‘ಪ್ರಜಾ ಪ್ರಣಾಳಿಕೆ’ ಅಭಿಯಾನಕ್ಕೆ ಚಾಲನೆ

7

‘ಪ್ರಜಾ ಪ್ರಣಾಳಿಕೆ’ ಅಭಿಯಾನಕ್ಕೆ ಚಾಲನೆ

Published:
Updated:
Prajavani

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಚಿತ್ರ ನಟ ಪ್ರಕಾಶ್‌ ರಾಜ್‌ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲು ಜನರ ಜತೆ ಚರ್ಚಿಸುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿದರು.

ಮಹಾತ್ಮಗಾಂಧಿ ಪ್ರತಿಮೆ ಬಳಿ ಸಾರ್ವಜನಿಕರ ಜತೆ ಚರ್ಚಿಸುವ ಮೂಲಕ ‘ಪ್ರಜಾ ಪ್ರಣಾಳಿಕೆ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಕಾಶ್‌ ರಾಜ್‌, ‘ಜನತೆ ನಮ್ಮಿಂದ ಏನು ಬಯಸುತ್ತಾರೆ ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಪ್ರಣಾಳಿಕೆ ರೂಪಿಸುವುದಕ್ಕೆ ಬದ್ಧನಾಗಿದ್ದೇನೆ. ಪ್ರಣಾಳಿಕೆ ರೂಪಿಸುವುದರ ಜತೆಗೆ ಸಂಸತ್ತಿಗೆ ಆಯ್ಕೆ ಆದ ಬಳಿಕ ಆ ಸಮಸ್ಯೆಗಳನ್ನು ಒಯ್ದು, ಅದಕ್ಕೆ ಪರಿಹಾರ ಒದಗಿಸಲು ಶ್ರಮಿಸುತ್ತೇನೆ’ ಎಂದರು.

ಸಿ.ವಿ.ರಾಮನ್‌ ನಗರಕ್ಕೆ ಭೇಟಿ: ಪ್ರಜಾ ಪ್ರಣಾಳಿಕೆ ತಯಾರಿಸಲು ಎಂಟು ತಂಡಗಳಲ್ಲಿ ಸಂಚರಿಸಲಾಗುತ್ತಿದೆ. ಇದಕ್ಕಾಗಿ ಜನ ಸಾಮಾನ್ಯರು ಪ್ರಯಾಣಿಸುವ ಆಟೊ ರಿಕ್ಷಾಗಳನ್ನು ಬಳಸಿಕೊಳ್ಳಲಾಗಿದೆ. ಪ್ರಕಾಶ್‌ ಭಾನುವಾರ ದಿನವಿಡೀ ಸರ್‌ ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದಾದ್ಯಂತ ಸಂಚರಿಸಿ ಮತದಾರರನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಆರು ಕೊಳೆಗೇರಿಗಳಿಗೆ ಭೇಟಿ ನೀಡಿದರು. ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದಾಗ, ಮೂಲಸೌಕರ್ಯ, ಶಿಕ್ಷಣ ಮತ್ತು ಆರೋಗ್ಯದ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ‘ನಿಮ್ಮ ಕ್ಷೇತ್ರದ ಲೋಕಸಭಾ ಸದಸ್ಯರು ಯಾರು’ ಎಂದು ಅವರು ಕೊಳಗೇರಿ ನಿವಾಸಿಗಳನ್ನು ಕೇಳಿದಾಗ, ‘ಗೊತ್ತಿಲ್ಲ’ ಎಂದು ಉತ್ತರಿಸಿದರು. ಮುಂದಿನ ಏಳು ದಿನಗಳಲ್ಲಿ ಸರ್ವಜ್ಞನಗರ, ಮಹದೇವಪುರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಮತ್ತು ಶಿವಾಜಿನಗರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !