ಕನಸುಗಳನ್ನು ಬಿಚ್ಚಿಟ್ಟ ಪಕ್ಷೇತರ ಅಭ್ಯರ್ಥಿಗಳು

ಬುಧವಾರ, ಏಪ್ರಿಲ್ 24, 2019
28 °C

ಕನಸುಗಳನ್ನು ಬಿಚ್ಚಿಟ್ಟ ಪಕ್ಷೇತರ ಅಭ್ಯರ್ಥಿಗಳು

Published:
Updated:
Prajavani

ಬೆಂಗಳೂರು: ಪ್ರಜಾ ಜಾಗೃತಿ ಸಮಿತಿಯು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರಿನ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿಗಳು ತಮ್ಮ ಚಿಂತನೆ, ದೂರದೃಷ್ಟಿ ಮತ್ತು ಅಭಿವೃದ್ಧಿಯ ಕನಸುಗಳನ್ನು ಬಿಚ್ಚಿಟ್ಟರು.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಜೆನಿಫರ್‌ ಜೆ ರಸೆಲ್‌ ವೃತ್ತಿಯಲ್ಲಿ ಟೆಲಿಕಾಂ ಎಂಜಿನಿಯರ್‌ ಆಗಿದ್ದವರು. ಹುಟ್ಟೂರು ತಿರುವನಂತಪುರ. ಕೆಲಸಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ವ್ಯವಸ್ಥೆಯನ್ನು ದೂಷಿಸುತ್ತಾ ಕೂರುವ ಬದಲು, ನಾವೇ ವ್ಯವಸ್ಥೆಯನ್ನು ಸುಧಾರಿಸಲು ಮುಂದಾಗಬೇಕು’ ಎಂಬ ಧ್ಯೇಯದೊಂದಿಗೆ ಚುನಾವಣೆಗೆ ನಿಂತಿದ್ದಾರೆ.

‘ನಗರದಲ್ಲಿನ ಮೂಲಸೌಕರ್ಯಗಳ ಕುರಿತು ತಿಳಿಯಲು ಉದ್ದೇಶಪೂರ್ವಕವಾಗಿ ಕ್ಯಾಬ್‌ ಚಾಲಕನಾಗಿ ಕೆಲಸ ಮಾಡಿದೆ. ಆಗಲೇ ಸಂಚಾರ ದಟ್ಟಣೆ, ರಸ್ತೆಗಳ ದುಸ್ಥಿತಿ ಮತ್ತು ಶೌಚಾಲಯಗಳ ಕೊರತೆಯ ಸಮಸ್ಯೆಯ ದರ್ಶನವಾಯಿತು’ ಎಂದು ಜೆನಿಫರ್‌ ಜೆ ರಸೆಲ್‌ ತಿಳಿಸಿದರು.

‘ಈಗ ಸ್ವಿಗ್ಗಿ ಕಂಪನಿಯಲ್ಲಿದ್ದೇನೆ. ಮನೆ–ಮನೆಗೂ ಆಹಾರದ ಪೊಟ್ಟಣಗಳನ್ನು ಪೂರೈಕೆ ಮಾಡಲು ಹೋದಾಗ, ‘ನಾನು ಚುನಾವಣೆಗೆ ನಿಂತಿದ್ದೇನೆ. ಮತನೀಡಿ’ ಎಂದು ಕೇಳುತ್ತೇನೆ. ಕೆಲವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ, ನಗುತ್ತಾರೆ. ನನ್ನ ಬಗ್ಗೆ ತಿಳಿದುಕೊಳ್ಳುತ್ತಾರೆ, ಮತ ನೀಡುವುದಾಗಿ ಭರವಸೆ ನೀಡುತ್ತಾರೆ’ ಎಂದು ಹೇಳಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಎನ್‌.ಹನುಮೇಗೌಡರಿಗೆ ಇದು ಐದನೇ ಚುನಾವಣೆ. ‘ಈ ಹಿಂದೆ ನಾನು ಆರ್‌ಎಸ್‌ಎಸ್‌ ಸಂಘಟನೆ ಮತ್ತು ಬಿಜೆಪಿ ಪಕ್ಷಕ್ಕಾಗಿ ದುಡಿದಿದ್ದೇನೆ. ಕೆಲವು ಕಾರಣಗಳಿಂದಾಗಿ, ಅವುಗಳಿಂದ ಈಗ ಅಂತರ ಕಾಯ್ದುಕೊಂಡಿದ್ದೇನೆ. ಈಗಿನ ಬಹುತೇಕ ರಾಜಕಾರಣಿಗಳು ಭ್ರಷ್ಟರಾಗಿದ್ದಾರೆ. ಅವರು ಕಪಟ ಮುಖವಾಡಗಳನ್ನು ಧರಿಸಿ ರಾಜಕೀಯ ಮಾಡುತ್ತಿದ್ದಾರೆ. ಹಾಗಾಗಿ ಸಾಮಾಜಿಕ ಕಳಕಳಿಯ ನಮ್ಮಂಥವರು ಅಧಿಕಾರಕ್ಕೆ ಬರಬೇಕು’ ಎಂಬುದು ಗೌಡರ ಮಾತು.

‘ಸಂಸತ್ತಿಗೆ ಆಯ್ಕೆ ಆಗುವುದೆ ಗೆಲುವಲ್ಲ. ಪ್ರಜಾತಂತ್ರದ ಹಬ್ಬದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ನೈತಿಕವಾಗಿ ನಾನೀಗಾಗಲೇ ಗೆಲುವು ಸಾಧಿಸಿದ್ದೇನೆ’ ಎಂದು ಹೇಳಿದರು. ‘2014ರಲ್ಲಿ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ 444, 2018ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಸ್ಪರ್ಧಿಸಿದ್ದಾಗ 342 ವೋಟುಗಳು ಬಿದ್ದಿದ್ದವು’ ಎಂದು ನೆನಪಿಸಿಕೊಂಡರು.

ಎಲ್‌.ಎಲ್‌.ಬಿ. ಓದುತ್ತಿರುವ ಸಿ.ಪ್ರಶಾಂತ್‌ಗೆ ಅಧಿಕಾರ ಎಂಬುದು ‘ಅರ್ಹರಿಗೆ ಸಿಗುತ್ತಿಲ್ಲ’ ಎಂಬ ಬೇಸರವಿದೆ. ಹಾಗಾಗಿ ಈ ಬಾರಿ ಅವರೇ ದಕ್ಷಿಣ ಲೋಕಸಭಾದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ‘ಶಿಕ್ಷಣ ಇಂದು ಖಾಸಗಿಕರಣಗೊಳ್ಳುತ್ತಿದೆ. ಅದನ್ನು ತಡೆಯಬೇಕು. ಸಾಮಾಜಿಕ ಸೇವೆ ಮಾಡಲು ರಾಜಕೀಯ ಉತ್ತಮ ವೇದಿಕೆ. ಹಾಗಾಗಿ ಸ್ಪರ್ಧಿಸುತ್ತಿದ್ದೇನೆ’ ಎಂದು ತಿಳಿಸಿದರು.

‘ಸ್ಪರ್ಧೆಯಲ್ಲಿ ಸೋತೆ ಎಂಬುದಕ್ಕಿಂತ ಆದರ್ಶಗಳಿಗೆ ಕಟಿಬದ್ಧವಾಗಿ ನನ್ನ ಆಲೋಚನೆಗಳನ್ನು ಹಂಚುತ್ತಿದ್ದೇನೆ ಎಂಬ ತೃಪ್ತಿ ಇದೆ’ ಎಂದು ಅವರು ಹೇಳಿದರು. ಸಂವಾದದಲ್ಲಿ ಒಟ್ಟು 18 ಪಕ್ಷೇತರ ಅಭ್ಯರ್ಥಿಗಳು ತಮ್ಮ ವಿಚಾರಗಳನ್ನು ಮಂಡಿಸಿ, ಮತಯಾಚನೆ ಮಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !