ಪ್ರಾಥಮಿಕ ಶಾಲೆ ಶಿಕ್ಷಕರು, ಮುಖ್ಯಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ

7
ಪ್ರೌಢಶಾಲೆ ಮುಖ್ಯಶಿಕ್ಷಕರು ಅತಂತ್ರ

ಪ್ರಾಥಮಿಕ ಶಾಲೆ ಶಿಕ್ಷಕರು, ಮುಖ್ಯಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ

Published:
Updated:

ಬಳ್ಳಾರಿ: ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು, ಮುಖ್ಯಶಿಕ್ಷಕರು ಹಾಗೂ ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಿದ್ದು, ಪ್ರೌಢಶಾಲಾ ಮುಖ್ಯಶಿಕ್ಷಕರು ಮಾತ್ರ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

ಅವರ ವರ್ಗಾವಣೆ ಕುರಿತು ಇನ್ನೂ ನಿಯಮಾವಳಿ ಪ್ರಕಟವಾಗದೇ ಇರುವುದು ಅದಕ್ಕೆ ಕಾರಣ. ಹಿಂದಿನ ವರ್ಷವೂ ವರ್ಗಾವಣೆ ನಡೆದಿರಲಿಲ್ಲ ಎಂಬುದು ಅವರ ಸಂಕಟವನ್ನು ಇನ್ನಷ್ಟು ಹೆಚ್ಚಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮತ್ತು ಮುಖ್ಯಶಿಕ್ಷಕರ ವರ್ಗಾವಣೆ ನಿಯಮಾವಳಿಗಳನ್ನು ಏಕಕಾಲಕ್ಕೆ ಪ್ರಕಟಿಸಿ, ಅರ್ಜಿಗಳನ್ನು ಆಹ್ವಾನಿಸುತ್ತಿತ್ತು. ಆದರೆ ಈ ಬಾರಿ, ಪ್ರೌಢಶಾಲೆ ಮುಖ್ಯ
ಶಿಕ್ಷಕರನ್ನು ಕೈಬಿಟ್ಟು ನಿಯಮಾವಳಿ ಪ್ರಕಟಿಸಿದೆ.

‘ಈಗಿನ ವರ್ಗಾವಣೆ ಪ್ರಕ್ರಿಯೆಯ ಜೊತೆಗೇ ನಮ್ಮ ವರ್ಗಾವಣೆಯೂ ಆದರೆ ಸರಿ. ಮುಂದಿನ ದಿನಗಳಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ, ಗ್ರಾಮ ಪಂಚಾಯ್ತಿಗಳಿಗೆ ಹಾಗೂ ಲೋಕಸಭೆಗೆ ಚುನಾವಣೆ ಹೀಗೆ ಸಾಲು ಸಾಲಾಗಿ ಚುನಾವಣೆಗಳು ಬರಲಿದ್ದು, ವರ್ಗಾವಣೆ  ಸಾಧ್ಯತೆ ಕಡಿಮೆ’ ಎನ್ನುತ್ತಾರೆ, ಹೆಸರು ಬಹಿರಂಗಪಡಿಸಲು ಇಚ್ಛಿಸದ ಜಿಲ್ಲೆಯ ಕೆಲವು ಮುಖ್ಯಶಿಕ್ಷಕರು.

‘ಎರಡು ವರ್ಷದಿಂದ ವರ್ಗಾವಣೆಗಾಗಿ ಕಾಯುತ್ತಿದ್ದೇವೆ. ಬಿ ಗ್ರೂಪ್‌ಗೆ ಸೇರಿದ ನಮ್ಮ ವರ್ಗಾವಣೆಯ ಕುರಿತು ಇಲಾಖೆಯು ವಿಳಂಬ ಮತ್ತು ತಾರತಮ್ಯ ಧೋರಣೆ ಅನುಸರಿಸಿದೆ’ ಎಂದು ಅವರು ದೂರಿದರು.

ವಿಳಂಬ: ‘ಪ್ರತಿ ವರ್ಷ ಸಾರ್ವತ್ರಿಕ ವರ್ಗಾವಣೆ ನಿಯಮಾವಳಿಗಳೂ ಏಪ್ರಿಲ್‌ ತಿಂಗಳಲ್ಲಿ ಪ್ರಕಟವಾಗಿ, ಪ್ರಕ್ರಿಯೆಯು ಮೇ ತಿಂಗಳ ಅಂತ್ಯದ ಹೊತ್ತಿಗೆ ಮುಗಿಯುತ್ತಿತ್ತು. ಆದರೆ ಈ ಬಾರಿ ಸರ್ಕಾರ ರಚನೆ ವಿಳಂಬವಾದ ಕಾರಣ ನಾವು ಪರದಾಡಬೇಕಾಗಿದೆ’ ಎಂದು ಮುಖ್ಯಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.

‘ವರ್ಗಾವಣೆ ಬಯಸುವ ಶಿಕ್ಷಕರು, ಒಂದು ಶಾಲೆಯಲ್ಲಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿರಬೇಕು. ಆದರೆ, ನಾವು ನಾಲ್ಕು–ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ’ ಎಂದರು.

‘ಸ್ಕೂಲ್‌ ಫೀಸ್‌ ಕಟ್ಟಿಲ್ಲ...’

ವರ್ಗಾವಣೆ ನೀತಿ ಪ್ರಕಟವಾಗದೇ ಇರುವುದರಿಂದ ಇತರೆ ಇಲಾಖೆಗಳ ಅಧಿಕಾರಿ, ಸಿಬ್ಬಂದಿಯೂ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ.

‘ಈ ಬಾರಿ ನನಗೆ ವರ್ಗಾವಣೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ನನ್ನ ಮಕ್ಕಳ ಸ್ಕೂಲ್ ಫೀಸ್‌ ಕಟ್ಟಿಲ್ಲ. ವರ್ಗಾವಣೆ ಆಗಿಬಿಟ್ಟರೆ ಇಲ್ಲಿನ ಫೀಸ್‌ ಮತ್ತು ವರ್ಗಾವಣೆ ಆಗುವ ಊರಿನ ಶಾಲೆಯ ಫೀಸ್‌ ಎರಡನ್ನೂ ಭರಿಸಬೇಕಾಗುತ್ತದೆ’ ಎಂದು ಕಾರಾಗೃಹ ಇಲಾಖೆಯ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

‘ಸರ್ಕಾರ ಸಾಧ್ಯವಾದಷ್ಟು ಬೇಗ ವರ್ಗಾವಣೆ ನೀತಿ ಪ್ರಕಟಿಸಿ, ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಈಗಾಗಲೇ ಜೂನ್‌ ತಿಂಗಳ ಅರ್ಧಭಾಗ ಮುಗಿದಿದೆ. ಸಿಬ್ಬಂದಿಯೂ ನಮ್ಮಂತೆ ಗೊಂದಲದಲ್ಲಿದ್ದಾರೆ’ ಎಂದರು.

‘ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ಸಿದ್ಧತೆಗಳು ಆರಂಭವಾಗಿವೆ. ಪ್ರೌಢಶಾಲೆ ಮುಖ್ಯ ಶಿಕ್ಷಕರ ವರ್ಗಾವಣೆ ಕುರಿತು ಸರ್ಕಾರ ತೀರ್ಮಾನಿಸಬೇಕು.’

– ಓ.ಶ್ರೀಧರನ್‌, ಡಿಡಿಪಿಐ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !