರತದ ರಾಜ್ಯಗಳಲ್ಲಿ ಸರ್ಕಾರಗಳು ವಿಫಲವಾದಾಗ ಅಥವಾ ಸರ್ಕಾರ ರಚನೆ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾದಾಗ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ. ಆದರೆ, ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯಪಾಲರ ಆಳ್ವಿಕೆಗೆ ಒಳಪಡಿಸಲಾಗುತ್ತದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಭಾರತದ ಸಂವಿಧಾನವು ವಿಶೇಷ ಸ್ಥಾನಮಾನ ನೀಡಿದೆ. ಹಾಗಾಗಿ ಪ್ರತ್ಯೇಕ ಸಂವಿಧಾನ ಹೊಂದಿರುವ ಏಕೈಕ ರಾಜ್ಯ ಇದು. ಈ ಸಂವಿಧಾನದ ಸೆಕ್ಷನ್‌ 92ರ ಪ್ರಕಾರ, ರಾಷ್ಟ್ರಪತಿಯ ಅನುಮೋದನೆ ಪಡೆದು ಆರು ತಿಂಗಳ ಅವಧಿಗೆ ರಾಜ್ಯಪಾಲರ ಆಡಳಿತ ಹೇರುವುದಕ್ಕೆ ಅವಕಾಶ ಇದೆ.

ರಾಜ್ಯಪಾಲರ ಆಡಳಿತದ ಸಂದರ್ಭದಲ್ಲಿ ವಿಧಾನಸಭೆಯನ್ನು ಅಮಾನತಿನಲ್ಲಿ ಇರಿಸಲಾಗುತ್ತದೆ ಅಥವಾ ವಿಸರ್ಜಿಸಲಾಗುತ್ತದೆ. ಆರು ತಿಂಗಳ ರಾಜ್ಯಪಾಲರ ಆಳ್ವಿಕೆಯ ಬಳಿಕವೂ ಸರ್ಕಾರ ರಚನೆ ಸಾಧ್ಯವಾಗದಿದ್ದರೆ, ರಾಜ್ಯಪಾಲರ ಆಳ್ವಿಕೆಯನ್ನು ವಿಸ್ತರಿಸಲು ಅವಕಾಶ ಇದೆ. ಭಾರತದ ಸಂವಿಧಾನದ 356ನೇ ವಿಧಿ ಪ್ರಕಾರ, ಬೇರೆ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ.

ಎಂಟು ಬಾರಿ ರಾಜ್ಯಪಾಲರ ಆಡಳಿತ

1. 1977ರಲ್ಲಿ ಮೊದಲ ಬಾರಿ ರಾಜ್ಯಪಾಲರ ಆಳ್ವಿಕೆ ಹೇರಲಾಯಿತು. ನ್ಯಾಷನಲ್‌ ಕಾನ್ಫರೆನ್ಸ್‌ ಸ್ಥಾಪಕ ಶೇಕ್‌ ಮೊಹಮ್ಮದ್‌ ಅಬ್ದುಲ್ಲಾ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ಕಾಂಗ್ರೆಸ್‌ ಪಕ್ಷ ವಾಪಸ್‌ ಪಡೆದ ಕಾರಣ ಸರ್ಕಾರ ಬಿತ್ತು. ಹಾಗಾಗಿ ಮೊದಲ ಬಾರಿ ರಾಜ್ಯಪಾಲರ ಆಳ್ವಿಕೆ ಹೇರಲಾಗಿತ್ತು. 105 ದಿನ ರಾಜ್ಯಪಾಲರ ಆಳ್ವಿಕೆ ಇತ್ತು. ಆಗ ಎಲ್‌.ಕೆ. ಝಾ ರಾಜ್ಯಪಾಲರಾಗಿದ್ದರು.

2. ಅಬ್ದುಲ್ಲಾ ಅವರ ಅಳಿಯ ಗುಲಾಂ ಮೊಹಮ್ಮದ್ ಶಾ ಅವರ ನೇತೃತ್ವದ ಅಲ್ಪಮತದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು 1986ರಲ್ಲಿ ಕಾಂಗ್ರೆಸ್‌ ಹಿಂದಕ್ಕೆ ಪಡೆಯಿತು. ಆಗ ರಾಜ್ಯವು ರಾಜ್ಯಪಾಲರ ಆಡಳಿತಕ್ಕೆ ಒಳಪಟ್ಟಿತು.

ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಮತ್ತು ಮುಖ್ಯಮಂತ್ರಿಯಾಗಿದ್ದ ಫಾರೂಕ್‌ ಅಬ್ದುಲ್ಲಾ ವಿರುದ್ಧ ಬಂಡೆದ್ದ ಗುಲಾಂ, 1984ರಲ್ಲಿ ಪಕ್ಷವನ್ನು ಒಡೆದಿದ್ದರು.ರಾಜೀವ್‌ ಗಾಂಧಿ ಜತೆಗೆ ಫಾರೂಕ್‌ ಅಬ್ದುಲ್ಲಾ ಒಪ್ಪಂದ ಮಾಡಿಕೊಳ್ಳುವವರೆಗೆ 246 ದಿನ ರಾಜ್ಯಪಾಲರ ಆಡಳಿತ ಜಾರಿಯಲ್ಲಿತ್ತು.

3. 1990ರಲ್ಲಿ ರಾಜ್ಯದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ತೀವ್ರಗೊಂಡವು. ಜಗಮೋಹನ್‌ ಅವರನ್ನು ಎರಡನೇ ಬಾರಿಗೆ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ಮುಖ್ಯಮಂತ್ರಿಯಾಗಿದ್ದ ಫಾರೂಕ್‌ ಅಬ್ದುಲ್ಲಾ 1990ರ ಜನವರಿಯಲ್ಲಿ ರಾಜೀನಾಮೆ ನೀಡಿದರು. ಪರಿಣಾಮವಾಗಿ ಮೂರನೇ ಬಾರಿಗೆ ರಾಜ್ಯಪಾಲರ ಆಳ್ವಿಕೆ ಜಾರಿಗೆ ಬಂತು. ಆರು ವರ್ಷ 264 ದಿನ ರಾಜ್ಯಪಾಲರ ಆಡಳಿತ ಇತ್ತು. ಇದು ರಾಜ್ಯಪಾಲರ ಆಡಳಿತ ಇದ್ದ ಅತ್ಯಂತ ಸುದೀರ್ಘ ಅವಧಿ.

4. 2002ರ ಅಕ್ಟೋಬರ್‌ನಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಫಾರೂಕ್‌ ಅಬ್ದುಲ್ಲಾ ಅವರ ಪಕ್ಷ ಸೋತಿತು. ಸರ್ಕಾರ ರಚಿಸುವಷ್ಟು ಶಾಸಕರ ಬಲ ಯಾವ ಪಕ್ಷಕ್ಕೂ ಇರಲಿಲ್ಲ. ಪ್ರಭಾರ ಮುಖ್ಯಮಂತ್ರಿಯಾಗಿ ಮುಂದುವರಿಯಲು ಶೇಕ್‌ ಅಬ್ದುಲ್ಲಾ ಒಪ್ಪಲಿಲ್ಲ. ಹಾಗಾಗಿ, ರಾಜ್ಯಪಾಲರ ಆಳ್ವಿಕೆ ಹೇರಲಾಯಿತು. ಈ ಸಂದರ್ಭದಲ್ಲಿ 15 ದಿನ ರಾಜ್ಯಪಾಲರ ಆಳ್ವಿಕೆ ಇತ್ತು.

5. ಕಾಂಗ್ರೆಸ್‌–ಪಿಡಿಪಿ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು 2008ರಲ್ಲಿ ಪಿಡಿ‍ಪಿ ಹಿಂದಕ್ಕೆ ಪಡೆಯಿತು. ಪರಿಣಾಮವಾಗಿ 174 ದಿನ ರಾಜ್ಯಪಾಲರು ಆಳ್ವಿಕೆ ನಡೆಸಿದರು. ಆಗ ಎನ್‌.ಎನ್‌. ವೊಹ್ರಾ ರಾಜ್ಯಪಾಲರಾಗಿದ್ದರು.

6. 2014ರ ಡಿಸೆಂಬರ್‌ 23ರ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಹಾಗಾಗಿ ಯಾವ ಪಕ್ಷವೂ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿಲ್ಲ. ಪ್ರಭಾರ ಮುಖ್ಯಮಂತ್ರಿಯಾಗಿ ಮುಂದುವರಿಯಲು ಒಮರ್‌ ಅಬ್ದುಲ್ಲಾ ಒಪ್ಪಲಿಲ್ಲ. ಹಾಗಾಗಿ 2015ರ ಜನವರಿ 7ರಿಂದ ರಾಜ್ಯಪಾಲರ ಕೈಗೆ ಆಡಳಿತ ಚುಕ್ಕಾಣಿ ಕೊಡಲಾಯಿತು.

ಪಿಡಿಪಿ–ಬಿಜೆಪಿ ಸರ್ಕಾರ 2015ರ ಮಾರ್ಚ್‌ 1ರಂದು ಅಧಿಕಾರಕ್ಕೆ ಬರುವುದರೊಂದಿಗೆ ರಾಜ್ಯಪಾಲರ ಆಳ್ವಿಕೆ ಕೊನೆಗೊಂಡಿತು.

7. 2016ರ ಜನವರಿಯಲ್ಲಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್‌ ನಿಧನರಾದರು. ತಕ್ಷಣವೇ ಹೊಸ ಸರ್ಕಾರ ರಚನೆ ಸಾಧ್ಯವಾಗಲಿಲ್ಲ. ಹೀಗಾಗಿ ರಾಜ್ಯಪಾಲ ವೊಹ್ರಾ ಅವರ ಕೈಗೆ ಮತ್ತೆ ಅಧಿಕಾರ ಬಂತು.

ಪಿಡಿಪಿ–ಬಿಜೆಪಿ ಸರ್ಕಾರದಿಂದ ಬಿಜೆಪಿ 2018ರ ಜೂನ್‌ 19ರಂದು ಹೊರಗೆ ಬಂತು. ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ರಾಜೀನಾಮೆ ನೀಡಿದರು. ಹಾಗಾಗಿ 20ರಂದು ರಾಜ್ಯಪಾಲರ ಆಳ್ವಿಕೆ ಹೇರಲಾಯಿತು. ಹೀಗೆ ವೊಹ್ರಾ ಅವರಿಗೆ ನಾಲ್ಕನೇ ಬಾರಿಗೆ ರಾಜ್ಯದ ಚುಕ್ಕಾಣಿ ಸಿಕ್ಕಿತು.

ಉಗ್ರರ ನಿಗ್ರಹ ಕಾರ್ಯಾಚರಣೆ ಬಿರುಸು?

ರಾಜ್ಯಪಾಲರ ಆಡಳಿತದಲ್ಲಿ ಭಯೋತ್ಪಾದನೆ ತಡೆ ಚಟುವಟಿಕೆಗಳು ಬಿರುಸು ಪಡೆದುಕೊಳ್ಳುವ ನಿರೀಕ್ಷೆ ಇದೆ. ಉಗ್ರರ ವಿರುದ್ಧ ಕಠಿಣ ಕಾರ್ಯಾಚರಣೆ ನಡೆಸುವಂತೆ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿದೆ. ವಿಶೇಷವಾಗಿ ಉಗ್ರರು ಹೆಚ್ಚು ಸಕ್ರಿಯವಾಗಿರುವ ದಕ್ಷಿಣ ಕಾಶ್ಮೀರದಲ್ಲಿ ಉಗ್ರರನ್ನು ಮಟ್ಟ ಹಾಕುವಂತೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸುತ್ತಿರುವುದು ಮುಂದುವರಿದಿದೆ. ಹಾಗಾಗಿ ಗಡಿಯಲ್ಲಿಯೂ ತಕ್ಕ ತಿರುಗೇಟು ನೀಡಲು ಭದ್ರತಾ ಪಡೆಗಳು ಸಜ್ಜಾಗಿವೆ. ‘ಪಾಕಿಸ್ತಾನ ಯಾವುದೇ ರೀತಿಯ ದುಸ್ಸಾಹಸಕ್ಕೆ ಕೈಹಾಕಿದರೆ ಸರಿಯಾಗಿ ಪಾಠ ಕಲಿಸಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸುಬ್ರಮಣ್ಯಂ ಮುಖ್ಯ ಕಾರ್ಯದರ್ಶಿ, ವ್ಯಾಸ್ ಸಲಹೆಗಾರ?

ಅತ್ಯಂತ ಸೂಕ್ಷ್ಮವಾಗಿರುವ ರಾಜ್ಯದ ಆಡಳಿತ ನಿರ್ವಹಣೆಗೆ ರಾಜ್ಯಪಾಲರಿಗೆ ನೆರವಾಗಲು ಇಬ್ಬರು ಸಲಹೆಗಾರರನ್ನು ನೇಮಿಸಲಾಗಿದೆ. ಈಗಿನ ಮುಖ್ಯಕಾರ್ಯದರ್ಶಿ ಬಿ.ಬಿ.ವ್ಯಾಸ್‌ ಮತ್ತು ಕೇಂದ್ರ ಗೃಹ ಸಚಿವಾಲಯದ ಭದ್ರತಾ ಸಲಹೆಗಾರರಾಗಿ ಇತ್ತೀಚೆಗೆ ನಿವೃತ್ತರಾಗಿದ್ದ ವಿಜಯ ಕುಮಾರ್‌ ಅವರನ್ನು ಸಲಹೆಗಾರನ್ನಾಗಿ ನಿಯೋಜಿಸಲಾಗಿದೆ.

ಛತ್ತೀಸಗಡ ಕೇಡರ್‌ನ ಐಎಎಸ್‌ ಅಧಿಕಾರಿ ಬಿ.ವಿ.ಆರ್‌. ಸುಬ್ರಮಣ್ಯಂ ಅವರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ವರ್ಗಾಯಿಸಲಾಗಿದೆ.ಆಂಧ್ರ ಪ್ರದೇಶದವರಾದ ಸುಬ್ರಮಣ್ಯಂ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಾರ್ಯದರ್ಶಿಯಾಗಿ ನೇಮಕವಾಗಬಹುದು ಎನ್ನಲಾಗಿದೆ.

‘ಆಂತರಿಕ, ಬಾಹ್ಯ ಮಾತುಕತೆ ಮೂಲಕ ಮಾತ್ರ ಕಾಶ್ಮೀರ ಸಮಸ್ಯೆಗೆ ಪರಿಹಾರ ಸಾಧ್ಯ. ಸೇನಾ ಬಲದ ಮೂಲಕ ಬಿಕ್ಕಟ್ಟು ಪರಿಹಾರ ಸಾಧ್ಯವಿಲ್ಲ.’

ಒಮರ್‌ ಅಬ್ದುಲ್ಲಾ, ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ

ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆಯಾಗಿ ಶಾಂತಿ ಸ್ಥಾಪನೆಯಾಗಬೇಕು ಎಂಬುದು ನಮ್ಮ ಏಕೈಕ ಉದ್ದೇಶ. ಇದನ್ನು ಗಮನದಲ್ಲಿ ಇರಿಸಿಕೊಂಡೇ ನಮ್ಮ ಸರ್ಕಾರ ಕೆಲಸ ಮಾಡಲಿದೆ

– ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆ ಈಗಿನಂತೆಯೇ ಮುಂದುವರಿಯಲಿದೆ. ರಾಜ್ಯಪಾಲರ ಆಳ್ವಿಕೆ ಹೇರಿಕೆಯಿಂದ ಅದರ ಮೇಲೆ ಯಾವುದೇ ಪರಿಣಾಮ ಉಂಟಾಗದು

– ಬಿಪಿನ್‌ ರಾವತ್‌, ಸೇನಾ ಮುಖ್ಯಸ್ಥ

ಶಾ ಭೇಟಿ

ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಶನಿವಾರ (ಜೂನ್‌ 23) ಭೇಟಿ ನೀಡಲಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷದ ಸಿದ್ಧತೆಗಳನ್ನು ಪರಿಶೀಲಿಸುವುದು ಅವರ ಭೇಟಿಯ ಮುಖ್ಯ ಉದ್ದೇಶ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಜನಸಂಘದ ಸ್ಥಾಪಕ ಶ್ಯಾಮ ಪ್ರಸಾದ ಮುಖರ್ಜಿ ಅವರಿಗೆ ನಮನ ಸಲ್ಲಿಸುವ ಕಾರ್ಯಕ್ರಮವೂ ಇದೆ. ಜತೆಗೆ, ಬ್ರಾಹ್ಮಣ ಸಭಾ ಪರೇಡ್‌ ರೋಡ್‌ ಮುಂಭಾಗದಲ್ಲಿ ಬೃಹತ್‌ ಸಾರ್ವಜನಿಕ ಸಮಾರಂಭ ನಡೆಯಲಿದೆ.

ದೇಶದ ಹಿತಾಸಕ್ತಿಗಾಗಿ ಜಮ್ಮು ಮತ್ತು ಕಾಶ್ಮೀರ ಸರ್ಕಾರದಿಂದ ಹೊರಗೆ ಬಂದ ಬಿಜೆಪಿ ಕ್ರಮದ ಬಗ್ಗೆ ಜನರಿಗೆ ಭಾರಿ ಮೆಚ್ಚುಗೆ ಉಂಟಾಗಿದೆ. ಹಾಗಾಗಿ ಸಮಾರಂಭಕ್ಕೆ ಗಣನೀಯ ಪ್ರಮಾಣದಲ್ಲಿ ಜನ ಸೇರುವ ನಿರೀಕ್ಷೆ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀದರ್‌ ರೈನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT