ಶನಿವಾರ, ಜೂನ್ 25, 2022
21 °C
ಬಿಜೆಪಿಯ ಮೂವರು ವಿಜೇತರಿಗೂ ಸತತ ಮೂರನೇ ಗೆಲುವು l ಶಿವಾಜಿನಗರ ಕ್ಷೇತ್ರವನ್ನು ಉಳಿಸಿಕೊಂಡ ಕಾಂಗ್ರೆಸ್‌

ನಗರದಲ್ಲಿ ಕಮಲಕ್ಕೆ ಮುಕ್ಕಾಲು ಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ವ್ಯಾಪ್ತಿ ಯಲ್ಲಿ ಉಪಚುನಾವಣೆ ನಡೆದ ನಾಲ್ಕು ಕ್ಷೇತ್ರಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ರಾಜಧಾನಿಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ. ಬಿಬಿಎಂಪಿ ಚುನಾವಣೆಗೆ ಇನ್ನೇನು 10 ತಿಂಗಳುಗಳಷ್ಟೇ ಬಾಕಿ ಇದ್ದು, ಈ ಹಂತದಲ್ಲಿ ಸಿಕ್ಕ ಯಶಸ್ಸು ಕಮಲ ಪಾಳಯದಲ್ಲಿ ಹೊಸ ಹುರುಪು ಮೂಡಿಸಿದೆ. 

ಕೆ.ಆರ್‌.ಪುರ, ಯಶವಂತಪುರ, ಮಹಾಲಕ್ಷ್ಮೀ ಬಡಾವಣೆ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ವಿಜಯದಿಂದಾಗಿ ಬಿಬಿಎಂಪಿ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರ ಸಂಖ್ಯೆ 14ಕ್ಕೆ ಹೆಚ್ಚಿದಂತಾಗಿದೆ. ಬಿಜೆಪಿಯಿಂದ ಗೆದ್ದ ಮೂವರೂ ಅಭ್ಯರ್ಥಿಗಳಿಗೂ ಈ ಬಾರಿಯದು ಸತತ ಮೂರನೇ ಗೆಲುವು ಎಂಬುದು ವಿಶೇಷ.

ಶಿವಾಜಿನಗರ ಕ್ಷೇತ್ರವನ್ನು ಉಳಿಸಿಕೊಂಡಿದ್ದಕ್ಕೆ ತೃಪ್ತಿಪಟ್ಟುಕೊಳ್ಳಬೇಕಾದ ಸ್ಥಿತಿಯನ್ನು ಕಾಂಗ್ರೆಸ್‌ ತಲುಪಿದೆ. ಈ ಹಿಂದೆ ರಾಜಧಾನಿಯಲ್ಲಿ 15 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್‌ ಎರಡು ಸ್ಥಾನಗಳನ್ನು ಕಳೆದುಕೊಂಡಿದೆ. ಇಬ್ಬರು ಶಾಸಕರನ್ನು ಹೊಂದಿದ್ದ ಜೆಡಿಎಸ್‌ ಒಬ್ಬರನ್ನು ಕಳೆದುಕೊಂಡಿದೆ. 

ಯಶವಂತಪುರ– ಸೋಮಶೇಖರ್‌ಗೆ ಯಶಸ್ಸು: ಕಾಂಗ್ರೆಸ್‌ನಿಂದ ಬಿಜೆಪಿಗೆ ಜಿಗಿದಿದ್ದ ಎಸ್‌.ಟಿ. ಸೋಮಶೇಖರ್‌ ಯಶವಂತಪುರ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಯಶಸ್ಸು ಗಳಿಸಿ ಬೀಗಿದ್ದಾರೆ. ಗೆಲುವಿನ ಅಂತರವನ್ನೂ (ಕಳೆದ ಚುನಾವಣೆಯಲ್ಲಿ 10,701 ಮತಗಳ ಅಂತರದಿಂದ ಗೆದ್ದಿದ್ದರು) ಹೆಚ್ಚಿಸಿಕೊಂಡಿದ್ದಾರೆ. 

ಇನ್ನೊಂದೆಡೆ, ಜೆಡಿಎಸ್‌ ಅಭ್ಯರ್ಥಿ ಟಿ.ಎನ್‌.ಜವರಾಯಿ ಗೌಡ ಸತತ ಮೂರು ಸೋಲುಗಳಿಂದ ನಿರಾಸೆ ಅನುಭವಿಸಿದ್ದಾರೆ. ಮತ ಎಣಿಕೆ ಆರಂಭದಲ್ಲಿ ಸಿಕ್ಕ ಅಲ್ಪ ಮುನ್ನಡೆಯಿಂದ ಜೆಡಿಎಸ್‌ ಪಾಳಯದಲ್ಲಿ ಮೂಡಿದ ಮಂದಹಾಸ ಅಂತಿಮ ಫಲಿತಾಂಶ ಬರುವಷ್ಟ ರಲ್ಲಿ ಕಮರಿ ಹೋಯಿತು. 2018ರ ಚುನಾವಣೆಯಲ್ಲಿ ಸೋಮಶೇಖರ್‌ಗೆ ನಿಕಟ ಪೈಪೋಟಿ ನೀಡಿದ್ದ ಜವರಾಯಿ ಗೌಡ ಈ ಬಾರಿಯಾದರೂ ಗೆಲುವು ಒಲಿಯಬಹುದು ಎಂಬ ವಿಶ್ವಾಸದಲ್ಲಿದ್ದರು. ಆದರೆ, ಪಕ್ಷಾಂತರ ರಾಜಕಾರಣದಿಂದಾಗಿ ಬದಲಾದ ಮತ ಸಮೀಕರಣ ಅವರ ಈ ಆಸೆಗೆ ಮತ್ತೆ ತಣ್ಣೀರೆರಚಿದೆ.  

ಈ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ಜಾರಿದ ಕಾಂಗ್ರೆಸ್‌ ಅಸ್ತಿತ್ವ ಉಳಿಸಿಕೊಳ್ಳುವುದಕ್ಕೇ ಹೆಣಗಾಡಬೇಕಾದ ಸ್ಥಿತಿ ತಲುಪಿದೆ. ಪಕ್ಷದ ಅಭ್ಯರ್ಥಿ ಪಿ.ನಾಗರಾಜ್‌ ಠೇವಣಿ ಕಳೆದುಕೊಂಡಿದ್ದಾರೆ. ಈ ಕ್ಷೇತ್ರದ ಐದು ವಾರ್ಡ್‌ಗಳಲ್ಲಿ ಮೂರರಲ್ಲಿ ಕಾಂಗ್ರೆಸ್‌ ಸದಸ್ಯರಿದ್ದರು. ಅವರ ಪೈಕಿ ಇಬ್ಬರು ಸೋಮಶೇಖರ್‌ ಜೊತೆ ಹೋಗಿದ್ದರಿಂದ ಕೈಪಾಳಯ ಇಲ್ಲಿ ಭಾರಿ ಆಘಾತ ಅನುಭವಿಸಿದೆ.

ಗೋಪಾಲಯ್ಯಗೆ ಒಲಿದ ಮಹಾಲಕ್ಷ್ಮಿ: ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಎಷ್ಟಿದೆ ಎಂಬುದನ್ನು ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಸಾಬೀತುಪಡಿಸಿದ್ದಾರೆ. ಈ ಹಿಂದಿನ ಎರಡು ಚುನಾವಣೆಗಳಲ್ಲೂ ಅವರು ಬಿಜೆಪಿ ಅಭ್ಯರ್ಥಿಗಳಿಗೆ ಸೋಲಿನ ರುಚಿ ತೋರಿಸಿದ್ದರು. ಈ ಬಾರಿ ಈ ಕ್ಷೇತ್ರದಲ್ಲಿ ಮೊದಲ ಬಾರಿ ಕಮಲದ ಬಾವುಟ ಹಾರುವಂತೆ ಮಾಡಿದ್ದಾರೆ.  

ಕಾಂಗ್ರೆಸ್‌ ಅಭ್ಯರ್ಥಿಯಾಗುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಪಾಲಿಕೆ ಸದಸ್ಯಎಂ.ಶಿವರಾಜು ಬಿಜೆಪಿ ಅಭ್ಯರ್ಥಿಗೆ ಪ್ರಬಲ ಪೈಪೋಟಿ ಒಡ್ಡುವಲ್ಲಿ ವಿಫಲರಾಗಿದ್ದಾರೆ. ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಪಕ್ಷವನ್ನು ಎರಡನೇ ಸ್ಥಾನಕ್ಕೆ ತಂದಿದ್ದಕ್ಕಷ್ಟೇ ಅವರು ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ ಆಗಿದ್ದ ಗಿರೀಶ್‌ ಕೆ.ನಾಶಿ ಉಪಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ಗೆ ಜಿಗಿದಿದ್ದರು. ಜೆಡಿಎಸ್‌ನಿಂದ ಕಣಕ್ಕಿಳಿದಿದ್ದ ಅವರು ಇಲ್ಲಿ ಠೇವಣಿ ಉಳಿಸಿಕೊಳ್ಳುವಲ್ಲಿ ಸಫಲರಾಗಿಲ್ಲ.

ಕೆ.ಆರ್‌.ಪುರ– ಭೈರತಿಯೇ ರಾಜ 

ಕೆ.ಆರ್‌.ಪುರ ಕ್ಷೇತ್ರದಲ್ಲಿ ತಾನೇ ರಾಜ ಎಂಬುದನ್ನು ಬಿ.ಎ.ಬಸವರಾಜು (ಬೈರತಿ ಬಸವರಾಜು) ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿಯ ಎನ್‌.ಎಸ್‌.ನಂದೀಶ ರೆಡ್ಡಿ ವಿರುದ್ಧ 33 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದ ಅವರು ಈ ಬಾರಿ ಆ ಪಕ್ಷದಿಂದಲೇ ಸ್ಪರ್ಧಿಸಿ ಇನ್ನಷ್ಟು ಭರ್ಜರಿ ಅಂತರದ ಜಯ ದಾಖಲಿಸಿದ್ದಾರೆ.

ಕಾಂಗ್ರೆಸ್‌ ಕೊನೆಯ ಕ್ಷಣದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ನಾರಾಯಣಸ್ವಾಮಿ ಅವರನ್ನೇ ಕಣಕ್ಕಿಳಿ ಸಿತ್ತು. ಈ ಕ್ಷೇತ್ರದಲ್ಲಿ ಒಂಬತ್ತು ಪಾಲಿಕೆ ಸದಸ್ಯರಲ್ಲಿ ಆರು ಮಂದಿ ಕಾಂಗ್ರೆಸ್‌ನವರಿದ್ದರು. ಇವರಲ್ಲಿ ನಾಲ್ವರು ಭೈರತಿ ಅವರ ಜೊತೆಗೆ ಹೋಗಿದ್ದರಿಂದ ಕಾಂಗ್ರೆಸ್‌ ಭಾರಿ ಹಿನ್ನಡೆ ಅನುಭವಿಸಿದೆ. ಇಲ್ಲಿ ಜೆಡಿಎಸ್‌ ಅಭ್ಯರ್ಥಿ ಸಿ.ಕೃಷ್ಣ ಮೂರ್ತಿ ಠೇವಣಿ ಕಳೆದುಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು