7
ಬಿಜೆಪಿ ವಿರುದ್ಧ ವಾಗ್ದಾಳಿ: ಸಚಿವರ ಬೆಂಬಲಕ್ಕೆ ಸಿ.ಎಂ, ಡಿಸಿಎಂ

ಡೈರಿ ಬಿಚ್ಚಿಡಲಾ: ಡಿಕೆಶಿ

Published:
Updated:

ಬೆಂಗಳೂರು/ಚಿತ್ರದುರ್ಗ: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಆರ್ಥಿಕ ಅಪರಾಧಗಳ ನ್ಯಾಯಾಲಯ ನೋಟಿಸ್ ನೀಡಿರುವುದು ರಾಜಕೀಯ ಕಲಹಕ್ಕೆ ಕಾರಣವಾಗಿದೆ.

ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿಯ ಕೆಲವು ನಾಯಕರು ಒತ್ತಾಯಿಸಿದ್ದರೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಮೈತ್ರಿ ಸರ್ಕಾರದ ಪ್ರಮುಖ ನಾಯಕರು ಶಿವಕುಮಾರ್ ಬೆಂಬಲಕ್ಕೆ ನಿಂತಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಶಿವಕುಮಾರ್, ‘ನನ್ನನ್ನ ಹೆದರಿಸಲು ಬಂದ್ರೆ ನಾನೇನು ಹೆದರುವುದಿಲ್ಲ. ನನ್ನ ಬಳಿಯೂ ಇಂತಹ ಅನೇಕ ಡೈರಿಗಳಿದ್ದು, ಸಮಯ ಬಂದಾಗ ಅವೆಲ್ಲವನ್ನೂ ಬಹಿರಂಗ ಪಡಿಸಬೇಕಾಗುತ್ತದೆ. ಹೀಗೆ ಹೆದರಿಸುವ ಕೆಲಸ ನಿಲ್ಲಿಸಿ’ ಎಂದು  ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

‘ನನ್ನನ್ನೇ ಗುರಿ ಮಾಡಿ ದಾಳಿ ನಡೆಸುತ್ತಿರುವುದು ಏಕೆ? ಬೇರೆಯವರ ಮನೆಗಳಲ್ಲಿ ಡೈರಿ ಹಾಗೂ ‘ಲೆಕ್ಕ’ ಇಟ್ಟಿರುವುದು ಗೊತ್ತಿದ್ದರೂ ಅಂತಹವರ ಮನೆಗಳ ಮೇಲೆ ಏಕೆ ದಾಳಿ ನಡೆಸುತ್ತಿಲ್ಲ’ ಎಂದು ಕಟುವಾಗಿ ಪ್ರಶ್ನಿಸಿರುವ ಅವರು, ‘ಬಿಜೆಪಿ ನಾಯಕರು ಯಾರನ್ನು ಮುಖ್ಯಮಂತ್ರಿ ಮಾಡಬೇಕೋ ಎಂದು ಕೊಂಡಿದ್ದಾರೋ ಅವರ ವಿರುದ್ಧದ ಪ್ರಕರಣಗಳ ಪಟ್ಟಿ ಕೊಡಬೇಕಾ?’ ಎಂದು ಬಿ.ಎಸ್‌. ಯಡಿಯೂರಪ್ಪ ಹೆಸರು ಹೇಳದೇ ಹರಿಹಾಯ್ದರು.

‘ಯಾರ್ಯಾರ ಮನೆಗಳಲ್ಲಿ ಯಾವ್ಯಾವ ಡೈರಿಗಳಿವೆ ಎಂಬುದು ನಮಗೂ ಗೊತ್ತು. ನನ್ನ ಬಳಿ ಇರುವ ಪೆಟ್ಟಿಗೆ ತೆಗೆದರೆ ಅದರೊಳಗಿರುವ ‘ಭೂತ’ಗಳೆಲ್ಲ ಹೊರಗೆ ಬರಲಿವೆ. ಅಂತಹ ಪೆಟ್ಟಿಗೆಯ ಬಾಗಿಲು ತೆರೆಯುವಂತೆ ನನ್ನನ್ನು ಪ್ರಚೋದಿಸಬೇಡಿ’ ಎಂದು ಎಚ್ಚರಿಕೆಯನ್ನೂ ಕೊಟ್ಟರು.

‘ದುರುದ್ದೇಶದಿಂದಲೇ ನನಗೆ ಕಿರುಕುಳ ನೀಡಲಾಗುತ್ತಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಸುಮ್ಮನಿದ್ದೇನೆ. ಇಲ್ಲವಾದರೆ ನಾನೇನು ಎಂಬುದನ್ನು ತೋರಿಸುತ್ತಿದ್ದೆ. ವಿಚಾರಣೆ ಎದುರಿಸುವ ಮೂಲಕ ನೆಲದ ಕಾನೂನನ್ನು ಗೌರವಿಸುತ್ತೇನೆ. ಕಾನೂನಿನ ಬಗ್ಗೆ ನಂಬಿಕೆ ಇದೆ’ ಎಂದೂ ಅವರು ಹೇಳಿದರು.

ಸಿಎಂ, ಡಿಸಿಎಂ ಬೆಂಬಲ

‘ಶಿವಕುಮಾರ್ ಅವರು ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತಿದ್ದಾರೆ. ಇದನ್ನೇ ದೊಡ್ಡ ಸುದ್ದಿ ಮಾಡುವ ಅವಶ್ಯಕತೆ ಇಲ್ಲ. ಕಾನೂನಾತ್ಮಕವಾಗಿ ಅವರ ಜತೆ ನಾವು ಇದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಶಿವಕುಮಾರ್ ರಾಜೀನಾಮೆಗೆ ಬಿಜೆಪಿ ಆಗ್ರಹಿಸುತ್ತಿದೆಯಲ್ಲಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ, ‘ಇಂತಹ ಆರೋಪ ಎದುರಾದಾಗ ಈ ಹಿಂದೆ ಬಿಜೆಪಿಯವರು ಎಷ್ಟು ಬಾರಿ ರಾಜೀನಾಮೆ ಕೊಟ್ಟಿದ್ದಾರೆ? ರಾಜೀನಾಮೆ ಕೇಳುವ ನೈತಿಕತೆ ಅವರಿಗೆ ಇದೆಯೇ? ಯಾವಾಗ ರಾಜೀನಾಮೆ ಕೊಡಬೇಕು ಅಂತ ಶಿವಕುಮಾರ್‌ಗೆ ಗೊತ್ತು. ಅಂತಹ ಸನ್ನಿವೇಶ ಎದುರಾದಾಗ ಅವರೇ ರಾಜೀನಾಮೆ ನೀಡುತ್ತಾರೆ ಬಿಡಿ’ ಎಂದು ಮುಖ್ಯಮಂತ್ರಿ ಹೇಳಿದರು.

‘ಕೇಂದ್ರ ಸರ್ಕಾರ ಆದಾಯ ತೆರಿಗೆ (ಐಟಿ) ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಸೇರಿ ಎಲ್ಲ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಆರೋಪಿಸಿದರು.

‘ಕಾಂಗ್ರೆಸ್‌ ನಾಯಕರನ್ನು ಗುರುತಿಸಿ ದಾಳಿ ಮಾಡಲಾಗುತ್ತಿದೆ. ಚುನಾವಣೆಗೂ ಮುನ್ನ ಆರಂಭವಾದ ಈ ದಾಳಿಗಳ ಕುರಿತು ಹಲವು ಬಾರಿ ಪ್ರಸ್ತಾಪ ಮಾಡಿದ್ದೇವೆ. ತನಿಖಾ ಸಂಸ್ಥೆಗಳ ದುರುಪಯೋಗದ ರೀತಿಯನ್ನು ಇದು ಬಿಂಬಿಸುತ್ತದೆ’ ಎಂದರು.

ಸಂಸದರ ಸಭೆ

ಶಿವಕುಮಾರ್ ವಿರುದ್ಧ ದುರುದ್ದೇಶಪೂರ್ವಕ ದಾಳಿ ನಡೆಯುತ್ತಿದೆ ಎಂದು ಆಪಾದಿಸಿರುವ ಸಂಸದರು, ಅವರ ಪರವಾಗಿ ಧ್ವನಿ ಎತ್ತಲು ನಿರ್ಧರಿಸಿದ್ದಾರೆ.

ಬೆಂಗಳೂರಿನ ಕುಮಾರಕೃಪಾದಲ್ಲಿ ಸಭೆ ನಡೆಸಿದ ಸಂಸದರಾದ ಕೆ.ಎಚ್. ಮುನಿಯಪ್ಪ, ಪ್ರಕಾಶ ಹುಕ್ಕೇರಿ, ಬಿ.ವಿ. ನಾಯಕ, ಬಿ.ಎನ್. ಚಂದ್ರಪ್ಪ, ಬಿ.ಕೆ. ಹರಿಪ್ರಸಾದ್‌, ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್, ಕೆ.ಸಿ.ರಾಮಮೂರ್ತಿ ಅವರು, ಶಿವಕುಮಾರ್ ಪರ ನಿಲ್ಲುವ ಕುರಿತು ಚರ್ಚಿಸಿದರು.

‘ಶೋಭಾ ಮನೆಯಲ್ಲಿ ಬಿಎಸ್‌ವೈ ಖಜಾನೆ’

ಶಿವಮೊಗ್ಗ: ‘ಕೇಂದ್ರ ಸರ್ಕಾರ ಆದಾಯ ತೆರಿಗೆ ಇಲಾಖೆ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್, ಜೆಡಿಎಸ್ ನಾಯಕರ ಮನೆಗಳ ಮೇಲೆ ದಾಳಿ ನಡೆಸುವ ಬದಲು ಶೋಭಾ ಕರಂದ್ಲಾಜೆ ಮೇಡಂ ಮನೆ ಶೋಧಿಸಿದರೆ ಯಡಿಯೂರಪ್ಪ ಅವರ ಖಜಾನೆ ಸಿಗುತ್ತದೆ’ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

‘ಅಧಿಕಾರ ಹಿಡಿಯಲು ಆಪರೇಷನ್ ಕಮಲಕ್ಕೆ ಬಿಜೆಪಿ ಸಿದ್ಧವಾಗಿತ್ತು. ವಾಸ್ತವದಲ್ಲಿ ಬಿಜೆಪಿಯ 10ಕ್ಕೂ ಹೆಚ್ಚು ಶಾಸಕರು ಈಗಲೂ ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ. ಅವರಲ್ಲಿ ನಾಲ್ವರು ನನ್ನ ಸಂಪರ್ಕದಲ್ಲಿ ಇದ್ದಾರೆ. ಆಪರೇಷನ್ ಹಸ್ತದ ಜವಾಬ್ದಾರಿ ನೀಡಿದರೆ ಕಾರ್ಯಾಚರಣೆ ಯಶಸ್ವಿಗೊಳಿಸುತ್ತೇನೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಯಡಿಯೂರಪ್ಪ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅವರು ಸಿಗಲಿಲ್ಲ.

* ಎಲ್ಲದರ ಬಗ್ಗೆ ತನಿಖೆ ನಡೆಯಲಿ. ರಾಜಕೀಯ ಅಸೂಯೆಯಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆ. ಪ್ರತಿಕ್ರಿಯಿಸುವುದಿಲ್ಲ

-ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 18

  Happy
 • 4

  Amused
 • 4

  Sad
 • 6

  Frustrated
 • 6

  Angry

Comments:

0 comments

Write the first review for this !