ಎಫ್‌ಐಆರ್‌ ಬದಲು ‘ಪಿಎಆರ್‌’: ಡಿಜಿಪಿ ಆದೇಶ

7

ಎಫ್‌ಐಆರ್‌ ಬದಲು ‘ಪಿಎಆರ್‌’: ಡಿಜಿಪಿ ಆದೇಶ

Published:
Updated:

ಬೆಂಗಳೂರು: ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆಯುವವರ ವಿರುದ್ಧ ಎಫ್‌ಐಆರ್‌ (ಪ್ರಥಮ ವರ್ತಮಾನ ವರದಿ) ಬದಲಿಗೆ ‘ಮುಂಜಾಗ್ರತಾ ಕ್ರಮದ ವರದಿ (ಪಿಎಆರ್‌)’ ದಾಖಲಿಸಿಕೊಳ್ಳುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ (ಡಿಜಿ– ಐಜಿಪಿ) ನೀಲಮಣಿ ರಾಜು, ಆದೇಶ ಹೊರಡಿಸಿದ್ದಾರೆ.

‘ಅಪರಾಧ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳುವ ಅಧಿಕಾರ ಪೊಲೀಸರಿಗೆ ಇಲ್ಲ. ಆದರೂ ಕೆಲವು ಪೊಲೀಸರು, ಎಫ್‌ಐಆರ್‌ ದಾಖಲು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಆದೇಶ ಪಾಲಿಸದಿದ್ದರೆ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಸಿಆರ್‌ಪಿಸಿ (ಅಪರಾಧ ದಂಡ ಪ್ರಕ್ರಿಯಾ ಸಂಹಿತೆ) ಕಲಂ 107 ಹಾಗೂ 154ರ ಅಡಿ ಬಂಧಿಸುವ ಅಪರಾಧ ಹಿನ್ನೆಲೆಯುಳ್ಳವರ ವಿರುದ್ಧ ಎಫ್‌ಐಆರ್ ದಾಖಲಿಸುವುದು ಪೊಲೀಸರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ’ ಎಂಬ ಹೈಕೋರ್ಟ್‌ ಆದೇಶವನ್ನು ಅವರು ಉಲ್ಲೇಖಿಸಿದ್ದಾರೆ.

ಪ್ರತ್ಯೇಕ ಪುಸ್ತಕ ಕಡ್ಡಾಯ: ‘ಪ್ರಕರಣಗಳ ದಾಖಲಾತಿಗಾಗಿ ಪ್ರತಿ ಠಾಣೆಯಲ್ಲೂ ‘ಮುಂಜಾಗ್ರತಾ ಕ್ರಮಗಳ ವರದಿ’ ಪುಸ್ತಕ ಇಡುವುದು ಕಡ್ಡಾಯ. ಕಾಲ ಕಾಲಕ್ಕೆ ಠಾಣಾಧಿಕಾರಿ, ಆ ಪುಸ್ತಕ ಪರಿಶೀಲಿಸಬೇಕು’ ಎಂದು ಡಿಜಿಪಿ ತಿಳಿಸಿದ್ದಾರೆ.

‘ವಶಕ್ಕೆ ಪಡೆದ ವ್ಯಕ್ತಿಯ, ಯಾವ ಕೃತ್ಯದಿಂದ ಶಾಂತಿಗೆ ಭಂಗವಾಗುವ ಸಾಧ್ಯತೆ ಇದೆ ಎಂಬ ಬಗ್ಗೆ ಸ್ಥಳೀಯರಿಂದ ಹೇಳಿಕೆ ಪಡೆಯಬೇಕು. ವಶಕ್ಕೆ ಪಡೆದ ವ್ಯಕ್ತಿಗಳ ಸ್ಥಿರ ಹಾಗೂ ಚರಾಸ್ತಿ ಮೌಲ್ಯವೆಷ್ಟು ಎಂಬುದನ್ನು ನಮೂದಿಸಬೇಕು. ಆ ಮಾಹಿತಿ ಆಧರಿಸಿ ದಂಡಾಧಿಕಾರಿಗಳು, ಆತನಿಂದ ಮುಚ್ಚಳಿಕೆ ಪಡೆಯುತ್ತಾರೆ’ ಎಂದು ಡಿಜಿಪಿ ವಿವರಿಸಿದ್ದಾರೆ.

ಹಿರಿಯ ಅಧಿಕಾರಿಯೊಬ್ಬರು, ‘ಮುಂಜಾಗ್ರತಾ ಕ್ರಮದ ವರದಿ ಬಗ್ಗೆ ಗದಗ ಜಿಲ್ಲಾ ಎಸ್ಪಿ ಕಚೇರಿಯ ಕಾನೂನು ಅಧಿಕಾರಿ ಮಹೇಶ್ ವಿ. ವೈದ್ಯ, ಡಿಜಿಗೆ ಪತ್ರ ಬರೆದಿದ್ದರು. ಅದರಿಂದ ಎಚ್ಚೆತ್ತ ಡಿಜಿಪಿ ಈ ಆದೇಶ ಮಾಡಿದ್ದಾರೆ. ಇದರಿಂದ ಎಫ್ಐಆರ್‌ ದಾಖಲಾತಿ ಪ್ರಮಾಣ ಶೇ 15ರಷ್ಟು ಕಡಿಮೆಯಾಗಲಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !