ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷಗಳ ಪರ್ಯಾಯ ಯೋಜನೆ ಸಿದ್ಧ

Last Updated 22 ಮೇ 2019, 17:31 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುವ ಪ್ರತಿಪಕ್ಷಗಳು, ಬಿಜೆಪಿಗೆ 272 ಸ್ಥಾನ ಲಭಿಸದಿದ್ದಲ್ಲಿ, ಸರ್ಕಾರ ರಚನೆಗೆ ತಮಗೆ ಆಹ್ವಾನ ನೀಡಬೇಕು ಎಂದು ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿವೆ.

ಮತ ಎಣಿಕೆಯ ನಂತರ ಬಿಜೆಪಿಯು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಆದರೆ ಸರ್ಕಾರ ರಚನೆಗೆ ಬೇಕಿರುವಷ್ಟು ಸ್ಥಾನಗಳು ಆ ಪಕ್ಷಕ್ಕೆ ಸಿಗಲಾರದು ಎಂಬ ಸೂಚನೆ ಸಿಕ್ಕರೆ, ಗುರುವಾರ ಸಂಜೆ 4 ಗಂಟೆಯೊಳಗೆ ರಾಷ್ಟ್ರಪತಿಯನ್ನು ಭೇಟಿ ಮಾಡಲು 22 ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ.

ಕಾಂಗ್ರೆಸ್‌ ನೇತೃತ್ವದ ಯುಪಿಎ ಮೈತ್ರಿಕೂಟದ ಪಕ್ಷಗಳು ರಾಷ್ಟ್ರಪತಿಗೆ ಜಂಟಿ ಪತ್ರವನ್ನು ಸಲ್ಲಿಸಲು ಸಿದ್ಧತೆ ಮಾಡಿಕೊಂಡಿವೆ. ಮೈತ್ರಿಕೂಟದಲ್ಲಿ ಇಲ್ಲದ ಸಮಾಜವಾದಿ ಪಕ್ಷ, ಬಿಎಸ್‌ಪಿ, ಸಿಪಿಎಂ ಮತ್ತು ಸಿಪಿಐ ರಾಷ್ಟ್ರಪತಿಗೆಪ್ರತ್ಯೇಕ ಮನವಿಪತ್ರ ಸಲ್ಲಿಸಲಿವೆ. ರಾಷ್ಟ್ರಪತಿಗೆ ಸಲ್ಲಿಸಬೇಕಾದ ಪತ್ರದ ಒಕ್ಕಣೆಯನ್ನೂ ಸಿದ್ಧಪಡಿಸಲಾಗಿದ್ದು, ಎಲ್ಲಾ ಸಮಾನಮನಸ್ಕ ಪಕ್ಷಗಳಿಗೆ ಅದರ ಪ್ರತಿಯನ್ನು ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಬಿಜೆಪಿಗೆ ಸಾಕಷ್ಟು ಸ್ಥಾನಗಳು ಲಭಿಸಿಲ್ಲ ಎಂದಾದರೆ ಜನರು ಅದರ ವಿರುದ್ಧ ಮತ ಚಲಾಯಿಸಿದ್ದಾರೆ ಎಂದೇ ಅರ್ಥ. ನಾವೆಲ್ಲರೂ ಸೇರಿ ಬಿಜೆಪಿಗೆ ಪರ್ಯಾಯವನ್ನು ರಚಿಸಿದ್ದು, ಸರ್ಕಾರ ರಚನೆಗೆ ನಮಗೇ ಆಹ್ವಾನ ನೀಡಬೇಕು’ ಎಂದು ಈ ಪಕ್ಷಗಳು ವಾದಿಸಲಿವೆ.

ಇಂಥ ಸ್ಥಿತಿ ನಿರ್ಮಾಣವಾದರೆ ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಸಂಜೆಯ ವೇಳೆಗೆ ದೆಹಲಿ ತಲುಪುವ ಸಾಧ್ಯತೆ ಇದ್ದು, ಸಂಜೆ ವೇಳೆಗೆ ಎಲ್ಲಾ ಪಕ್ಷಗಳು ಸಹಿ ಮಾಡಿರುವ ಜಂಟಿ ಠರಾವಿನ ಪ್ರತಿಯನ್ನೂ ರಾಷ್ಟ್ರಪತಿಗೆ ಕಳುಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಮ್ಮ ನಿರೀಕ್ಷೆಗೆ ತಕ್ಕಂಥ ಫಲಿತಾಂಶ ಬಂದರೆ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, ಎಸ್‌ಪಿ ಮುಖಂಡ ಅಖಿಲೇಶ್‌ ಯಾದವ್‌ ಹಾಗೂ ಇತರ ಪಕ್ಷಗಳ ಮುಖಂಡರು ಗುರುವಾರ ಸಂಜೆ ವೇಳೆಗೆ ದೆಹಲಿ ತಲುಪುವ ನಿರೀಕ್ಷೆ ಇದೆ. ಯಾವ ಮೈತ್ರಿಯ ಜೊತೆಗೂ ಗುರುತಿಸಿಕೊಂಡಿರದ ಟಿಆರ್‌ಎಸ್‌, ವೈಎಸ್‌ಆರ್‌ ಕಾಂಗ್ರೆಸ್‌ ಹಾಗೂ ಬಿಜೆಡಿ ನಾಯಕರೂ ಹೊಸ ಮೈತ್ರಿಕೂಟದ ಜೊತೆ ಸೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT