ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನದ ಬಗ್ಗೆ ಇದಿಷ್ಟೂ ಮಾಹಿತಿ ನಿಮಗೆ ತಿಳಿದಿರಲೇಬೇಕು

Last Updated 23 ಏಪ್ರಿಲ್ 2019, 4:07 IST
ಅಕ್ಷರ ಗಾತ್ರ

ಮತದಾರರ ಗುರುತಿನ ಚೀಟಿ (ಮತದಾರರ ಫೋಟೊ ಸ್ಲಿಪ್) ಮಾಹಿತಿಗಾಗಿಯೇ ಹೊರತು ಮತಗಟ್ಟೆಯಲ್ಲಿ ಗುರುತಿನ ದಾಖಲೆಯಲ್ಲ. ಹಾಗಾಗಿ, ಮತದಾರರ ಗುರುತಿನ ಚೀಟಿ ಇಲ್ಲದೆಯೂ ಮತದಾನ ಕೇಂದ್ರದಲ್ಲಿ ಈ ಕೆಳಗಿನ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಬಳಸಬಹುದು.

ಪಾಸ್‌ಪೋರ್ಟ್,ಡ್ರೈವಿಂಗ್ ಲೈಸೆನ್ಸ್,ಸೇವಾ ಗುರುತಿನ ಚೀಟಿ (ಕೇಂದ್ರ, ರಾಜ್ಯ ಸರ್ಕಾರ ಇಲ್ಲವೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಗುರುತಿನ ಚೀಟಿ),ಪಾಸ್‌ಬುಕ್ (ಬ್ಯಾಂಕ್, ಅಂಚೆ ಕಚೇರಿ ನೀಡಿರುವ ಭಾವಚಿತ್ರ ಇರುವ ಬುಕ್),ಪಾನ್‌ಕಾರ್ಡ್‌,ಸ್ಮಾರ್ಟ್‌ಕಾರ್ಡ್, (ಕಾರ್ಮಿಕ ಸಚಿವಾಲಯದ ಯೋಜನೆಯಡಿಯಲ್ಲಿ ನೀಡಲಾದ ಕಾರ್ಡ್‌),ನರೇಗಾ ಜಾಬ್ ಕಾರ್ಡ್,ಇಎಸ್‌ಐ ಆರೋಗ್ಯ ವಿಮೆ ಕಾರ್ಡ್‌ (ಕಾರ್ಮಿಕ ಸಚಿವಾಲಲಯದಿಂದ ನೀಡಿರುವಂಥದ್ದು),ಭಾವಚಿತ್ರವಿರುವ ಪಿಂಚಣಿ ದಾಖಲೆ,ಆಧಾರ್ ಕಾರ್ಡ್,ಎಂ.ಪಿ, ಎಂಎಲ್‌ಎ ಮತ್ತು ಎಂಎಲ್‌ಸಿಗಳಿಗೆ ನೀಡಿರುವ ಗುರುತಿನ ಚೀಟಿ.

ಮತದಾನಕ್ಕೆ ಬಳಸಬಹುದಾದ ದಾಖಲೆಗಳು
ಮತದಾನಕ್ಕೆ ಬಳಸಬಹುದಾದ ದಾಖಲೆಗಳು

ಚಾಲೆಂಜ್‌ ವೋಟ್

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದು, ನಿಮ್ಮ ಬಳಿ ಮತದಾರರ ಗುರುತಿನ ಚೀಟಿ ಇಲ್ಲದಿದ್ದ ಸಂದರ್ಭದಲ್ಲಿ ಮೇಲೆ ಉಲ್ಲೇಖಿಸಿದ ಇತರ11 ಬದಲಿ ದಾಖಲೆಗಳನ್ನು ನೀಡಿ ಮತ ಹಾಕಬಹುದು. ಮತಗಟ್ಟೆಯಲ್ಲಿರುವ ಏಜೆಂಟ್‌ಗಳುಗುರುತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ ₹2 ಠೇವಣಿ ಇರಿಸಿ ಮತದಾನ ಮಾಡಬಹುದು. ನಿಯಮ 49ಜೆ ಅನುಸಾರ ಇದನ್ನು ‘ಚಾಲೆಂಜ್‌ ವೋಟ್’ ಎಂದು ಕರೆಯಲಾಗುತ್ತದೆ.

ಟೆಂಡರ್‌ ವೋಟ್‌ ಮಾಡುವುದು ಹೀಗೆ

ನೀವು ಮತಗಟ್ಟೆಗೆ ಬಂದು ಮತ ಚಲಾಯಿಸುವುದಕ್ಕೂ ಮುನ್ನ ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರೂ ಮತ ಚಲಾಯಿಸಿದ್ದರೆ ಅಂತಹ ಸಂದರ್ಭದಲ್ಲಿ ನೀವು ಇನ್ನೊಮ್ಮೆ ಮತ ಚಲಾಯಿಸಬಹುದು. ಅದನ್ನು ‘ಟೆಂಡರ್‌ ವೋಟ್’ ಎಂದು ಕರೆಯಲಾಗುತ್ತದೆ. ಟೆಂಡರ್‌ ವೋಟ್ ಮಾಡಲು ಮತಗಟ್ಟೆ ಅಧಿಕಾರಿಯನ್ನು ಭೇಟಿ ಮಾಡಿ ಸೂಕ್ತ ಸಮಜಾಯಿಷಿ ನೀಡಿ, ಅವರು ನೀಡುವ ನಮೂನೆಯಲ್ಲಿ ಸಹಿ ಮಾಡಬೇಕಾಗುತ್ತದೆ. ಒಂದೊಮ್ಮೆ ವೋಟು ಮಾಡಿ, ಮತ್ತೆ ಟೆಂಡರ್‌ ವೋಟ್‌ ಮಾಡಿದ್ದು ಖಚಿತ ಪಟ್ಟರೆ ಕಾನೂನುರೀತ್ಯ ಕ್ರಮ ಜರುಗಿಸಲು ಅವಕಾಶ ಇದೆ. ನಿರ್ದಿಷ್ಟ ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳ ಪೈಕಿ ಶೇ 14 ರಷ್ಟು ಟೆಂಡರ್‌ ವೋಟ್ ಆಗಿದ್ದರೆ ಮರು ಮತದಾನ ನಡೆಸಲಾಗುತ್ತದೆ.

ಮತಗಟ್ಟೆಯಲ್ಲಿ ಮತದಾನದ ಪ್ರಕ್ರಿಯೆ ಹೀಗಿರುತ್ತೆ

ಮತಗಟ್ಟೆ ಅಧಿಕಾರಿ 1: ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮತ್ತು ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸುತ್ತಾರೆ.

ಮತಗಟ್ಟೆ ಅಧಿಕಾರಿ 2: ನಿಗದಿತ ಬೆರಳಿಗೆ ಶಾಯಿಯ ಗುರುತನ್ನು ಹಾಕುತ್ತಾರೆ. ಮತದಾನದ ಚೀಟಿ ನೀಡಿ ನಿಮ್ಮ ಸಹಿ ಪಡೆದುಕೊಳ್ಳುತ್ತಾರೆ.

ಮತಗಟ್ಟೆ ಅಧಿಕಾರಿ 3: ಮತದಾನದ ಚೀಟಿ ಪಡೆದು ನಿಮ್ಮ ಬೆರಳನ್ನು ಪರಿಶೀಲಿಸುತ್ತಾರೆ.

ಮತದಾನ ಮಾಡುವುದು ಹೀಗೆ

ಮತದಾನದ ಸ್ಥಳಕ್ಕೆ ಹೋಗಿ. ಉರಿಯುತ್ತಿರುವ ಹಸಿರು ದೀಪಮತಯಂತ್ರ ಸಿದ್ಧವಾಗಿರುವುದನ್ನು ಹೇಳುತ್ತದೆ.ಅಭ್ಯರ್ಥಿ ಹೆಸರು, ಚಿಹ್ನೆ ಮುಂದಿರುವ ನೀಲಿ ಬಟನ್‌ ಒತ್ತುವ ಮೂಲಕ ನಿಮ್ಮ ಮತ ಚಲಾಯಿಸಬೇಕು. ಅಭ್ಯರ್ಥಿ ಹೆಸರಿನ ಎದುರಿನ ಕೆಂಪು ದೀಪ ಉರಿಯುತ್ತದೆ. ಬೀಪ್‌ ಧ್ವನಿ ಕೇಳಿಸುತ್ತದೆ.

ವಿವಿಪ್ಯಾಟ್‌ ಮಷಿನ್‌ಮಲ್ಲಿರುವ ಮುದ್ರಿತ ಪ್ರತಿ ನೋಡಿ ಮತ ನೀವು ಚಲಾಯಿಸಿದ ಅಭ್ಯರ್ಥಿಗೆ ಹೋಗಿದೆ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ. ವಿವಿಪ್ಯಾಟ್‌ ಚೀಟಿ ಏಳು ಸೆಕೆಂಡ್‌ವರೆಗೆ ಕಾಣಿಸುತ್ತದೆ. ನಂತರ ಡಬ್ಬದೊಳಗೆ ಬೀಳುತ್ತದೆ. ಬೀಪ್‌ ಶಬ್ದ ಕೇಳುತ್ತದೆ.

ನೀವು ಚಲಾಯಿಸದ ಮತ ನೀವು ಆಯ್ಕೆ ಮಾಡಿದ ವ್ಯಕ್ತಿಗೆ ಬೀಳದಿದ್ದರೆ ಚುನಾವಣಾ ಅಧಿಕಾರಿಗೆ ದೂರು ನೀಡಬಹುದು. ದೂರು ಸರಿಯಾಗಿದ್ದರೆ ಮತ್ತೊಮ್ಮೆ ಮತ ಚಲಾಯಿಸಲು ಷರತ್ತುಬದ್ಧವಾಗಿ ಅವಕಾಶ ನೀಡಲಾಗುತ್ತದೆ.ಅಭ್ಯರ್ಥಿಗಳಲ್ಲಿ ಯಾರೂ ನಿಮಗೆ ಇಷ್ಟವಾಗದಿದ್ದಲ್ಲಿ ನೀವು ನೋಟಾ ಗುಂಡಿಯನ್ನು ಒತ್ತಬೇಕು.

ಚುನಾವಣಾ ಆಯೋಗ ಅಭಿವೃದ್ಧಿಪಡಿಸಿರುವ ಆ್ಯಪ್
ಚುನಾವಣಾ ಆಯೋಗ ಅಭಿವೃದ್ಧಿಪಡಿಸಿರುವ ಆ್ಯಪ್

ಅಂಗೈಯಲ್ಲಿ ಸಮಗ್ರ ಮಾಹಿತಿ

ಚುನಾವಣೆ, ಮತದಾನ, ಮತಗಟ್ಟೆ ಇತ್ಯಾದಿ ಮಾಹಿತಿಗಳಿಗಾಗಿ ಮತದಾರರು ಪಡುತ್ತಿದ್ದ ಸಾಹಸವನ್ನು ಮನಗಂಡು ಕರ್ನಾಟಕ ಚುನಾವಣಾ ಆಯೋಗ ‘ಚುನಾವಣಾ ಆ್ಯಪ್‌’ ಅಭಿವೃದ್ಧಿಪಡಿಸಿದೆ. ಮೊಬೈಲ್‌ನಲ್ಲಿರುವ ಗೂಗಲ್‌ ಪ್ಲೇ ಸ್ಟೋರ್‌ ಮತ್ತು ಆ್ಯಪ್‌ ಸ್ಟೋರ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಸಾಕು. ಒಂದೆ ಕಿಂಡಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ನಿಮ್ಮ ಅಂಗೈಯಲ್ಲಿಯೇ ದೊರೆಯಲಿದೆ.

ಮೊದಲು ಕರ್ನಾಟಕ ಚುನಾವಣಾ ಮಾಹಿತಿ ವ್ಯವಸ್ಥೆ ಎಂಬ ಪೇಜ್‌ ತೆರೆದುಕೊಳ್ಳುತ್ತದೆ. ಅದರಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಟ್ಟಿ, ಕ್ಷೇತ್ರಗಳ ವಿವರ,ಚುನಾವಣಾ ವೇಳಾಪಟ್ಟಿ, ಚುನಾವಣಾ ಅಧಿಕಾರಿಗಳ ಸಮಗ್ರ ವಿವರ, ಸಂಪರ್ಕ ಸಂಖ್ಯೆ, ಇ–ಮೇಲ್‌ ವಿವರಗಳಿರುತ್ತವೆ. ಅಂಗವಿಕಲರಿಗೆ ಉಚಿತ ಸಾರಿಗೆ ವ್ಯವಸ್ಥೆ, ಮೂರು ಗಾಲಿಗಳ ಖುರ್ಚಿ ಕಾಯ್ದಿರಿಸುವ ಸೌಲಭ್ಯಗಳಿವೆ. ಸಮೀಪದ ಆರಕ್ಷಕ ಠಾಣೆ, ಆರೋಗ್ಯ ಸೌಲಭ್ಯ ವಿವರಗಳು ಕಾಣುತ್ತವೆ. ಅಷ್ಟೇ ಏಕೆ ಹಿಂದಿನ ಚುನಾವಣೆಗಳ ವಿವರ,ಅಭ್ಯರ್ಥಿಗಳ ಮಾಹಿತಿಗಳಿವೆ.

ಮತದಾನ ಕೇಂದ್ರ, ಮತದಾರರ ಪಟ್ಟಿ, ಮತದಾರರ ಗುರುತಿನ ಚೀಟಿ ಸೇರಿದಂತೆ ಅನೇಕ ಉಪಯುಕ್ತ ವಿವರಗಳು ಕ್ಷಣಮಾತ್ರದಲ್ಲಿ ಅಂಗೈಯಲ್ಲಿಯೇ ದೊರೆಯಲಿವೆ.ಎಪಿಕ್‌ ಗುರುತಿನ ಸಂಖ್ಯೆ ಅಥವಾ ಹೆಸರು ಹಾಕಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು, ಮತದಾನ ಕೇಂದ್ರ ಹುಡುಕಬಹುದು. ಮತದಾನ ಕೇಂದ್ರ (ಮತಗಟ್ಟೆ) ಪತ್ತೆ ಹಚ್ಚಲು ಕೂಡ ಪರದಾಡಬೇಕಿಲ್ಲ. ಪಥದರ್ಶಕ ವ್ಯವಸ್ಥೆ (ಜಿಪಿಎಸ್‌) ಆನ್‌ ಮಾಡಿದರೆ ನಿಮ್ಮನ್ನು ನೇರವಾಗಿ ಮತಗಟ್ಟೆಗೆ ಕರೆದೊಯ್ಯಲಿದೆ.

ಅಕ್ರಮಗಳ ಮೇಲೆಹದ್ದಿನ ಕಣ್ಣು

ಚುನಾವಣೆ ಮತ್ತು ಮತದಾನದ ವೇಳೆ ಅಕ್ರಮಗಳು ಕಂಡು ಬಂದಲ್ಲಿ ಸಾರ್ವಜನಿಕರು ಸಾಕ್ಷಿ ಸಮೇತ ದೂರು ನೀಡಲು ಚುನಾವಣಾ ಆಯೋಗ ‘ಸಿವಿಜಿಲ್‌’ ಆ್ಯಪ್‌ ಅಭಿವೃದ್ಧಿಪಡಿಸಿದೆ.

ಚುನಾವಣಾಮಾದರಿ ನೀತಿ, ಸಂಹಿತೆ ಉಲ್ಲಂಘಿಸಿ ಮದ್ಯ, ಮಾದಕ ವಸ್ತು ಮತ್ತು ಹಣ ವಿತರಣೆ, ಶಸ್ತ್ರಾಸ್ತ್ರ ಪ್ರದರ್ಶನ, ಮತದಾರರಿಗೆ ಉಡುಗೊರೆ ಆಮಿಷ, ಬೆದರಿಕೆ, ನಕಲಿ ಸುದ್ದಿ, ಕೋಮುದ್ವೇಷದ ಭಾಷಣ, ಪಕ್ಷ ಮತ್ತು ಅಭ್ಯರ್ಥಿಗಳಿಂದ ಮತದಾರರ ಸಾಗಣೆ ಕಂಡು ಬಂದಲ್ಲಿ ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಿವಿಜಿಲ್‌ಗೆ ಅಪ್‌ಲೋಡ್‌ ಮಾಡಬಹುದು.ಚಿತ್ರ, ವಿಡಿಯೊ ಮತ್ತು ಲಿಖಿತ ದೂರು ನೀಡಲು ಸಿವಿಜಿಲ್‌ ಆ್ಯಪ್‌ನಲ್ಲಿ ಅವಕಾಶ ಇದೆ. ದೂರು ನೀಡಿದವರ ಮಾಹಿತಿಗಳನ್ನು ಗೌಪ್ಯವಾಗಿಡಲಾಗುವುದು.

(ಮಾಹಿತಿ: ಮಂಜುಶ್ರೀ ಎಂ.ಕಡಕೋಳ ಮತ್ತು ಗವಿಸಿದ್ದಪ್ಪ ಬ್ಯಾಳಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT