ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವಾಭಿವ್ಯಕ್ತಿಗೆ ಬಣ್ಣಗಳ ಭಾಷೆ

Last Updated 29 ಜನವರಿ 2018, 19:30 IST
ಅಕ್ಷರ ಗಾತ್ರ

ಬಣ್ಣಗಳ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುವ ಮಾಧ್ಯಮ ವರ್ಣಚಿತ್ರ. ಕಲಾವಿದೆ ಲೊವಿನಾ ಅವರ ಪ್ರತಿ ಕಲಾಕೃತಿಗಳೂ ಇದಕ್ಕೆ ಉತ್ತಮ ನಿದರ್ಶನ. ನಮ್ಮೊಳಗಿನ ಭಯ, ಅಭದ್ರತೆ ಹಾಗೂ ಶಾಂತಿ, ಕ್ಷಮಾಗುಣ ಹಾಗೂ ಸಂತೋಷಗಳನ್ನು ವರ್ಣಚಿತ್ರಗಳ ಮೂಲಕ ಅವರು ಅಭಿವ್ಯಕ್ತಿಪಡಿಸುತ್ತಾರೆ. ಸಬ್‌ಲೈಮ್‌ ಗ್ಯಾಲರಿಯಲ್ಲಿ ನಡೆದಿರುವ ಅವರ ‘ಎಕೋಸ್ ಮತ್ತು ಸೈಲೆನ್ಸ್‌’ ವರ್ಣಚಿತ್ರಗಳ ಪ್ರದರ್ಶನದಲ್ಲಿ ಲೊವಿನಾ ಭಾವಾಭಿವ್ಯಕ್ತಿಯನ್ನು ಕಾಣಬಹುದು.

ಬಣ್ಣಗಳ ‌ಭಾಷೆಯ ಮುಖೇನ ಜೀವನದ ಅನೇಕ ಅಂಶಗಳನ್ನು ಸೂಕ್ಷ್ಮವಾಗಿ ಅವರು ಚಿತ್ರಿಸಿದ್ದಾರೆ. ಆಯ್ಕೆಯ ಮೂಲಕವೂ ಸಾಮರಸ್ಯದಿಂದ ಬದುಕುವ ಸೌಂದರ್ಯವನ್ನು ಅವರ ಕಲಾಕೃತಿಗಳು ಕಟ್ಟಿಕೊಡುತ್ತವೆ. ಬದುಕಿನ ಸೌಂದರ್ಯವನ್ನು, ಆಗಾಗ್ಗೆ ಎದುರಾಗುವ ಸಮಸ್ಯೆ, ಸವಾಲುಗಳು, ಕಾಡುವ ಅಭದ್ರತೆ, ಮತ್ತೆ ಧ್ಯಾನದ ಮೂಲಕ ಶಾಂತಿಯನ್ನು ಪಡೆಯುವ ಬಗೆಗೆ ಅವರು ಬಣ್ಣದ ಭಾಷೆ ನೀಡಿದ್ದಾರೆ.

ಅಕ್ರಿಲಿಕ್ ಮಾಧ್ಯಮದಲ್ಲಿ ಮೂಡಿರುವ ಅವರ ಕಲಾಕೃತಿಗಳಿಗೆ ಆಲ್ಕೋಹಾಲಿಕ್ ಇಂಕ್‌ ಬಳಸಿರುವುದು ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ದುಂಡಾಕಾರದ ಕ್ಯಾನ್ವಾಸ್‌ ಮೇಲೆ ಚಿತ್ತಾಕರ್ಷಕ ಬಣ್ಣಗಳಿಂದ ರಚಿಸಿರುವ ಕಲಾಕೃತಿಗಳು ಪ್ರತಿ ಕಲಾರಸಿಕನ ಗ್ರಹಿಕೆಗೂ ಭಿನ್ನ ನೋಟ ನೀಡುತ್ತವೆ. ಗೋಳದ ಮೇಲೆ ಆಕರ್ಷಕ ಬಣ್ಣಗಳಿಂದ ರಚಿಸಿರುವ ನೀರು, ಲೋಹ, ಹಸಿರು, ಮಣ್ಣು ಮತ್ತು ಅಗ್ನಿಯನ್ನು ವಿವರಿಸುವ ವರ್ಣಚಿತ್ರ ನಮ್ಮೊಳಗಿನ ಒಳ್ಳೆಯ ಹಾಗೂ ಕೆಟ್ಟ ಗುಣಗಳ ಅಭಿವ್ಯಕ್ತಿಯಂತಿದೆ. ತಿಳಿ ನೀಲಿ, ಗುಲಾಬಿ, ಕಪ್ಪು, ಬಿಳಿಯ ಬಣ್ಣದ ಚೌಕಾಕಾರದ ನೀರಿನ ನೀರವತೆಯನ್ನು ಕಲಕಿದಂತಿರುವ ಕಲಾಕೃತಿಗಳು ಮನದ ಗೊಂದಲದ ಕನ್ನಡಿಯಂತಿದ್ದರೆ, ಹಸಿರು ಹಾಗೂ ಕಪ್ಪು ಬಣ್ಣದ ವರ್ಣಚಿತ್ರ ಶಾಂತತೆಯ ಪ್ರತಿಬಿಂಬದಂತಿದೆ.

ಕೊಯಮುತ್ತೂರಿನ ಲೊಯನಾಗೆ ಬಣ್ಣಗಳ ಮೂಲಕ ಭಾವನೆ ಅಭಿವ್ಯಕ್ತಿಸುವ ಕಲೆ ಚಿಕ್ಕಂದಿನಲ್ಲಿಯೇ ಕರಗತವಾಗಿದೆ. ಆಸ್ಟ್ರೇಲಿಯಾ, ಹಾಂಕಾಂಗ್‌, ಪನಾಮ, ಚೀನಾ ದೇಶಗಳಿಗೆ ತೆರಳಿ ಈ ವಿಶಿಷ್ಟ ಕಲೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ್ದಾರೆ. ಮೂರು ವರ್ಷಗಳಿಂದ ಜಯನಗರ ನಿವಾಸಿ ಅವರು. ಮನೆಯಲ್ಲಿ, ಆಸಕ್ತರಿಗೆ ಕಲೆಯ ಕುರಿತ ತರಬೇತಿಯನ್ನೂ, ಮಕ್ಕಳಿಗಾಗಿ ಬೇಸಿಗೆ ಶಿಬಿರಗಳನ್ನೂ ನೀಡುತ್ತಾರೆ. ಕ್ಯಾನ್ವಸ್‌ನಿಂದ ಹಿಡಿದು ಗ್ಲಾಸ್, ಟೈಲ್ಸ್‌ಗಳ ಮೇಲೂ ಕಲಾಕೃತಿಗಳನ್ನು ಅರಳಿಸುತ್ತಾರೆ. ಅಕ್ರಿಲಿಕ್‌ನಿಂದ, ಅಲ್ಕೋಹಾಲ್‌ ಮಾಧ್ಯಮದವರೆಗೆ ಅವರ ಕಲಾಕೃತಿಗಳು ಮೂಡಿವೆ.

‘ಎಕೊಸ್‌ ಎಂದರೆ ಸಮಸ್ಯೆ, ಸೈಲೆನ್ಸ್‌ ಎಂದರೆ ಶಾಂತಿ, ಧ್ಯಾನ ಎಂದರ್ಥ. ಜೀವನದ ಸವಾಲು ಮತ್ತು ಶಾಂತಿಯನ್ನು ವರ್ಣಗಳ ಮೂಲಕ ಬಿಂಬಿಸುತ್ತೇನೆ. ರೆಸಿನ್‌ ಎಂಬ ರಾಸಾಯನಿಕ ಬಳಸಿ ಕಲಾಕೃತಿಗಳನ್ನು ಸಿದ್ಧಪಡಿಸುತ್ತೇನೆ. ಇದರಿಂದಾಗಿ ಕಲಾಕೃತಿಗಳಿಗೆ ವಿಶೇಷ ಅಂದ ದೊರೆಯುತ್ತದೆ. ಇದೊಂದು ಹೊಸರೀತಿಯ ಅಭಿವ್ಯಕ್ತಿ ಮಾಧ್ಯಮ. ನಮ್ಮ ದೇಶದಲ್ಲಿ ಈ ಮಾಧ್ಯಮವನ್ನು ಬಳಸುವ ಕಲಾವಿದರ ಸಂಖ್ಯೆ ವಿರಳ. ಹಾಗಾಗಿ ನಾನು ಆಸ್ಟ್ರೇಲಿಯಾ ಮತ್ತು ಚೀನಾದ ಕಲಾವಿದರೊಂದಿಗೆ ಹೆಚ್ಚು ಸಂಪರ್ಕದಲ್ಲಿದ್ದು, ಇದರ ಕುರಿತು ಹೆಚ್ಚು ಅಭ್ಯಾಸ ಮಾಡುತ್ತಿದ್ದೇನೆ’ ಎನ್ನುವುದು ಲೊವಿನಾ ಮಾತು.

‘ಪ್ರದರ್ಶನದಲ್ಲಿ ಕಲಾಕೃತಿಗಳ ಮಾರಾಟವೂ ನಡೆಯಲಿದೆ. ಕಲಾಕೃತಿಗಳ ಮಾರಾಟದಿಂದ ಬರುವ ಹಣದಲ್ಲಿ ಒಂದು ಭಾಗವನ್ನು ರೀಚಿಂಗ್ ಹ್ಯಾಂಡ್‌ ಚಾರಿಟಬಲ್ ಟ್ರಸ್ಟ್‌ಗೆ ನೀಡಲಾಗುತ್ತದೆ. 1996ರಲ್ಲಿ ಸ್ಥಾಪನೆಯಾದ ಈ ಸರ್ಕಾರೇತರ ಸಂಸ್ಥೆ ಕುಟುಂಬ ವಂಚಿತ ಮಹಿಳೆಯರು ಹಾಗೂ ಮಕ್ಕಳಿಗೆ ಆಶ್ರಯ ನೀಡಲು ಶ್ರಮಿಸುತ್ತದೆ. ಆ ಮೂಲಕ ಕಲೆಯ ಮೂಲಕ ಸಮಾಜದ ಒಳಿತಿಗೂ ಶ್ರಮಿಸುವ ಗುರಿ ಇದೆ’ ಎನ್ನುತ್ತಾರೆ ಲೊವಿನಾ.

ಸಂಪರ್ಕ ಸಂಖ್ಯೆ: 88840 38384

ಪ್ರದರ್ಶನದ ವಿವರ

ಸ್ಥಳ: ಸಬ್‌ಲೈಮ್ ಗ್ಯಾಲರಿ, ಯುಬಿಸಿಟಿ,

ಸಮಯ: ಬೆಳಿಗ್ಗೆ 11ರಿಂದ ಸಂಜೆ 7.30.

ಕೊನೆಯ ದಿನ: ಜನವರಿ 31

ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT