ಹೆಬ್ಬಾಳಕರ–ಜಯಮಾಲಾ ವಾಕ್ಸಮರಕ್ಕೆ ತೆರೆ

7
‘ಅಕ್ಕ’ ಎಂದ ಮೇಲೆ ಎಲ್ಲವೂ ಮುಗಿಯಿತು: ಜಯಮಾಲಾ

ಹೆಬ್ಬಾಳಕರ–ಜಯಮಾಲಾ ವಾಕ್ಸಮರಕ್ಕೆ ತೆರೆ

Published:
Updated:

ಬೆಂಗಳೂರು: ಸಂಪುಟ ವಿಸ್ತರಣೆ ಬಳಿಕ ಸಚಿವೆ ಜಯಮಾಲಾ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ನಡುವೆ ಶುರುವಾಗಿದ್ದ ‘ಸೇವೆ’ ಸಮರಕ್ಕೆ ‘ಅಕ್ಕ’ ಪದ ಪ್ರಯೋಗದಿಂದ ತೆರೆಬಿದ್ದಿದೆ.

‘ಪಕ್ಷದ ವರಿಷ್ಠರು ಜಯಮಾಲಾ ಅವರ ಸೇವೆ ಪರಿಗಣಿಸಿ ಸಂಪುಟದಲ್ಲಿ ಸ್ಥಾನ ನೀಡಿರಬಹುದು’ ಎಂದು ಲಕ್ಷ್ಮಿ ಹೆಬ್ಬಾಳಕರ ಹೇಳಿಕೆ ನೀಡಿದ್ದರು.‌ ‘ಸೇವೆ’ ಪದಕ್ಕೆ ನಾನಾರ್ಥಗಳು ಹುಟ್ಟಿಕೊಂಡು ಸಾರ್ವಜನಿಕ ವಲಯದಲ್ಲಿ ಸ್ವಾರಸ್ಯಕರ ಚರ್ಚೆ ನಡೆಯುತ್ತಿತ್ತು. ಇದರ ಬೆನ್ನಲ್ಲೇ ಜಯಮಾಲಾ, ‘ಹೊಟ್ಟೆ ಕಿಚ್ಚಿಗೆ ಮದ್ದಿಲ್ಲ’ ಎಂದು ಲಕ್ಷ್ಮಿ ಅವರಿಗೆ ತಿರುಗೇಟು ನೀಡಿದ್ದರು.

ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಲಕ್ಷ್ಮಿ, ‘ಉತ್ತರ ಕರ್ನಾಟಕ ಭಾಗದಲ್ಲಿ ‘ಸೇವೆ’ ಎಂದರೆ ಪಕ್ಷದ ಕೆಲಸ. ನಾನು ಬೇರೆ ಅರ್ಥದಲ್ಲಿ ಹೇಳಿಲ್ಲ. ಜಯಮಾಲಾ ನನ್ನ ಅಕ್ಕ ಇದ್ದ ಹಾಗೆ’ ಎಂದು ಹೇಳುವ ಮೂಲಕ ವಾಕ್ಸಮರಕ್ಕೆ ತೆರೆ ಎಳೆದರು.

ಇದರ ಬೆನ್ನಲ್ಲೇ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಯಮಾಲಾ, ‘ಬಾಯ್ತುಂಬಾ ಅಕ್ಕ.. ಎಂದು, ಕ್ಷಮೆ ಕೋರಿದ ಮೇಲೂ ನಾನ್ಯಾಕೆ ಜಗಳ ಮುಂದುವರಿಸಲಿ. ಲಕ್ಷ್ಮಿಗಿಂತ ನಾನು ವಯಸ್ಸಿನಲ್ಲಿ ದೊಡ್ಡವಳು. ಅಕ್ಕನಂತೆಯೇ ನಡೆದುಕೊಳ್ಳುತ್ತೇನೆ’ ಎಂದರು.

‘ಒಂದು ಮಾತು ಅಪಾರ್ಥ ಎಂದಾಗ, ಅದನ್ನು ಬೆಳೆಸುವುದರಲ್ಲಿ ಅರ್ಥವಿಲ್ಲ. ಪಾಪ ಲಕ್ಷ್ಮಿ.. ಪಕ್ಷಕ್ಕಾಗಿ ತುಂಬ ದುಡಿದಿದ್ದಾರೆ. ಸಚಿವ ಸ್ಥಾನ ಕೇಳುವುದು ಅವರ ಧರ್ಮ. ನಾನು ಸಚಿವೆಯಾಗಿ, ಅವರ ಕಷ್ಟಗಳನ್ನು ಆಲಿಸುತ್ತೇನೆ. ಮುಂದಿನ ದಿನಗಳಲ್ಲಾದರೂ ಅವರಿಗೆ ಸಚಿವ ಸ್ಥಾನ ಸಿಗಲೆಂದ ಆಶಿಸುತ್ತೇನೆ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !