ಕೆಂಪೇಗೌಡ ಗೋಪುರದಿಂದ ಮೌಂಟ್‌ ಎವರೆಸ್ಟ್‌ವರೆಗೆ

ಸೋಮವಾರ, ಜೂನ್ 17, 2019
30 °C

ಕೆಂಪೇಗೌಡ ಗೋಪುರದಿಂದ ಮೌಂಟ್‌ ಎವರೆಸ್ಟ್‌ವರೆಗೆ

Published:
Updated:

ಬೆಂಗಳೂರು: ಈ ಸ್ಮಾರಕದಲ್ಲಿನ ಜ್ಯೋತಿ ಬೆಳಗಿಸಲು ಕೆಲವು ವರ್ಷಗಳ ಹಿಂದೆ, ವಾರಕ್ಕೆ 15 ಎಲ್‌ಪಿಜಿ ಸಿಲಿಂಡರ್‌ಗಳನ್ನು ಬಳಸಲಾಗುತ್ತಿತ್ತು. ಅಲ್ಲಿ ಈಗ ಕೊಳವೆ ಮೂಲಕ ನೈಸರ್ಗಿಕ ಅನಿಲದ(ಪಿಎನ್‌ಜಿ) ಸಂಪರ್ಕ ಕಲ್ಪಿಸಲಾಗಿದೆ. ಯಾವುದದು ಸ್ಮಾರಕ?

‘ಅದು ನಮ್ಮ ಹುತಾತ್ಮ ಸೈನಿಕರ ಹೆಸರಿನಲ್ಲಿ, ದೆಹಲಿಯ ಇಂಡಿಯಾ ಗೇಟ್‌ ಬಳಿ ಇರುವ ಅಮರ್‌ ಜವಾನ್‌ ಜ್ಯೋತಿ’ ಎಂಬ ಉತ್ತರವನ್ನು ಥಟ್ ಅಂತ ಹೇಳಿದರು ಆರ್‌.ಟಿ.ನಗರದ ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಗಳು.

ಪಾಕಿಸ್ತಾನದ ಸ್ವಾತ್‌ ಕಣಿವೆಯಲ್ಲಿ ತಾಲೀಬಾನ್‌ಗಳ ಪ್ರಭಾವದ ಕುರಿತು 2008ರಲ್ಲಿ ಬಿಬಿಸಿ ಉರ್ದು ಸುದ್ದಿ ಜಾಲತಾಣಕ್ಕಾಗಿ ‘ಗುಲ್‌ ಮಕಾಯಿ’ ಎಂಬ ಅನಾಮಿಕ ಹೆಸರಿನಿಂದ ಒಬ್ಬರು ಬ್ಲಾಗ್‌ ಬರೆಯುತ್ತಿದ್ದರು. ಅವರು ಈಗ ಯಾವ ಹೆಸರಿನಿಂದ ನಮಗೆಲ್ಲ ಚಿರಪರಿಚಿತರಾಗಿದ್ದಾರೆ?

ಇಂದಿರಾನಗರದ ನ್ಯಾಷನಲ್‌ ಪಬ್ಲಿಕ್ ಸ್ಕೂಲ್‌ನ ತಂಡ ಯಾವುದೇ ಗೊಂದಲ ಇಲ್ಲದೆ, ‘ನೋಬೆಲ್‌ ಪುರಸ್ಕೃತೆ ಮಲಾಲಾ ಯೂಸೂಫ್‌ ಝೈ’ ಎಂಬ ಉತ್ತರವನ್ನು ನೀಡಿ ಅಂಕ ಗಿಟ್ಟಿಸಿಕೊಂಡಿತು.

‘ದೀಕ್ಷಾ’ ಸಂಸ್ಥೆ ಮತ್ತು ‘ಕೆನರಾ ಬ್ಯಾಂಕ್‌’ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಪ್ರಜಾವಾಣಿ ಕ್ವಿಜ್‌’ ಚಾಂಪಿಯನ್‌ಶಿಪ್‌ನ 5ನೇ ಆವೃತ್ತಿಯ ಬೆಂಗಳೂರು ವಲಯ ಮಟ್ಟದ ಸ್ಪರ್ಧೆಯಲ್ಲಿ ಕ್ವಿಜ್‌ ಮಾಸ್ಟರ್‌ ಪ್ರಶ್ನೆ ಕೇಳುವುದೇ ತಡ, ಬಹುತೇಕ ಸ್ಪರ್ಧಾರ್ಥಿಗಳು ಥಟ್‌ ಅಂತ ಉತ್ತರಿಸಿ, ಅಂಕಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದರು.

‘ಆ್ಯನ್‌ ಎರಾ ಆಫ್‌ ಡಾರ್ಕ್‌ನೆಸ್‌ ಪುಸ್ತಕ, ಕಾಂಗ್ರೆಸ್‌ನ ಹಸ್ತ ಚಿಹ್ನೆ, ಕೊಚ್ಚಿ ಟಸ್ಕರ್ಸ್‌ ತಂಡದ ಲೋಗೊ, ಟ್ವೀಟ್‌ವೊಂದರ ಚಿತ್ರಗಳನ್ನು ತೋರಿಸಿ, ಈ ನಾಲ್ಕು ಚಿತ್ರಗಳಿಗೆ ಏನು ಸಾಮ್ಯತೆ ಇದೆ’ ಎಂದಾಗ. ‘ಶಶಿ ತರೂರ್‌’ ಎಂಬ ಉತ್ತರ ಬಂತು. ‘ತರೂರ್‌ ಅವರು ಆ್ಯನ್‌ ಎರಾ ಆಫ್‌ ಡಾರ್ಕ್‌ನೆಸ್‌ ಪುಸ್ತಕ ಬರೆದಿದ್ದಾರೆ, ಅವರು ಕಾಂಗ್ರೆಸ್‌ನಲ್ಲಿದ್ದಾರೆ, ಕೊಚ್ಚಿ ನಗರವಿರುವ ಕೇರಳದವರು ಹಾಗೂ ನೀವು ತೋರಿಸಿರುವ ಟ್ವೀಟ್‌, ಅವರೇ ಮಾಡಿದ್ದು’ ಎಂದು ನಂದಿನಿ ಬಡಾವಣೆಯ ಪ್ರೆಸಿಡೆನ್ಸಿ ಶಾಲಾ ತಂಡ ವಿವರ ನೀಡಿದಾಗ, ಸಭಿಕರ ಸಹ ದಂಗಾದರು.

ಕೆಂಪೇಗೌಡ ಗೋಪುರದ ಕುರಿತ ಪ್ರಶ್ನೆಗೆ, ‘ನಗರದ ಗಡಿಯನ್ನು ಗುರುತಿಸಲು ನಾಲ್ಕು ದಿಕ್ಕಿಗೂ ಗೋಪುರಗಳನ್ನು ನಿರ್ಮಿಸಲಾಗಿತ್ತು’ ಎಂಬ ಮಾಹಿತಿಯೂ ವಿದ್ಯಾರ್ಥಿಗಳ ನೆನಪಿನಲ್ಲಿತ್ತು. ಜ್ಯಾಮಿತಿಯ ಲೆಕ್ಕಾಚಾರದ ಪ್ರಕಾರ ತಜ್ಞ ಆ್ಯಂಡ್ರೊ ಒಂದರ ಪ್ರದೇಶದ ಎತ್ತರ ಅಳೆದ, ಅದು ಸರಿಯಾಗಿ 29,000 ಅಡಿ ಎತ್ತರವಿತ್ತು. ಆದರೂ, ನಿಖರವಾಗಿ ಅಳತೆ ಮಾಡಿದ್ದಾರೆ ಎಂದು ಜನ ನಂಬಲು 29,002 ಅಡಿ ಎಂದು ಬರೆದ. ಆ ಪ್ರದೇಶದ ಹೆಸರೇನು ಎಂದಾಗ, ‘ಮೌಂಟ್‌ ಎವರೆಂಟ್‌’ ಎಂಬ ಉತ್ತರ ವಿದ್ಯಾರ್ಥಿಗಳಿಂದ ತೂರಿ ಬಂತು.   

ರೋಚಕ ಟೈ ಬ್ರೇಕರ್‌: ಪ್ರಶ್ನೋತ್ತರದ ಅಂತಿಮ ಸುತ್ತು ಮುಗಿದಾಗ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ಮತ್ತು ಆರ್‌.ಟಿ.ನಗರದ ಪ್ರೆಸಿಡೆನ್ಸಿ ಶಾಲೆಯ ತಂಡಗಳು ತಲಾ 90 ಅಂಕಗಳನ್ನು ಗಳಿಸಿದ್ದವು. ಆಗ ಕ್ವಿಜ್‌ ಮಾಸ್ಟರ್‌ ಮೇಘವಿ ಮಂಜುನಾಥ್, ಕಲಾಕೃತಿ ಮತ್ತು ವ್ಯಕ್ತಿಯೊಬ್ಬರು ಇರುವ ಅಂಚೆ ಚೀಟಿಯೊಂದನ್ನು ಸ್ಕ್ರೀನ್‌ನಲ್ಲಿ ತೋರಿಸಿ, ‘ಯಾವ ವ್ಯಕ್ತಿಯ ನೆನಪಿನಲ್ಲಿ ಇದನ್ನು ಹೊರತರಲಾಗಿದೆ’ ಎಂದು ಹೆಚ್ಚುವರಿ ಪ್ರಶ್ನೆ ಹಾಕಿದರು.

ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿಗಳು ‘ರಾಜಾ ರವಿವರ್ಮ’ ಎಂದು ಒಂದೇ ಉಸಿರಿಗೆ ಸರಿ ಉತ್ತರ ಹೇಳಿ, ರಾಜ್ಯಮಟ್ಟದ ಸ್ಪರ್ಧಾ ಕಣಕ್ಕೆ ಜಿಗಿದರು.

ಎಚ್‌.ಎಸ್‌.ಆರ್‌.ಬಡಾವಣೆಯ ಜೆಎಸ್‌ಎಸ್‌ ಪಬ್ಲಿಕ್‌ ಸ್ಕೂಲ್‌ನ ಆರ್‌.ಶರತ್‌ ಚಂದ್ರ–ಕೆ.ಹರಿ, ಸೇಂಟ್‌ ಜೋಸೆಫ್‌ ಬಾಯ್ಸ್‌ ಹೈಸ್ಕೂಲ್‌ನ ಶ್ಲೋಕ ಚರಣ್‌–ಅಧ್ಯೋತ್‌ ಚನ್ನಕೇಶವ ಹಾಗೂ ನಂದಿನಿ ಬಡಾವಣೆಯ ಪ್ರೆಸಿಡೆನ್ಸಿ ಶಾಲೆಯ ಧ್ರುವ ದೀಪಕ್‌–ಕೆ.ಪ್ರಣವ್‌ ಮಧ್ಯಸ್ಥ ಒಳಗೊಂಡ ತಂಡಗಳು ಬೆಂಗಳೂರು ವಲಯ ಮಟ್ಟದ ಸ್ಪರ್ಧೆಯಲ್ಲಿದ್ದವು. 

ತಿಣುಕಾಡಿಸಿದ ‘ಪಾಪ್‌ಕಾರ್ನ್‌ ಸದ್ದು’

1900ರ ವೇಳೆಗಾಗಲೇ ಸಾಕಷ್ಟು ಪ್ರಚಲಿತಕ್ಕೆ ಬಂದಿದ್ದ ಪಾಪ್‌ಕಾರ್ನ್, ಎಲ್ಲ ಮನರಂಜನಾ ಸ್ಥಳಗಳಲ್ಲಿ ದೊರೆಯುತ್ತಿತ್ತು. ಆದರೆ ಚಲನಚಿತ್ರ ಮಂದಿರಗಳಲ್ಲಿ ಮಾತ್ರ ಅವುಗಳಿಗೆ ಸುಮಾರು 30 ವರ್ಷಗಳ ಕಾಲ  ಏಕೆ ಪ್ರವೇಶ ಇರಲಿಲ್ಲ ಎಂಬ ಪ್ರಶ್ನೆ ಸ್ಪರ್ಧಿಗಳನ್ನು ಗೊಂದಲಕ್ಕೀಡುಮಾಡಿತು. 

ಜನರು ಪಾಪ್‌ಕಾರ್ನ್ ತಿನ್ನಲು ಇಷ್ಟಪಡುತ್ತಿರಲಿಲ್ಲ.. ಆಗ ಸಿನಿಮಾ ಮಂದಿರವೇ ಇರಲಿಲ್ಲ.. ಪಾಪ್‌ಕಾರ್ನ್ ಆಗ ಲಭ್ಯವಿರಲ್ಲ.. – ಹೀಗೆ ವೈವಿಧ್ಯಮಯ ಉತ್ತರಗಳು ತೂರಿಬಂದವು. ಆದರೆ ಅವು ಯಾವುವೂ ಸರಿಯುತ್ತರ ಆಗಿರಲಿಲ್ಲ. ಆಗ ಮೂಕಿ ಚಿತ್ರಗಳ ಕಾಲ ಎಂದು ಹೇಳಲು ಯತ್ನಿಸಿದ ತುಮಕೂರಿನ ತಂಡ, ಉತ್ತರವನ್ನು ಸಮರ್ಥಿಸಿಕೊಳ್ಳಲು ವಿಫಲವಾಯಿತು. ಪ್ರಶ್ನೆ ಪ್ರೇಕ್ಷಕರ ಪಾಲಾಯಿತು. ಜಾಹ್ನವಿ ಎಂಬ ವಿದ್ಯಾರ್ಥಿನಿ ಗ್ರಹಿಸಿದ ಉತ್ತರ ಸರಿಯಾಗಿತ್ತು. 

ಪಾಪ್‌ಕಾರ್ನ್ ಹುಟ್ಟಿಕೊಂಡ ಸಮಯವು ಮೂಕಿ ಚಲನಚಿತ್ರಗಳ ಕಾಲ. ಸಿನಿಮಾ ನೋಡುತ್ತಾ ಪಾಪ್‌ಕಾರ್ನ್ ತಿನ್ನುತ್ತಿದ್ದರೆ, ಅದರ ಸದ್ದು ಕಿರಿಕಿರಿ ಉಂಟು ಮಾಡುತ್ತಿತ್ತು ಎಂಬ ಕಾರಣಕ್ಕೆ ಥಿಯೇಟರ್‌ಗಳಿಂದ ಅದನ್ನು ದೂರವಿರಿಸಲಾಗಿತ್ತು.

ಸಾಮಾನ್ಯಜ್ಞಾನ ಓರೆಗೆ ಹಚ್ಚಿದ ಪೂರ್ವಭಾವಿ ಪರೀಕ್ಷೆ

‘ಕೆನಡಾದ ನಿಯತಕಾಲಿಕೆ ಮ್ಯಾಕ್ಲೀನ್‌ 2017ರ ಫೆಬ್ರುವರಿಯಲ್ಲಿ ಹೊರತಂದ ಸಂಚಿಕೆಗೆ ಎರಡು ಪ್ರತ್ಯೇಕ ಬೆಲೆಗಳನ್ನು ನಿಗದಿಪಡಿಸಲಾಗಿತ್ತು. ಒಂದು ಸಾಮಾಜಿಕ ಸಮಸ್ಯೆಯತ್ತ ಗಮನಸೆಳೆಯಲು ಪ್ರತ್ಯೇಕ ಸಮುದಾಯಕ್ಕೆ ಬೇರೆ–ಬೇರೆ ಬೆಲೆಯಲ್ಲಿ ಮಾರಾಟ ಮಾಡಲಾಗಿತ್ತು. ಆ ಸಮಸ್ಯೆ ಯಾವುದೆಂದು ನಿಮಗೆ ಗೊತ್ತಾ... ಎಂಬ ಪ್ರಶ್ನೆ ಪರದೆಯಲ್ಲಿ ಮೂಡಿದಾಗ, ವಿದ್ಯಾರ್ಥಿಗಳಲ್ಲಿ ಗುಸು–ಗುಸು ಮಾತುಗಳು. ಏಕಿರಬಹುದೆಂಬ ಕುತೂಹಲ.

‘ಗಂಡಸರು ಮತ್ತು ಹೆಂಗಸರಿಗೆ ಆ ನಿಯತಕಾಲಿಕೆಯನ್ನು ಬೇರೆ–ಬೇರೆ ಬೆಲೆಗೆ ಮಾರಾಟ ಮಾಡಲಾಗಿತ್ತು’ ಎಂದು ವಿದ್ಯಾರ್ಥಿಯೊಬ್ಬ ಉತ್ತರಿಸಿದ, ‘ಮಹಿಳಾ–ಪುರುಷರ ಸಮಾನ ಕೆಲಸಕ್ಕೆ, ಸಮಾನ ವೇತನ ಜಾರಿಯ ಒತ್ತಾಯಕ್ಕಾಗಿ ಹೆಂಗಸರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿತ್ತು’ ಎಂದು ಕ್ವಿಜ್‌ ಮಾಸ್ಟರ್‌ ವಿವರ ನೀಡಿದರು. ‘ಓ ಹೌದಾ’ ಎಂಬ ಉದ್ಗಾರ ಸಭಿಕರದ್ದಾಗಿತ್ತು.

* ಎಲ್ಲ ಸಾಧನೆಗೂ ಶಿಕ್ಷಣವೇ ಮೂಲ. ನೀವು ಮೊದಲು ಚನ್ನಾಗಿ ಓದಿ. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ. ಆಮೇಲೆ ಬೇಕಾದರೆ ಸಿನಿಮಾಗಳನ್ನು ನೋಡಿ.

-ಹರ್ಷಿಕಾ ಪೂಣಚ್ಚ, ಚಿತ್ರನಟಿ

* ಪ್ರಚಲಿತ ವಿದ್ಯಮಾನಗಳನ್ನು ತಿಳಿಯಲು ದಿನಾಲು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆ ಓದುತ್ತೇನೆ. ಅದು ಕ್ವಿಜ್‌ಗೆ ಸಹಕಾರಿಯಾಯಿತು. ಈ ಬಾರಿ ಸೋತಿದ್ದೇನೆ. ಬೇಜಾರಿಲ್ಲ. ಮುಂದಿನ ಬಾರಿ ಮತ್ತೆ ಭಾಗವಹಿಸುತ್ತೇನೆ.

–ಕೆ.ಅನಗಾ ಬಾಬು, 9ನೇ ತರಗತಿ

ಈ ಕ್ವಿಜ್‌ ತಯಾರಿಗಾಗಿಯೇ ಮೊಬೈಲ್‌ನಲ್ಲಿ ಸುದ್ದಿಗಳನ್ನು ಓದುತ್ತಿದ್ದೆ. ಸ್ಪರ್ಧೆಯನ್ನು ತುಂಬಾ ಚನ್ನಾಗಿ ನಡೆಸಿಕೊಟ್ಟರು. ಉತ್ತರಗಳು ತಕ್ಷಣಕ್ಕೆ ಹೊಳೆಯಲಿಲ್ಲ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಲಿಲ್ಲ ಎಂಬ ಸಣ್ಣ ಬೇಜಾರಿದೆ.

–ಅಗ್ನಿಶ್ವರ್, 9ನೇ ತರಗತಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !