7

ನೆಲ, ಜಲ, ಆಕಾಶದಲ್ಲೂ ಯೋಗ!

Published:
Updated:

ನವದೆಹಲಿ/ಡೆಹ್ರಾಡೂನ್ : ದೇಶದಾದ್ಯಂತ ಗುರುವಾರ 4ನೇ ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಗಣ್ಯರು, ರಾಜಕೀಯ ಧುರೀಣರು, ಚಿತ್ರತಾರೆಯರು, ಕ್ರೀಡಾಪಟುಗಳು ಮತ್ತು ಯೋಧರ ಜತೆಗೆ ಜನಸಾಮಾನ್ಯರೂ ಅತ್ಯಂತ ಶಿಸ್ತು ಮತ್ತು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಮೂರು ರಾಷ್ಟ್ರಗಳ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಲ್ಯಾಟಿನ್‌ ಅಮೆರಿಕಾದ ಸುರಿನಾಮ್‌ದಲ್ಲಿ ಅಧ್ಯಕ್ಷ ಡಿಸೈರ್ ಡೆಲಾನೊ ಬೌಟ್ರಸ್‌ ಅವರ ಜತೆ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಸುಮಾರು 50,000 ಯೋಗಪಟುಗಳೊಂದಿಗೆ ಯೋಗ ಪ್ರದರ್ಶಿಸಿದರು.

ಇದಕ್ಕೂ ಮೊದಲು ಮಾತನಾಡಿದ ಅವರು, ‘ಯೋಗ ವಿಶ್ವದಾದ್ಯಂತ ದೊಡ್ಡ ಸಮುದಾಯ ಚಳವಳಿಯಾಗಿ ಬೆಳೆಯುತ್ತಿದೆ. ವಿಶ್ವವನ್ನು ಒಗ್ಗೂಡಿಸುವ ಶಕ್ತಿ ಯೋಗಕ್ಕೆ ಇದೆ. ಉತ್ತಮ ಆರೋಗ್ಯ ಮತ್ತು ಸಮಾಜಕ್ಕಾಗಿ ಜಗತ್ತಿನಾದ್ಯಂತ ಜನರು ಯೋಗ ಸ್ವೀಕರಿಸುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.

ಡೆಹ್ರಾಡೂನ್‍ನಿಂದ ಡಬ್ಲಿನ್‌ವರೆಗೂ, ಶಾಂಘೈ ಯಿಂದ ಷಿಕಾಗೋವರೆಗೂ, ಜಕಾರ್ತದಿಂದ ಜೋಹಾನ್ಸ್‌ಬರ್ಗ್‌ವರೆಗೂ, ಹಿಮಾಲಯದಿಂದ ಮರುಭೂಮಿವರೆಗೂ ಎಲ್ಲ ಜನರು ಯೋಗಕ್ಕೆ ಮೊರೆ ಹೋಗಿದ್ದಾರೆ’ ಎಂದರು.

‘ವಿಶ್ವಸಂಸ್ಥೆ ಯೋಗ ದಿನಾಚರಣೆಗಾಗಿ ಪ್ರಸ್ತಾವನೆ ನೀಡಿದಾಗ ಎಲ್ಲ ದೇಶಗಳು ಸಂಪೂರ್ಣ ಸಹಕಾರ ನೀಡಿದ್ದಾರೆ. ಕಡಿಮೆ ಅವಧಿಯಲ್ಲಿ ಯೋಗ ಅಪಾರ ಖ್ಯಾತಿ ಪಡೆದಿದೆ. ಯೋಗದ ಬಗ್ಗೆ ಹೆಚ್ಚುತ್ತಿರುವ ಪ್ರಚಾರದಿಂದ ಭಾರತ ಇನ್ನಷ್ಟು ಪ್ರಸಿದ್ಧವಾಗಿದೆ. ಟೋಕಿಯೋದಿಂದ ಟೊರೊಂಟೊ, ಸ್ಟಾಕ್‌ಹೋಮ್‌ನಿಂದ ಸಾವ್‌ ಪೊಲೊವರೆಗೂ ಲಕ್ಷಾಂತರ ಜನರ ಜೀವನದಲ್ಲಿ ಯೋಗ ಸಕರಾತ್ಮಕ ಪ್ರಭಾವ ಬೀರಿದೆ’ ಎಂದರು.

ಯೋಗ ಪ್ರದರ್ಶನ ಎಲ್ಲೆಲ್ಲಿ

ರಾಜಸ್ಥಾನದಲ್ಲಿ ಬಾಬಾ ರಾಮ್‌ದೇವ್‌ ಮಾರ್ಗದರ್ಶನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಏಕಕಾಲಕ್ಕೆ ನಡೆಸಿದ ಯೋಗಾಸನ ಪ್ರದರ್ಶನ ಗಿನ್ನೆಸ್‌ ದಾಖಲೆ ಪುಟಕ್ಕೆ ಸೇರ್ಪಡೆಯಾಯಿತು.

ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಭಾಗಿಯಾಗಿದ್ದರು. ಕಳೆದ ವರ್ಷ ಪತಂಜಲಿ ಯೋಗ ಪೀಠವು 51 ಗಂಟೆಗಳ ಕಾಲ ಯೋಗ ಮ್ಯಾರಥಾನ್‌ ಮಾಡಿರುವುದು ದಾಖಲೆ ಪುಟ ಸೇರಿತ್ತು.

ಯುದ್ಧ ಭೂಮಿಯಲ್ಲಿ ಯೋಗ

ಜಮ್ಮು ಮತ್ತು ಕಾಶ್ಮೀರದ ಲಡಾಕ್‌ ಪ್ರದೇಶದ ಸಿಯಾಚಿನ್‌ ನೀರ್ಗಲ್ಲಿನ ಮೇಲೆ ಐಟಿಬಿಪಿ ಯೋಧರು ಸೂರ್ಯ ನಮಸ್ಕಾರ ಮಾಡಿದರು.

18,000ದಿಂದ 21,000 ಮೀಟರ್‌ ಎತ್ತರದವರೆಗೆ ಇರುವ, ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಎನಿಸಿದ ಸಿಯಾಚಿನ್‌ನಲ್ಲಿ ಗಡಿ ಭದ್ರತಾ ಪಡೆ ಯೋಧರು ಯೋಗ ಪ್ರದರ್ಶಿಸಿದರು. ಅಧ್ಯಾತ್ಮ ಚಿಂತಕ ಸದ್ಗುರು ವಾಸುದೇವ್‌ ಜಗ್ಗಿ ಯೋಧರಿಗೆ ಮಾರ್ಗದರ್ಶನ ನೀಡಿದರು.

ಆಗಸದಲ್ಲೂ ಯೋಗ

ಭಾರತೀಯ ವಾಯುಪಡೆಯ ಇಬ್ಬರು ಯೋಧರು ಭೂಮಿಯಿಂದ 15,000 ಅಡಿ ಎತ್ತರದಲ್ಲಿ ಯೋಗ ಪ್ರದರ್ಶಿಸಿದ್ದಾರೆ.

ಪ್ಯಾರಾ ಟ್ರೂಪರ್ಸ್‌ ತರಬೇತಿ ಕೇಂದ್ರದ ತರಬೇತುದಾರ ವಿಂಗ್‌ ಕಮಾಂಡರ್‌ ಕೆ.ಬಿ.ಎಸ್‌. ಸಮ್ಯಾಲ್‌ ಮತ್ತು ವಿಂಗ್‌ ಕಮಾಂಡರ್‌ ಗಜಾನಂದ್‌ ಯಾದವ್‌ ಅವರು ಆಗಸದಲ್ಲಿಯೇ ವಾಯು ನಮಸ್ಕಾರ ಮತ್ತು ವಾಯು ಪದ್ಮಾಸನ ಹಾಕಿದರು.

ವಿಶಾಖಪಟ್ಟಣದಲ್ಲಿ ನೌಕಾಪಡೆಯ ಯೋಧರು ಐಎನ್‌ಎಸ್‌ ಜ್ಯೋತಿ ನೌಕೆಯಲ್ಲಿ ಯೋಗದ ವಿಶೇಷ ಆಸನಗಳನ್ನು ಪ್ರದರ್ಶಿಸಿ, ಗಮನ ಸೆಳೆದರು.

ಅರುಣಾಚಲ ಪ್ರದೇಶದ ಲೋಹಿತ್‌ಪುರದಲ್ಲಿರುವ ಇಂಡೋ-ಟಿಬೆಟ್ ಗಡಿಯ ದಿಗ್ರು ನದಿಯಲ್ಲಿ ಐಟಿಬಿಪಿಯ ಸುಮಾರು 20ಕ್ಕೂ ಅಧಿಕ ಯೋಧರು ಕೊರೆವ ಚಳಿಯಲ್ಲೇ ನದಿಯಲ್ಲಿ ‘ಜಲ ಯೋಗ’ ಪ್ರದರ್ಶನ ಮಾಡಿದರು.

ಶಾಲಾ ಪಠ್ಯದಲ್ಲಿ ಯೋಗ ಸೇರ್ಪಡೆ

ಆರೋಗ್ಯಪೂರ್ಣ ದೇಶ ರೂಪಿಸಲು ಯೋಗವನ್ನು ಶಾಲಾ ಪಠ್ಯದಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದರು. 

ಮುಂಬೈನ ಬಾಂದ್ರಾದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನದಲ್ಲಿ ಅವರು ಮಾತನಾಡಿದರು.

ಪ್ರಾಚೀನ ಕಾಲದಿಂದಲೂ ಭಾರತ ರೂಢಿಸಿಕೊಂಡು ಬಂದಿರುವ ಆಯುರಾರೋಗ್ಯದ ಯೋಗವು ವಿಶ್ವಕ್ಕೆ ಭಾರತವು ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದೆ ಎಂದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌, ಪ್ರಾಚೀನ ಕಾಲದ ಯೋಗ ವಿಜ್ಞಾನವು ಇಂದಿನ ಆಧುನಿಕ ಜಗತ್ತಿಗೆ ಅತಿ ಮುಖ್ಯವಾಗಿದೆ ಎಂದರು.


ಪ್ರಧಾನಿ ಯೋಗ ಭಂಗಿ

ಯಾರು ಏನೆಂದರು

* ವ್ಯಕ್ತಿಗತ ಅಥವಾ ಸಮಾಜದಲ್ಲಿನ ಹಲವು  ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರವಿದೆ. ನೂರಾರು ಬಗೆಯ ದೈಹಿಕ ಸಮಸ್ಯೆಗಳಿಗೂ ಮದ್ದಿದೆ
–ನರೇಂದ್ರ ಮೋದಿ, ಪ್ರಧಾನಿ

* ಯೋಧರು ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಲು ಉತ್ಸಾಹ ಮತ್ತು ಆಸಕ್ತಿ ತೋರುತ್ತಿರುವುದು ಹೃತ್ಪೂರ್ವಕವಾಗಿದೆ. ನಮ್ಮ ದೇಶವು ಯೋಧರ ಶೌರ್ಯ ಮತ್ತು ತ್ಯಾಗವನ್ನೂ ಆಚರಿಸಬೇಕಿದೆ
–ಸದ್ಗುರು ಜಗ್ಗಿ ವಾಸುದೇವ್‌, ಅಧ್ಯಾತ್ಮ ಗುರು

* ಯೋಗ ಪ್ರಾಚೀನ ಕಾಲದಿಂದಲೂ ಭಾರತ ಪಾಲಿಸುತ್ತಿರುವ ಸಂಪ್ರದಾಯ. ಆದರೆ ಅದು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಮಾನವೀಯತೆಯ ಅಮೂರ್ತ ಪರಂಪರೆಯ ಭಾಗವಾಗಿದೆ. ಯೋಗಾಭ್ಯಾಸಕ್ಕೆ ನಿಮಗೆ ಮುಕ್ತ ಆಹ್ವಾನವಿದೆ
–ರಾಮನಾಥ ಕೋವಿಂದ್‌, ರಾಷ್ಟ್ರಪತಿ

* ಗರ್ಭಿಣಿಯರು ಕೂಡ ಯೋಗ ಮಾಡಬಹುದು. ಆದರೆ, ನುರಿತ ತರಬೇತುದಾರರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡಬೇಕು
–ಮೇನಕಾ ಗಾಂಧಿ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

* ಯೋಗವು ಭಾರತ ವಿಶ್ವಕ್ಕೆ ನೀಡಿದ ಅತ್ಯುತ್ತಮ ಕೊಡುಗೆ. ಆರೋಗ್ಯಕರ ಮತ್ತು ಆನಂದದಾಯಕ ಜೀವನಕ್ಕೆ ಅತ್ಯುತ್ತಮ ಮಾರ್ಗವಾಗಿದೆ
–ಸುರೇಶ್ ಪ್ರಭು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ

ಪ್ರಮುಖಾಂಶಗಳು

* ದೇಶದ ಭೂ, ವಾಯು ಹಾಗೂ ನೌಕಾ ಪಡೆಯಿಂದಲೂ ಯೋಗ ದಿನ ಆಚರಿಸಲಾಯಿತು.ಯೋಧರು ಕರ್ತವ್ಯ ನಿರ್ವಹಿಸುವ ತಾಣಗಳಲ್ಲಿಯೇ ಯೋಗ ಮಾಡಿದರು.

* ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರು ನವದೆಹಲಿಯಲ್ಲಿ ಸಹಜ ಶಿಶು ಜನನ ಕೇಂದ್ರದಲ್ಲಿ ಗರ್ಭಿಣಿಯರೊಂದಿಗೆ ‘ಪ್ರಸವ ಪೂರ್ವ ಯೋಗಾಸನ’ದಲ್ಲಿ ಭಾಗವಹಿಸಿದ್ದರು.

* ಮುಂಬೈನಲ್ಲಿ ಲಿಂಗ ಪರಿವರ್ತಿತರು ಗುಲಾಬಿ ಬಟ್ಟೆ ತೊಟ್ಟು ಆಕರ್ಷಕ ಯೋಗಾಸನ ಪ್ರದರ್ಶಿಸಿದರು.

* ಕೇರಳದಲ್ಲಿ ಕ್ರೈಸ್ತ ಸನ್ಯಾಸಿಯರು ಮತ್ತು ಶ್ರೀನಗರದಲ್ಲಿ ಮುಸ್ಲಿಂ ಶಾಲಾ ಬಾಲಕಿಯರು ಯೋಗದಲ್ಲಿ ಪಾಲ್ಗೊಂಡು ಗಮನ ಸೆಳೆದರು.

* ವಿಶಾಖಪಟ್ಟಣದಲ್ಲಿ ನೌಕಾಪಡೆಯ ಡೈವಿಂಗ್‌ ತರಬೇತುದಾರರು ಸಮುದ್ರದ ಅಂಚಿನಲ್ಲಿ ಜಲಯೋಗ ಪ್ರದರ್ಶಿಸಿದರು.

ಯೋಗದತ್ತ ಕಾರ್ಪೊರೇಟ್‌ ಯುವ ಜನರು

ಮುಂಬೈ: ಕಾರ್ಪೊರೇಟ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶೇ 35ರಷ್ಟು ಯುವ ಜನತೆ ಜಿಮ್, ಏರೋಬಿಕ್ಸ್‌ ಬದಲು ಯೋಗಕ್ಕೆ ಆದ್ಯತೆ ನೀಡುತ್ತಾರೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಸಮೀಕ್ಷೆ ಹೇಳಿದೆ.

ಇಂದಿನ ಹೆಚ್ಚಿನ ಯುವಕರು ಆರೋಗ್ಯ ಕಾಪಾಡಿಕೊಳ್ಳಲು ಮತ್ತು ದೇಹವನ್ನು ಹುರಿಗೊಳಿಸಲು ಆರೋಗ್ಯ ಜಿಮ್‌, ಕಿಕ್‌ ಬಾಕ್ಸಿಂಗ್‌, ಜುಂಬಾ, ಏರೋಬಿಕ್ಸ್‌ಗೆ ಮೊರೆ ಹೋಗುವುದು ಸಾಮಾನ್ಯ. ಆದರೆ, ಕಾರ್ಪೊರೇಟ್‌ ಜಗತ್ತಿನ ಯುವಕರು ಆರೋಗ್ಯಕ್ಕಾಗಿ ಯೋಗವನ್ನೇ ನೆಚ್ಚಿಕೊಂಡಿದ್ದಾರೆ.

ಆರೋಗ್ಯದ ಜತೆಗೆ ಮಾನಸಿಕ ಒತ್ತಡ, ಸಾಮಾಜಿಕ ಮತ್ತು ಭಾವನಾತ್ಮಕ ಸ್ಥಿತಿಗಳ ನಿರ್ವಹಣಾ ಕೌಶಲಗಳ ಕಲಿಕೆಗೆ ಯೋಗ ನೆರವಾಗಿದೆ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಯುವಕರು ಅಭಿಪ್ರಾಯಪಟ್ಟಿದ್ದಾರೆ.

ಅಸೋಚಾಂನ ಸಾಮಾಜಿಕ ಅಭಿವೃದ್ಧಿ ಪ್ರತಿಷ್ಠಾನ ನಡೆಸಿದ ಸಮೀಕ್ಷೆಯಲ್ಲಿ ಅಂದಾಜು ನೂರಕ್ಕೂ ಹೆಚ್ಚು ಉದ್ಯಮಗಳ 25ರಿಂದ 35 ವಯೋಮಾನದ ಸಾವಿರ ಉದ್ಯೋಗಿಗಳು ಪಾಲ್ಗೊಂಡಿದ್ದರು.

‘ಒತ್ತಡದ ಜಗತ್ತಿಗೆ ಯೋಗ ಮದ್ದು’

ವಿಶ್ವಸಂಸ್ಥೆ : ಇಂದಿನ ಸಂಕೀರ್ಣ ಹಾಗೂ ಒತ್ತಡದ ಜಗತ್ತಿಗೆ ಯೋಗ ಹೆಚ್ಚು ಅಗತ್ಯವಾಗಿದೆ ಎಂದು ವಿಶ್ವಸಂಸ್ಥೆಯ ಉಪ ಮಹಾ ಕಾರ್ಯದರ್ಶಿ ಅಮೀನಾ ಮೊಹಮ್ಮದ್ ಹೇಳಿದರು. 

ವಿಶ್ವಸಂಸ್ಥೆಯಲ್ಲಿ ಭಾರತ ಆಯೋಜಿಸಿದ್ದ ಯೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಪ್ರಾಚೀನ ಭಾರತದ ದೈಹಿಕ ಹಾಗೂ ಮಾನಸಿಕ ಅಭ್ಯಾಸಗಳು ದೇಹದ ಆರೋಗ್ಯ ಹಾಗೂ ಶಾಂತ ಮನಸ್ಥಿತಿಗೆ ಬಹುಮುಖ್ಯ ಕೊಡುಗೆ ನೀಡುತ್ತವೆ ಎಂದರು. 

ಕಾರ್ಯಕ್ರಮದಲ್ಲಿ ವಿವಿಧ ದೇಶಗಳ ರಾಯಭಾರಿಗಳು, ರಾಜತಾಂತ್ರಿಕರು, ಅಧ್ಯಾತ್ಮ ಗುರುಗಳು, ವಿದ್ಯಾರ್ಥಿಗಳು, ಯೋಗಾಸಕ್ತರು ಭಾಗಿಯಾಗಿದ್ದರು. ‘ಶಾಂತಿಗಾಗಿ ಯೋಗ’ ವಿಷಯದಡಿ ಉತ್ಸಾಹಿಗಳು ಮುಖ್ಯ ಕಚೇರಿ ಆವರಣದ ಹುಲ್ಲುಹಾಸಿನ ಮೇಲೆ ಎರಡು ಗಂಟೆ ಯೋಗ ಮಾಡಿದರು. 

ವಿಶ್ವಸಂಸ್ಥೆ ಕೇಂದ್ರ ಕಚೇರಿಯ ಕಟ್ಟಡದ ಮೇಲೆ ಲೇಸರ್ ಮೂಲಕ ಯೋಗಾಸನದ ಭಂಗಿಗಳನ್ನು ಚಿತ್ರಿಸಲಾಯಿತು.  ಕಾರ್ಯಕ್ರಮದ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೊವನ್ನು ಪ್ರಸಾರ ಮಾಡಲಾಯಿತು. ಬೆಂಗಳೂರು ಡೀಮ್ಸ್ ವಿಶ್ವವಿದ್ಯಾಲಯ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ (ಎಸ್–ವ್ಯಾಸ) ಸ್ಥಾಪಕ ಎಚ್.ಆರ್. ನಾಗೇಂದ್ರ ಉಪನ್ಯಾಸ ನೀಡಿದರು. 

‘ಭಾರತ–ಚೀನಾ ನಡುವೆ ಯೋಗವೇ ಸೇತುವೆ’

ಬೀಜಿಂಗ್: ಭಾರತ ಹಾಗೂ ಚೀನಾದ ಜನರನ್ನು ಒಗ್ಗೂಡಿಸುವಲ್ಲಿ ಯೋಗವು ಉಭಯ ದೇಶಗಳ ನಡುವೆ ಸೇತುವೆಯಾಗಿದೆ ಎಂದು ಚೀನಾದಲ್ಲಿರುವ ಭಾರತದ ರಾಯಭಾರಿ ಗೌತಮ್ ಬಂಬಾವಾಲೆ ಹೇಳಿದ್ದಾರೆ. 

ಚೀನಾದ ಸಾವಿರಾರು ಯೋಗ ಆಸಕ್ತರ ಜೊತೆ ಅವರು ನಾಲ್ಕನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.


ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಗುರುವಾರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಪದ್ಮನಾಭ ನಗರದಲ್ಲಿರುವ ನಿವಾಸದಲ್ಲಿ ಯೋಗ ಗುರು ಕಾರ್ತಿಕ್ ಮಾರ್ಗದರ್ಶನದಲ್ಲಿ ಯೋಗ ಪ್ರದರ್ಶನ ಮಾಡಿದರು ಪ್ರಜಾವಾಣಿ ಚಿತ್ರ/ ಎಂ.ಎಸ್‌.ಮಂಜುನಾಥ್‌

 

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !