ಮತ್ತೊಮ್ಮೆ ‘ಮತ ಗಣಿತ’ದ ಗುಂಗು: ‘ಪ್ರಜಾ ತೀರ್ಪಿ’ಗೆ ಕ್ಷಣಗಣನೆ; ಕೆರಳಿದ ಕುತೂಹಲ

ಬುಧವಾರ, ಜೂನ್ 19, 2019
23 °C
ಮತ ಎಣಿಕೆ ಏಜೆಂಟರಿಗೆ ಕಟ್ಟುನಿಟ್ಟಿನ ಸಂದೇಶ

ಮತ್ತೊಮ್ಮೆ ‘ಮತ ಗಣಿತ’ದ ಗುಂಗು: ‘ಪ್ರಜಾ ತೀರ್ಪಿ’ಗೆ ಕ್ಷಣಗಣನೆ; ಕೆರಳಿದ ಕುತೂಹಲ

Published:
Updated:
Prajavani

ವಿಜಯಪುರ: ‘ಪ್ರಜಾ ತೀರ್ಪು’ ಹೊರಬೀಳಲು ಕ್ಷಣಗಣನೆ ಆರಂಭಗೊಂಡಿದೆ. ಇದೀಗ ಎಲ್ಲರ ಚಿತ್ತವೂ ವಿಜಯಪುರದ ಹೆಮ್ಮೆಯ ಸೈನಿಕ ಶಾಲೆಯತ್ತ ನೆಟ್ಟಿದೆ.

ಕಮಲ ಪಾಳೆಯದ ಭದ್ರಕೋಟೆ ಅಭೇದ್ಯವಾಗುವುದೋ ? ಕೇಸರಿ ಪತಾಕೆಗಳು ರಾರಾಜಿಸುವವೋ ? ‘ಕೈ’ ಪಡೆಯಿಂದ ಅಸಾಧ್ಯವಾಗಿದ್ದನ್ನು ತೆನೆ ಹೊತ್ತ ಮಹಿಳೆ ಸಾಧ್ಯವಾಗಿಸುವರೋ..?

ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿಗೆ ಹ್ಯಾಟ್ರಿಕ್ ವಿಜಯ ಒಲಿಯುವುದೋ ? ಮಹಿಳೆಯೊಬ್ಬರು ವಿಜಯಪುರದಿಂದ ಪ್ರಪ್ರಥಮ ಬಾರಿಗೆ ಸಂಸತ್ ಅಂಗಳಕ್ಕೆ ಪದಾರ್ಪಣೆ ಮಾಡುವರೋ ?

ಬಹುಮತದ ಗೆಲುವೋ ? ತುರುಸಿನ ಪೈಪೋಟಿಯೋ ? ಯಾವ ಕ್ಷೇತ್ರದಲ್ಲಿ ಒಳ ಹೊಂದಾಣಿಕೆ ನಡೆದಿದೆ ? ಯಾವ ಕ್ಷೇತ್ರ ಮೈತ್ರಿಗೆ ಒಲಿದಿದೆ ? ಎಲ್ಲಿ ಕಮಲ ಪಡೆ ಮುನ್ನಡೆ ಸಾಧಿಸಿದೆ ? ಹಾಲಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗೆ ಮುನ್ನಡೆ ಕೊಡಿಸಿದ್ದಾರೋ..?

ದಲಿತ–ಬಂಜಾರ ಮತ ಸಂಘರ್ಷದಲ್ಲಿ ಯಾರ ಕೈ ಮೇಲಾಗಲಿದೆ. ಯಾರಿಗೆ ಒಳಪೆಟ್ಟು ಬಿದ್ದಿದೆ. ಸ್ವಪಕ್ಷೀಯರ ಅಪಸ್ವರ, ವಿರೋಧ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ? ಮೈತ್ರಿಯ ಒಗ್ಗಟ್ಟು ಅಕ್ಷರಶಃ ತಳಹಂತಕ್ಕೂ ತಲುಪಿ, ಮತದಾರನ ಮನ ತಟ್ಟುವಲ್ಲಿ ಯಶಸ್ವಿಯಾಗಿದೆಯಾ..?

ಇಂಥಹ ಹತ್ತೆಂಟು ಪ್ರಶ್ನೆಗಳ ಸರಮಾಲೆಗೆ ಉತ್ತರ ದೊರಕುವ ಸಮಯದ ಕ್ಷಣಗಣನೆ ಆರಂಭಗೊಂಡಿದೆ. ಇದು ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿದ್ದ ಪ್ರಮುಖರು, ಜಿಲ್ಲಾ ಘಟಕದ ಅಧ್ಯಕ್ಷರು, ಶಾಸಕರು, ಸಚಿವರು, ಹಾಲಿ–ಮಾಜಿ ಶಾಸಕ–ಸಚಿವರಲ್ಲಿ ತಳಮಳ ಸೃಷ್ಟಿಸಿದೆ.

ಮತ್ತೊಮ್ಮೆ ‘ಮತ ಗಣಿತ’ದ ಮೊರೆ ಹೊಕ್ಕ ಮುಖಂಡರು, ಆಯಾ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಗೆಲುವು ನಮ್ಮದೇ ಎಂದು ಹೆಮ್ಮೆಯಿಂದ ಬೀಗುವುದು ಬುಧವಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಗೋಚರಿಸಿತು. ಹಲವರು ಆತ್ಮವಿಶ್ವಾಸದಿಂದ ಗೆಲುವಿನ ಬೆಟ್ಟಿಂಗ್‌ ನಡೆಸಿದ್ದು ಕಂಡು ಬಂದಿತು.

ಪ್ರಮುಖ ಘಟ್ಟ; ಸೂಕ್ಷ್ಮತೆಯ ಕಣ್ಗಾವಲು..!

ಮತದಾನ ಮುಗಿದ ಬರೋಬ್ಬರಿ ಒಂದು ತಿಂಗಳ ಬಳಿಕ, ವಿಜಯಪುರದ ಸೈನಿಕ ಶಾಲೆಯ ಆಯ್ದ ಕೊಠಡಿಗಳಲ್ಲಿ ಮೇ 23ರ ಗುರುವಾರ ಬೆಳಿಗ್ಗೆ 7ರಿಂದಲೇ ವಿಜಯಪುರ ಪರಿಶಿಷ್ಟ ಜಾತಿಯ ಮೀಸಲು ಲೋಕಸಭಾ ಕ್ಷೇತ್ರದ ಮತ ಎಣಿಕೆಯ ಪ್ರಕ್ರಿಯೆಗಳು ಚಾಲನೆ ಪಡೆಯಲಿವೆ.

ಇದಕ್ಕೆ ಪೂರಕವಾಗಿ ಅಖಾಡದಲ್ಲಿರುವ ಅಭ್ಯರ್ಥಿಗಳು ಸಕಲ ಸಿದ್ಧತೆ ನಡೆಸಿಕೊಂಡಿದ್ದಾರೆ. ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಮತ ಎಣಿಕೆ ಏಜೆಂಟರ ಸಭೆ ನಡೆಸಿದ್ದು, ಹಲವು ಸೂಕ್ಷ್ಮಗಳನ್ನು ಎಳೆ ಎಳೆಯಾಗಿ ವಿವರಿಸಿದ್ದಾರೆ ಎಂಬುದು ಆಯಾ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.

ಬಿಜೆಪಿ ತನ್ನ ಚುನಾವಣಾ ಕಚೇರಿಯಲ್ಲಿ ಬುಧವಾರ ಸಂಜೆ ಮತ ಎಣಿಕೆ ಕೇಂದ್ರದೊಳಗೆ ತೆರಳುವ ಮತ ಎಣಿಕೆ ಏಜೆಂಟರ ಸಭೆ ನಡೆಸಿದೆ. ಈ ಎಲ್ಲರಿಗೂ ವಿಜಯಪುರದಲ್ಲೇ ವಸತಿ ವ್ಯವಸ್ಥೆ ಮಾಡಿದ್ದು, ಗುರುವಾರ ಬೆಳಿಗ್ಗೆ 6ಕ್ಕೆ ಎಲ್ಲರನ್ನೂ ಎಬ್ಬಿಸಿ, ನಾಷ್ಟಾ ಮಾಡಿಸಿ, 7 ಗಂಟೆಯೊಳಗೆ ಸೈನಿಕ ಶಾಲೆಯ ಮತ ಎಣಿಕೆ ಕೇಂದ್ರದೊಳಗಿರುವಂತೆ ಸೂಕ್ತ ವ್ಯವಸ್ಥೆ ಮಾಡಿದೆ ಎಂದು ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಚರ್ಚೆಯಲ್ಲಿ ಮಗ್ನ..!

ಬಿಜೆಪಿ ಹುರಿಯಾಳು ರಮೇಶ ಜಿಗಜಿಣಗಿ ಬುಧವಾರ ಮುಂಜಾನೆಯೇ ಭೂತನಾಳ ಕೆರೆ ಬಳಿಯಿರುವ ತಮ್ಮ ನಿವಾಸದಲ್ಲಿ ಆಪ್ತೇಷ್ಟರ ಭೇಟಿ ನಡೆಸಿ, ಫಲಿತಾಂಶದ ಕುರಿತಂತೆ ಚರ್ಚೆ ನಡೆಸಿದರು. ನಂತರ ಮನೆಯ ಆವರಣ ಖಾಲಿಯಿತ್ತು. ರಾತ್ರಿ ಮತ್ತೆ ಚಟುವಟಿಕೆಯ ತಾಣವಾಗಿದ್ದು ವಿಶೇಷವಾಗಿತ್ತು.

ಚುನಾವಣಾ ಕಚೇರಿಗೆ ಭೇಟಿ ನೀಡಿದ ಜಿಗಜಿಣಗಿ ಪ್ರಮುಖ ಕಾರ್ಯಕರ್ತರೊಂದಿಗೆ ಮಾತನಾಡಿದರು. ಚಹಾ ಸೇವಿಸಿದರು. ಮತ್ತೆ ತಮ್ಮ ದೈನಂದಿನ ದಿನಚರಿಯಲ್ಲಿ ಮಗ್ನರಾದರು. ಸಂಜೆ ಸಭೆಯಲ್ಲಿ ಭಾಗಿಯಾಗಿ ಮತ ಎಣಿಕೆಯಲ್ಲಿ ಕಣ್ಗಾವಲಿನ ನಿಗಾ ವಹಿಸುವಂತೆ ಎಣಿಕೆ ಏಜೆಂಟರಿಗೆ ಕಿವಿಮಾತು ಹೇಳಿದರು.

ಜೆಡಿಎಸ್ ಅಭ್ಯರ್ಥಿ ಡಾ.ಸುನೀತಾ ದೇವಾನಂದ ಚವ್ಹಾಣ ನಿವಾಸ, ಕಚೇರಿ ಬುಧವಾರ ಬೆಳಿಗ್ಗೆಯಿಂದಲೂ ಚಟುವಟಿಕೆಯ ಕಾರ್ಯತಾಣವಾಗಿತ್ತು. ಜಿಲ್ಲೆಯ ವಿವಿಧ ಭಾಗದಿಂದ ಕಾರ್ಯಕರ್ತರು ತಂಡೋಪ ತಂಡವಾಗಿ ಭೇಟಿ ನೀಡಿ, ತಮ್ಮ ವರದಿ ಒಪ್ಪಿಸುವ ಜತೆಗೆ, ಮತ ಎಣಿಕೆ ದಿನದ ಜವಾಬ್ದಾರಿ ಏನಿದೆ ಎಂಬುದನ್ನು ಶಾಸಕ ದೇವಾನಂದ ಚವ್ಹಾಣ ಅವರಿಂದ ಕೇಳಿ ತಿಳಿದುಕೊಂಡ ಚಿತ್ರಣ ಗೋಚರಿಸಿತು.

ಅಭ್ಯರ್ಥಿ ಸುನೀತಾ ಸಹ ಕಾರ್ಯಕರ್ತರೊಟ್ಟಿಗೆ ಚರ್ಚಿಸಿದರು. ಆಪ್ತ ಗೆಳತಿಯರು, ಒಡನಾಡಿಗಳು, ಸಂಬಂಧಿಗಳೊಟ್ಟಿಗೆ ಚುನಾವಣಾ ಫಲಿತಾಂಶದ ಜತೆಯಲ್ಲೇ ಕುಶಲೋಪರಿಯನ್ನು ವಿಚಾರಿಸಿದ್ದು ವಿಶೇಷವಾಗಿತ್ತು.

ಅಂಕಿ ಅಂಶ

12 ಅಭ್ಯರ್ಥಿಗಳು ಅಖಾಡಲ್ಲಿ

17,95,931 ಮತದಾರರು ಕ್ಷೇತ್ರದಲ್ಲಿ

11,09,390 ಮತದಾರರಿಂದ ಹಕ್ಕು ಚಲಾವಣೆ

61.77% ಮತದಾನದ ಪ್ರಮಾಣ

3416 ಅಂಚೆ ಮತಪತ್ರ (ಇನ್ನೂ ಹೆಚ್ಚಲಿವೆ)

3 ಕಟ್ಟಡದಲ್ಲಿ ಕ್ಷೇತ್ರವಾರು ಮತ ಎಣಿಕೆ

8 ವಿಧಾನಸಭಾ ಕ್ಷೇತ್ರಗಳು ಕ್ಷೇತ್ರ ವ್ಯಾಪ್ತಿಯಲ್ಲಿ

3 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು

3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು

2 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು

ನೇರ ಹಣಾಹಣಿಯಿದ್ದ ಕ್ಷೇತ್ರ

ಸೈನಿಕ ಶಾಲೆಯಲ್ಲಿ ಮತ ಎಣಿಕೆ

ವಿಜಯಮಾಲೆ ಯಾರ ಕೊರಳಿಗೆ ?

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !