ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಸಭೆ: ಮುನಿಯಪ್ಪ–ರಮೇಶ್‌ಕುಮಾರ್‌ ಬೆಂಬಲಿಗರ ಮಧ್ಯೆ ಘರ್ಷಣೆ

Last Updated 3 ಮೇ 2019, 11:07 IST
ಅಕ್ಷರ ಗಾತ್ರ

ಕೋಲಾರ:ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಬುಧವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ಕುಮಾರ್‌ ಬೆಂಬಲಿಗರ ನಡುವ ಘರ್ಷಣೆ ನಡೆದಿದೆ.

ಶ್ರೀನಿವಾಸಪುರದಲ್ಲಿ ಗುರುವಾರ (ಏ.4) ನಡೆಯಲಿರುವ ಪಕ್ಷದ ಚುನಾವಣಾ ಪ್ರಚಾರದ ಸಿದ್ಧತೆ ಸಂಬಂಧ ಚರ್ಚಿಸಲು ಗೌನಿಪಲ್ಲಿಯಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಉಭಯ ಗುಂಪುಗಳ ನಡುವೆ ವಾಗ್ವಾದ ನಡೆದು, ತಳ್ಳಾಟ ಉಂಟಾಗಿದೆ.

ಪರಿಸ್ಥಿತಿ ವಿಕೋಪಕ್ಕೆ ತಿರುಗಿ ರಮೇಶ್‌ಕುಮಾರ್‌ ಬೆಂಬಲಿಗರು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಅವರನ್ನು ಸಭೆಯ ಸ್ಥಳದಿಂದ ಹೊರಗೆ ಎಳೆದೊಯ್ದು ಹಲ್ಲೆಗೆ ಯತ್ನಿಸಿದ್ದಾರೆ. ಗೋಪಾಲಕೃಷ್ಣ ಕಾರಿನಲ್ಲಿ ಹೋಗಲು ಮುಂದಾದಾಗ ಎದುರಾಳಿ ಗುಂಪು ಅವರನ್ನು ಅವಾಚ್ಯವಾಗಿ ನಿಂದಿಸಿ ಎಳೆದಾಡಿದೆ.

‘ಪ್ರತಿ ಕೆಲಸಕ್ಕೂ ರಮೇಶ್‌ಕುಮಾರ್ ಬೇಕು. ರಮೇಶ್‌ಕುಮಾರ್‌ ಅವರಿಂದ ಸಾಕಷ್ಟು ಅನುಕೂಲ ಪಡೆದು ಈಗ ಮುನಿಯಪ್ಪ ಜತೆ ಸೇರಿದ್ದೀರಿ. ಮುನಿಯಪ್ಪ ಎಷ್ಟು ಹಣ ಕೊಟ್ಟಿದ್ದಾರೆ? ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರಕ್ಕೆ ಬಂದಿರುವ ನೀವು ಈವರೆಗೆ ಎಲ್ಲಿ ಹೋಗಿದ್ದಿರಿ. ನಾಚಿಕೆ ಆಗುವುದಿಲ್ಲವೇ? ಕ್ಷೇತ್ರದ ಮುಖಂಡರ ಜತೆ ಚರ್ಚಿಸದೆ ಸಭೆ ನಡೆಸುತ್ತಿದ್ದೀರಿ’ ಎಂದು ಗೋಪಾಲಕೃಷ್ಣ ವಿರುದ್ಧ ಹರಿಹಾಯ್ದರು.

ಉಭಯ ಗುಂಪುಗಳು ರಮೇಶ್‌ಕುಮಾರ್‌ ಮತ್ತು ಮುನಿಯಪ್ಪ ಪರ– ವಿರೋಧ ಘೋಷಣೆ ಕೂಗಿದವು. ಕಾರ್ಯಕರ್ತರ ಗದ್ದಲದಿಂದ ಸಭೆ ಗೊಂದಲದ ಗೂಡಾಯಿತು. ಬಳಿಕ ಮುಖಂಡರು ಸಭೆ ಮೊಟಕುಗೊಳಿಸಿದರು.

ಹಣ ಹಂಚಿಕೆ: ಜಿಲ್ಲೆಯ ಮಾಲೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ನಡೆದ ಕಾಂಗ್ರೆಸ್‌ನ ರೋಡ್‌ ಶೋಗೆ ಬಂದಿದ್ದ ಜನರಿಗೆ ಪಕ್ಷದ ಮುಖಂಡರು ಹಣ ಹಂಚಿದರು. ಪ್ರತಿ ವ್ಯಕ್ತಿಗೆ ತಲಾ ₹ 300 ಕೊಟ್ಟು ರೋಡ್‌ ಶೋಗೆ ಕರೆದುಕೊಂಡು ಬರಲಾಗಿತ್ತು.ಅಲ್ಲದೇ, ನಿಯಮಬಾಹಿರವಾಗಿ ಮಕ್ಕಳನ್ನು ಕರೆತಂದು ಪ್ರಚಾರ ಮಾಡಿಸಲಾಯಿತು. ಮಕ್ಕಳು ಕಾಂಗ್ರೆಸ್‌ ಪಕ್ಷದ ಚಿಹ್ನೆ ಇರುವ ಟೋಪಿ ಧರಿಸಿ ಹಾಗೂ ಬಾವುಟ ಹಿಡಿದು ನರ್ತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT