7
ನಿಗಮ–ಮಂಡಳಿಗಳಿಗೆ ನೇಮಕ: ಕಾಂಗ್ರೆಸ್‌ಗೆ 65, ಜೆಡಿಎಸ್‌ಗೆ 33 ಸ್ಥಾನ ಸಿಗುವ ಸಾಧ್ಯತೆ

ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬ

Published:
Updated:

ನವದೆಹಲಿ: ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದೆ ಬಂಡಾಯದ ಬಾವುಟ ಹಾರಿಸಿದ್ದ ಕಾಂಗ್ರೆಸ್ ಪಕ್ಷದ ಅತೃಪ್ತ ತಲೆಯಾಳುಗಳು ಇನ್ನಷ್ಟು ಕಾಲ ಕಾಯಬೇಕಿದೆ.

ಸಂಪುಟ ವಿಸ್ತರಣೆ ಮತ್ತು ಸರ್ಕಾರಿ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕ ಏಕಕಾಲಕ್ಕೆ ನಡೆಯಬೇಕೆಂಬ ಇರಾದೆಯನ್ನು ಕಾಂಗ್ರೆಸ್ ಹೊಂದಿದೆ. ಕಾಂಗ್ರೆಸ್ ಅತೃಪ್ತರ ಸಂಖ್ಯೆ ದೊಡ್ಡದಿದ್ದು, ಕೇವಲ ಸಂಪುಟ ವಿಸ್ತರಣೆಯಲ್ಲಿ ಎಲ್ಲರಿಗೂ ಸ್ಥಾನಮಾನ ನೀಡುವುದು ಸಾಧ್ಯವಿಲ್ಲ. ಹೀಗಾಗಿ ನಿಗಮ- ಮಂಡಳಿಗಳನ್ನೂ ಸಂಪುಟ ವಿಸ್ತರಣೆಯ ಜೊತೆ ಜೊತೆಯಲ್ಲಿ ಕೈಗೆತ್ತಿಕೊಳ್ಳಲು ವರಿಷ್ಠರು ಮನಸ್ಸು ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು 'ಪ್ರಜಾವಾಣಿ'ಗೆ ತಿಳಿಸಿವೆ.

ಇತ್ತೀಚೆಗೆ ಭುಗಿಲೆದ್ದಿದ್ದ ಕಾಂಗ್ರೆಸ್ ಭಿನ್ನಮತೀಯ ಚಟುವಟಿಕೆ ವರಿಷ್ಠರ ಬಿಗಿ ಎಚ್ಚರಿಕೆಯ ನಂತರ ಇದೀಗ ಬೂದಿ ಮುಚ್ಚಿದ ಕೆಂಡದ ಸ್ಥಿತಿಗೆ ಮರಳಿದೆ. ಬಿಜೆಪಿಯ ದಾಪುಗಾಲನ್ನು ತಡೆಯಲು ಮುಖ್ಯಮಂತ್ರಿ ಸ್ಥಾನವನ್ನು ಮತ್ತು ಸಂಪುಟದ ಹಲವಾರು ಪ್ರಮುಖ ಖಾತೆಗಳನ್ನು ಜಾತ್ಯತೀತ ಜನತಾದಳಕ್ಕೆ ಧಾರೆ ಎರೆದು ಕಾಂಗ್ರೆಸ್ ಮಾಡಿರುವ 'ತ್ಯಾಗ', ಆಂತರಿಕ ಬಂಡಾಯದ ಕಾರಣದಿಂದಾಗಿ ವ್ಯರ್ಥವಾಗಕೂಡದು ಎಂಬುದು ವರಿಷ್ಠರ ಗಂಭೀರ ಆಲೋಚನೆ.

ಕಾಂಗ್ರೆಸ್ ಅತೃಪ್ತರ ಪರವಾಗಿ ಇತ್ತೀಚೆಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಬರಿಗೈಯಲ್ಲಿ ಬೆಂಗಳೂರಿಗೆ ಮರಳಿದ್ದ ಎಂ.ಬಿ.ಪಾಟೀಲ, 'ಸದ್ಯದಲ್ಲಿಯೇ' ತಮ್ಮೊಂದಿಗಿರುವ ಎಲ್ಲ ಶಾಸಕ ಮಿತ್ರರ ಸಭೆ ಸೇರಿಸಿ ಮುಂದಿನ ಹೆಜ್ಜೆಯ ಕುರಿತು ನಿರ್ಧರಿಸುವುದಾಗಿ ಸಾರಿದ್ದರು. ಭಿನ್ನಮತೀಯ ಚಟುವಟಿಕೆಯನ್ನು ತಕ್ಷಣವೇ ನಿಲ್ಲಿಸಿ, ಪಕ್ಷದ ತೀರ್ಮಾನವನ್ನು ಗೌರವಿಸಬೇಕೆಂಬ ಖಡಕ್ ಎಚ್ಚರಿಕೆಯನ್ನು ಕಾಂಗ್ರೆಸ್ ವರಿಷ್ಠರು ರವಾನಿಸಿದ್ದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ನೋಡಿಕೊಳ್ಳುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಬೆಂಗಳೂರಿಗೆ ಧಾವಿಸಿದ್ದನ್ನು ಇಲ್ಲಿ ನೆನೆಯಬಹುದು.

ರಾಜ್ಯ ಮಂತ್ರಿ ಮಂಡಲದಲ್ಲಿ ಕಾಂಗ್ರೆಸ್ ಪಾಲಿನ ಆರು ಸ್ಥಾನಗಳು ಮತ್ತು ಜಾತ್ಯತೀತ ಜನತಾದಳದ ಒಂದು ಸ್ಥಾನ ಖಾಲಿ ಇವೆ. ನಿಗಮ-ಮಂಡಳಿಗಳ ಹಂಚಿಕೆ ಕುರಿತು ಇನ್ನೂ ವಿವರ ಮಾತುಕತೆ ಆರಂಭ ಆಗಿಲ್ಲ. ಈವರೆಗಿನ ಸ್ಥೂಲ ಒಪ್ಪಂದದ ಪ್ರಕಾರ ಒಟ್ಟು 98 ನಿಗಮ-ಮಂಡಳಿಗಳ ಪೈಕಿ 32-33 ಸ್ಥಾನಗಳು (ಮೂರನೆಯ ಒಂದರಷ್ಟು) ಜಾತ್ಯತೀತ ಜನತಾದಳದ ಪಾಲಾಗಲಿದ್ದು, ಉಳಿದ ಮತ್ತು 64-65 (ಮೂರನೆಯ ಎರಡರಷ್ಟು) ಸ್ಥಾನಗಳನ್ನು ಕಾಂಗ್ರೆಸ್ ಉಳಿಸಿಕೊಳ್ಳಲಿದೆ. ಯಾವ ನಿಗಮ ಮತ್ತು ಯಾವ ಮಂಡಳಿ ಯಾವ ಪಕ್ಷಕ್ಕೆ ಹೋಗಬೇಕು ಎಂಬುದರ ಕುರಿತ ಮಾತುಕತೆ ಉಭಯ ಪಕ್ಷಗಳ ನಡುವೆ ಇನ್ನೂ ನಡೆದಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

ಜಾತ್ಯತೀತ ಜನತಾದಳದ ನಾಯಕರೂ ಆಗಿರುವ ಮುಖ್ಯಮಂತ್ರಿಯವರು ಸದ್ಯಕ್ಕೆ ಬಜೆಟ್ ಪೂರ್ವ ಸಭೆಗಳಲ್ಲಿ ಬಿಡುವಿಲ್ಲದೆ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದ ಅನೇಕ ನಾಯಕರು ಸಮ್ಮಿಶ್ರ ಸರ್ಕಾರದ ಸಮಾನ ಕನಿಷ್ಠ ಕಾರ್ಯಕ್ರಮವನ್ನು ರೂಪಿಸುವಲ್ಲಿ ನಿರತರಾಗಿದ್ದಾರೆ. ಹೀಗಾಗಿ ನಿಗಮ-ಮಂಡಳಿ ಕುರಿತ ಮಾತುಕತೆಗೆ ಸದ್ಯಕ್ಕೆ ಸಮಯವಿಲ್ಲ. ಕಾಂಗ್ರೆಸ್ ಅತೃಪ್ತ ಶಾಸಕರು ವಿಧಾನಮಂಡಲದ ಬಜೆಟ್ ಅಧಿವೇಶನ ಮುಗಿಯುವ ತನಕ ಕಾಯದೆ ವಿಧಿಯಿಲ್ಲ. ಹಣಕಾಸು ಮಂತ್ರಿಯೂ ಆಗಿರುವ ಮುಖ್ಯಮಂತ್ರಿ ಜುಲೈ 5ರಂದು ರಾಜ್ಯ ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಕನಿಷ್ಠ ಹದಿನೈದು ದಿನಗಳ ಕಾಲವಾದರೂ ಈ ಅಧಿವೇಶನ ನಡೆಯಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ತನ್ನ ಪಾಲಿನ ಆರು ಖಾಲಿ ಸ್ಥಾನಗಳ ಪೈಕಿ ಸದ್ಯಕ್ಕೆ ನಾಲ್ಕನ್ನು ತುಂಬಿ ಎರಡನ್ನೂ ಖಾಲಿ ಉಳಿಸಿಕೊಳ್ಳುವ ತಂತ್ರವನ್ನು ಕಾಂಗ್ರೆಸ್ ಇತ್ತೀಚೆಗೆ ಕೈ ಬಿಟ್ಟಂತೆ ಕಾಣುತ್ತಿದೆ. 'ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡಲಾಗುವುದು' ಎಂದು ಮೂಲಗಳು ಸ್ಪಷ್ಟಪಡಿಸಿವೆ.

ನಿಗಮ ಮಂಡಳಿ ಹಂಚಿಕೆ ಕುರಿತು ಅಂತಿಮ ಸುತ್ತಿನ ಮಾತುಕತೆಯ ನಂತರ ಯಾರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಕುರಿತು ವರಿಷ್ಠರು ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.

ಜುಲೈ 5ರಂದು ಬಜೆಟ್‌ ಮಂಡನೆ

ರಾಮನಗರ: ಜುಲೈ 5 ರಂದು ಚೊಚ್ಚಲ ಬಜೆಟ್‌ ಮಂಡಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ದೋಸ್ತಿ ಸರ್ಕಾರ ಬಂದ ಮೇಲೆ ಹೊಸ ಬಜೆಟ್ ಮಂಡಿಸಬೇಕೇ ಅಥವಾ ಪೂರಕ ಅಂದಾಜು ಮಂಡಿಸಿದರೇ ಸಾಕೇ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿತ್ತು. ಬಜೆಟ್ ಮಂಡಿಸಿಯೇ ಸಿದ್ಧ ಎಂದು ಕುಮಾರಸ್ವಾಮಿ ಪ್ರತಿಪಾದಿಸಿದ್ದರೆ, ಮಿತ್ರ ಪಕ್ಷವಾಗಿರುವ ಕಾಂಗ್ರೆಸ್ ಶಾಸಕ ಪಕ್ಷದ ನಾಯಕ ಸಿದ್ದರಾಮಯ್ಯ, ಪೂರಕ ಅಂದಾಜು ಸಾಕು ಎಂದು ಹೇಳಿದ್ದರು.

ಈ ಬೆಳವಣಿಗೆಗಳ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಮಾಡಿದ್ದ ಕುಮಾರಸ್ವಾಮಿ, ಬಜೆಟ್ ಮಂಡಿಸಲು ಒಪ್ಪಿಗೆ ಪಡೆದು ಬಂದಿದ್ದರು. ಇದಕ್ಕೆ ಪೂರಕವಾಗಿ ಗುರುವಾರ ಬಜೆಟ್‌ ಮಂಡನೆಯ ಪೂರ್ವಭಾವಿ ಸರಣಿ ಸಭೆಗಳನ್ನೂ ಆರಂಭಿಸಿದರು.

ಮುಖ್ಯಾಂಶಗಳು

* ಬಜೆಟ್ ಪೂರ್ವ ಸಭೆಗಳಲ್ಲಿ ತೊಡಗಿದ ಸಿ.ಎಂ

* ಬಜೆಟ್‌ ಮುಗಿದ ನಂತರ ವಿಸ್ತರಣೆ ಸಾಧ್ಯತೆ

* ಕಾಂಗ್ರೆಸ್ ಪಾಲಿನ ಆರು ಮತ್ತು ಜೆಡಿಎಸ್‌ನ ಒಂದು ಸ್ಥಾನ ಖಾಲಿ

 

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 2

  Sad
 • 1

  Frustrated
 • 4

  Angry

Comments:

0 comments

Write the first review for this !