‘ಮೋದಿ ರಾಜ್ ಮಾಫಿಯಾ ರಾಜ್’: ಪ್ರಧಾನಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ

ಮಂಗಳವಾರ, ಏಪ್ರಿಲ್ 23, 2019
32 °C

‘ಮೋದಿ ರಾಜ್ ಮಾಫಿಯಾ ರಾಜ್’: ಪ್ರಧಾನಿ ವಿರುದ್ಧ ದಿನೇಶ್ ಗುಂಡೂರಾವ್ ವಾಗ್ದಾಳಿ

Published:
Updated:

ಮಂಗಳೂರು: ‘ಪ್ರಧಾನಿ‌ ನರೇಂದ್ರ ಮೋದಿಯವರ ಆಡಳಿತದಲ್ಲಿ ದೊಡ್ಡ ಲೂಟಿಕೋರರಿಗೆ ರಕ್ಷಣೆ ದೊರೆಯುತ್ತಿದೆ. ಮೋದಿ ರಾಜ್ ಮಾಫಿಯಾ ರಾಜ್ ಆಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದರು.

ಮಂಗಳವಾರ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್‌ ರೈ ಪರ ಪ್ರಚಾರ ನಡೆಸಲು ಸುಳ್ಯ ತಾಲ್ಲೂಕಿನ ಬೆಳ್ಳಾರೆಗೆ ಹೋಗುವ ಮೊದಲು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಮೋದಿಯವರ ಅವಧಿಯಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳಿಗೆ ವಂಚಿಸಿದವರು ಕೇಂದ್ರ ಸರ್ಕಾರದಿಂದಲೇ ರಕ್ಷಣೆ ಪಡೆದಿದ್ದಾರೆ. ದೊಡ್ಡ ಉದ್ಯಮಿಗಳ ಲಕ್ಷಾಂತರ ಕೋಟಿ ರೂಪಾಯಿ ಸಾಲವನ್ನೂ ಕೇಂದ್ರ ಸರ್ಕಾರ ಮನ್ನಾ ಮಾಡಿದೆ ಎಂದರು.

ನೋಟು ಅಮಾನ್ಯೀಕರಣ ಹಾಗೂ ಸರಕು ಮತ್ತು ಸೇವಾ ತೆರಿಗೆಯ ಅಸಮರ್ಪಕ ಅನುಷ್ಠನದಿಂದ ದೇಶಕ್ಕೆ ₹ 4 ಲಕ್ಷ ಕೋಟಿ ನಷ್ಟವಾಗಿದೆ. ಈ ಹಣ ದೊಡ್ಡ ಉದ್ಯಮಿಗಳ ಪಾಲಾಗಿದೆ. ದೇಶದ ಪ್ರಧಾನಿ ದೊಡ್ಡ ಉದ್ಯಮಿಗಳ ಚೌಕಿದಾರ ಆಗಿದ್ದಾರೆ ಎಂದು ದೂರಿದರು.

ಐದು ವರ್ಷಗಳ ಹಿಂದೆ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸದ ಮೋದಿ ಮತ್ತೆ ಈಗ ಕೋಮುವಾದಿ ರಾಜಕೀಯದ ಮೊರೆ ಹೋಗಿದ್ದಾರೆ. ಹಿಂದುತ್ವದ ಆಧಾರದಲ್ಲಿ ಮತ ಯಾಚಿಸಲು ಹೊರಟಿದ್ದಾರೆ. ಕೋಮುವಾದದ ಅಫೀಮು ಬಿತ್ತಿ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆ. ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದರು.

ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಳಗೊಳ್ಳುವ ರಾಜಕೀಯ ಮಾಡುತ್ತಿದೆ. ಆದರೆ, ಮೋದಿ ಕೀಳುಮಟ್ಟದ ಮಾತಿನ ಮೂಲಕ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಸ್ಪರ್ಧೆಯನ್ನೂ ಕೋಮುವಾದಿ ದೃಷ್ಟಿಯಿಂದ ನೋಡುತ್ತಿದ್ದಾರೆ. ಪ್ರಧಾನಿ ಮಾರ್ಕೆಟಿಂಗ್ ಚತುರನಾಗಿ ಕೆಲಸ‌ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನ್ಯಾಯ್ ಯೋಜನೆ, ನರೇಗಾ ಕೆಲಸದ ದಿನಗಳ ಹೆಚ್ಚಳ, ಮಹಿಳಾ ಮೀಸಲಾತಿ ಜಾರಿ ಸೇರಿದಂತೆ ಕ್ರಾಂತಿಕಾರಿ ಅಂಶಗಳನ್ನು ಕಾಂಗ್ರೆಸ್ ಪ್ರಣಾಳಿಕೆ ಒಳಗೊಂಡಿದೆ. ಎಲ್ಕ ಭರವಸೆಗಳನ್ನೂ ಈಡೇರಿಸುವ ನಂಬಿಕೆ ಮತದಾರರಲ್ಲಿ ಇದೆ. ಈ ಬಾರಿ ಕಾಂಗ್ರೆಸ್ ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಬಿಜೆಪಿ ಕೆಳಕ್ಕೆ ಇಳಿಯಲಿದೆ ಎಂದರು.

ಚುನಾವಣಾ ಬಾಂಡ್ ಮೂಲಕ ಹಣ ಸಂಗ್ರಹಿಸಲು ರಾಜಕೀಯ ಪಕ್ಷಗಳಿಗೆ ಅವಕಾಶ ನೀಡಿರುವ  ಕೇಂದ್ರ ಸರ್ಕಾರದ ಕ್ರಮ ಅಪಾಯಕಾರಿಯಾದುದು. ಬಿಜೆಪಿ ಸಾವಿರ ಕೋಟಿಗೂ ಹೆಚ್ಚು ಹಣ ಈ ಮೂಲಕ ಪಡೆದಿದೆ. ಬಾಂಡ್ ಮೂಲಕ ದಾವೂದ್ ಇಬ್ರಾಹಿಂ ಹಣ ನೀಡಿದರೂ ಬಿಜೆಪಿಯವರು ಪಡೆಯುತ್ತಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ವ್ಯವಸ್ಥೆಯನ್ನು ರದ್ದು ಮಾಡಲಾಗುವುದು ಎಂದು ಹೇಳಿದರು.

ನಳಿನ್ ಕುಮಾರ್ ಕಟೀಲ್ ಒಬ್ಬ ವಿಫಲ ಸಂಸದ. ಕೋಮುವಾದದ ಮೂಲಕ ಬೆಂಕಿ ಹಚ್ಚುವುದಷ್ಟೇ ಅವರಿಗೆ ಗೊತ್ತು. ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಜನರು ಯುವ ನಾಯಕ‌ ಮಿಥುನ್‌ ರೈ ಅವರನ್ನು ಬೆಂಬಲಿಸುವುದು ನಿಶ್ಚಿತ ಎಂದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 10

  Angry

Comments:

0 comments

Write the first review for this !