ಮತ್ತೆ ಬರಲಿದ್ದಾಳೆ ‘ಪೂ’ ಕರೀನಾ

ಶುಕ್ರವಾರ, ಏಪ್ರಿಲ್ 26, 2019
24 °C

ಮತ್ತೆ ಬರಲಿದ್ದಾಳೆ ‘ಪೂ’ ಕರೀನಾ

Published:
Updated:
Prajavani

ಮದುವೆ, ತಾಯ್ತನದ ಬಳಿಕ ಚಿತ್ರನಟಿಯರಿಗೆ ಬೇಡಿಕೆ ಇರುವುದಿಲ್ಲ ಎಂಬ ಮಾತನ್ನು ಹುಸಿಗೊಳಿಸಿದವರು ಕರೀನಾ ಕಪೂರ್‌ ಖಾನ್‌. ಸಣ್ಣ ಬ್ರೇಕ್‌ನ ನಂತರ ಚಿತ್ರರಂಗಕ್ಕೆ ಮರಳಿದ ಅವರು ಒಂದಾದ ಮೇಲೊಂದರಂತೆ ಚಿತ್ರಗಳಲ್ಲಿ ಅಭಿನಯಿಸುತ್ತಲೇ ಬಂದಿದ್ದಾರೆ. ಇದೀಗ ಸಿನಿಮಾಗಳ ಬ್ಯುಸಿ ಶೆಡ್ಯೂಲ್‌ ನಡುವೆ ಹೊಸ ಪ್ರಾಜೆಕ್ಟ್‌ಗೆ ಸಮ್ಮತಿ ನೀಡಿದ್ದಾರೆ.

ಜೀ ವಾಹಿನಿಯ ಹೆಸರಾಂತ ರಿಯಾಲಿಟಿ ಶೋ ‘ಡ್ಯಾನ್ಸ್‌ ಇಂಡಿಯಾ ಡ್ಯಾನ್ಸ್‌’ನಲ್ಲಿ ಈ ಜೀರೊ ಫಿಗರ್‌ ತೀರ್ಪುಗಾರರಾಗಲು ಒಪ್ಪಿಕೊಂಡ ಬೆನ್ನಲ್ಲೇ ತಮ್ಮದೇ ಹಳೆಯ ಸಿನಿಮಾದ ನೃತ್ಯವನ್ನು ಹೊಸ ರೂಪದಲ್ಲಿ ಪ್ರಸ್ತುತಪಡಿಸಲಿದ್ದಾರೆ ಎನ್ನಲಾಗಿದೆ.

ಎವರ್‌ಗ್ರೀನ್‌ ಚಿತ್ರವೆಂದೇ ಪರಿಗಣಿಸಲಾಗುವ ‘ಕಭಿ ಖುಷ್‌ ಕಭಿ ಗಮ್‌’ನ ‘ಪೂ’ ಪಾತ್ರದ ಮೂಲಕ ಕರೀನಾ ಮತ್ತೆ ಪ್ರೇಕ್ಷಕರಿಗೆ ಮತ್ತು ವೀಕ್ಷಕರಿಗೆ ರಂಜನೆ ನೀಡಲಿದ್ದಾರೆ.

ಬಹುತಾರಾಗಣದ ಅದ್ದೂರಿ ಮತ್ತು ಸೂಪರ್‌ ಹಿಟ್‌ ಚಿತ್ರ ‘ಕಭಿ ಖುಷ್‌ ಕಭಿ ಗಮ್‌’ನ ಹಾಡು ಮತ್ತು ನೃತ್ಯದ ಸನ್ನಿವೇಶಗಳು ಪ್ರೇಕ್ಷಕರಿಗೆ ಇಂದಿಗೂ ಕಣ್ಣಿಗೆ ಕಟ್ಟಿದಂತಿವೆ. ಅದರಲ್ಲೂ ಬಿಂದಾಸ್‌ ವ್ಯಕ್ತಿತ್ವದ ಪೂ ಪಾತ್ರ ಕರೀನಾಗೆ ದೊಡ್ಡ ಬ್ರೇಕ್‌ ಕೊಟ್ಟಿತ್ತು. ಇದೀಗ, 15 ವರ್ಷಗಳ ಬಳಿಕ ತಮ್ಮ ಹಳೆಯ ಪಾತ್ರಕ್ಕೆ ಮರುಜೀವ ನೀಡುವುದು ಕರೀನಾಗೂ ತುಂಬಾ ಖುಷಿ ಕೊಟ್ಟಿದೆಯಂತೆ. 

ಕರಣ್‌ ಜೋಹರ್‌ ಅವರ ಧರ್ಮ ಪ್ರೊಡಕ್ಷನ್ ಹೌಸ್‌ ‘ಪೂ’ ಪಾತ್ರವನ್ನು ಒಟಿಟಿ ವೇದಿಕೆಯ ಮೂಲಕ ತರುವ ಚಿಂತನೆ ನಡೆಸಿದೆ. ಇದಕ್ಕೆ ಕರೀನಾ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಡಿಜಿಟಲ್‌ ಮೀಡಿಯಾಕ್ಕಾಗಿ ಪೂ ಪಾತ್ರಕ್ಕೆ ಹೊಸ ಸ್ಪರ್ಶದೊಂದಿಗೆ ಪ್ರಸ್ತುತಪಡಿಸುವುದು ಅವರ ಚಿಂತನೆ. ವಿಶೇಷವಾಗಿ, ಈಗಿನ ವೀಕ್ಷಕರು ಬಯಸುವ ರೀತಿಯಲ್ಲಿ ಮಿರ್ಚಿ ಮಸಾಲಾ ಬೆರೆಸಲಾಗುವುದಂತೆ. ಅಂದ ಹಾಗೆ, ನೆಟ್‌ಫ್ಲಿಕ್ಸ್‌ನಲ್ಲಿ ‘ಕೆ3ಜಿ’ ಚಿತ್ರದ ವಿಶೇಷ ಶೋ ಪ್ರಸಾರವಾಗಲಿದೆಯಂತೆ.

ಚಿತ್ರೀಕರಣ ಮತ್ತು ಉದ್ಯಮದಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಮಗ ತೈಮೂರ್‌ಗೆ ಸಮಯ ಮೀಸಲಿಡುವಲ್ಲಿ ಕರೀನಾ ಎಂದೂ ಹಿಂದೆ ಬಿದ್ದವರಲ್ಲ. ಮಗನನ್ನು ಹಾಡಿ ಹೊಗಳುತ್ತಾ ಸೋಷಿಯಲ್‌ ಮೀಡಿಯಾವನ್ನು ಅವನ ಸುದ್ದಿ, ಚಿತ್ರ ಮತ್ತು ವಿಡಿಯೊಗಳಿಂದ ತುಂಬಿಸುವ ದಿನಚರಿಯಲ್ಲಿ ಕಿಂಚಿತ್ತೂ ಬದಲಾವಣೆ ಆಗಿಲ್ಲ.

‘ಅಕ್ಷಯ್‌ ಕುಮಾರ್‌ ಜೊತೆಗಿನ ‘ಗುಡ್‌ ನ್ಯೂಸ್‌’ನ ಚಿತ್ರೀಕರಣ ಮುಗಿಸಿದ ತಕ್ಷಣ ಅವರು ಪತಿ ಸೈಫ್‌ ಅಲಿ ಖಾನ್‌ ಮತ್ತು ಮಗನೊಂದಿಗೆ ಪಟೌಡಿಯಲ್ಲಿ ರಜಾ ದಿನಗಳನ್ನು ಕಳೆದುಬಂದಿದ್ದಾರೆ.

ರಜೆಯಿಂದ ಮರಳಿದ ತಕ್ಷಣ ಕರೀನಾ, ಕರಣ್‌ ಜೋಹರ್‌ ನಿರ್ಮಾಣದ ‘ತಖ್ತ್‌’ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಒಂದು ಮೂಲದ ಪ್ರಕಾರ ಇರ್ಫಾನ್‌ ಖಾನ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ಹಿಂದಿ ಮೀಡಿಯಂ’ನಲ್ಲೂ ಕರೀನಾ ನಾಯಕನಟಿಯಾಗಿ ನಟಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !