ಬಜೆಟ್ ಮಂಡನೆಗೆ ಸಿದ್ಧತೆ: ಸರಣಿ ಸಭೆ ನಡೆಸಿದ ಮುಖ್ಯಮಂತ್ರಿ

7

ಬಜೆಟ್ ಮಂಡನೆಗೆ ಸಿದ್ಧತೆ: ಸರಣಿ ಸಭೆ ನಡೆಸಿದ ಮುಖ್ಯಮಂತ್ರಿ

Published:
Updated:

ಬೆಂಗಳೂರು: ಬಜೆಟ್‌ ಮಂಡನೆಗೆ ದಿನಾಂಕ ಗೊತ್ತು ಮಾಡಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಇದಕ್ಕೆ ಪೂರಕವಾಗಿ ಗುರುವಾರ ಬಜೆಟ್‌ ಪೂರ್ವ ಸರಣಿ ಸಭೆಗಳನ್ನು ಆರಂಭಿಸಿದರು.

ನಗರದ ರೇಸ್‌ ಕೋರ್ಸ್‌ಯಲ್ಲಿರುವ ಶಕ್ತಿಭವನದಲ್ಲಿ ಸಭೆ ನಡೆಸಿದ ಅವರು ಸಾಲ ಮನ್ನಾಗೆ ಹಣ ಹೊಂದಿಸುವ ಬಗ್ಗೆ ಆದ್ಯತೆ ನೀಡಿದರು.

ರೈತರ ಸಾಲ ಮನ್ನಾ ಮಾಡಲು ಯಾವ ಮೂಲಗಳಿಂದ ಹಣ ಹೊಂದಿಸಬೇಕು, ವಿವಿಧ ಇಲಾಖೆಗಳಲ್ಲಿರುವ ಅನುತ್ಪಾದಕ ಯೋಜನೆಗಳನ್ನು ಕೈಬಿಟ್ಟು, ಅದಕ್ಕೆ ಮೀಸಲಿಟ್ಟ ಹಣ ಬಳಸಲು ಸಾಧ್ಯವೇ ಎಂಬ ಬಗ್ಗೆ ಅಧಿಕಾರಿಗಳಿಂದ ಕುಮಾರಸ್ವಾಮಿ ಮಾಹಿತಿ ಕೇಳಿದರು.

‘ಸಾಕಷ್ಟು ಇಲಾಖೆಗಳಲ್ಲಿ ಜನಪರವಲ್ಲದ ಹಲವು ಯೋಜನೆಗಳಿಗೆ ಅನಗತ್ಯವಾಗಿ ಹಣ ಖರ್ಚು ಮಾಡಲಾಗುತ್ತಿದೆ. ಅವುಗಳನ್ನು ನಿಲ್ಲಿಸಿ ಆ ಹಣವನ್ನು ಸಾಲಮನ್ನಾ ಯೋಜನೆಗೆ ಬಳಸಬೇಕು. ಅನುತ್ಪಾದಕ ಖರ್ಚುಗಳಿಗೆ ಕಟ್ಟುನಿಟ್ಟಾಗಿ ಕಡಿವಾಣ ಹಾಕಬೇಕು. ಈ ಮೂಲಕ ಸಾಲಮನ್ನಾಗೆ ಬೇಕಾಗುವ ಹಣವನ್ನು ಸರಿದೂಗಿಸಬೇಕು’ ಎಂಬುದಾಗಿ ಸೂಚನೆ ನೀಡಿದರು’ ಎಂದು ಮೂಲಗಳು ಹೇಳಿವೆ.

ಈ ಯೋಜನೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯಿಂದ ಜಾರಿ ಆಗಬೇಕಾಗಿರುವುದರಿಂದ ಇಲಾಖಾ ಸಚಿವ ಕೃಷ್ಣಭೈರೇಗೌಡ ಜತೆ ಸುದೀರ್ಘವಾಗಿ ಸಮಾಲೋಚನೆ ನಡೆಸಿ ಅವರಿಂದಲೂ ಸಲಹೆ ಸೂಚನೆಗಳನ್ನು ಪಡೆದರು.

ಇನ್ನು ಮುಂದೆ ಶಂಕುಸ್ಥಾಪನೆ, ಉದ್ಘಾಟನೆ ಮುಂತಾದ ಸರ್ಕಾರಿ ಕಾರ್ಯಕ್ರಮಗಳನ್ನು ಸಂಪೂರ್ಣ ನಿಲ್ಲಿಸಬೇಕು. ಕೆಲವು ಸಂದರ್ಭಗಳಲ್ಲಿ ಯೋಜನೆಗಿಂತ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಖರ್ಚು ಮಾಡಲಾಗುತ್ತದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದೂ ಮುಖ್ಯಮಂತ್ರಿ ಕಟ್ಟುನಿಟ್ಟಾಗಿ ಸೂಚಿಸಿದರು.

ಜನರಿಗೆ ಅನುಕೂಲವಾಗುವ ಕಾರ್ಯಕ್ರಮ ಮತ್ತು ಯೋಜನೆಗಳನ್ನು ಬಜೆಟ್‌ಗೆ ಸೇರಿಸಲು ಮತ್ತು ಹಿಂದಿನ ಸರ್ಕಾರದ ಎಲ್ಲ ಜನಪ್ರಿಯ ಯೋಜನೆಗಳನ್ನು ಮುಂದುವರಿಸಲು ಕುಮಾರಸ್ವಾಮಿ ಒಪ್ಪಿಗೆ ನೀಡಿದರು ಎಂದು ಮೂಲಗಳು ಹೇಳಿವೆ.

ದೋಸ್ತಿ ಪಕ್ಷಗಳ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಸಿಎಂಪಿ ( ಸಾಮಾನ್ಯ ಕನಿಷ್ಠ ಕಾರ್ಯಕ್ರಮ) ಸಭೆಯ ಬಳಿಕ ಬಜೆಟ್‌ಗೆ ಸೇರಿಸಲು ತೀರ್ಮಾನಿಸಲಾಗಿದೆ. ಕಾರ್ಮಿಕ ಇಲಾಖೆ, ವೈದ್ಯ ಶಿಕ್ಷಣ, ಕಂದಾಯ, ಕೌಶಲ್ಯ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಹಾಗೂ ಕಾನೂನು ಇಲಾಖೆಗಳ ಬೇಡಿಕೆ ಕುರಿತು ಚರ್ಚೆ ನಡೆಯಿತು.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‌, ಕಾರ್ಮಿಕ ಸಚಿವ ವೆಂಕಟರಮಣಪ್ಪ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ ಸಭೆಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !