‘ಒತ್ತಡವೇ ಆಗಬಹುದು ಪಾಸಿಟಿವ್‌ ಎನರ್ಜಿ’

7

‘ಒತ್ತಡವೇ ಆಗಬಹುದು ಪಾಸಿಟಿವ್‌ ಎನರ್ಜಿ’

Published:
Updated:
Puttur Narashima Naik

ಕೆಲವು ಸವಾಲುಗಳು, ಇಲ್ಲವೇ ಕೆಲಸವನ್ನು ನಾವು ಅಜಾಗರೂಕತೆಯಿಂದ ಎದುರಿಸಿದರೆ ಒತ್ತಡ ಉಂಟಾಗುತ್ತದೆ. ಉದಾಹರಣೆಗೆ ನಾನು ಒಂದು ಕಡೆಗೆ ಕಾರ್ಯಕ್ರಮ ನೀಡಲು ಹೋಗಬೇಕು. ಆ ಜಾಗಕ್ಕೆ ತಲುಪಬೇಕಾದರೆ ಸಾಮಾನ್ಯ ಎಷ್ಟು ಸಮಯ ಬೇಕು, ಟ್ರಾಫಿಕ್‌ ಇಲ್ಲದಿದ್ದರೆ ಯಾವ ಸಮಯಕ್ಕೆ ತಲುಪಬಹುದು, ಎಂಬುದನ್ನು ತಿಳಿದುಕೊಂಡು ಹೊರಟರೆ ಒತ್ತಡದಿಂದ ಹೊರಬರಲು ಸಾಧ್ಯ. ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಮನಸ್ಸಿಗೆ ತೋಚಿದ ಸಮಯಕ್ಕೆ ಹೋದರೆ ಆಗ ಒತ್ತಡ ಆರಂಭವಾಗುತ್ತದೆ. ರೈಲು ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗಲಿಲ್ಲ; ಎಲ್ಲಾದರೂ ರೈಲು ತಪ್ಪಿಹೋದರೆ ಏನು ಮಾಡುವುದು? - ಎಂದೆಲ್ಲ ಮನಸ್ಸಿನ ಮೂಲೆಯಲ್ಲಿ ಕೊರೆಯಲು ಆರಂಭಿಸಿದಾಗ ಒತ್ತಡ ಸಹಜವಾಗೇ ಸೃಷ್ಟಿಯಾಗುತ್ತದೆ.

ಜೀವನದಲ್ಲಿ ಕೆಲವೊಂದು ಶಿಸ್ತನ್ನು ಅಳವಡಿಸಿಕೊಂಡಾಗ ನಾವಾಗಿಯೇ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಒತ್ತಡ ಇಲ್ಲದ ಜೀವನವೇ ಇಲ್ಲ; ಇದು ಜೀವನದ ಒಂದು ಭಾಗ ಎಂದು ತಿಳಿದುಕೊಳ್ಳಬೇಕು. ಒಂದು ಸಾಹಸದೃಶ್ಯದಲ್ಲಿ ಎತ್ತರದಿಂದ ಹಾರುವ ವ್ಯಕ್ತಿಗೆ ಯಾವುದೇ ಭಯ, ಒತ್ತಡ ಇರುವುದಿಲ್ಲ. ಆದರೆ ಅದನ್ನು ನೋಡುತ್ತಿರುವ ನಾವು ಆಂತಕಕ್ಕೆ ಒಳಗಾಗುತ್ತೇವೆ. ಹಾರುವವನು ಸಾಕಷ್ಟು ಸಿದ್ಧತೆ ಮಾಡಿಕೊಂಡಿರುತ್ತಾನೆ; ಅದು ಅವನಿಗೆ ಲೀಲಾಜಾಲವಾದುದು. ಆದರೆ ಆತ ನೋಡುವವರಲ್ಲಿ ಒತ್ತಡವನ್ನು ಸೃಷ್ಟಿಸುತ್ತಾನೆ. ಹಾರುವವನಿಗೂ ಸರಿಯಾದ ಸಿದ್ಧತೆ ಇಲ್ಲದೆ ಇದ್ದರೆ ಆತನಿಗೂ ಒತ್ತಡವಾಗುತ್ತದೆ. ಮುಂದೆ ಎದುರಿಸಬೇಕಾದ ಪರಿಣಾಮವನ್ನು ಕಲ್ಪಿಸಿಕೊಂಡು ಭಯಬೀಳುವುದೇ ಒತ್ತಡ. ನನ್ನ ಮುಂದಿನ ಸವಾಲು ಏನು? ಅದನ್ನು ಎದುರಿಸುವುದು ಹೇಗೆ? – ಎಂಬುದೆಲ್ಲ ಮೊದಲೇ ತಿಳಿದಿದ್ದರೆ ಒತ್ತಡ ನಮ್ಮ ಬಳಿ ಸುಳಿಯುವುದಿಲ್ಲ.  

ಗಾಯನಕ್ಷೇತ್ರದಲ್ಲೂ ಒತ್ತಡ ಇಲ್ಲವೆಂದಲ್ಲ; ಆದರೆ ಅದು ಯಾವುದೋ ಕಾರ್ಪೊರೇಟ್‌ ಕಂಪನಿಗಳ ರೀತಿಯಲ್ಲಿಲ್ಲ. ಕಾರ್ಪೊರೇಟ್ ಕಂಪನಿಗಳಲ್ಲಿ ಇಂತಿಷ್ಟು ಕೆಲಸ ಮಾಡಲೇಬೇಕು, ಪ್ರೋಗ್ರೆಸ್‌ ತೋರಿಸಬೇಕು, ಇಲ್ಲದಿದ್ದರೆ ಪ್ರಮೋಷನ್ ಇಲ್ಲ, ಸಂಬಳಕ್ಕೆ ಸಂಚಕಾರ ಸಹ ಬರಬಹುದು, ಇಲ್ಲವೇ ಹಿಂಬಡ್ತಿ ಆಗಬಹುದು. ಇವೆಲ್ಲ ಉದ್ಯೋಗಿಯಲ್ಲಿ ಒತ್ತಡವನ್ನು ಸೃಷ್ಟಿ ಮಾಡುತ್ತವೆ. ಕೆಲಸದಲ್ಲಿನ ಒತ್ತಡವನ್ನೇ ಸವಾಲನ್ನಾಗಿ ಸ್ವೀಕರಿಸಿಕೊಂಡು ಅದನ್ನೇ ಮೆಟ್ಟಿಲಾಗಿಸಿಕೊಂಡು ಮೇಲೆ ಬರುವವರಿದ್ದಾರೆ. ಕಂಪನಿ ತನಗೆ ನೀಡಿದ ಕೆಲಸದ ‘ಟಾರ್ಗೆಟ್’ಅನ್ನೇ ಬಳಸಿಕೊಂಡು ಗುರಿಮುಟ್ಟಿದರೆ ಹೆಸರು ಗಳಿಸಬಹುದು. ಇಲ್ಲದಿದ್ದರೆ ಇದೇ ಉಲ್ಟಾ ಆಗಿಬಿಡುತ್ತದೆ. ಇವೆಲ್ಲವೂ ಒತ್ತಡವನ್ನು ನಾವು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದನ್ನು ತಿಳಿಸಿಕೊಡುತ್ತದೆ. ಹಾಗಾಗಿ ಸಿಗುವ ಅವಕಾಶಗಳನ್ನೇ ಏಣಿಯಾಗಿ ಬಳಸಿಕೊಂಡು ಮುನ್ನುಗ್ಗಿದರೆ ಸಾಧನೆ ಮಾಡಬಹುದು; ಹೆಸರನ್ನು ಗಳಿಸಹುದು. ಎಲ್ಲಾ ಕಾರ್ಯಕ್ಷೇತ್ರದಲ್ಲೂ ನಮಗೆ ಎದುರಾಗುವ ಸವಾಲುಗಳೇ ಜೀವನದ ಪಾಠವನ್ನು ಕಲಿಸುತ್ತವೆ. ನಮ್ಮ ಕೆಲಸದಲ್ಲಿ ಶಿಸ್ತನ್ನು ರೂಢಿಸಿಕೊಂಡರೆ ಆಗ ಒತ್ತಡ ನಮ್ಮ ಹತ್ತಿರ ಸುಳಿಯದು.

ಗಾಯನಕ್ಷೇತ್ರದಲ್ಲಿ ಗಳಿಸಿದ ಹೆಸರನ್ನು ಸದಾ ಉಳಿಸಿಕೊಂಡಿರಲೇಬೇಕಾಗುತ್ತದೆ; ಆಗ ಮಾತ್ರ ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯ. ಎಲ್ಲಿಯಾದರೂ ನನ್ನ ಪ್ರದರ್ಶನ ಕಳಪೆ ಆಗಿದ್ದರೆ, ಅದು ನನ್ನ ಭವಿಷ್ಯದ ಅವಕಾಶಗಳಿಗೆ ಅಡ್ಡಿಯುಂಟುಮಾಡುತ್ತದೆ. ನನ್ನ ಹಾಡು ಸಂತೋಷವನ್ನು ಕೊಡದಷ್ಟು ದುರ್ಬಲವಾದರೆ ಆಗ ಜನರು ನಮ್ಮನ್ನು ಮನೆಗೆ ಕಳುಹಿಸಿಬಿಡುತ್ತಾರೆ! ಸದಾ ಹದವನ್ನು ಕಾಯ್ದುಕೊಂಡು ಹಾಡುತ್ತಲೇ ಇರಬೇಕು ಎಂಬ ಒತ್ತಡ ನನ್ನ ಮೇಲಿರುತ್ತದೆ. ಆದರೆ ಅದನ್ನು ವಸ್ತುತಃ ಒತ್ತಡ ಎಂದು ನಾನು ಅಂದುಕೊಳ್ಳುವುದಿಲ್ಲ. ಪ್ರತಿದಿನವೂ ಈ ದಿನದ ಕಾರ್ಯಕ್ರಮ ಯಶಸ್ವಿಯಾಗಿದೆ, ನನಗೊಂದು ಹೆಸರು ತಂದುಕೊಟ್ಟಿದೆ ಎಂದುಕೊಂಡರೆ ಮಾತ್ರವೇ ಆತಂಕ ಕಡಿಮೆಯಾಗುತ್ತದೆ. ಇಂದು ಗೆದ್ದಿದ್ದೇನೆ, ನಾಳೆಯೂ ಗೆಲ್ಲಬೇಕು; ಜೊತೆಗೆ ಭವಿಷ್ಯದಲ್ಲಿಯೂ ಗೆಲ್ಲಲೇಬೇಕು. ನಾನು ಯಾವಾಗ ವಿಫಲವಾಗುವಾಗುತ್ತಹೋಗುತ್ತೇನೊ ಅಲ್ಲಿಂದ ಒತ್ತಡ ಶುರುವಾಗುತ್ತದೇ ಎಂದೇ ಅರ್ಥ. ಒತ್ತಡವನ್ನು ‘ಪಾಸಿಟಿವ್‌ ಎನರ್ಜಿ’ಯಾಗಿ ವೇದಿಕೆಯಲ್ಲಿ ಬಳಸಿಕೊಂಡರೆ, ಅದನ್ನೇ ಆತ್ಮವಿಶ್ವಾಸವಾಗಿ ಪರಿವರ್ತಿಸಿಕೊಳ್ಳುತ್ತಾ ಹೋದರೆ ವ್ಯಕ್ತಿ ಗೆಲ್ಲುತ್ತಾ ಹೋಗುತ್ತಾನೆ. ಆತಂಕವನ್ನು ಮೆಟ್ಟಿನಿಲ್ಲುತ್ತಹೋದರೆ ಮಾತ್ರ ಸಾಧನೆ ಸಾಧ್ಯ.

ಪ್ರತಿಯೊಬ್ಬರೂ ಜೀವನದಲ್ಲಿ ಹೆಸರು ಮಾಡುತ್ತಾ, ಆರ್ಥಿಕವಾಗಿ ಸದೃಢವಾದಾಗ ಒತ್ತಡವೂ ನಿವಾರಣೆಯಾಗುತ್ತದೆ. ಆದರೆ ಹೆಚ್ಚಿನ ಆತ್ಮವಿಶ್ವಾಸವೂ ಒಳ್ಳೆಯದಲ್ಲ. ಅದು ಎಲ್ಲರನ್ನೂ ಮತ್ತೊಂದು ರೀತಿಯಲ್ಲಿ ಒತ್ತಡಕ್ಕೆ ದೂಡುತ್ತದೆ. ಒಂದರಿಂದ ತಪ್ಪಿಸಿಕೊಂಡು ಮತ್ತೊಂದರಲ್ಲಿ ವಿಫಲರಾಗಬಾರದು.

ನನ್ನ ತಾಯಿ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಿದ್ದಾಗ ತುಂಬಾ ಒತ್ತಡವನ್ನು ಅನುಭವಿಸಿದ್ದೆ. ‘ಅಮ್ಮನನ್ನು ಮನೆಗೆ ಕರೆದುಕೊಂಡು ಹೋಗಿ ಏನು ಮಾಡಲು ಸಾಧ್ಯವಿಲ್ಲ’ ಎಂದು ವೈದ್ಯರು ಸಲಹೆ ನೀಡಿದ್ದರು. ಆಕೆಯನ್ನು ಮನೆಗೆ ಕರೆದುಕೊಂಡು ಬಂದು, ನೋಡಿಕೊಳ್ಳಲು ಒಬ್ಬರು ದಾದಿಯನ್ನು ನೇಮಿಸಿಕೊಂಡಿದ್ದೆವು. ಆಗ ನಾನು ಕಾರ್ಯಕ್ರಮ ನೀಡಲು ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿತ್ತು. ಮನೆಯಲ್ಲಿ ಕೋಮಾಸ್ಥಿತಿಯಲ್ಲಿರುವ ಅಮ್ಮ. ನಾನಂತೂ ಕಾರ್ಯಕ್ರಮಗಳನ್ನು ಬಿಡುವ ಹಾಗಿರಲಿಲ್ಲ. ಆಗ ಈಗಿನಂತೆ ಮೊಬೈಲ್ ಸಹ ಇರಲಿಲ್ಲ. ಬೆಂಗಳೂರಿನಿಂದ ಹಾಸನ, ಮಂಗಳೂರು, ಸಕಲೇಶಪುರ ಅಲ್ಲಿಂದ ಹುಬ್ಬಳ್ಳಿಗೆ ಹೋಗಿ ಕಾರ್ಯಕ್ರಮ ಕೊಡುವುದೆಂದು ನಿಗದಿಯಾಗಿತ್ತು. ನಾಲ್ಕು ದಿನಗಳ ಕಾಲ ಪ್ರವಾಸ ಮಾಡಿ ಕಾರ್ಯಕ್ರಮ ನೀಡಬೇಕಿತ್ತು. ನಾನು ಪ್ರಯಾಣದ ನಡುವೆ ಪ್ರತಿ ಒಂದು ಗಂಟೆಗೆ ಮನೆಗೆ ಕರೆ ಮಾಡಿ ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೆ. ಎಸ್‌ಟಿಡಿ ಬೂತ್‌ಗಳಿಗೆ ಹೋಗಿ ಕರೆ ಮಾಡುತ್ತಿದ್ದೆ. ನಾನು ಮನೆಗೆ ಕರೆ ಮಾಡಬಹುದಿತ್ತೇ ಹೊರತು ಅವರು ನನ್ನನ್ನು ಸಂಪರ್ಕ ಮಾಡುವಂತಿರಲಿಲ್ಲ. ಕರೆ ಮಾಡಿ ಮನೆಯವರ ಒತ್ತಡವನ್ನು ಕಡಿಮೆ ಮಾಡುತ್ತಿದ್ದೆ. ಇವೆಲ್ಲ ಸಣ್ಣ ಸಣ್ಣ ವಿಚಾರಗಳಾಗಿ ಕಂಡರೂ ಮನೆಯವರ ಒತ್ತಡ ನನ್ನ ಮೇಲಿಂದ ನನ್ನ ಒತ್ತಡ ಮನೆಯವರ ಮೇಲಿಂದ ಇಳಿಸುವ ಯತ್ನ.

ನಾನು ಕಾರ್ಯಕ್ರಮದ ಸಲುವಾಗಿ ಪ್ರವಾಸ ಮಾಡುವಾಗ ಅಪಘಾತವಾಗಿದ್ದ ವೇಳೆ ತುಂಬಾ ಒತ್ತಡಕ್ಕೆ ಒಳಗಾಗಿದ್ದೆ. ಒಂದು ಬಾರಿ ನಮ್ಮ ಸಹಕಲಾವಿದರೊಬ್ಬರು ತೀರಿಹೋಗಿದ್ದರು. ಇವೆಲ್ಲವೂ ನನ್ನಲ್ಲಿ ಒತ್ತಡದ ಭಾವವನ್ನು ಹುಟ್ಟುಹಾಕಿದ ಘಟನೆಗಳು.

ಒಂದು ರೀತಿಯ ಮಾನಸಿಕ ವೇದನೆಯೂ ಒತ್ತಡವೇ. ನಮ್ಮಿಂದ ಆಗಬಹುದಾದ ಕೆಲಸಗಳಾದರೆ ತಪ್ಪಿಸಬಹುದು. ಆದರೆ ಅಪಘಾತವನ್ನು ಯಾರೂ ತಪ್ಪಿಸಲಾಗದು. ಮನೆಯಿಂದ ಮಕ್ಕಳು ಹೊರಗೆ ಹೋದಾಗಲೂ ಪೋಷಕರಿಗೆ ಮಾಹಿತಿ ನೀಡಿದರೆ ಅವರ ಒತ್ತಡ ಕಡಿಮೆಯಾಗುತ್ತದೆ. ಒಂದು ಸಣ್ಣ ಸಂದೇಶ ಎಷ್ಟೋ ಜನರನ್ನು ಸಮಾಧಾನಗೊಳಿಸಬಲ್ಲದು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !