ಇಥಿಯೋಪಿಯಾ ಆಗುವ ಕರ್ನಾಟಕ

7
ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು

ಇಥಿಯೋಪಿಯಾ ಆಗುವ ಕರ್ನಾಟಕ

Published:
Updated:

ಬೆಂಗಳೂರು: ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರಿಗೆ ನೀರು ತರುವ ಯೋಜನೆಯಿಂದ ಪಶ್ಚಿಮಘಟ್ಟದ ಅಪರೂಪದ ಜೀವ ವೈವಿಧ್ಯದಿಂದ ಕೂಡಿದ ಪರಿಸರಕ್ಕೆ ದೊಡ್ಡ ಮಟ್ಟದಲ್ಲಿ ಹಾನಿ ಆಗುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ನಡೆಸಿರುವ ಅಧ್ಯಯನ ತಿಳಿಸಿದೆ.

‘ಶರಾವತಿ ಪಾತ್ರದ ಅಡೂರ್‌ನಲ್ಲಿ 574 ಹೆಕ್ಟೇರ್‌ ಮತ್ತು ಕುದುರೂರಿನ 3395.3 ಹೆಕ್ಟೇರ್‌ ಅರಣ್ಯ ವ್ಯಾಪಿಸಿದೆ. ಜಲಾಶಯ ನಿರ್ಮಾಣದ ಬಳಿಕ ಈ ಭಾಗದ ಜೀವ ವೈವಿಧ್ಯತೆ ಕುಸಿದಿದೆ. ನೈಸರ್ಗಿಕ ಪುನರುತ್ಪಾದನೆ ಮತ್ತು ಜೀವರಾಶಿ ಉತ್ಪಾದನೆ ಮೇಲೂ ಗಂಭೀರ ಪರಿಣಾಮ ಬೀರಿದೆ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ವಿಭಾಗದ ಡಾ.ಟಿ.ವಿ.ರಾಮಚಂದ್ರ ಮತ್ತು ತಂಡ ನಡೆಸಿರುವ ಶರಾವತಿ ನದಿ ಪಾತ್ರದ ಅರಣ್ಯದ ಅಧ್ಯಯನ ತಿಳಿಸಿದೆ.

ಕಾಡಿನಲ್ಲಿರುವ ಆರ್ಥಿಕ ಮಹತ್ವದ ಸಸ್ಯರಾಶಿ ಮತ್ತು ವನಸ್ಪತಿಯ ಅತಿಯಾದ ಬಳಕೆ, ಅರಣ್ಯ ಸಂಪನ್ಮೂಲದ ನಿರ್ವಹಣೆ ವೈಫಲ್ಯ ಮತ್ತು ಅರಣ್ಯ ಭೂಮಿಯ ಒತ್ತುವರಿ ಜೈವಿಕ ವೈವಿಧ್ಯದ ಕುಸಿತಕ್ಕೆ ಕಾರಣವಾಗಿದೆ ಎಂದು ಅಧ್ಯಯನದಲ್ಲಿ ರಾಮಚಂದ್ರ ತಿಳಿಸಿದ್ದಾರೆ.

ಇಲ್ಲಿನ ಅರಣ್ಯ ಪ್ರದೇಶದ ದತ್ತಾಂಶದ ಪ್ರಕಾರ, ಇಲ್ಲಿ 93 ಪ್ರಭೇದದ ಮರಗಳು, 33 ಬಗೆಯ ಪೊದೆಗಳು, 2 ಬಗೆಯ ಆರ್ಕಿಡ್‌, 13 ಬಗೆಯ ಗಿಡ ಮೂಲಿಕೆಗಳು (ಇದರಲ್ಲಿ ಪತ್ತೆ ಮಾಡಲಾಗದ ಎಷ್ಟೋ ಬಗೆಯ ಮೂಲಿಕೆಗಳಿವೆ), 136 ಜಾತಿಯ ಗಿಡಗಳು ಮತ್ತು ಪೊದೆಗಳಿವೆ. ಇವು ಅತ್ಯಂತ ಅಪರೂಪದ ಸಸ್ಯರಾಶಿ ಎಂದು ಪಟ್ಟಿ ಮಾಡಿದ್ದು, ಇವುಗಳ ರಕ್ಷಣೆಗೆ ಆದ್ಯತೆ ನೀಡಬೇಕು ಎಂದೂ ಅಧ್ಯಯನ ಹೇಳಿದೆ.

ಈ ಪ್ರದೇಶದಲ್ಲಿ ಮಾನವ ಹಸ್ತಕ್ಷೇಪ ಕಡಿಮೆ ಆಗಬೇಕು. ಇದರಿಂದ ಜೀವ ವೈವಿಧ್ಯವು ಉಳಿಯಲು ಸಾಧ್ಯ. ಇದಕ್ಕಾಗಿ ಸ್ಥಳೀಯರು, ಪರಿಸರ ತಜ್ಞರು, ಅರಣ್ಯ ಇಲಾಖೆ ಸಿಬ್ಬಂದಿಯ ಜತೆ ಸಮಾಲೋಚನೆ ನಡೆಸಬೇಕು. ಈ ರೀತಿ ಮಾಡುವುದರಿಂದ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಯ ಸಮತೋಲನ ಕಾಪಾಡಲು ಸಾಧ್ಯ ಎಂಬುದಾಗಿ ಅವರು ಶಿಫಾರಸು ಮಾಡಿದ್ದಾರೆ.

ಇಥಿಯೋಪಿಯಾ ಆಗುತ್ತದೆ: ಜಲ ವಿದ್ಯುತ್‌ ಉತ್ಪಾದನೆಗೆಂದು ಶಿವಮೊಗ್ಗ ಜಿಲ್ಲೆ ಸಾಗರದ ಸಮೀಪ ಶರಾವತಿ ನದಿಗೆ ಅಣೆಕಟ್ಟು ನಿರ್ಮಿಸಲಾಯಿತು. ಆಗ ದೊಡ್ಡ ಪ್ರಮಾಣದಲ್ಲಿ ಪರಿಸರ ನಾಶವಾಯಿತು. ಈಗ ಬೃಹತ್‌ ಪೈಪ್‌ಗಳನ್ನು ಅಳವಡಿಸಿ ನೀರು ಹರಿಸುವ ಯೋಜನೆಗೆ ಕೈ ಹಾಕಿದರೆ, ಶರಾವತಿ ನದಿ ಪಾತ್ರದ ಅರಣ್ಯ ಮತ್ತಷ್ಟು ನಾಶವಾಗುತ್ತದೆ. ಇದರಿಂದ ಕರ್ನಾಟಕ ಇಥಿಯೋಪಿಯಾ ಆಗುತ್ತದೆ ಎಂದು ವಿಜ್ಞಾನಿ ಟಿ.ವಿ.ರಾಮಚಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಜಲಾಶಯದಿಂದ ನೀರನ್ನು ಪೈಪ್‌ ಮೂಲಕ ಹರಿಸುವುದಾಗಿ ಸರ್ಕಾರ ಹೇಳಿದೆ. ಆದರೆ, ಪೈಪ್‌ಗಳನ್ನು ಅಳವಡಿಸಲು ಅದು ಹಾದು ಹೋಗುವ ದಾರಿಯಲ್ಲಿರುವ ಅರಣ್ಯವನ್ನು ನಾಶ ಮಾಡಬೇಕಾಗುತ್ತದೆ. ಎತ್ತಿನಹೊಳೆ ಯೋಜನೆಯಲ್ಲೂ ಪೈಪ್‌ಗಳನ್ನು ಹಾಕಲು ದೊಡ್ಡ ಪ್ರಮಾಣದಲ್ಲಿ ಅರಣ್ಯವನ್ನು ನಾಶಗೊಳಿಸಲಾಯಿತು. ರಾಜಕಾರಣಿಗಳಿಗೆ ಪರಿಸರ ಸೂಕ್ಷ್ಮತೆ ಗೊತ್ತಾಗುವುದಿಲ್ಲ. ಅಧಿಕಾರಿಗಳು ಲಾಬಿಗೆ ಮಣಿದು ರಾಜಕಾರಣಿಗೆ ಸಲಹೆ ನೀಡುತ್ತಾರೆ. ಹಣ ಮಾಡುವುದಕ್ಕಾಗಿ ಇಂತಹ ಯೋಜನೆ ರೂಪಿಸುತ್ತಾರೆ ಎಂದೂ ತಿಳಿಸಿದರು.

ಆಗುವ ಅನಾಹುತಗಳೇನು

* ಜೋಗದ ಕೆಳಗಿನ ಭಾಗಕ್ಕೆ ದೊಡ್ಡ ಮಟ್ಟದ ಅನಾಹುತವಾಗುತ್ತದೆ. ಭೂಮಿಯಲ್ಲಿ ಉಪ್ಪಿನ ಅಂಶ ಹೆಚ್ಚಾಗಿ, ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ನೀರಿಗಾಗಿ ಅರಣ್ಯಕ್ಕೆ ಕೊಡಲಿ ಏಟು ಹಾಕುವುದರಿಂದ ಪರಿಸರ ಸೂಕ್ಷ್ಮತೆ ನಾಶವಾಗುತ್ತದೆ.

* ಈ ಪ್ರದೇಶದಲ್ಲಿ ಮಳೆ ಪ್ರಮಾಣ ಕಡಿಮೆ ಆಗುತ್ತದೆ. 1905 ರಿಂದ 1965ರ ಅವಧಿಯಲ್ಲಿ ಈ ಪ್ರದೇಶ ಕೆಲವು ಭಾಗದಲ್ಲಿ 4000 ದಿಂದ 5000 ಮಿ.ಮೀ ಮಳೆ ಆಗುತ್ತದೆ. ಲಿಂಗನಮಕ್ಕಿ ಅಣೆಕಟ್ಟು ಆದ ಬಳಿಕ ಈ ಪ್ರದೇಶದಲ್ಲಿ ಕೆಲವು ಕಡೆ ಮಳೆ ಪ್ರಮಾಣ 1500 ರಿಂದ 1900 ಮಿ.ಮೀ ಕುಸಿದಿದೆ.

* ನದಿಯ ಹರಿವನ್ನು ತಿರುಗಿಸುವುದರಿಂದ ಭೂಮಿಯಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ ಕುಸಿಯುತ್ತದೆ. ಹಿಂದೆ ತೊರೆಗಳಲ್ಲಿ 12 ತಿಂಗಳ ಕಾಲ ನೀರು ಹರಿಯುತ್ತಿತ್ತು. ಈಗ ಅದು 4 ರಿಂದ 6 ತಿಂಗಳು ಮಾತ್ರ ಹರಿಯುತ್ತದೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !