7
₹8.60 ಕೋಟಿ ಹಣದ ಮೂಲ ಪತ್ತೆಗೆ ಮುಂದಾದ ಇ.ಡಿ

ಡಿಕೆಶಿ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆ?

Published:
Updated:

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮತ್ತು ಅವರ ಆಪ್ತರಿಗೆ ಸೇರಿರುವ ದೆಹಲಿಯ ಆರ್‌.ಕೆ. ಪುರಂನ ಮನೆ ಹಾಗೂ ಸಫ್ದರ್‌ಜಂಗ್‌ ಎನ್‌ಕ್ಲೇವ್‌ ಫ್ಲ್ಯಾಟ್‌ಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ₹ 8.60 ಕೋಟಿಯ ಮೂಲ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುವ ಸಾಧ್ಯತೆಯಿದೆ.

ಇಲ್ಲಿನ ವಿಶೇಷ ಆರ್ಥಿಕ ಅಪರಾಧಗಳ ವಿಚಾರಣಾ ನ್ಯಾಯಾಲಯಕ್ಕೆ ಐ.ಟಿ ಅಧಿಕಾರಿಗಳು ಸಲ್ಲಿಸಿರುವ 33 ಪುಟಗಳ ದೂರಿನಲ್ಲಿ, ಶಿವಕುಮಾರ್‌, ಅವರ ವ್ಯವಹಾರಗಳ ಪಾಲುದಾರರಾದ ಸಚಿನ್‌ ನಾರಾಯಣ್‌, ಸುನಿಲ್‌ ಕುಮಾರ್‌ ಶರ್ಮ, ದೆಹಲಿ ಕರ್ನಾಟಕ ಭವನದ ನೌಕರ ಆಂಜನೇಯ ಹಾಗೂ ಸುಖದೇವ್‌ ವಿಹಾರದ ನಿವಾಸಿ ರಾಜೇಂದ್ರ ಅವರು ಹಣದ ಮೂಲದ ಬಗ್ಗೆ ವಿಭಿನ್ನ ಹೇಳಿಕೆ ನೀಡಿರುವುದರಿಂದ ಜಾರಿ ನಿರ್ದೇಶನಾಲಯ ತನಿಖೆಗೆ ಮುಂದಾಗಬಹುದು ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ಜಾರಿ ನಿರ್ದೇಶನಾಲಯವು ಪ್ರಕರಣದ ತನಿಖೆ ಕೈಗೆತ್ತಿಕೊಳ್ಳಲು ಅವಕಾಶವಿದೆ. ಲೇವಾದೇವಿ ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿ ಮೊಕದ್ದಮೆ ದಾಖಲಿಸಿ, ವಿಚಾರಣೆಗಾಗಿ ಶಿವಕುಮಾರ್‌ ಮತ್ತು ಅವರ ಆಪ್ತರನ್ನು ಬಂಧಿಸುವ ಸಾಧ್ಯತೆಯೂ ಇದೆ. ಇದರಿಂದ ಪಾರಾಗಲು ತಕ್ಷಣವೇ ಸಚಿವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಬಹುದು’ ಎಂದೂ ಮೂಲಗಳು ತಿಳಿಸಿವೆ.

‘ದೆಹಲಿಯ ಆರ್.ಕೆ.ಪುರಂ ಮನೆ ಹಾಗೂ ಸಫ್ದರ್‌ಜಂಗ್‌ ಫ್ಲ್ಯಾಟ್‌ಗಳಲ್ಲಿ ಸಿಕ್ಕಿರುವ ಹಣ ಸಚಿವರಿಗೆ ಸೇರಿದ್ದು’ ಎಂದು ಅವರ ಆಪ್ತ ಆಂಜನೇಯ ಹೇಳಿದ್ದಾರೆ. ‘ಇದು ತಮ್ಮ ಹಣ’ ಎಂದು ಶರ್ಮ ಹೇಳಿಕೊಂಡಿದ್ದಾರೆ. ‘ಇದರಲ್ಲಿ ಭಾಗಶಃ ಕೃಷಿಯಿಂದ ಬಂದಿರುವ ಆದಾಯ’ ಎಂದು ಶಿವಕುಮಾರ್‌ ಹೇಳಿದ್ದಾರೆ. ಆದರೆ, ಹಣದ ಮೂಲವನ್ನು ಯಾರೂ ಖಚಿತವಾಗಿ ಬಹಿರಂಗಪಡಿಸಿಲ್ಲ ಎಂದು ಐ.ಟಿ ಅಧಿಕಾರಿಗಳು ದೂರಿನಲ್ಲಿ ತಿಳಿಸಿದ್ದಾರೆ.

‘ಸುನೀಲ್‌ ಕುಮಾರ್‌ ಶರ್ಮಾ ದೆಹಲಿ ಅಥವಾ ಸುತ್ತಮುತ್ತ ಯಾವುದೇ ವ್ಯವಹಾರ ನಡೆಸುತ್ತಿಲ್ಲ. ಅವರಿಗೆ ಸೇರಿದ ಫ್ಲ್ಯಾಟ್‌ನಿಂದ ವಶಪಡಿಸಿಕೊಂಡಿರುವ ₹ 6.68 ಕೋಟಿಯನ್ನು ಬೆಂಗಳೂರಿನಿಂದ ದೆಹಲಿಗೆ ಏಕೆ ಸಾಗಿಸಲಾಯಿತು. ಏಕೆ ಅಲ್ಲಿಡಲಾಗಿತ್ತು ಎಂಬ ಮಾಹಿತಿಯನ್ನು ಐ.ಟಿ ಅಧಿಕಾರಿಗಳಿಗೆ ನೀಡಿಲ್ಲ. ಈ ಎಲ್ಲ ಸಂಗತಿಗಳನ್ನು ಗಮನಿಸಿದರೆ ಆದಾಯ ತೆರಿಗೆ ವಂಚಿಸಲು ಸಚಿವರಿಗೆ ಶರ್ಮ ಪ್ರಚೋದನೆ ನೀಡಿರುವುದು ಮೇಲ್ನೋಟಕ್ಕೆ ಕಾಣುವಂತಿದೆ ಎಂದು ದೂರಿನಲ್ಲಿ ಹೇಳಿದೆ.

‘ಶರ್ಮ, ಹಲವು ಹಣಕಾಸು ವ್ಯವಹಾರದಲ್ಲಿ ತೆರಿಗೆ ವಂಚಿಸಿದ್ದಾರೆ. ದಾಳಿ ವೇಳೆ ವಶಪಡಿಸಿಕೊಂಡಿರುವ ಡೈರಿ ಹಾಗೂ ಐದನೇ ಆರೋಪಿ ರಾಜೇಂದ್ರ ನೀಡಿರುವ ಹೇಳಿಕೆಯಲ್ಲಿ ಒಪ್ಪಿಕೊಂಡಿರುವಂತೆ ಹಣಕ್ಕೆ ಕೆ.ಜಿ ಎಂಬ ಸಂಕೇತಾಕ್ಷರ ಬಳಸಲಾಗಿದೆ. ಆ ಮೂಲಕ ಹವಾಲಾ ವ್ಯವಹಾರ ನಡೆಸಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆದಾಯ ತೆರಿಗೆ ಇಲಾಖೆಯು ವಿಶೇಷ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರೂ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುವ ಅಧಿಕಾರ ಅದಕ್ಕಿಲ್ಲ. ಹೀಗಾಗಿ ವಿಚಾರಣೆಯನ್ನು ಜಾರಿ ನಿರ್ದೇಶನಾಲಯ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.  ಒಮ್ಮೆ ಪ್ರಕರಣ ಕೈಗೆತ್ತಿಕೊಂಡು, ಎಫ್‌ಐಆರ್‌ ದಾಖಲಿಸಿದರೆ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರ ಇಕ್ಕಟ್ಟಿಗೆ ಸಿಲುಕುವ ಸಂಭವವಿದೆ. 

ಮುಖ್ಯಾಂಶಗಳು

* ಲೇವಾದೇವಿ ಕಾಯ್ದೆಯಡಿ ಪ್ರಕರಣ ಸಾಧ್ಯತೆ

* ನಿರೀಕ್ಷಣಾ ಜಾಮೀನಿಗೆ ಡಿಕೆಶಿ ಅರ್ಜಿ ಸಂಭವ

* ಸಚಿವರು ಮತ್ತು ಆಪ್ತರ ವಿಭಿನ್ನ ಹೇಳಿಕ ಪರಿಣಾಮ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !