7
ತನ್ವೀರ್ ಸೇಠ್‌ಗೆ ಜಮೀರ್ ತಿರುಗೇಟು

ರಾಹುಲ್ ಗಾಂಧಿ ನನ್ನ ನೆಂಟನಲ್ಲ: ಜಮೀರ್

Published:
Updated:

ಬೆಂಗಳೂರು: ‘ಪಕ್ಷದ ಹೈಕಮಾಂಡ್ ಎಲ್ಲ ಶಾಸಕರ ಸಾಮರ್ಥ್ಯವನ್ನು ಅಳೆದು–ತೂಗಿಯೇ ಸಂಪುಟಕ್ಕೆ ಸೂಕ್ತರನ್ನು ಆಯ್ಕೆ ಮಾಡಿದೆ. ಅರ್ಹತೆ ಇಲ್ಲದಿದ್ದರೂ ಮಂತ್ರಿಗಿರಿ ಕೊಡುವುದಕ್ಕೆ ರಾಹುಲ್‌ ಗಾಂಧಿ ನನ್ನ ನೆಂಟನೇನಲ್ಲ...’

‘ಅರ್ಹತೆ ಇಲ್ಲದವರನ್ನು ಸಚಿವರನ್ನಾಗಿ ಮಾಡಲಾಗಿದೆ’ ಎಂದು ಹೇಳಿಕೆ ನೀಡಿದ್ದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ ಅವರಿಗೆ, ಹಜ್ ಮತ್ತು ವಕ್ಫ್ ಖಾತೆ ಸಚಿವ ಜಮೀರ್ ಅಹಮದ್ ಖಾನ್ ಈ ಮೇಲಿನಂತೆ ತಿರುಗೇಟು ನೀಡಿದರು.

ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಹೈಕಮಾಂಡ್ ಬೇಕಾಬಿಟ್ಟಿಯಾಗಿ ಖಾತೆಗಳನ್ನು ಹಂಚಿಲ್ಲ. ಸಂಪುಟ ರಚನೆಗೂ ಮೊದಲು ಹಲವು ತಂಡಗಳನ್ನು ರಚನೆ ಮಾಡಿ, ಯಾವ ಖಾತೆಗೆ ಯಾರು ಅರ್ಹರು ಎಂಬ ಬಗ್ಗೆ ಸಮೀಕ್ಷೆ ಮಾಡಿಸಿದೆ. ಆ ಸಮೀಕ್ಷೆಯ ಫಲಿತಾಂಶ ಆಧರಿಸಿ ಮಂತ್ರಿಗಿರಿ ಕೊಟ್ಟಿದೆ’ ಎಂದರು.

‘ಹೊರಗಿನಿಂದ ಬಂದ ಜಮೀರ್, ಚುನಾವಣೆಯಲ್ಲಿ ನನ್ನನ್ನೇ ಸೋಲಿಸಲು ಯತ್ನಿಸಿದ್ದ ಎಂದೂ ತನ್ವೀರ್ ಆರೋಪಿಸಿದ್ದಾರೆ. ನಾನು ಅಂಥ ಕುತಂತ್ರ ಬುದ್ಧಿ ಪ್ರದರ್ಶಿಸಿದ್ದರೆ, ಇಷ್ಟು ದಿನ ಏಕೆ ಸುಮ್ಮನಿದ್ದಿರಿ ತನ್ವೀರ್. ಅವತ್ತೇ ಹೈಕಮಾಂಡ್‌ಗೆ ದೂರು ಕೊಡಬಹುದಿತ್ತಲ್ಲ. ಚುನಾವಣೆ ಮುಗಿದು ಇಷ್ಟು ದಿನಗಳಾದ ನಂತರ, ಅದೂ ಸಚಿವ ಸ್ಥಾನ ಕೈತಪ್ಪಿದ ಬಳಿಕ ಏಕೆ ಈ ರೀತಿ ಹೇಳುತ್ತಿದ್ದೀರಿ’ ಎಂದು ಖಾರವಾಗಿ ಪ್ರಶ್ನಿಸಿದರು.

‘ತನ್ವೀರ್ ಕ್ಷೇತ್ರಕ್ಕೇ ಹೋಗಿ, ಅವರನ್ನು ಸೋಲಿಸುವಷ್ಟು ಶಕ್ತಿ ನನಗಿದೆಯೇ ಎಂಬ ಕುತೂಹಲ ಕಾಡುತ್ತಿದೆ. ಆದರೆ, ನನ್ನಲ್ಲಿ ಅಂತಹ ಸಾಮರ್ಥ್ಯವೂ ಇದೆ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ’ ಎಂದೂ ವ್ಯಂಗ್ಯವಾಡಿದರು.

ರೋಷನ್ ಮುನಿಸು: ಹಜ್ ಮತ್ತು ವಕ್ಫ್‌ ಖಾತೆಯನ್ನು ಜಮೀರ್‌ಗೆ ಕೊಟ್ಟಿರುವುದಕ್ಕೆ ಮುನಿಸಿಕೊಂಡಿರುವ ಕಾಂಗ್ರೆಸ್‌ನ ಹಿರಿಯ ಶಾಸಕ ರೋಷನ್ ಬೇಗ್, ಜಮೀರ್ ಅವರಿಂದ ಖಾತೆ ವಾಪಸ್ ಪಡೆದು ಬೇರೆ ಯಾರಿಗಾದರೂ ಕೊಡುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

‘ತಾನು ಮುಸ್ಲಿಂ ಸಮುದಾಯದ ನಾಯಕನೆಂದು ದೀರ್ಘಕಾಲದರೆಗೂ ಬಿಂಬಿಸಿಕೊಳ್ಳುವುದಕ್ಕೆ ಈ ಖಾತೆ ನೆರವಾಗುತ್ತದೆ. ಹೀಗಾಗಿ, ಮುಸ್ಲಿಂ ಮುಖಂಡರೆಲ್ಲ ಆ ಖಾತೆಗೆ ಪೈಪೋಟಿ ನಡೆಸುತ್ತಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ತನ್ವೀರ್ ಸೇಠ್‌ಗೆ ಹಜ್ ಖಾತೆ ನೀಡಲಾಗಿತ್ತು. ಆಗಲೂ ರೋಷನ್ ಬೇಗ್ ಅಸಮಾಧಾನ ವ್ಯಕ್ತಪಡಿಸಿ, ನಗರಾಭಿವೃದ್ಧಿಯ ಜತೆಗೆ ಹಜ್ ಖಾತೆಯನ್ನೂ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಈಗಲೂ ಆ ಖಾತೆ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ’ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಮೀರ್, ‘ರೋಷನ್ ಬೇಗ್‌ ಹಿರಿಯರು. ಸಚಿವ ಸ್ಥಾನ ಸಿಗತ್ತದೆಂದು ಆಸೆ ಇಟ್ಟುಕೊಂಡಿದ್ದರು. ಆಸೆ ಈಡೇರದಿದ್ದಾಗ ಸಹಜವಾಗಿಯೇ ಬೇಸರವಾಗಿದೆ. ಹೊಸಮುಖಗಳಿಗೇ ಅವಕಾಶ ಕೊಡಬೇಕು ಎಂದು ಹೈಕಮಾಂಡ್ ನಿರ್ಧರಿಸಿರುವ ಕಾರಣ, ಹಜ್ ಖಾತೆಯನ್ನು ನನ್ನಿಂದ ವಾಪಸ್ ಪಡೆದರೂ ರೋಷನ್ ಬೇಗ್ ಅವರಿಗೆ ಸಿಗುವುದಿಲ್ಲ. ಅದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಮಂತ್ರಿಪಟ್ಟ ಹಣೆಬರಹದಲ್ಲೇ ಬರೆದಿತ್ತು’

‘ಮಂತ್ರಿಗಿರಿ ಸಿಗಬೇಕೆಂದು ಹಣೆಬರಹದಲ್ಲಿ ಬರೆದಿತ್ತು. ಇಲ್ಲದಿದ್ದರೆ, ನನ್ನನ್ನು ಸಚಿವನನ್ನಾಗಿ ಮಾಡಲು ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಜಿ.ಪರಮೇಶ್ವರ ಸೇರಿದಂತೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಹಿಂದಿನ ದ್ವೇಷಗಳನ್ನು ಮರೆತು, ಕುಮಾರಸ್ವಾಮಿ ಅವರೊಟ್ಟಿಗೆ ಜನಪರ ಕೆಲಸಗಳನ್ನು ಮಾಡುತ್ತೇನೆ’ ಎಂದು ಜಮೀರ್ ಹೇಳಿದರು.

‘ನಿಮ್ಮ ಏರಿಯಾಕ್ಕೇ ಬರ್ತೀನಿ, ಟೈಂ ಫಿಕ್ಸ್ ಮಾಡಿ’

‘ತನ್ವೀರ್ ಸೇಠ್ ಏನು ಅಂತ ಎಲ್ಲರಿಗೂ ಗೊತ್ತು. ಈವರೆಗೂ ತನ್ನ ಕ್ಷೇತ್ರ ಬಿಟ್ಟು ಅಲ್ಲಾಡಿಲ್ಲ ಆ ಮನುಷ್ಯ’ ಎಂದು ಜಮೀರ್ ಕುಟುಕಿದರು.

‘ಜಮೀರ್‌ಗೆ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವ ಅರ್ಹತೆ ಇಲ್ಲ’ ಎಂದು ತನ್ವೀರ್ ಸೇಠ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರೇ ಒಂದು ಟೈಂ ಫಿಕ್ಸ್ ಮಾಡಲಿ. ಅವರ ಏರಿಯಾಕ್ಕೇ ಹೋಗ್ತಿನಿ. ಎನ್‌.ಆರ್. ಮೊಹಲ್ಲಾದಲ್ಲಿ ತನ್ವೀರ್ ಹಾಗೂ ನಾನು ಅಕ್ಕ–ಪಕ್ಕ ನಿಲ್ಲುತ್ತೇವೆ. ಯಾರ ಹಿಂದೆ ಎಷ್ಟು ಜನ ನಿಲ್ಲುತ್ತಾರೆ ನೋಡೋಣ. ಆಗ ಜನಬೆಂಬಲ ಯಾರ ಪರವಾಗಿದೆ ಗೊತ್ತಾಗುತ್ತದೆ’ ಎಂಬ ಸವಾಲು ಎಸೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !