ಶನಿವಾರ, ಅಕ್ಟೋಬರ್ 19, 2019
22 °C
ವಿಧಾನಸಭೆ 15 ಕ್ಷೇತ್ರ

ಉಪ ಚುನಾವಣೆ | ಕಾಂಗ್ರೆಸ್‌ನಿಂದ ಸಂಭಾವ್ಯರ ಪಟ್ಟಿ, 12 ಕ್ಷೇತ್ರ ಗೆಲ್ಲುವ ಗುರಿ

Published:
Updated:

ಬೆಂಗಳೂರು: ವಿಧಾನಸಭೆ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಮುಖಂಡರು, ಅಭ್ಯರ್ಥಿಗಳ ಆಯ್ಕೆಗೆ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ. ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ 12ರಲ್ಲಿ ಗೆಲ್ಲುವ ಗುರಿಯನ್ನು ಹಾಕಿಕೊಂಡಿದ್ದಾರೆ.

ಈ ಗುರಿ ಮುಟ್ಟಲು ಪ್ರಮುಖವಾಗಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಗೆಲ್ಲುವ ಅಭ್ಯರ್ಥಿ ಮುಖ್ಯವಾಗಬೇಕೆ ಹೊರತು, ಬೇರೆ ಕಾರಣಗಳು ನುಸುಳದಂತೆ ನೋಡಿಕೊಳ್ಳುತ್ತಿದ್ದಾರೆ. ಕೆ.ಆರ್.ಪುರಂ, ಯಶವಂತಪುರ, ಹೊಸಕೋಟೆ ಸೇರಿದಂತೆ ಕೆಲ ಕ್ಷೇತ್ರಗಳಲ್ಲಿ ಪ್ರಬಲ ಸ್ಪರ್ಧೆ ನೀಡುವ ಅಭ್ಯರ್ಥಿಗಳ ಕೊರತೆ ಕಾಡುತ್ತಿದ್ದು, ಬೇರೆ ಪಕ್ಷದವರನ್ನು ಕರೆತಂದು ನಿಲ್ಲಿಸಬೇಕೆ, ಇಲ್ಲವೆ ಪಕ್ಷದಲ್ಲೇ ಯಾರು ಸಮರ್ಥರಿದ್ದಾರೆ ಎಂದು ಹುಡುಕಾಟ ನಡೆಸಿದ್ದಾರೆ.

ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದ್ದು, ಅಲ್ಲಿನ ತೀರ್ಪಿಗಾಗಿ ಕಾಯಲಾಗುತ್ತಿದೆ. ಒಂದು ವೇಳೆ ಅನರ್ಹರು ಮತ್ತೆ ಸ್ಪರ್ಧಿಸಲು ಅವಕಾಶ ಸಿಕ್ಕರೆ ಅಥವಾ ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದರೆ ಏನೆಲ್ಲ ಕಾರ್ಯತಂತ್ರ ರೂಪಿಸಬೇಕು ಎಂದು ಮುಖಂಡರು ಚರ್ಚಿಸುತ್ತಿದ್ದಾರೆ.

‘ಕೋರ್ಟ್ ತೀರ್ಪು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಂಭಾವ್ಯರ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಕೋರ್ಟ್ ತೀರ್ಪಿನ ನಂತರ ಹೈಕಮಾಂಡ್‌ಗೆ ಸಲ್ಲಿಸಲಾಗುವುದು. ವರಿಷ್ಠರು ಅಂತಿಮಗೊಳಿಸಿದ ನಂತರ ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗುವುದು‘ ಎಂದು ಮೂಲಗಳು ತಿಳಿಸಿವೆ.

ವಿವಿಧ ಕ್ಷೇತ್ರಗಳಿಗೆ ತಾತ್ಕಾಲಿಕವಾಗಿ ಸಿದ್ಧಪಡಿಸಿರುವ ಪಟ್ಟಿ. ಕೋರ್ಟ್ ತೀರ್ಪಿನ ನಂತರ ಸ್ವಲ್ಪಮಟ್ಟಿಗೆ ಪಟ್ಟಿ ಬದಲಾಗಲಿದೆ.

ನೀತಿ ಸಂಹಿತೆ ಉಲ್ಲಂಘನೆ: ದೂರು

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉಪಚುನಾವಣೆ ದಿನಾಂಕ ಘೋಷಣೆಯ ಬಳಿಕ ಸರ್ಕಾರಿ ವಸತಿ ಗೃಹದಲ್ಲಿ ಸಭೆ ನಡೆಸಿರುವುದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ಸರ್ಕಾರಿ ವಸತಿ ಗೃಹದಲ್ಲಿ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಡ್ವೊಕೆಟ್‌ ಜನರಲ್‌ ಪ್ರಭುಲಿಂಗ ನಾವದಗಿ ಮತ್ತು ಅನರ್ಹ ಶಾಸಕರ ಜತೆ ಸಭೆ ನಡೆಸಿದ್ದಾರೆ. ಚುನಾವಣೆ ಘೋಷಣೆ ಬಳಿಕ ಅಡ್ವೊಕೆಟ್‌ ಜನರಲ್‌ ಅವರನ್ನು ಖಾಸಗಿ ವಿಷಯಗಳಿಗೆ ಕರೆಸಿ ಮಾತನಾಡುವಂತಿಲ್ಲ. ಆದ್ದರಿಂದ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸಭೆ ಮುಂದೂಡಿಕೆ

ಇದೇ 26ರಂದು ಕರೆದಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸರ್ವ ಸದಸ್ಯರ ಸಭೆಯನ್ನು ಮುಂದೂಡಲಾಗಿದೆ. 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಸಭೆ ಮುಂದೂಡಲಾಗಿದೆ ಎಂದು ಕೆಪಿಸಿಸಿ ತಿಳಿಸಿದೆ.

ಪ್ರವಾಹಕ್ಕೆ ತುತ್ತಾದ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಿಲ್ಲ. ಕೇಂದ್ರ ಸರ್ಕಾರ ಈವರೆಗೂ ಪರಿಹಾರ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರವೂ ನೊಂದವರ ನೋವಿಗೆ ಸ್ಪಂದಿಸುತ್ತಿಲ್ಲ. ಮತ್ತೊಂದೆಡೆ ಬರ ತೀವ್ರವಾಗಿದ್ದರೂ ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಆರೋಪಿಸಿತ್ತು.

ದಿಢೀರ್ ಉಪಚುನಾವಣೆ ಘೋಷಣೆ ಆಗಿದ್ದು, ಸಭೆ ಮುಂದೂಡಲಾಗಿದೆ ಎಂದು ಕೆಪಿಸಿಸಿ ‍ಪ್ರಕಟಣೆ ತಿಳಿಸಿದೆ.

Post Comments (+)