ದುಬಾರಿ ಶುಲ್ಕದ ಹೊರೆ ತಪ್ಪುವುದು ಯಾವಾಗ?

7
ಖಾಸಗಿ ಶಾಲೆಗಳಿಗೆ ಅಂಕುಶ ಹಾಕಲು ಬೇಕು ಇಚ್ಛಾಶಕ್ತಿ * ಮಠ, ರಾಜಕಾರಣಿಗಳ ಸಹಕಾರ ಅಗತ್ಯ

ದುಬಾರಿ ಶುಲ್ಕದ ಹೊರೆ ತಪ್ಪುವುದು ಯಾವಾಗ?

Published:
Updated:

ಬೆಂಗಳೂರು: ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶ ಶುಲ್ಕ ಸರ್ಕಾರಿ ಕಾಲೇಜುಗಳಲ್ಲಿ ವರ್ಷಕ್ಕೆ₹ 19,000, ಖಾಸಗಿ ಕಾಲೇಜುಗಳಲ್ಲಿ ₹ 55,000ದವರೆಗೆ ಇದೆ. ಆದರೆ ಎಲ್‌ಕೆಜಿ ಮತ್ತು 1ನೇ ತರಗತಿ ಪ್ರವೇಶಕ್ಕೆ ರಾಜ್ಯದ ಹಲವು ಪ್ರತಿಷ್ಠಿತ ಖಾಸಗಿ ಶಾಲೆಗಳು ₹ 1.25 ಲಕ್ಷದಿಂದ ₹ 2.50 ಲಕ್ಷದವರೆಗೆ ಶುಲ್ಕ ಪಡೆಯುತ್ತಿವೆ! ಅಂದರೆ ರಾಜ್ಯದಲ್ಲಿ ವೃತ್ತಿ ಶಿಕ್ಷಣಕ್ಕಿಂತ ಶಾಲಾ ಶಿಕ್ಷಣವೇ ದುಬಾರಿ!

ಸಂವಿಧಾನದ ಸಮವರ್ತಿ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಶಿಕ್ಷಣ ಕ್ಷೇತ್ರದ ಮೇಲೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡಕ್ಕೂ ಅಧಿಕಾರ ಇದೆ. ಆದರೆ ಸೇವಾ ವಲಯವಾಗಿ ಗುರುತಿಸಿಕೊಂಡಿರುವ ಶಿಕ್ಷಣ ವ್ಯಾಪಾರೋದ್ಯಮವಾಗಿ ಬೆಳೆದು ದಶಕಗಳೇ ಕಳೆದಿವೆ.

ಜೆಡಿಎಸ್‌ ಪ್ರಣಾಳಿಕೆಯಲ್ಲಿ ಪ್ರಸ್ತಾಪ: ಖಾಸಗಿ ಶಾಲಾ– ಕಾಲೇಜುಗಳಲ್ಲಿನ ಡೊನೇಷನ್‌ ಹಾವಳಿ ಕೊನೆಗಾಳಿಸಿ, ಅನಗತ್ಯ ಶುಲ್ಕಗಳಿಗೆ ಕಡಿವಾಣ ಹಾಕುವ ಮೂಲಕ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಕಡಿಮೆ ಮಾಡುವುದಾಗಿ ಜೆಡಿಎಸ್‌ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ರಾಜಕೀಯ ಚದುರಂಗದಾಟದಲ್ಲಿ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಕಾಂಗ್ರೆಸ್‌ನೊಂದಿಗೆ ಸಮ್ಮಿಶ್ರ ಸರ್ಕಾರ ಮುನ್ನಡೆಸುತ್ತಿರುವ ಅವರದ್ದು ತಂತಿ ಮೇಲಿನ ನಡಿಗೆ.

ರಾಜ್ಯದಲ್ಲಿ ಕಾಂಗ್ರೆಸ್‌, ಬಿಜೆಪಿ, ಜನತಾ ದಳ ಸ್ವತಂತ್ರವಾಗಿ ಅಧಿಕಾರ ನಡೆಸಿದ್ದಾಗಲೂ ಡೊನೇಷನ್‌ ಪಿಡುಗನ್ನು ಮಟ್ಟಹಾಕಲು ಆಗಿರಲಿಲ್ಲ. ಆ ಸಾಹಸಕ್ಕೆ ಈಗಿನ ಸಮ್ಮಿಶ್ರ ಸರ್ಕಾರ ಮುಂದಾಗುತ್ತದೆಯೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ.

ರಾಜಕಾರಣಿ, ಮಠಗಳ ಮುಷ್ಟಿಯಲ್ಲಿ ಖಾಸಗಿ ಶಾಲೆಗಳು: ರಾಜ್ಯದ ಹಲವು ಖಾಸಗಿ ಶಿಕ್ಷಣ ಸಂಸ್ಥೆಗಳು ವಿವಿಧ ಪಕ್ಷಗಳ ರಾಜಕಾರಣಿಗಳ ಮತ್ತು ಮಠಗಳ ಮುಷ್ಟಿಯಲ್ಲಿವೆ. ಅಕ್ಷರ ದಾಸೋಹದಲ್ಲಿ ತೊಡಗಿದ್ದ ಕೆಲ ಮಠಗಳೂ ಇಂದು ಅಂತರರಾಷ್ಟ್ರೀಯ ಮಟ್ಟದ ಶಾಲೆಗಳನ್ನು ತೆರೆದು ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುತ್ತಿವೆ. ಅಲ್ಪಸಂಖ್ಯಾತ ಸಮುದಾಯದ ಶಾಲೆಗಳು ಅತ್ಯಧಿಕ ಶುಲ್ಕ ಪಡೆಯುವುದರಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ವಿವಿಧ ಪಕ್ಷಗಳ ರಾಜಕಾರಣಿಗಳ (ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ) ಮಾಲೀಕತ್ವದ ಶಿಕ್ಷಣ ಸಂಸ್ಥೆಗಳು ಸಿಬಿಎಸ್‌ಇ, ಐಸಿಎಸ್‌ಇ, ಐಜಿಸಿಎಸ್‌ಇ ಪಠ್ಯಕ್ರಮದ ಶಾಲೆಗಳನ್ನು ನಡೆಸುತ್ತಿದ್ದು, ವಿದ್ಯಾರ್ಥಿಗಳ ಪ್ರವೇಶಕ್ಕೆ ಲಕ್ಷಾಂತರ ಶುಲ್ಕ ಪಡೆದು ಪೋಷಕರ ಸುಲಿಗೆ ಮಾಡುತ್ತಿವೆ.

ಇಚ್ಛಾಶಕ್ತಿ ಮುಖ್ಯ: ಒಂದೆಡೆ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸದ್ಯ ಶೇ 58ಕ್ಕೆ ಕುಸಿದಿದೆ. ಇದೇ ವೇಳೆ ಖಾಸಗಿ ಶಾಲೆಗಳ ಸಂಖ್ಯೆ ಮತ್ತು ಅಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಖಾಸಗಿ ಶಾಲೆಗಳ ದುಬಾರಿ ಶುಲ್ಕದ ಸಂಕಷ್ಟದಿಂದ ಪೋಷಕರನ್ನು ಪಾರು ಮಾಡುವ ಇಚ್ಛಾಶಕ್ತಿಯನ್ನು ಸರ್ಕಾರ ಪ್ರದರ್ಶಿಸಬೇಕು ಎಂಬುದು ಶಿಕ್ಷಣ ತಜ್ಞರ ಆಗ್ರಹ.

ಪೂರ್ವ ತಯಾರಿ ಮುಖ್ಯ

‘ಖಾಸಗಿ ಶಾಲೆಗಳ ಶುಲ್ಕ ನಿಗದಿಪಡಿಸುವ, ಅವುಗಳನ್ನು ನಿಯಂತ್ರಿಸುವ ಪ್ರಯತ್ನಗಳು ಗೋವಿಂದೇಗೌಡರು (1995-99) ಶಿಕ್ಷಣ ಸಚಿವರಾಗಿದ್ದಾಗಿನಿಂದ ನಡೆದುಕೊಂಡು ಬಂದಿವೆ. ಆದರೆ ಯಶಸ್ವಿಯಾಗಿಲ್ಲ’ ಎನ್ನುತ್ತಾರೆ ಆರ್‌.ವಿ.ಟೀಚರ್ಸ್‌ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಎಸ್‌.ಶ್ರೀಕಂಠಸ್ವಾಮಿ.

‘ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ, ಸೌಲಭ್ಯ, ಮೂಲ ಸೌಕರ್ಯವನ್ನು ಆಧರಿಸಿ ಪ್ರದೇಶವಾರು ಎ, ಬಿ, ಸಿ ಗ್ರೂಪ್‌ಗಳನ್ನಾಗಿ ವಿಂಗಡಿಸಿ ಶುಲ್ಕ ನಿಗದಿಪಡಿಸಬಹುದು. ಇದಕ್ಕೆ ಪೂರ್ವತಯಾರಿ ಅಗತ್ಯ. ಪ್ರತಿ ಶಾಲೆಗಳ ಹಿಂದಿನ ಐದು ವರ್ಷಗಳ ಆಡಿಟ್‌ ರಿಪೋರ್ಟ್‌, ಆದಾಯ ತೆರಿಗೆ ಸಲ್ಲಿಕೆ ಮತ್ತು ಮೂಲ ಸೌಕರ್ಯ ವೃದ್ಧಿಯನ್ನು ಪರಿಶೀಲಿಸಿ ಶುಲ್ಕ ನಿಗದಿ ಮಾಡಬಹುದು’ ಎಂಬುದು ಅವರ ಸಲಹೆ.

ಹೆಚ್ಚುವರಿ ಸೌಲಭ್ಯಕ್ಕೇಕೆ ಶುಲ್ಕ

‘ನಿಯಮದಂತೆ ಶಾಲೆಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿರುತ್ತದೆಯೇ ಹೊರತು ಐಷಾರಾಮಿ ಮತ್ತು ಹೆಚ್ಚುವರಿ ಸೌಲಭ್ಯಗಳನ್ನು ಕೊಡಬೇಕು ಎಂದು ಹೇಳಿರುವುದಿಲ್ಲ. ಹೀಗಿರುವಾಗ ಹೆಚ್ಚುವರಿಯಾಗಿ ಯಾವುದೇ ಸೌಲಭ್ಯ, ಸವಲತ್ತು ಒದಗಿಸಿದರೆ ಅದು ಆ ಶಿಕ್ಷಣ ಸಂಸ್ಥೆಯ ಸ್ವಯಂಪ್ರೇರಿತ ಸೇವೆ. ಅದಕ್ಕೆಲ್ಲ ಶುಲ್ಕ ವಸೂಲಿ ಮಾಡುವುದು ಸರಿಯಲ್ಲ. ಈ ಕುರಿತು ಸ್ಪಷ್ಟ ನಿಯಮವನ್ನು ಸರ್ಕಾರವೇ ರೂಪಿಸಬೇಕು’ ಎಂದು ಪ್ರತಿಪಾದಿಸುತ್ತಾರೆ ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ.

‘ಸರ್ಕಾರಕ್ಕೆ ಅಧಿಕಾರವಿಲ್ಲ’

‘‌ಖಾಸಗಿ ಶಾಲೆಗಳ ಶುಲ್ಕ ನಿಗದಿ ಪಡಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಆದರೆ ಈ ಶಾಲೆಗಳು ಎಷ್ಟು ಶುಲ್ಕ ಪಡೆಯುತ್ತಿವೆ? ಈ ಶುಲ್ಕ ವಿದ್ಯಾರ್ಥಿಗಳಿಗೇ ಖರ್ಚಾಗುತ್ತಿದೆಯಾ? ಯಾವ ಸೌಲಭ್ಯಗಳನ್ನು ಶಾಲೆಯಲ್ಲಿ ನೀಡಲಾಗುತ್ತಿದೆ ಎಂಬುದನ್ನು ಶಿಕ್ಷಣ ಸಂಸ್ಥೆಗಳು ಘೋಷಿಸುವಂತೆ ಸೂಚಿಸಬಹುದಷ್ಟೇ’ ಎಂದು ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್‌ ಹೇಳುತ್ತಾರೆ.

‘ರಾಜ್ಯದಲ್ಲಿ 18,000ಕ್ಕೂ ಹೆಚ್ಚು ಖಾಸಗಿ ಶಾಲೆಗಳಿವೆ. ಅವುಗಳಲ್ಲಿ ಶೇ 5ರಷ್ಟು ಶಾಲೆಗಳು ಮಾತ್ರ ವರ್ಷಕ್ಕೆ ಲಕ್ಷಾಂತರ ರೂಪಾಯಿ ಶುಲ್ಕ ಪಡೆಯುತ್ತಿವೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಕಳೆದ ಶೈಕ್ಷಣಿಕ ವರ್ಷದಲ್ಲಿ ಸುತ್ತೋಲೆ ಹೊರಡಿಸಿ ವರ್ಷಕ್ಕೆ ಗರಿಷ್ಠ ಶೇ 15ರಷ್ಟು ಶುಲ್ಕ ಹೆಚ್ಚಿಸಿಕೊಳ್ಳಲು ಅನುಮತಿ ನೀಡಿದೆ. ಅದಕ್ಕೆ ಎಲ್ಲ ಖಾಸಗಿ ಶಾಲೆಗಳು ಬದ್ಧವಾಗಿವೆ’ ಎಂದು ಅವರು ಹೇಳುತ್ತಾರೆ.

ದುಬಾರಿ ಶುಲ್ಕ ಹಾವಳಿ ತಡೆಯುವುದು ಹೇಗೆ? ಇಲ್ಲಿದೆ ಶಿಕ್ಷಣ ತಜ್ಞರ ಕೆಲ ಸಲಹೆಗಳು

* ಏಕ ರೀತಿಯ ಪಠ್ಯಕ್ರಮ ಮತ್ತು ಪ್ರವೇಶಾತಿ ನೀತಿ ಜಾರಿಗೊಳಿಸಬೇಕು.

* ಭಾಷಾ ಮಾಧ್ಯಮ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಹೋಬಳಿಗೊಂದು ಇಂಗ್ಲಿಷ್‌ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ಸರ್ಕಾರವೇ ಆರಂಭಿಸಬೇಕು. ಅಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೂ ಅವಕಾಶ ಇರುವಂತೆ ನೋಡಿಕೊಳ್ಳಬೇಕು.

* ಖಾಸಗಿ ಶಾಲೆಗಳಲ್ಲಿನ ಶೇ 50ರಷ್ಟು ಸೀಟುಗಳನ್ನು ಸರ್ಕಾರಿ ಕೋಟಾ ಎಂದು ಪರಿಗಣಿಸಿ ಅವುಗಳಿಗೆ ಏಕರೀತಿಯ ಶುಲ್ಕ ನಿಗದಿಪಡಿಸಬೇಕು. ಉಳಿದ ಶೇ 50ರಷ್ಟು ಸೀಟುಗಳನ್ನು ಆಯಾ ಶಾಲಾ ಆಡಳಿತ ಮಂಡಳಿಗೆ ಬಿಟ್ಟುಕೊಡಬೇಕು. ಅಲ್ಲಿಯೂ ಮನಸೋ ಇಚ್ಛೆ ಶುಲ್ಕ ನಿಗದಿಯಾಗದಂತೆ ಎಚ್ಚರವಹಿಸಬೇಕು.

* ತಾಲ್ಲೂಕಿಗೊಂದು ಕೇಂದ್ರೀಯ ವಿದ್ಯಾಲಯ ತೆರೆಯಲು ಕೇಂದ್ರಕ್ಕೆ ಮನವಿ ಮಾಡಬೇಕು.

* ಸರ್ಕಾರಿ ಶಾಲೆಗಳನ್ನು ಬಲವರ್ಧಿಸಿ ಮಾದರಿ ಶಾಲೆಗಳನ್ನಾಗಿ ನಿರ್ಮಿಸಬೇಕು.

* ನವೋದಯ ಅಥವಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಗಲುವ ತಲಾ ವೆಚ್ಚವನ್ನು ಗಣನೆಗೆ ತೆಗೆದುಕೊಂಡು ಖಾಸಗಿ ವಸತಿ ಶಾಲೆಗಳ ಶುಲ್ಕವನ್ನು ನಿಗದಿಪಡಿಸಲು ಸರ್ಕಾರ ನಿಯಮ ರೂಪಿಸಬೇಕು. ಇಲ್ಲೂ ಏಕ ರೀತಿಯ ಪ್ರವೇಶಾತಿ ಮತ್ತು ಸರ್ಕಾರಿ ಕೋಟಾದ ಸೀಟುಗಳಿಗೆ ಅವಕಾಶ ಇರಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !