ಪಿಒಪಿ ಗಣೇಶ: ಬಿಬಿಎಂಪಿಗೆ ‘ಧರ್ಮ ಸಂಕಟ’

7
ಕೆಎಸ್‌ಪಿಸಿಬಿ ಅಧಿಸೂಚನೆ ಅನುಸಾರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ‍ಪಾಲಿಕೆ ಅಧಿಕಾರಿಗಳು

ಪಿಒಪಿ ಗಣೇಶ: ಬಿಬಿಎಂಪಿಗೆ ‘ಧರ್ಮ ಸಂಕಟ’

Published:
Updated:
Deccan Herald

ಬೆಂಗಳೂರು: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ (ಪಿಒಪಿ) ತಯಾರಿಸುವ ಗಣೇಶ ಮೂರ್ತಿಗಳನ್ನು ಜಲಮೂಲಗಳಲ್ಲಿ  ವಿಸರ್ಜಿಸುವುದನ್ನು ನಿಷೇಧಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) 2016ರ ಜುಲೈ 20ರಂದು ಅಧಿಸೂಚನೆ ಹೊರಡಿಸಿತ್ತು. ಆದರೆ, ಇದರ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಬಿಬಿಎಂಪಿ ‘ಧರ್ಮ ಸಂಕಟ’ ಎದುರಿಸುತ್ತಿದೆ.

ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುವುದಕ್ಕೇ ಅವಕಾಶ ನೀಡುವುದಿಲ್ಲ ಎಂದು 2017ರಲ್ಲೂ ಬಿಬಿಎಂಪಿ ಹೇಳಿತ್ತು. ಆದರೆ, ಕಳೆದ ವರ್ಷ ನಗರದ ಕೆರೆ ಹಾಗೂ ಕಲ್ಯಾಣಿಗಳಲ್ಲಿ, ಪಿಒಪಿಯಿಂದ ತಯಾರಿಸಿದ್ದ 16,353 ಮೂರ್ತಿಗಳನ್ನು ವಿಸರ್ಜಿಸಲಾಗಿತ್ತು. ಈ ವರ್ಷವೂ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. 

‘ನಗರದ ಯಾವ ಪ್ರದೇಶಗಳಲ್ಲಿ ಎಲ್ಲೆಲ್ಲಿ ಪಿಒಪಿಯಿಂದ ಮೂರ್ತಿಗಳನ್ನು ತಯಾರಿಸಲಾಗುತ್ತದೆ ಎಂಬುದು ನಮಗೆ ಗೊತ್ತು. ಆ ರೀತಿ ಮಾಡದಂತೆ ಮನವರಿಕೆ ಮಾಡುತ್ತೇವೆ. ಅಗತ್ಯಬಿದ್ದರೆ, ಅಂತಹ ಘಟಕಗಳನ್ನು ಮುಚ್ಚಿಸುತ್ತೇವೆ’ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಂಗಳ ಹಿಂದೆ ಹೇಳಿದ್ದರು.

ಆದರೆ, ಮೂರ್ತಿಗಳನ್ನು ತಯಾರಿಸುವ ಒಂದೆರಡು ಘಟಕಗಳಿಗೆ ಮಾತ್ರ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿದ್ದರು. ಇದುವರೆಗೆ ಎಲ್ಲೂ ಪಿಒಪಿ ಮೂರ್ತಿಗಳನ್ನು ವಶಕ್ಕೆ ಪಡೆದಿಲ್ಲ. ಈ ವರ್ಷವೂ ಹಬ್ಬ ಸಮೀಪಿಸುತ್ತಿದ್ದಂತೆ ಇಂತಹ ಮೂರ್ತಿಗಳ ಮಾರಾಟ ಎಗ್ಗಿಲ್ಲದೇ ಸಾಗಿದೆ. 

‘ನಗರದಲ್ಲಿ ಈ ಬಾರಿಯೂ ಪಿಒಪಿ ಮೂರ್ತಿಗಳು ಕಂಡು ಬರುತ್ತಿವೆ. ನಿಶ್ಚಿತವಾಗಿ ಇವುಗಳನ್ನು ನಗರದ ಕೆರೆಗಳಲ್ಲಿಯೇ ವಿಸರ್ಜನೆ ಮಾಡುತ್ತಾರೆ. ಪಿಒಪಿ ಹಾಗೂ ರಾಸಾಯನಿಕ ಬಣ್ಣಗಳು ಜಲಮೂಲಗಳನ್ನು ಸೇರುವುದು ಅಪಾಯಕಾರಿ. ಇಂತಹ ಮೂರ್ತಿಗಳನ್ನು ಸಂಪೂರ್ಣ ನಿಷೇಧಿಸಬೇಕು’ ಎಂದು ಒತ್ತಾಯಿಸುತ್ತಾರೆ ಪರಿಸರ ಕಾರ್ಯಕರ್ತ ವಿಜಯ್‌ ನಿಶಾಂತ್‌.

‘ಕೆಲವು ಕಡೆ ಪಿಒಪಿ ಮೂರ್ತಿಗಳನ್ನು ತಯಾರಿಸುವುದು ಕಂಡುಬಂದರೂ ಅದನ್ನು ಸ್ವಾಧೀನ ಪಡಿಸಿಕೊಳ್ಳುವುದು ಕಷ್ಟ. ಹೆಚ್ಚಾಗಿ ಬಯಲು ಪ್ರದೇಶಗಳಲ್ಲೇ ಟೆಂಟ್‌ ಹಾಕಿಕೊಂಡು ಮೂರ್ತಿಗಳನ್ನು ನಿರ್ಮಿಸುತ್ತಾರೆ. ಅದಕ್ಕೆ ಬೀಗ ಹಾಕುವುದಕ್ಕೂ ಸಾಧ್ಯವಾಗದು’ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದು ಧಾರ್ಮಿಕ ವಿಚಾರವಾದ್ದರಿಂದ ನಾವು ಎಚ್ಚರಿಕೆಯ ನಡೆ ಇಡಬೇಕಾಗುತ್ತದೆ. ನಾವು ಮೂರ್ತಿಗಳನ್ನು ವಶಪಡಿಸಿಕೊಂಡರೆ, ಅದನ್ನೇ ಮುಂದಿಟ್ಟುಕೊಂಡು ದೊಡ್ಡ ರಾದ್ದಾಂತ ಸೃಷ್ಟಿಸುತ್ತಾರೆ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದರು.

‘ಒಂದು ವೇಳೆ ಸಂಘ ಸಂಸ್ಥೆಗಳು ಪಿಒಪಿ ಮೂರ್ತಿಗಳನ್ನು ಪೂಜಿಸಿದರೂ ಅದನ್ನು ಕಲ್ಯಾಣಿಗಳಲ್ಲಿ ವಿಸರ್ಜಿಸಲು ಅವಕಾಶ ನೀಡುವುದಿಲ್ಲ. ಇಂತಹ ಮೂರ್ತಿಗಳನ್ನು ಒಮ್ಮೆ ನೀರಿನಲ್ಲಿ ಮುಳುಗಿಸಿ ಪ್ರತ್ಯೇಕವಾಗಿ ತೆಗೆದಿರಿಸಲಿದ್ದೇವೆ. ಅವುಗಳ ತಯಾರಿಕೆಗೆ ಬಳಸಿರುವ ವಸ್ತುಗಳನ್ನು ಮರುಬಳಕೆ ಮಾಡಲು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‌ದಂಡ, ಜೈಲು ಶಿಕ್ಷೆ: ಪಿಒಪಿಯಿಂದ ತಯಾರಿಸಿದ ಗಣಪನ ಮೂರ್ತಿಗಳನ್ನು ಜಲಮೂಲಗಳಲ್ಲಿ ವಿಸರ್ಜನೆ ಮಾಡಿದರೆ, 1974ರ ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ ಪ್ರಕಾರ ₹ 10 ಸಾವಿರ ದಂಡ ವಿಧಿಸುವುದಕ್ಕೆ ಅಥವಾ ಜೈಲು ಶಿಕ್ಷೆ ವಿಧಿಸುವುದಕ್ಕೂ ಅವಕಾಶ ಇದೆ.

‘24 ಗಂಟೆಯೊಳಗೆ ಅನುಮತಿ’

ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲು ಈ ವರ್ಷದಿಂದ 63 ಕಡೆ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳು ಬೆಳಿಗ್ಗೆ 9ರಿಂದ ರಾತ್ರಿ 11ರವರೆಗೆ ಕಾರ್ಯ ನಿರ್ವಹಿಸಲಿವೆ.

‘ಈ ಹಿಂದೆ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಪಾಲಿಕೆ, ಪೊಲೀಸ್‌ ಇಲಾಖೆ, ಅಗ್ನಿಶಾಮಕ ದಳ, ಬೆಸ್ಕಾಂಗಳಿಂದ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕಿತ್ತು. ಈ ಬಾರಿ ಸಾರ್ವಜನಿಕರು ಪ್ರತಿಯೊಂದು ಇಲಾಖೆ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಒಂದೇ ಕಡೆ ಅನುಮತಿ ಪಡೆದರೆ ಸಾಕು. ಪಾಲಿಕೆಯ ಉಪವಲಯ ಕಚೇರಿಗಳಲ್ಲಿ ಇದಕ್ಕೆ ವ್ಯವಸ್ಥೆ ಮಾಡಿದ್ದೇವೆ. ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಅನುಮತಿ ನೀಡಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

ಪಿಒಪಿ ಏಕೆ ಅಪಾಯಕಾರಿ?

‘ಪಿಒಪಿಯಲ್ಲಿ ಕ್ಯಾಲ್ಸಿಯಂ ಸಲ್ಫೇಟ್‌ ಅಂಶವಿರುತ್ತದೆ. ಅದಕ್ಕಿಂತಲೂ ಅಪಾಯಕಾರಿ ಈ ವಿಗ್ರಹ ತಯಾರಿಸಲು ಬಳಸುವ ರಾಸಾಯನಿಕ ಬಣ್ಣಗಳು. ಇವುಗಳಲ್ಲಿ ಪಾದರಸ, ಕ್ರೋಮಿಯಂ, ಸೀಸ, ಮೆಗ್ನೀಷಿಯಂನಂತಹ ಭಾರಲೋಹದ ಅಂಶಗಳಿರುತ್ತವೆ. ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿದಾಗ ಕ್ಯಾಲ್ಸಿಯಂ ಸಲ್ಫೇಟ್‌ ಹಾಗೂ ಭಾರಲೋಹಗಳು ನೀರಿನ ತಳವನ್ನು ಸೇರುತ್ತವೆ’ ಎಂದು ಬಿಬಿಎಂಪಿ ಅಧಿಕಾರಿ ತಿಳಿಸಿದರು. 

‘ಭಾರಲೋಹಗಳಿಂದ ಜಲಚರಗಳಿಗೆ ಸಮಸ್ಯೆ ಉಂಟಾಗುತ್ತದೆ. ಭಾರಲೋಹದ ಅಂಶಗಳು ಪರೋಕ್ಷವಾಗಿ ಮನುಷ್ಯನ ದೇಹವನ್ನು ಸೇರಿದರೂ ಅಪಾಯ. ಸೀಸವು ನರವ್ಯೂಹಕ್ಕೆ ಹಾನಿ ಉಂಟುಮಾಡಬಲ್ಲದು. ಕ್ರೋಮಿಯಂ ಪಿತ್ತಕೋಶ, ಮೂತ್ರಪಿಂಡಗಳ ಸಮಸ್ಯೆ ತಂದೊಡ್ಡುತ್ತದೆ. ಮೆಗ್ನೀಷಿಯಂ ದೇಹದ ಸಂವೇದನಾ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರಬಲ್ಲದು. ನಿಕ್ಕೆಲ್‌ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಲ್ಲದು. 
ಇಂತಹ ಮೂರ್ತಿಗಳನ್ನು ವಿಸರ್ಜನೆ ಮಾಡುವ ನೀರಿನಲ್ಲಿ ಕಬ್ಬಿಣದ ಅಂಶ 10 ಪಟ್ಟು ಹಾಗೂ ತಾಮ್ರದ ಅಂಶ 200 ಪಟ್ಟು ಹೆಚ್ಚಾಗುತ್ತದೆ’ ಎಂದು ಅವರು ವಿವರಿಸಿದರು.

‘ಪಿಒಪಿ ಮೂರ್ತಿಗಳು ನೀರಿನಲ್ಲಿ ಬೇಗ ಕರಗುವುದಿಲ್ಲ. ತಿಂಗಳುಗಟ್ಟಲೆ ಹಾಗೇ ಉಳಿಯುತ್ತವೆ. ಅವುಗಳ ತ್ಯಾಜ್ಯ ವಿಲೇವಾರಿಯೂ ಸವಾಲು’ ಎಂದು ಹೇಳಿದರು.

* * * *

ಅಂಕಿ ಅಂಶ

399 – ಗಣೇಶ ವಿಸರ್ಜನೆಗೆ ಲಭ್ಯವಿರುವ ಕೆರೆ ಮತ್ತು ಕಲ್ಯಾಣಿಗಳು

14 – ಸಂಚಾರಿ ಟ್ಯಾಂಕರ್‌ಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ವ್ಯವಸ್ಥೆಗೊಳಿಸಿದೆ

22 – ಪಾಲಿಕೆ ಗುರುತಿಸಿರುವ ಕಲ್ಯಾಣಿಗಳು

345 – ಬಿಬಿಎಂಪಿ ವ್ಯವಸ್ಥೆ ಮಾಡಿರುವ ತಾತ್ಕಾಲಿಕ ಬಾವಿ ಹಾಗೂ ಸಂಚಾರಿ ಟ್ಯಾಂಕರ್‌ಗಳು

* * * *

ಮೂರ್ತಿ ವಿಸರ್ಜನೆ– ಯಾವ ಕೆರೆ?

ವಲಯ; ಕೆರೆ

ದಕ್ಷಿಣ; ಯಡಿಯೂರು

ಮಹದೇವಪುರ; ಕೈಕೊಂಡ್ರನಹಳ್ಳಿ,  ಬೆಳ್ಳಂದೂರು, ದೊಡ್ಡನೆಕ್ಕುಂದಿ, ಕಸವನಹಳ್ಳಿ, ದೇವರಬೀಸನಹಳ್ಳಿ, ಮುನ್ನೇನಕೊಳಾಲ್‌

ಬೊಮ್ಮನಹಳ್ಳಿ; ದೊರೆಕೆರೆ, ಸಿಂಗಸಂದ್ರ

ರಾಜರಾಜೇಶ್ವರಿ ನಗರ; ಹೇರೋಹಳ್ಳಿ, ಮಲ್ಲತ್ತಹಳ್ಳಿ, ಉಲ್ಲಾಳು,

ದಾಸರಹಳ್ಳಿ; ದಾಸರಹಳ್ಳಿ, ಚೊಕ್ಕಸಂದ್ರ

ಪಶ್ಚಿಮ: ಸ್ಯಾಂಕಿ ಕೆರೆ

ಪೂರ್ವ: ಹಲಸೂರು

ಯಲಹಂಕ: ಕೋಗಿಲು, ಜಕ್ಕೂರು, ರಾಚೇನಹಳ್ಳಿ, ಪಾಲನಹಳ್ಳಿ, ಯಲಹಂಕ, ಅಟ್ಟೂರು, ಅಲ್ಲಾಳಸಂದ್ರ, ದೊಡ್ಡಬೊಮ್ಮಸಂದ್ರ

Tags: 

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !