ಕರಾವಳಿ, ಮಲೆನಾಡಿನಲ್ಲಿ ಮತ್ತೆ ಮಳೆ

7
ಕೊಡಗಿನಲ್ಲಿ ಕಾರ್ಮಿಕ ಸಾವು

ಕರಾವಳಿ, ಮಲೆನಾಡಿನಲ್ಲಿ ಮತ್ತೆ ಮಳೆ

Published:
Updated:

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ ಮುಂಗಾರು ಮಳೆ ಮತ್ತೆ ಬಿರುಸು ಪಡೆದುಕೊಂಡಿದೆ. ನಾಲ್ಕು ದಿನಗಳ ಬಿಡುವಿನ ನಂತರ ಧಾರಾಕಾರವಾಗಿ ಮಳೆ ಸುರಿಯಲು ಆರಂಭಿಸಿದೆ.

ಕಾಫಿ ತೋಟದ ಕೆಲಸ ಮುಗಿಸಿ ಸಂಜೆ ಮನೆಗೆ ಮರಳುತ್ತಿದ್ದ ವೇಳೆ, ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಮರಬಿದ್ದು ಕಾರ್ಮಿಕ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಇದು ಪಾಲಿಬೆಟ್ಟ ತಿತಿಮತಿ ಸಂಪರ್ಕ ರಸ್ತೆಯ ಹೊಸಳ್ಳಿಯಲ್ಲಿ ನಡೆದಿದೆ.

ಹುಣಸೂರು ತಾಲ್ಲೂಕಿನ ಹನಗೋಡು ನಿವಾಸಿ ರಾಜು (35) ಮೃತಪಟ್ಟ ಕಾರ್ಮಿಕ. ಚಾಲಕ ಸುನಿಲ್, ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಸುನಿಲ್ ಗಾಯಗೊಂಡಿದ್ದಾರೆ. ವಾಹನ
ದಲ್ಲಿ 13 ಮಂದಿ ಕಾರ್ಮಿಕರು ಇದ್ದರು.

ಗಾಳಿಬೀಡು, ಭಾಗಮಂಡಲ, ತಲಕಾವೇರಿ, ಅಯ್ಯಂಗೇರಿ, ಅಪ್ಪಂಗಳ, ಗೋಣಿಕೊಪ್ಪಲು, ವಿರಾಜಪೇಟೆ ವ್ಯಾಪ್ತಿಯಲ್ಲೂ ಬಿಡದೆ ಮಳೆ ಸುರಿಯುತ್ತಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮತ್ತೆ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಮಡಿಕೇರಿಯಲ್ಲಿ ಸಂಜೆ 4ರಿಂದ ಮಳೆ ಜೋರಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಮಾದಾಪುರದ ಸುತ್ತಮುತ್ತ ಸುರಿಯುತ್ತಿರುವ ಮಳೆಯಿಂದ ಹಾರಂಗಿ ಜಲಾಶಯದ ಒಳಹರಿವು 630 ಕ್ಯುಸೆಕ್‌ನಿಂದ 960 ಕ್ಯುಸೆಕ್‌ಗೆ ಏರಿಕೆಯಾಗಿದೆ. ಮಳೆಯ ಪ್ರಮಾಣ ಕೊಂಚ ಇಳಿಮುಖವಾಗಿದ್ದ ಪರಿಣಾಮ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನಮಟ್ಟ ಇಳಿಮುಖವಾಗಿತ್ತು. ಈಗ ಮತ್ತೆ ನೀರಿನ ಹರಿವು ರಭಸವಾಗಿದೆ.

ಸಿಡಿಲು ಬಡಿದು ಮನೆಗೆ ಹಾನಿ: ಮಂಗಳೂರಿನಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಧಾರಾಕಾರ ಮಳೆ ಸುರಿದಿದೆ. ಹಲವೆಡೆ ರಸ್ತೆಗಳಲ್ಲಿ ನೀರು ನಿಂತಿದ್ದು, ಕೆಲಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಪಜೀರು ಗ್ರಾಮದ ಬೆಂಗೋಡಿಪದವು ಬಳಿ ಸದಾಶಿವ ಶೆಟ್ಟಿ ಅವರ ಮನೆಗೆ ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಸಿಡಿಲು ಬಡಿದಿದ್ದು, ಮನೆ ಮಂದಿ ಪಾರಾಗಿದ್ದಾರೆ. ಸಿಡಿಲಿನ ರಭಸಕ್ಕೆ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಕಿಟಕಿಯ ಗಾಜುಗಳು ಪುಡಿಯಾಗಿವೆ. ಮನೆಯೊಳಗಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳು ಸುಟ್ಟಿವೆ.

ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲ್ಲೂಕಿನಲ್ಲೂ ಉತ್ತಮ ಮಳೆ ಸುರಿದಿದ್ದು, ಹಲವೆಡೆ ಗುಡ್ಡ ಕುಸಿದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು.

ಕೋಟದಲ್ಲಿ 13 ಸೆಂ.ಮೀ ಮಳೆ

ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗಿದೆ.

ಉಡುಪಿಯ ಕೋಟದಲ್ಲಿ 13 ಸೆಂ.ಮೀ, ಆಗುಂಬೆಯಲ್ಲಿ 12 ಸೆಂ.ಮೀ., ಸಿದ್ಧಾಪುರ, ಕಾರವಾರ, ಅಂಕೋಲ, ಕಾದ್ರದಲ್ಲಿ 9 ಸೆಂ.ಮೀ., ಕುಂದಾಪುರ 8 ಸೆಂ.ಮೀ., ಉಡುಪಿ, ಕೊಲ್ಲೂರು 7 ಸೆಂ.ಮೀ., ಶಿರಾಲಿ, ಗೋಕರ್ಣ, ಕೊಟ್ಟಿಗೆಹಾರ 6 ಸೆಂ.ಮೀ., ಹೊನ್ನಾವರ, ಯಲ್ಲಾಪುರ 5 ಸೆಂ.ಮೀ, ಗೇರುಸೊಪ್ಪ, ಕಿರವತ್ತಿ, ಭಾಗಮಂಡಲ, ಲಿಂಗನಮಕ್ಕಿ, ಮೂಡಿಗೆರೆ 4 ಸೆಂ.ಮೀ., ಮಂಚಿಕೇರಿ, ಜಗಲ್ಬೇಟ್‌, ತಾಳಗುಪ್ಪ 3 ಸೆಂ.ಮೀ, ಮಂಗಳೂರು, ಮೂಡುಬಿದಿರೆ, ಮಾಣಿ, ಕುಮಟ, ಬನವಾಸಿ, ಶಿಗ್ಗಾಂವ, ಕಾಗಿನೆಲೆ 2 ಸೆಂ.ಮೀ, ಪಣಂಬೂರು, ಮಂಗಳೂರು, ಧರ್ಮಸ್ಥಳ, ಪುತ್ತೂರು, ಕಾರ್ಕಳ, ಧಾರವಾಡ, ಕಲಘಟಗಿ, ಶಿರಹಟ್ಟಿ, ಮಡಿಕೇರಿ, ತ್ಯಾಗರ್ತಿ, ಹುಂಚದಕಟ್ಟೆ, ಕಳಸ, ಹಾಸನ, ಚನ್ನಪಟ್ಟಣದಲ್ಲಿ ತಲಾ 1 ಸೆಂ.ಮೀ ಮಳೆ ಬಿದ್ದಿದೆ.

ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !