ಸರ್ಕಾರಿ ಶಾಲೆ ಪ್ರವೇಶಕ್ಕೆ ನೂಕು ನುಗ್ಗಲು

7
ಗುರುವಾಯನಕರೆ, ವಿಟ್ಲ ಶಾಲೆ ಸೇರಲು ಉತ್ಸುಕತೆ

ಸರ್ಕಾರಿ ಶಾಲೆ ಪ್ರವೇಶಕ್ಕೆ ನೂಕು ನುಗ್ಗಲು

Published:
Updated:

ಮಂಗಳೂರು: ಗುರುವಾಯನ ಕೆರೆಯ ಸರ್ಕಾರಿ ಪ್ರೌಢಶಾಲೆಗೆ ಸ್ಥಳೀಯರೆಲ್ಲ ಸೇರಿ ‘ನಮ್ಮೂರ ಸರ್ಕಾರಿ ಪ್ರೌಢಶಾಲೆ’ ಎಂದು ಹೆಸರಿಟ್ಟಿದ್ದಾರೆ. ಅಷ್ಟೇ ಪ್ರೀತಿಯಿಂದ ಈ ಶಾಲೆಗೆ ಸೌಲಭ್ಯಗಳನ್ನು ಊರಿನವರೇ ಕಲ್ಪಿಸಿದ್ದಾರೆ. ಪರಿಣಾಮವೆಂಬಂತೆ ಈ ವರ್ಷ ಬರೋಬ್ಬರಿ 181 ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ ಪಡೆದಿದ್ದಾರೆ. 

ನಿರಂತರ ಏಳು ವರ್ಷಗಳಿಂದ ಶೇ 100ಫಲಿತಾಂಶ ದಾಖಲಿಸುತ್ತಿರುವ ಈ ಪ್ರೌಢಶಾಲೆಯಲ್ಲಿ 2017–18ರ ಸಾಲಿನಲ್ಲಿ 93 ಮಂದಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. 91 ಮಂದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಗುಣಮಟ್ಟದ ಪಾಠ ಪ್ರವಚನ ಮತ್ತು ಸೌಕರ್ಯಗಳನ್ನು ಒದಗಿಸಿದರೆ ಸರ್ಕಾರಿ ಶಾಲೆಗಳು  ಖಾಸಗಿ ಶಾಲೆಗಳಿಗಿಂತ ಉತ್ತಮ ಸಾಧನೆ ಮಾಡಬಲ್ಲವು ಎನ್ನುವುದಕ್ಕೆ ಈ ಶಾಲೆಯೇ ಸಾಕ್ಷಿ ಎಂದು ಪೋಷಕರು ಹೇಳುತ್ತಾರೆ. 

ಮುಖ್ಯೋಪಾಧ್ಯಾಯರಾದ ಜಗನ್ನಾಥ್‌ ಅವರು ಶಾಲೆಯ ಸಾಧನೆಯ ಬಗ್ಗೆ ಖುಷಿಯಿಂದ ಹೇಳಿಕೊಳ್ಳುತ್ತಾರೆ. ‘ ನಮ್ಮ ಶಾಲೆಯಲ್ಲಿ ಇಂಗ್ಲಿಷ್‌ ಭಾಷಾ ಕಲಿಕೆಗೆ ಆದ್ಯತೆ ಇದೆ. ಕನ್ನಡ, ಹಿಂದಿಪಾಠಗಳನ್ನೂ ಮಕ್ಕಳೇ ಪ್ರಾಯೋಗಿಕವಾಗಿ ಕಲಿಯಬೇಕು. ಕತೆಗಳನ್ನು ನಾಟಕಗಳನ್ನಾಗಿ ರೂಪಿಸುವ, ಅಭಿನಯಿಸುವ ಸವಾಲು ಅವರಿಗೆ ಹಾಕಲಾಗುತ್ತದೆ. ಆಗ ಪಾಠಗಳನ್ನು ಖುಷಿಯಿಂದ ಕಲಿಯುತ್ತಾರೆ. ಉತ್ಕೃಷ್ಟ ಮಟ್ಟದ ಕಂಪ್ಯೂಟರ್‌ ಲ್ಯಾಬ್‌ ಕೂಡ ಇರುವುದರಿಂದ ಹತ್ತನೇ ತರಗತಿಪಾಸಾಗುವ ವಿದ್ಯಾರ್ಥಿಗೆ ಯಾವುದೇ ಅಳುಕು ಇರುವುದಿಲ್ಲ’. 

‘ಈ ಬಾರಿ ದೂರದೂರಿಂದ ಮಕ್ಕಳು ಪ್ರವೇಶ ಕೋರಿದ್ದರು. ತೀರಾ ದೂರದಿಂದ ವಿದ್ಯಾರ್ಥಿಗಳಿಗೆ ಬರಲು ಕಷ್ಟವಾಗಬಹುದು ಎಂಬ ಕಾರಣಕ್ಕೆ 75 ಮಂದಿ ವಿದ್ಯಾರ್ಥಿಗಳ ಮನವೊಲಿಸಿ ಅವರ ಮನೆ ಹತ್ತಿರದ ಶಾಲೆ ಸೇರುವಂತೆ ಹೇಳಿದ್ದೇವೆ. ಎ, ಬಿ, ಸಿ. ವಿಭಾಗದಲ್ಲಿ ಪಾಠಗಳು ನಡೆಯುತ್ತವೆ. ಆದರೆ ಕೇವಲ 6 ಮಂದಿ ಶಿಕ್ಷಕರಿಗೆ ಇಷ್ಟೊಂದು ಪ್ರಮಾಣದ ಮಕ್ಕಳನ್ನು ನಿರ್ವಹಿಸುವುದು ಸವಾಲಾಗಿದೆ.ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಿಸಲು ಮುಂದಾಗಿದೆಯಂತೆ. ನಮ್ಮ ಶಾಲೆಗೂ ಹೆಚ್ಚುವರಿ 12 ಮಂದಿ ಶಿಕ್ಷಕರು ತುರ್ತಾಗಿ ಬೇಕಾಗಿದೆ’ ಎನ್ನುತ್ತಾರೆ ಅವರು. 


ಜಗನ್ನಾಥ್‌ ಮುಖ್ಯೋಪಾಧ್ಯಾಯ

ವಿಟ್ಲ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಸಾವಿರ ಸಮೀಪ

ಹೊಸ ಶೈಕ್ಷಣಿಕ ವರ್ಷದಲ್ಲಿ ವಿಟ್ಲ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೂ ಬರೋಬ್ಬರಿ 124 ವಿದ್ಯಾರ್ಥಿಗಳು ಒಂದನೇ ತರಗತಿಗೆ ಸೇರ್ಪಡೆಯಾಗಿದ್ದಾರೆ. ಸರ್ಕಾರಿ ಶಾಲೆಗೆ ಮಕ್ಕಳು ಬರುವುದಿಲ್ಲ ಎಂಬ ಅಭಿಪ್ರಾಯವನ್ನು ಬದಲಿಸುವಂತೆ ಮಾಡಿದ್ದಾರೆ.  2ನೇ ತರಗತಿಗೆ 10, ಮೂರನೇ ತರಗತಿ 12, ನಾಲ್ಕನೇ ತರಗತಿಗೆ ಐವರು, ಐದನೇ ತರಗತಿಗೆ 17 , ಆರನೇ ತರಗತಿಗೆ 49 , ಏಳನೇ ತರಗತಿಗೆ 13 ಮತ್ತು 8ನೇ ತರಗತಿಗೆ 16 ವಿದ್ಯಾರ್ಥಿಗಳು ಹೊಸದಾಗಿ ಸೇರಿದ್ದು ಒಟ್ಟು 246 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ.  ಶಾಲೆಯಲ್ಲಿ ಒಟ್ಟು 943 ವಿದ್ಯಾರ್ಥಿಗಳು ಓದುತ್ತಿರುವುದು ಖುಷಿಯ ಸಂಗತಿ ಎಂದು  ಪ್ರಭಾರ ಮುಖ್ಯೋಪಾಧ್ಯಾಯರಾದ ವಿಶ್ವನಾಥ್‌ ಹೇಳುತ್ತಾರೆ. 

ಶಾಲೆಯಲ್ಲಿ 6, 7, 8 ನೇ ತರಗತಿಯಲ್ಲಿ ಇಂಗ್ಲಿಷ್‌ ಮಾಧ್ಯಮವೂ ಇದೆ. ಪೂರ್ವಪ್ರಾಥಮಿಕ ಕಲಿಕೆ ಅವಕಾಶವಿದೆ. ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ಉದ್ಯಮಿ ಆಗಿರುವ ಅಜಿತ್‌ ಕುಮಾರ್‌ ರೈ ಅವರು 1.25 ಕೋಟಿ ಮೊತ್ತದ ಕಟ್ಟಡವನ್ನುಹಾಗೂ ಸುಬ್ರಾಯ ಪೈ ಎಂಬವರು ಶಾಲಾ ವಾಹನದ ವ್ಯವಸ್ಥೆಯನ್ನೂ ಮಾಡಿದ್ದಾರೆ. ಸುಬ್ರಾಯ ಪೈ ಅವರು ಭಾರತಿ ಜನಾರ್ದನ ಸೇವಾ ಟ್ರಸ್ಟ್‌ ಮೂಲಕ ಶಾಲೆಯನ್ನು ದತ್ತು ಪಡೆದಿದ್ದಾರೆ.  ಮುದ್ದೇನ ಹಳ್ಳಿಯ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ವತಿಯಿಂದ ಬೆಳಗಿನ ಉಪಾಹಾರ ವ್ಯವಸ್ಥೆಯೂ ನಡೆಯುತ್ತಿದೆ. 15 ಮಂದಿ ಶಿಕ್ಷಕರ ಜೊತೆ 11 ಮಂದಿ ಅತಿಥಿ ಶಿಕ್ಷಕರು ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ ಎಂದು ಬಂಟ್ವಾಳ ಬಿಇಒ ಶಿವಪ್ರಕಾಶ್‌ ಹೇಳುತ್ತಾರೆ. 

ಶಾಲೆಯ ವಿಶೇಷತೆ ಏನು ?

ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಪೈಕಿ ಅತ್ಯುತ್ತಮ ಶಾಲೆ  ಎಂಬ ಕಾರಣಕ್ಕೆ ಗುರುವಾಯನಕೆರೆ ಶಾಲೆಗೆ,  ನಿಟ್ಟೆ ಶಿಕ್ಷಣ ಸಂಸ್ಥೆಯಿಂದ ₹15 ಲಕ್ಷ ಅನುದಾನ ದೊರೆತಿದೆ ಎಂದು ಜಗನ್ನಾಥ್‌ ಹೇಳುತ್ತಾರೆ. 

ಸ್ಥಳೀಯ ದಾನಿಗಳು ಅನುದಾನವನ್ನು ಸಂಗ್ರಹಿಸಿಕೊಟ್ಟಿದ್ದಾರೆ. ಆದ್ದರಿಂದ ಮೂಲಸೌಕರ್ಯಗಳೆಲ್ಲವೂ ಇವೆ. ಶಿಕ್ಷಕರು ಒಟ್ಟಾಗಿ ಕಟ್ಟುನಿಟ್ಟಿನಲ್ಲಿ ಶಿಸ್ತು ಪಾಲನೆಯಾಗುವಂತೆ ನೋಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ಗೈರುಹಾಜರಾದರೆ ತಕ್ಷಣ ಮನೆಯವರಿಗೆ ಮಾಹಿತಿ ನೀಡುವ ವ್ಯವಸ್ಥೆ ಇದೆ. ತಡವಾಗಿ ಬರುವುದು, ಪಾಠ ಪ್ರವಚನದತ್ತ ನಿರಾಸಕ್ತಿ ತಾಳುವ ವಿದ್ಯಾರ್ಥಿಗಳನ್ನು ವೈಯಕ್ತಿಕವಾಗಿ ಮಾತನಾಡಿಸಿ ಅವರ ಗಮನ ಓದಿನತ್ತ ಬರುವಂತೆ ಮಾಡಲಾಗುತ್ತದೆ. ಇ– ಕ್ಲಾಸ್‌ರೂಮ್‌ ಇರುವುದರಿಂದ ಕಂಪ್ಯೂಟರ್‌ ಶಿಕ್ಷಣವನ್ನು ಸಮಗ್ರವಾಗಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಅವರು ಹೇಳುತ್ತಾರೆ. 

* ಎರಡು ಶಾಲೆಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದು ಸಂತೋಷದ ಸಂಗತಿ. ಅಗತ್ಯ ಇರುವ ಕಡೆ ಅತಿಥಿ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು.
–ವೈ. ಶಿವರಾಮಯ್ಯ , ಡಿಡಿಪಿಐ 

ಮುಖ್ಯಾಂಶಗಳು

* 181 ವಿದ್ಯಾರ್ಥಿಗಳು ಹೊಸದಾಗಿ ಪ್ರವೇಶ

* ಏಳು ವರ್ಷಗಳಿಂದ ಶೇ 100 ಫಲಿತಾಂಶ

 

 

 

 

 

 

ಬರಹ ಇಷ್ಟವಾಯಿತೆ?

 • 37

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !