ಪ್ರಜಾವಾಣಿ–ಸಾಹಿತ್ಯ ಸಹಯಾನ...

ಬುಧವಾರ, ಮೇ 22, 2019
32 °C

ಪ್ರಜಾವಾಣಿ–ಸಾಹಿತ್ಯ ಸಹಯಾನ...

Published:
Updated:

ಸ್ವಾತಂತ್ರ್ಯೋತ್ತರ ಕನ್ನಡನಾಡಿನ ಬೆಳವಣಿಗೆಯ ಜೊತೆ ಪ್ರಜಾವಾಣಿಯದು ಭಾವನಾತ್ಮಕ ಸಹಯಾನ. ಸಾಂಸ್ಕೃತಿಕ ರಂಗದ ಎಲ್ಲ ಮನ್ವಂತರಗಳಿಗೆ, ಸಂಕಥನಗಳಿಗೆ ಪ್ರಜಾವಾಣಿ ಪತ್ರಿಕೆ ಹಿತೈಷಿಯಾಗಿ ಜೊತೆಗಿದೆ ಎನ್ನುವ ಸಂಗತಿ ನಮ್ಮ ನಾಡಿನ ಸಾಂಸ್ಕೃತಿಕ ಇತಿಹಾಸದ ಗಮನಾರ್ಹ ಅಧ್ಯಾಯವಾಗಿದೆ.

ಪ್ರಜಾವಾಣಿ ಪತ್ರಿಕೆ 1948 ರ ಅಕ್ಟೋಬರ್ 15ರಂದು ಬೆಂಗಳೂರಿನಲ್ಲಿ ಆರಂಭವಾಯಿತು. ದೇಶವಿದೇಶಗಳ ದೈನಂದಿನ ಸುದ್ದಿಗಳು ಮತ್ತು ವಿಶ್ಲೇಷಣೆಗಳನ್ನು ಓದುಗರಿಗೆ ನೀಡುತ್ತ ಕನ್ನಡ ಜನಮಾನಸದಲ್ಲಿ ನೆಲೆಸಿತು. ಒಂದು ವೃತ್ತಪತ್ರಿಕೆಯಾಗಿ ಓದುಗರ ಎಲ್ಲ ಬಗೆಯ ನಿರೀಕ್ಷೆಗಳನ್ನು ಈಡೇರಿಸುವುದರ ಜೊತೆಗೆ, ಬದುಕಿನ ಮೂಲಸತ್ವವಾದ ಸೃಜನಶೀಲತೆಯ ಅನಾವರಣಕ್ಕೂ ನೆಲೆ ಒದಗಿಸಲು ಅದು ತೀವ್ರ ಆಸಕ್ತಿ ವಹಿಸಿತು. ಸಾಂಸ್ಕೃತಿಕ ರಂಗದ ಎಲ್ಲ ಸಮಕಾಲೀನ ವಿಚಾರಗಳಿಗೂ ವೇದಿಕೆ ಒದಗಿಸಿತು. ಹೊಸಗನ್ನಡ ಸಾಹಿತ್ಯದ ಎಲ್ಲ ಚಳವಳಿಗಳಿಗೆ, ಕನ್ನಡ ರಂಗಭೂಮಿಯ ಹವ್ಯಾಸಿ ಪ್ರಯೋಗಕ್ಕೆ, ಕನ್ನಡ ಸಿನಿಮಾದ ಹೊಸ ಪ್ರಯತ್ನಗಳ ಉಮೇದಿಗೆ ಇನ್ನಿಲ್ಲದ ಒತ್ತಾಸೆ ನೀಡಿತು. ಸಾಹಿತ್ಯ ಮಾತ್ರವಲ್ಲದೆ, ಸಿನಿಮಾ, ರಂಗಭೂಮಿ, ಚಿತ್ರಕಲೆ, ಶಿಲ್ಪಕಲೆ, ಸಂಗೀತ ಹೀಗೆ ಎಲ್ಲ ಕ್ಷೇತ್ರಗಳ ಸೃಜನಶೀಲ ಪ್ರಯೋಗಗಳನ್ನು ಕನ್ನಡಿಗರಿಗೆ ತಲುಪಿಸುವ ಅರ್ಥಪೂರ್ಣ ಸೇತುವೆಯಾಯಿತು.

ಇದನ್ನೂ ಓದಿ: ಕಾಲದ ಬೇಡಿಕೆಗೆ ಸ್ಪಂದಿಸುತಲಿ..

ಪ್ರಜಾವಾಣಿಯ ಪ್ರಥಮ ಸಂಪಾದಕರಾದ, ಆ ಕಾಲದ ಪ್ರಸಿದ್ಧ ಐತಿಹಾಸಿಕ ಕಾದಂಬರಿಕಾರ- ನಾಟಕಕಾರರಾಗಿದ್ದ ಬಿ. ಪುಟ್ಟಸ್ವಾಮಯ್ಯನವರು ವೃತ್ತಪತ್ರಿಕೆಗೆ ನೀಡಿದ ಸಾಹಿತ್ಯಕ ಸ್ಪರ್ಶ ಎಪ್ಪತ್ತು ವರ್ಷಗಳ ಉದ್ದಕ್ಕೂ ನವೀಕೃತಗೊಳ್ಳುತ್ತಿದೆ. ನಂತರ ಸಂಪಾದಕರಾದ ಟಿ.ಎಸ್. ರಾಮಚಂದ್ರರಾವ್, ವೈ.ಎನ್. ಕೃಷ್ಣಮೂರ್ತಿ, ಎಂ.ಬಿ. ಸಿಂಗ್ ಮುಂತಾದವರು ರಾಜಕೀಯ- ಸಾಮಾಜಿಕ ಬೆಳವಣಿಗೆಗಳ ಹಾಗೆ ಸಾಂಸ್ಕೃತಿಕ ಬೆಳವಣಿಗೆಯ ವ್ಯಾಖ್ಯಾನಕ್ಕೂ ಸಮಾನ ಪ್ರಾಮುಖ್ಯ ನೀಡಿದರು. ಬಿ.ವಿ. ವೈಕುಂಠರಾಜು, ಜಿ.ಎಸ್. ಸದಾಶಿವ, ಜಿ.ಎನ್. ರಂಗನಾಥರಾವ್ ಮೊದಲಾದವರು ಅವರ ಕಾಲದ ಯಾವ ಸಂಸ್ಕೃತಿ ಸಂಗತಿಯನ್ನೂ ವಿಶ್ಲೇಷಿಸದೆ ಬಿಡುತ್ತಿರಲಿಲ್ಲ. ಪ್ರಜಾವಾಣಿಯ ಈ ಬದ್ಧತೆಯಿಂದಾಗಿ ಕನ್ನಡದಲ್ಲಿ ‘ಸಾಂಸ್ಕೃತಿಕ ಪತ್ರಿಕೋದ್ಯಮ’ ಸಮೃದ್ಧಗೊಂಡಿತು.

ಪ್ರಜಾವಾಣಿಯ ಭಾನುವಾರದ ಸಾಪ್ತಾಹಿಕ ಪುರವಣಿ ಮತ್ತು 1957 ರಲ್ಲಿ ಆರಂಭಿಸಲಾದ ‘ಪ್ರಜಾವಾಣಿ ದೀಪಾವಳಿ ವಿಶೇಷಾಂಕ’ ಎರಡೂ ಕನ್ನಡ ಸಂಸ್ಕೃತಿಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ. ಹೊಸಗನ್ನಡ ಸಾಹಿತ್ಯದ ಸಣ್ಣಕಥೆಗಳ ಪರಂಪರೆಗೆ 1957 ರಲ್ಲಿ ಆರಂಭವಾದ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ ನೀಡಿರುವ ಕೊಡುಗೆ ಅಸಾಧಾರಣ. ದೀಪಾವಳಿ ವಿಶೇಷಾಂಕಕ್ಕೂ ಕನ್ನಡದ ಸಣ್ಣಕಥೆಗಳಿಗೂ ಕರುಳುಬಳ್ಳಿಯ ಸಂಬಂಧವಿದೆ ಎನ್ನಿಸುವಂತೆ ಪ್ರಮುಖ ಕಥೆಗಾರರ ಅನನ್ಯ ಕಥೆಗಳು ವಿಶೇಷಾಂಕಗಳ ಒಡಲಲ್ಲಿ ಅರಳಿವೆ. ದೀಪಾವಳಿ ವಿಶೇಷಾಂಕ ನಡೆಸುವ ಸಣ್ಣಕಥೆಗಳ ಸ್ಪರ್ಧೆ, ಕನ್ನಡ ಬರಹಗಾರರಿಗೆ ಅಂದಿಗೂ ಇಂದಿಗೂ ಪ್ರಮುಖ ಆಕರ್ಷಣೆಯಾಗಿ, ಪ್ರೇರಣೆಯಾಗಿ ಮುಂದುವರೆದಿದೆ.

ಹಾಗೆಯೇ ನಾಡಿನ ಪ್ರಖ್ಯಾತ ಸಾಹಿತಿಗಳು ಕಥಾಸ್ಪರ್ಧೆಗಳ ತೀರ್ಪುಗಾರರಾಗಿ ಪಾಲ್ಗೊಂಡಿದ್ದಾರೆ. ಅಲ್ಲದೆ, ಹಿಂದೆ ಬಹುಮಾನ ಪಡೆದ ಹಲವರು ಮುಂದೆ ತೀರ್ಪುಗಾರರಾಗಿ ಸಹಕರಿಸಿದ್ದಾರೆ. ಹೀಗೆ ಕನ್ನಡನಾಡಿನ ಸಮಸ್ತ ಸೃಜನಶೀಲ ಬರಹಗಾರರನ್ನು ಒಳಗೊಳ್ಳುವ ವಾರ್ಷಿಕ ಸಾಹಿತ್ಯ ಕೈಂಕರ್ಯವಾಗಿ ‘ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ’ ಮುಂದುವರೆಯುತ್ತಿದೆ. ಪ್ರಜಾವಾಣಿ ದೀಪಾವಳಿ ವಿಶೇಷಾಂಕದ ಈ ಅರವತ್ತೆರಡು ವರ್ಷಗಳಲ್ಲಿ, 1972 ರಿಂದ 1977 ರ ಅವಧಿಯ ಆರು ವರ್ಷಗಳಲ್ಲಿ ಮಾತ್ರ ಸಣ್ಣಕಥೆಗಳ ಬದಲಾಗಿ ನಾಟಕ ಸ್ಪರ್ಧೆ, ಕಿರುಕಾದಂಬರಿ ಸ್ಪರ್ಧೆಯನ್ನು ನಡೆಸಲಾಗಿದೆ. ಅಸಂಗತ ನಾಟಕಗಳು, ಪತ್ತೇದಾರಿ ಕಾದಂಬರಿಗಳು, ವೈಜ್ಞಾನಿಕ ಕಾದಂಬರಿಗಳು, ಖಂಡಕಾವ್ಯಗಳು ಎಲ್ಲಕ್ಕೂ ವೇದಿಕೆ ಒದಗಿಸಲಾಗಿದೆ.

ಪ್ರಜಾವಾಣಿ ವಿಶೇಷಾಂಕದ ಈ ಕಥನಕಾಲ, ಕಾಲದ ಕಥನವೂ ಆಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ಸಣ್ಣಕಥೆಗಳು ವಸ್ತುವಿನ ಹಾಗೆ ವಿನ್ಯಾಸದಲ್ಲೂ ಕಾಲದ ಜೊತೆಗೆ ಹೆಜ್ಜೆ ಹಾಕಿವೆ. ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಸಾಹಿತ್ಯ ಚಳವಳಿಗಳ ಆಶಯಗಳು ಇಲ್ಲಿ ಅಕ್ಷರರೂಪಕ್ಕಿಳಿದಿವೆ. ಎಲ್ಲ ಬಗೆಯ ವೈಚಾರಿಕ ಅಭಿವ್ಯಕ್ತಿಗೂ ಕಥಾಸ್ಪರ್ಧೆಯೇ ಪ್ರಯೋಗಶಾಲೆಯಾಗಿದೆ.

ಈ ಸಣ್ಣಕಥೆಗಳ ವಸ್ತುವಿಸ್ತಾರ ಸಮಕಾಲೀನ ಭಾರತವೇ ಆಗಿದೆ. ನಿಜಕ್ಕೂ ಇವು ಬರೀ ದೀಪಾವಳಿ ವಿಶೇಷಾಂಕಗಳ ಸಣ್ಣಕಥೆಗಳಲ್ಲ, ನಾವೆಂಬ ಮನುಷ್ಯರ ಬದುಕಿನ ತವಕ ತಲ್ಲಣ ತಳಮಳಗಳ ಸಾಮಾಜಿಕ ಸಂಕಥನ ಎಂದು ಹೇಳಬಹುದು.

ಸಣ್ಣಕಥೆ, ಕಾದಂಬರಿ, ಕಾವ್ಯ ಮಾತ್ರವಲ್ಲದೆ ಕನ್ನಡದ ಹಾಸ್ಯ ಸಾಹಿತ್ಯ, ಪ್ರಬಂಧ ಸಾಹಿತ್ಯ, ಪ್ರವಾಸ ಸಾಹಿತ್ಯ, ಅಂಕಣ ಸಾಹಿತ್ಯ ಪ್ರಕಾರಗಳಿಗೂ ಪ್ರಜಾವಾಣಿಯ ಕೊಡುಗೆ ಅಸಾಮಾನ್ಯವಾದದ್ದು ಎನ್ನುವುದನ್ನು ಕನ್ನಡ ಓದುಗರು ಗುರುತಿಸುತ್ತಾರೆ. ಟಿಎಸ್‌ಆರ್ 26 ವರ್ಷಗಳ ಕಾಲ ಪ್ರಜಾವಾಣಿಯಲ್ಲಿ ಬರೆದ ‘ಛೂಬಾಣ’ ರಾಜಕೀಯ- ಸಾಮಾಜಿಕ ಅಂಕಣ ಎಂದಿಗೂ ಸ್ಮರಣೀಯವಾಗಿದೆ. ವಿಜ್ಞಾನ, ತಂತ್ರಜ್ಞಾನ ಸೇರಿ ಅಂಕಣಗಳ ವಸ್ತುವೈವಿಧ್ಯ ಬೆರಗು ಹುಟ್ಟಿಸುತ್ತದೆ. ಯಾವುದೇ ಪ್ರಕಾರವಾಗಲಿ, ಹೊಸ ವಿಚಾರ ಮತ್ತು ಹೊಸ ವಿನ್ಯಾಸಕ್ಕೆ ಇಲ್ಲಿ ಮೊದಲ ಮಣೆ ಸಿಕ್ಕಿದೆ. ಕನ್ನಡ ವಿಮರ್ಶಾ ಪರಂಪರೆಗೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ ಕೊಟ್ಟ ಕೊಡುಗೆಯನ್ನೂ ಬಹಳ ಮುಖ್ಯವಾಗಿ ಗಮನಿಸಬೇಕು. ಹೊಸಗನ್ನಡದ ವಿಮರ್ಶೆಗೆ ಹೊಸ ಪರಿಭಾಷೆಯನ್ನೂ ಇದು ರೂಪಿಸಿದೆ. ‘ಸಾದರ ಸ್ವೀಕಾರ’, ‘ನವಪ್ರಕಾಶನ’ಗಳು ಹಲವು ದಶಕಗಳ ಕಾಲ ಕನ್ನಡದ ಹೊಸ ಪ್ರಕಟಣೆಗಳ ದಾಖಲೀಕರಣವನ್ನು ಮಾಡಿವೆ. ಪ್ರಜಾವಾಣಿ ಮಾಡಿದ ನಾಟಕಗಳ ವಿಮರ್ಶೆ ಮತ್ತು ಸಿನಿಮಾಗಳ ವಿಮರ್ಶೆ ರಂಗಭೂಮಿ ಮತ್ತು ಚಿತ್ರಮಾಧ್ಯಮಗಳನ್ನು ಬೆಳೆಸಿವೆ. ಕನ್ನಡ ಚಲನಚಿತ್ರ ರಂಗದ ಎಲ್ಲ ಪ್ರಯೋಗಗಳಿಗೆ ಇಲ್ಲಿ ಸಿಕ್ಕ ಬೆಂಬಲ ಎಂದಿಗೂ ಸ್ಮರಣೀಯ. ರಾಜ್ಯದ ನೆರೆಹಾವಳಿ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹಿಸಲು ಇಡೀ ಕನ್ನಡ ಚಲನಚಿತ್ರರಂಗದ ಕಲಾವಿದರ ಮೆರವಣಿಗೆಯನ್ನು ಪ್ರಜಾವಾಣಿ ಸಂಘಟಿಸಿತ್ತು.

ತಮ್ಮ ಮಾತೃಭಾಷೆ ಕನ್ನಡವಲ್ಲದಿದ್ದರೂ ಕನ್ನಡ ಪತ್ರಿಕೆಗಳನ್ನು ಸ್ಥಾಪಿಸಿದ ಮತ್ತು ಮುನ್ನಡೆಸುತ್ತಿರುವ ಕೆ.ಎನ್. ಗುರುಸ್ವಾಮಿ, ಕೆ.ಎ. ನೆಟ್ಟಕಲ್ಲಪ್ಪ, ಕೆ.ಎನ್. ಹರಿಕುಮಾರ್, ಕೆ.ಎನ್. ತಿಲಕ್‌ಕುಮಾರ್ ಮತ್ತು ಕೆ.ಎನ್. ಶಾಂತಕುಮಾರ್ ಅವರು ಸೇರಿದ ಕುಟುಂಬ, ಕನ್ನಡ ಸಂಸ್ಕೃತಿಗೆ ಮತ್ತು ಕನ್ನಡದ ಹಿತಾಸಕ್ತಿಗಳಿಗೆ ಕಾವಲು ಪಡೆಯಂತೆ ಕೆಲಸ ಮಾಡಿರುವುದನ್ನು ವಿಶೇಷವಾಗಿ ಗುರುತಿಸಬೇಕು. ಪ್ರಜಾವಾಣಿಯು ತನ್ನ ಈ ಸಾಮಾಜಿಕ-ಸಾಂಸ್ಕೃತಿಕ ಕೈಂಕರ್ಯದಲ್ಲಿ ಸಮಾನತೆಯ ಆಶಯ, ಸಾಮಾಜಿಕ ನ್ಯಾಯ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎಂದೂ ಬಿಟ್ಟುಕೊಟ್ಟಿಲ್ಲ ಎನ್ನುವುದೂ ಅತ್ಯಂತ ಗಮನಾರ್ಹವಾದುದು.

ಕರುನಾಡೇ ಸಂಭ್ರಮಿಸಿ...

ಭಾರತದಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆಯಾಗಿ, 1956ರ ನವೆಂಬರ್ 1 ರಂದು ಪ್ರತ್ಯೇಕ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಾಗ, ಪ್ರಜಾವಾಣಿ ಅದಕ್ಕಾಗಿ ವಿಶೇಷ ಸಂಚಿಕೆಯನ್ನು ರೂಪಿಸಿ ಪ್ರಕಟಿಸಿತು. ಕುತೂಹಲದ ಸಂಗತಿಯೆಂದರೆ, ಮರುವರ್ಷ ಅದನ್ನು ನೆನಪಿಸಿಕೊಂಡು ಸಂಭ್ರಮಿಸಿದ್ದು ಪ್ರಜಾವಾಣಿ ಮಾತ್ರ! 1957 ರ ನವೆಂಬರ್ 1 ರಂದು ಸರ್ಕಾರ, ಕನ್ನಡ ಸಂಸ್ಥೆಗಳು, ಚಳವಳಿಕಾರರು ಸೇರಿ ಯಾರೂ ರಾಜ್ಯ ಅಸ್ತಿತ್ವಕ್ಕೆ ಬಂದದ್ದರ ವಾರ್ಷಿಕೋತ್ಸವ ಆಚರಿಸದೇ ಇರುವುದನ್ನು ಕಂಡು, ಸಂಪಾದಕರಾಗಿದ್ದ ಟಿಎಸ್‌ಆರ್ ಅದಕ್ಕಾಗಿ ಕಾರ್ಯಕ್ರಮ ಸಂಘಟಿಸಿದರು.

ಪ್ರಜಾವಾಣಿಯನ್ನು ಪ್ರಕಟಿಸುವ ‘ದಿ ಪ್ರಿಂಟರ್ಸ್ ಮೈಸೂರು (ಪ್ರೈ) ಲಿಮಿಟೆಡ್’ ಸಂಸ್ಥೆಯ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯ ಆವರಣದಲ್ಲಿ ‘ಪ್ರಥಮ ಕನ್ನಡ ರಾಜ್ಯೋತ್ಸವ’ ಏರ್ಪಡಿಸಲಾಯಿತು. ಸರ್ಕಾರದ ಹಲವು ಮಂತ್ರಿಗಳು, ಗಣ್ಯರನ್ನು ಅದಕ್ಕೆ ಆಹ್ವಾನಿಸಲಾಗಿತ್ತು. ಮರುವರ್ಷದಿಂದ ಸರ್ಕಾರ ಮತ್ತು ನಾಡಿನ ಮೂಲೆಮೂಲೆಗಳ ಸಂಸ್ಥೆಗಳು ರಾಜ್ಯೋತ್ಸವ ಆಚರಣೆಗೆ ಮುಂದಾದವು ಎನ್ನುವುದು ಇತಿಹಾಸ.

ಹಾಗೆಯೇ ಮೈಸೂರು ರಾಜ್ಯದ ಹೆಸರನ್ನು ಬದಲಾಯಿಸಬೇಕು ಎಂದಾದಾಗ ಅದು ‘ಕರ್ಣಾಟಕ’ ಆಗಬೇಕೋ ‘ಕರ್ನಾಟಕ’ ಎಂದಿರಬೇಕೋ ಎಂಬ ವಿವಾದದಲ್ಲಿ ಮಧ್ಯೆ ಪ್ರವೇಶಿಸಿದ ಪ್ರಜಾವಾಣಿ, ಸಾಹಿತಿಗಳಿಂದ ಓದುಗರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿ ಪ್ರಕಟಿಸಿ, ತೀರ್ಮಾನಕ್ಕೆ ನೆರವಾಯಿತು. 1973ರ ನವೆಂಬರ್ 1 ರಂದು ರಾಜ್ಯದ ಹೆಸರು ಕರ್ನಾಟಕ ಎಂದು ಬದಲಾದಾಗ ಪ್ರಜಾವಾಣಿ ವಿಶೇಷ ಪುಟಗಳನ್ನು ಪ್ರಕಟಿಸಿ ‘ಇಂದು ಕನ್ನಡ ಜನಪದದ ಕನಸು ನನಸಾಯಿತು’ ಎಂದು ಸಂಭ್ರಮಿಸಿತು.

ಪುಸ್ತಕ ಲೋಕದಲ್ಲೂ

ದೀಪಾವಳಿ ವಿಶೇಷಾಂಕ ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದ ಕಥೆಗಳನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸುವ ಯೋಜನೆಯನ್ನು ‘ಪ್ರಜಾವಾಣಿ ಪ್ರಕಾಶನ’ ಕೈಗೊಂಡಿದ್ದು ಈ ‘ಹೊನ್ನಕಣಜ’ದ ಮೊದಲ ಸಂಪುಟ ಈಗಾಗಲೇ ಎರಡು ಮುದ್ರಣಗಳನ್ನು ಕಂಡಿದೆ. ಮುಂದಿನ ಎರಡು ಸಂಪುಟಗಳೂ ಕನ್ನಡ ಕಥಾ ಪರಂಪರೆಗೆ ಕನ್ನಡಿ ಹಿಡಿಯಲಿವೆ. ಹಿಂದೆ ‘ಪ್ರಿಂಟರ್ಸ್ ಪ್ರಕಾಶನ’ ಕನ್ನಡದ ಪ್ರಮುಖ ಸಾಹಿತಿಗಳದೂ ಸೇರಿ ಇಪ್ಪತ್ತಕ್ಕೂ ಹೆಚ್ಚಿನ ಪುಸ್ತಕಗಳನ್ನು ಪ್ರಕಟಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಸಂದರ್ಭದಲ್ಲಿ ಪ್ರಜಾವಾಣಿ ಹಲವು ವರ್ಷಗಳ ಕಾಲ ವಿಶೇಷ ಪುರವಣಿಗಳನ್ನು ಪ್ರಕಟಿಸಿದೆ. ಅಲ್ಲದೆ, ಸಾಪ್ತಾಹಿಕ ಪುರವಣಿಯ ಜೊತೆ ಕೆಲವು ಕಾಲ ಪ್ರಕಟಿಸುತ್ತಿದ್ದ "ಸಾಹಿತ್ಯ ಪುರವಣಿ" ಕೂಡ ಹಲವು ಸಂವಾದಗಳಿಗೆ ವೇದಿಕೆ ಒದಗಿಸಿದೆ.

***

ಕಥೆಗಾರ, ನಾಟಕಕಾರರನ್ನು ಗುರುತಿಸಿದ ಪ್ರಜಾವಾಣಿಯೊಂದಿಗೆ ನನ್ನ ಸಂಬಂಧ 1962ರಷ್ಟು ಹಳೆಯದು. ಟಿಎಸ್ಸಾರ್, ವೈಎನ್ಕೆ, ವೈಕುಂಠರಾಜು, ಎಂ.ಬಿ. ಸಿಂಗ್, ಜಿ.ಎನ್. ರಂಗನಾಥರಾವ್ ಸೇರಿದಂತೆ ಇತ್ತೀಚಿನ ಪ್ರಜಾವಾಣಿ, ಸುಧಾ, ಮಯೂರ ಸಂಪಾದಕರು ಈ ಪತ್ರಿಕಾ ಸಮೂಹವನ್ನು ಓದುಗಸ್ನೇಹಿಯಾಗಿಸಲು ಶ್ರಮಿಸಿದ್ದಾರೆ.

ವೈಎನ್ಕೆ, ಎಂ.ಬಿ. ಸಿಂಗ್ ಅವರು ಪ್ರತಿವರ್ಷ ಹುಬ್ಬಳ್ಳಿ- ಧಾರವಾಡಕ್ಕೆ ಬರುತ್ತಿದ್ದರು.‌ ಈ ಭಾಗದ ಸಾಹಿತಿಗಳ ಸಭೆ ಏರ್ಪಡಿಸಿ ಪತ್ರಿಕೆಯಲ್ಲಿ ಯಾವ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಕೇಳುತ್ತಿದ್ದರು. ಹೀಗಾಗಿ, ಪ್ರಜಾವಾಣಿ ನಮಗೆ ಬಹಳ ಆಪ್ತವಾಗುತ್ತಿತ್ತು. ಗೆಳೆಯ ಚಂದ್ರಶೇಖರ ಪಾಟೀಲ (ಚಂಪಾ)ರ ಮೊದಲ ನಾಟಕ ಪ್ರಜಾವಾಣಿ ಏರ್ಪಡಿಸಿದ್ದ ನಾಟಕ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆಯಿತು. ಇದರಿಂದ ಉತ್ಸುಕರಾಗಿ ಆ ಮೇಲೆ ನಾಟಕ ಬರೆಯಲು ಶುರು ಮಾಡಿದರು.

ಅಂಕಣ ಬರೆಯಲು ನನಗೆ ಹಿಂಜರಿಕೆ ಇತ್ತು.‌ ರಂಗನಾಥರಾವ್ ಪ್ರೋತ್ಸಾಹ ನೀಡಿ ಬರೆಸಿದರು.‌ ‘ಚಹಾದ ಜೋಡಿ ಚೂಡಾದಂಗ’ ಎಂಬ ಅಂಕಣ ಬರೆದೆ.

–ಸಿದ್ಧಲಿಂಗ ಪಟ್ಟಣಶೆಟ್ಟಿ, ಸಾಹಿತಿ

ಸಾಹಿತಿಗಳು, ಕಲಾವಿದರು, ರಂಗಕರ್ಮಿಗಳು, ಸಂಸ್ಕೃತಿ ಚಿಂತಕರಿಗೆ ಪ್ರಜಾವಾಣಿ ಮೊದಲಿನಿಂದಲೂ ಪ್ರೋತ್ಸಾಹ, ಆದ್ಯತೆ ನೀಡುತ್ತಾ ಬಂದಿದೆ. ಸಾಹಿತ್ಯ, ಕಲೆ ಬಗ್ಗೆ ಒಲವಿದ್ದವರು ಮತ್ತು ಸಾಹಿತಿಗಳು, ಕಲಾವಿದರ ಒಡನಾಟವಿದ್ದವರೇ ಬಹುಪಾಲು ಪ್ರಜಾವಾಣಿಯ ಸಂಪಾದಕರಾಗಿದ್ದುದು ಬಹುಶಃ ಇದಕ್ಕೆ ಕಾರಣವಿದ್ದಿರಬಹುದು. ಸಾಪ್ತಾಹಿಕ ಪುರವಣಿಯಲ್ಲಿ ಯಾರದಾದರೋ ಕವಿತೆ, ಕಥೆಯೋ ಪ್ರಕಟವಾಯಿತೆಂದರೆ ಅವರು ರಾತ್ರೋರಾತ್ರಿ ಸಾಹಿತಿಯಾದಂತೆಯೇ. ಸಾಪ್ತಾಹಿಕ ಪುರವಣಿಯ ಈ ರೀತಿಯ ಅಧಿಕೃತ ಮುದ್ರೆಯಿಂದಾಗಿ ಹತ್ತಾರು ಕವಿಗಳು, ಕಥೆಗಾರರು ಪ್ರವರ್ಧಮಾನಕ್ಕೆ ಬಂದಿದ್ದಾರೆ. 

ದೇಶ ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡಂತೆ ಸಾಹಿತ್ಯ, ಕಲೆ, ಸಂಸ್ಕೃತಿಯ ಪಾತ್ರ ಹಿನ್ನೆಲೆಗೆ ಸರಿಯುತ್ತ ಬಂತು. ಆ ಕಾಲಘಟ್ಟದಲ್ಲಿ ಸಾಪ್ತಾಹಿಕ ಪುರವಣಿಯು ಏಕಮುಖ ಸಂಸ್ಕೃತಿಯನ್ನು ಬದಿಗಿರಿಸಿ ನಿರ್ಲಕ್ಷಿತ ಬಹುಸಂಸ್ಕೃತಿಯನ್ನು ಪ್ರೋತ್ಸಾಹಿಸಿತು. ಸಮಕಾಲೀನ ರಾಜಕೀಯ, ಸಾಮಾಜಿಕ, ಸಂಸ್ಕೃತಿ ವಿಷಯಗಳ ಚರ್ಚೆಯ ವೇದಿಕೆಯಾಗಿ ಪುರವಣಿ ಬದಲಾಯಿತು. ಬದಲಾವಣೆಯ ಹೊರಳು ದಾರಿಯನ್ನು ದಾಟಿ ಸಾಪ್ತಾಹಿಕ ಪುರವಣಿ ಈಗಲೂ ಇತರ ವಿಷಯಗಳ ಜೊತೆಗೆ ಸಾಹಿತ್ಯ, ಕಲೆ, ಸಂಸ್ಕೃತಿ ವಿಚಾರಕ್ಕೆ ಆದ್ಯತೆ ನೀಡುತ್ತಿರುವುದು ಸಂತೋಷದ ಸಂಗತಿ.

ಇಂದು ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡ ಸಾಹಿತಿಗಳು, ಕಲಾವಿದರ ಸಂಖ್ಯೆ ಜಾಸ್ತಿಯಿದ್ದರೂ ಕೆಲವರಾದರೂ ಸಮಾಜದ ಸಾಕ್ಷಿಪ್ರಜ್ಞೆಯಂತೆ ಕೆಲಸ ಮಾಡುತ್ತಿದ್ದಾರೆ. ಇದು ಸಾಪ್ತಾಹಿಕ ಪುರವಣಿಯ ದೊಡ್ಡ ಕೊಡುಗೆ.  

-ಡಿ.ವಿ. ರಾಜಶೇಖರ, ಪತ್ರಕರ್ತ

ಪ್ರಜಾವಾಣಿ ಪತ್ರಿಕೆ ಕನ್ನಡ ಜನಮಾನಸವನ್ನು ರೂಪಿಸುವಲ್ಲಿ ಮಹತ್ತರ ಕೊಡುಗೆ ಕೊಟ್ಟಿದೆ ಎಂದರೆ ಅತಿಶಯೋಕ್ತಿ ಅನ್ನಿಸಲಾರದು. ಒಂದು ಯೋಚನೆಯನ್ನು ಓದುಗನಿಗೆ ಮನಮುಟ್ಟುವಂತೆ ಉಣಬಡಿಸುವಲ್ಲಿ ಪ್ರಜಾವಾಣಿಯದು ಮಹತ್ವದ ಪಾತ್ರ. ಬಹುಶಃ ಒಂದು ಉತ್ತಮ ಪ್ರತಿಭಾವಂತ ಕಲಾ ವಿಭಾಗವಿದ್ದದ್ದು ಪ್ರಜಾವಾಣಿಯಲ್ಲಿ ಮಾತ್ರ. ಇದು ಕರ್ನಾಟಕದ ಹೆಮ್ಮೆ.

–ಚಂದ್ರನಾಥ ಆಚಾರ್ಯ, ಕಲಾವಿದ

ಪ್ರಜಾವಾಣಿ 1957ರಿಂದಲೇ ಸಾಹಿತ್ಯಿಕ ಅಂಶಗಳಿಗೆ ಪ್ರತ್ಯೇಕ ಪುರವಣಿಯನ್ನು ಪ್ರಾರಂಭ ಮಾಡಿದ ಪತ್ರಿಕೆ. ಭಾನುವಾರದ ಸಾಪ್ತಾಹಿಕ ಪುರವಣಿಗೆ ಹೆಚ್ಚು ಬೇಡಿಕೆ ಇರುವಂತಾದುದು ಅದರಲ್ಲಿನ ಸಾಹಿತ್ಯಿಕ ಸತ್ವದಿಂದ. ಸಾಹಿತ್ಯದಲ್ಲಿ ಹೊಸ ಬಗೆಯ ಚಿಂತನೆ ಪ್ರಾರಂಭವಾದಾಗ ಅದಕ್ಕೆ ಬೆಂಬಲವಾಗಿ ನಿಂತದ್ದು ಪ್ರಜಾವಾಣಿ. ಕನ್ನಡದ ನವ್ಯ, ದಲಿತ, ಬಂಡಾಯ ಪ್ರಕಾರಗಳಿಗೆ ಮಾತ್ರವಲ್ಲದೆ ಹೊಸ ಅಲೆಯ ಚಲನಚಿತ್ರ, ಆಧುನಿಕ ರಂಗಭೂಮಿ ಪ್ರಯೋಗಗಳಿಗೆ ಆದ್ಯತೆ ನೀಡಿ ನೂರಾರು ಸೃಜನಶೀಲ ಪ್ರತಿಭೆಗಳನ್ನು ಬೆಳಕಿಗೆ ತಂದ ಪ್ರಜಾವಾಣಿ ಆಧುನಿಕ ಕನ್ನಡ ಸಾಹಿತ್ಯದ ಸರ್ವತೋಮುಖ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದೆ..

–ಲಕ್ಷ್ಮಣ ಕೊಡಸೆ, ಪತ್ರಕರ್ತ

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಸಕ್ತ ವರ್ಷದಿಂದ ಪ್ರಾರಂಭಿಸಿರುವ ಮಾಧ್ಯಮ ಪ್ರಶಸ್ತಿಗೆ ಪ್ರಜಾವಾಣಿಯು ಮೊದಲ ಸಲವೇ ಭಾಜನವಾಗಿರುವುದಕ್ಕೆ ಅಭಿನಂದನೆಗಳು. ಐವತ್ತು ವರ್ಷಗಳ ಇತಿಹಾಸವನ್ನು ಗಮನಿಸಿದರೆ ಪ್ರಜಾವಾಣಿಯ ಸಾಪ್ತಾಹಿಕ ಪುರವಣಿ ಒಂದು ಸಾಂಸ್ಕೃತಿಕ, ಸಾಹಿತ್ಯಕ ವೇದಿಕೆಯಾಗಿ ಕೆಲಸ ಮಾಡಿದೆ ಎನ್ನಬಹುದು. ಅದರಲ್ಲೂ ತಳವರ್ಗದ ಸಂಸ್ಕೃತಿ ಚಿಂತನೆಗೆ ಪ್ರಜಾವಾಣಿ ಹೆಚ್ಚು ಒತ್ತು ಕೊಟ್ಟಿದೆ. ಆಯಾ ಕಾಲದ ಸಾಂಸ್ಕೃತಿಕ ಬಿಕ್ಕಟ್ಟುಗಳಿಗೆ ಕಣ್ಣು, ಕಿವಿಯಾಗಿ ಚರ್ಚೆ, ವಾಗ್ವಾದಗಳಿಗೆ ಎಡೆಮಾಡಿಕೊಟ್ಟಿದೆ. ಸಾಹಿತ್ಯದ ಗಂಭೀರ ಹಾಗೂ ಮಹತ್ವದ ಚರ್ಚೆಗಳು ಅಲ್ಲಿ ನಡೆದಿವೆ.

ನನ್ನ ಪ್ರಕಾರ ಕವಿ, ಸಾಹಿತಿಗಳ ಯಶಸ್ಸಿನ ಮೊದಲ ಮೆಟ್ಟಿಲು ಸಾಪ್ತಾಹಿಕ ಪುರವಣಿ. ಅಲ್ಲಿ ಕವಿತೆ ಪ್ರಕಟವಾದರೆ ಆತ/ ಆಕೆ ಕವಿಯಾದಂತೆಯೆ ಸರಿ. ತಮ್ಮ ಕೃತಿ ವಿಮರ್ಶೆ ಪುರವಣಿಯಲ್ಲಿ ಬಂದಿದೆ ಎಂದು ಹೇಳಿಕೊಂಡು ಬೀಗುತ್ತಿದ್ದ ದೊಡ್ಡ ಲೇಖಕರನ್ನು ನಾನು ನೋಡಿದ್ದೇನೆ. ಒಂದು ಕಾಲದಲ್ಲಿ ಲೇಖಕರು ಸಾದರ ಸ್ವೀಕಾರದಲ್ಲಿ ತಮ್ಮ ಪುಸ್ತಕದ ಹೆಸರಿದೆಯೆ ಎಂಬುದನ್ನು ಕುತೂಹಲದಿಂದ ಹುಡುಕುತ್ತಿದ್ದರು. ಸಾಹಿತ್ಯದಮಟ್ಟಿಗೆ ಉತ್ತಮ ಗುಣಮಟ್ಟವನ್ನು ಪತ್ರಿಕೆ ಕಾಯ್ದುಕೊಂಡು ಬಂದಿದೆ.

ಇನ್ನು ದೀಪಾವಳಿ ವಿಶೇಷಾಂಕವು ನಡೆಸಿಕೊಂಡು ಬರುತ್ತಿರುವ ಕಥಾಸ್ಪರ್ಧೆ, ನಂತರ ಸೇರಿಕೊಂಡ ಕವನ ಸ್ಪರ್ಧೆ ವಿಶ್ವವಿಖ್ಯಾತವಾಗಿವೆ. ಆ ಮೂಲಕ ಯುವ ಲೇಖಕರಿಗೆ ವಿಶ್ವಾಸವನ್ನು ತುಂಬುವ, ಒಂದು ಅಧಿಕೃತತೆಯನ್ನು ತಂದುಕೊಡುವ ಜವಾಬ್ದಾರಿಯುತ ಕೆಲಸವನ್ನು ಪತ್ರಿಕೆ ನಿರ್ವಹಿಸುತ್ತಿದೆ. ಹೀಗೆ ಪ್ರಜಾವಾಣಿಯು ಸಾಹಿತ್ಯವನ್ನು ಬೆಳೆಸುವ, ಸಾಹಿತಿಗಳನ್ನು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರೆ ಅತಿಶಯೋಕ್ತಿಯಾಗಲಾರದು.

-ಡಾ.ಮೂಡ್ನಾಕೂಡು ಚಿನ್ನಸ್ವಾಮಿ, ಸಾಹಿತಿ

ನಾನು ಸಾಹಿತ್ಯದ ವಿದ್ಯಾರ್ಥಿಯಾಗಲು ಕಾರಣವೇ ಪ್ರಜಾವಾಣಿ– ಅಲ್ಲಿನ ಸಾಪ್ತಾಹಿಕ ಪುರವಣಿ. ವಿದ್ಯಾರ್ಥಿಗಳಿಗೆ ಕೈಮರವಾಗಿ ನೀಡಿದ ಕೊಡುಗೆಗೆ ಸಾಟಿಯಿಲ್ಲ. ಅದರ ಸಾಹಿತ್ಯ ಸ್ಪರ್ಶವೇ ಓದುಗರನ್ನು ಸೆಳೆಯುತ್ತದೆ. ನನ್ನ ಅಭಿಪ್ರಾಯದಲ್ಲಿ ಪ್ರಜಾವಾಣಿ ಕನ್ನಡ ಸಾಹಿತ್ಯದ ವಿಶ್ವವಿದ್ಯಾಲಯ.

–ಗಂಗಾಧರ ಮೊದಲಿಯಾರ್ , ಪತ್ರಕರ್ತ

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !