ಶುಕ್ರವಾರ, ಜನವರಿ 17, 2020
24 °C

ಚಳಿಗಾಲದ ಆಪ್ತ ತಾಣಗಳು...

ಆತ್ರೇಯ Updated:

ಅಕ್ಷರ ಗಾತ್ರ : | |

Prajavani

ಜನವರಿ ತಿಂಗಳ ಪೂರ್ತ ’ಹೊಸ ವರ್ಷಾಚರಣೆ’ಯ ಗುಂಗು. ಜತೆಗೆ, ಚಾರಣಿಗರಿಗೆ ಆಪ್ತವಾದ ತಿಂಗಳು. ಚುಮು ಚುಮು ಚಳಿಯಲ್ಲಿ ಬೆಟ್ಟ ಏರುವುದು, ಸೈಕಲ್ ಸವಾರಿ ಮಾಡುವುದು, ಬೀಜ್‌ಗಳಲ್ಲಿ ಅಡ್ಡಾಡುವುದೆಂದರೆ ಅದರ ಸುಖವೇ ಬೇರೆ. ದೇಶದ ವಿವಿಧ ಪ್ರವಾಸಿ ತಾಣಗಳಲ್ಲಿ ತರಗುಟ್ಟುವ ಚಳಿಯಲ್ಲೂ ಇಂಥ ತರ ತರ ಕಾರ್ಯಕ್ರಮಗಳನ್ನು ಅಯೋಜಿಸಲಾಗುತ್ತಿದೆ.

ಮಾಗಿ ಚಳಿಯ ಸುಖಾನುಭವದ ಜತೆಗೆ, ಪ್ರವಾಸಿ ತಾಣಗಳಲ್ಲಿನ ಇಂಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಅಂಥ ತಾಣಗಳ ಪುಟ್ಟ ಪರಿಚಯ ಇಲ್ಲಿನದ್ದು. ಇನ್ನೂ ಬೇಕೆಂದರೆ ಹೇಳಲಾಗದು. ಹೋಗಿಯೇ ಅನುಭವಿಸಬೇಕು.

ರಣ್‌ ಆಫ್ ಕಚ್ (ಗುಜರಾತ್)
ಭಾರತದ ಏಕೈಕ ಉಪ್ಪು ಮರುಭೂಮಿ ಗುಜರಾತ್‌ನ ರಣ್‌ ಆಫ್ ಕಚ್. ಬೆಳದಿಂಗಳ ರಾತ್ರಿ ಮರುಭೂಮಿ ಆಲಿವ್‌ ಬಣ್ಣಕ್ಕೆ ತಿರುಗುವುದನ್ನು ಇಲ್ಲಿ ನೋಡಬಹುದು. ಜತೆಗೆ ಗುಜರಾತಿ ಜಾನಪದ ಕಲಾವಿದರು ಪ್ರಸ್ತುತಪಡಿಸುವ ನೃತ್ಯ ನೋಡಬಹುದು. ಅದ್ಭುತವಾದ ಗೀತೆಗಳು, ಸಂಗೀತವನ್ನು ಕೇಳಬಹುದು. ಬಂಡಿಗಳಲ್ಲಿ ಓಡಾಟ, ಉಪ್ಪಿನ ಮರುಭೂಮಿ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕ್ಕೊಳ್ಳಬಹುದು.

ಇಲ್ಲಿನ ಧೋರ್ಡೋ ಗ್ರಾಮದ ಟೆಂಟ್‌ನಲ್ಲಿ ಉಳಿದುಕೊಳ್ಳುವುದು ಒಂದು ಸುಂದರ ಅನುಭವ. ಇಲ್ಲಿ ಅಕ್ಟೋಬರ್‌ನಿಂದ ಫೆಬ್ರುವರಿವರೆಗೆ ’ಕಛ್‌ ಉತ್ಸವ ’ ನಡೆಯುತ್ತದೆ. ಇದೇ ವೇಳೆ ರಣ್‌ ಉತ್ಸವವನ್ನೂ ನೋಡಬಹುದು. ಇಲ್ಲಿ ಟೆಂಟ್‌ಗಳಲ್ಲಿ ಉಳಿಯಲು ಪ್ರತಿ ರಾತ್ರಿಗೆ ಒಂದು ಸಾವಿರದ ನೂರು ರೂಪಾಯಿಗಳಿಂದ ದರ ಆರಂಭವಾಗುತ್ತದೆ.

ಗುಜರಾತ್‌ ವಿಶೇಷ ಖಾದ್ಯಗಳಾದ ರೊಟ್ಟಿ, ದಾಲ್, ಕದಿ, ಮೊಸರು, ಅಕ್ಕಿ ಮತ್ತು ಇತರ ತರಕಾರಿ ಮೇಲೋಗರಗಳನ್ನು ಒಳಗೊಂಡಿರುವ ವಿಶಿಷ್ಟ ಥಾಲಿ ಲಭ್ಯ. ಸುತ್ತಾಡಿಕೊಂಡು, ರಣ್‌ ಉತ್ಸವ ನೋಡಿಕೊಂಡು ಭುಜೋಡಿ, ಧಮ್ಕಾಡಾ, ನಿರೋನಾ, ಭಚೌ ಮುಂತಾದ ಕಲಾ ಗ್ರಾಮಗಳಲ್ಲಿ ಶಾಪಿಂಗ್ ಮಾಡಬಹುದು. ಕಸೂತಿ ಕೆಲಸ, ಅಚ್ಚುಮೊಳೆಯ ಮುದ್ರಣ ವಸ್ತುಗಳು, ಮರದ ಕೆತ್ತನೆ, ಮಡ್‌ವಾಲ್ ಚಿತ್ರಕಲೆ, ಬೆಳ್ಳಿ ಕುಸುರಿ ಕಲಾಕೃತಿಗಳು ಲಭ್ಯ. 

ಭುಜ್‌ನಲ್ಲಿ ವಿಮಾನ ನಿಲ್ದಾಣವಿದೆ. ಇಲ್ಲಿಂದ 100 ಕಿ.ಮೀ ದೂರದಲ್ಲಿ ರಣ್‌ ಕಚ್‌ ಉತ್ಸವ ನಡೆಯುವ ಸ್ಥಳ. ಜತೆಗೆ ಉಪ್ಪಿನ ಮರುಭೂಮಿ ಇರುವ ಸ್ಥಳ. ಭುಜ್‌ನಿಂದ ಖಾಸಗಿ ವಾಹನಗಳ ಮೂಲಕವೇ ಇಲ್ಲಿಗೆ ತಲುಪಬೇಕು. ಅಹ್ಮದಾಬಾದ್‌ ಇಲ್ಲಿಗೆ ಸಮೀಪವಿರುವ ಮತ್ತೊಂದು ವಿಮಾನ ನಿಲ್ದಾಣ. ದೇಶದ ಎಲ್ಲ ಭಾಗಗಳಿಂದ ರೈಲು ಸಂಪರ್ಕ ವ್ಯವಸ್ಥೆ ಇದೆ.

ನಾಗೋವಾ ಬೀಚ್
ಡಿಯು (ಕೇಂದ್ರಾಡಳಿತ ಪ್ರದೇಶ) ಪ್ರದೇಶದ ಕಡಲ ತೀರಗಳಲ್ಲೊಂದು ನಾಗೋವಾ ಬೀಚ್‌. ಈ ವೇಳೆ ಇಲ್ಲಿನ ತಾಪಮಾನ ಕನಿಷ್ಠ ೧೬ ಡಿಗ್ರಿಯಿಂದ ಗರಿಷ್ಠ ೨೩ ಡಿಗ್ರಿ ಸೆಲ್ಷಿಯಸ್‌ನಷ್ಟು ಇರುತ್ತದೆ. ಕಡಲ ತೀರದಲ್ಲಿ ನಡೆಯುವ ಉತ್ಸವಗಳು ಪ್ರವಾಸಿಗರ ಪಾಲಿಗೆ ಅದ್ಭುತವನ್ನೇ ಸೃಷ್ಟಿಸುತ್ತದೆ.

ಇಲ್ಲಿ ವಾಸ್ತವ್ಯಕ್ಕೆ ಲಕ್ಸುರಿ ಹೋಟೆಲ್‌ಗಳಿವೆ. ರೆಸಾರ್ಟ್‌ಗಳು ಇವೆ. ಸರಾಸರಿ ಒಂದೂವರೆ ಸಾವಿರ ರೂಪಾಯಿಗೆ ಒಂದು ರಾತ್ರಿಯ ವಾಸ್ತವ್ಯಕ್ಕೆ ರೂಮ್‌ ಲಭ್ಯ. ಜೆಟ್ಟಿ ರೋಲ್ಸ್‌, ಸಮುದ್ರ ಮೀನು, ಏಡಿಯ ವಿಶೇಷ ಖಾದ್ಯಗಳನ್ನು ಸವಿಯಬಹುದು.

ಬಿಡುವಿನ ವೇಳೆಯಲ್ಲಿ ಟೌನ್ ಸ್ಕ್ವೇರ್ ಬಜಾರ್, ಮಹಾರಾಜ ಸೂಪರ್ ಮಾರ್ಕೆಟ್, ದಿ ಪ್ರಿನ್ಸೆಸ್ ಪಾರ್ಕ್, ಬೀಚ್ ಬಳಿ ಹೋಗಿ ಶಾಪಿಂಗ್ ಮಾಡಬಹುದು. ಇಲ್ಲಿ, ದಂತದ ಕೆತ್ತನೆಗಳು, ಮುತ್ತು ಆಭರಣಗಳು, ಸ್ಮಾರಕಗಳು, ಚಿಪ್ಪುಗಳು, ಹಿತ್ತಾಳೆ ಕಲಾಕೃತಿಗಳು, ಬಳೆಗಳು, ಟೆರಾಕೋಟಾ ಪೆನ್ ಸ್ಟ್ಯಾಂಡ್‌ಗಳು, ಬಿದಿರಿನ ಬುಟ್ಟಿಗಳು ಸಿಗುತ್ತವೆ.

ತಲುಪುವುದು ಹೇಗೆ?: ದೇಶದ ಪ್ರಮುಖ ಭಾಗಗಳಿಂದ ರೈಲು, ವಿಮಾನ ಮತ್ತು ರಸ್ತೆ ಮೂಲಕ ಡಿಯು ಸುಲಭವಾಗಿ ಪ್ರವೇಶಿಸಬಹುದು.

ಕೋವಲಂ ಬೀಚ್ (ಕೇರಳ)
ಕೋವಲಂ ಬೀಚ್‌ನ ಅತ್ಯಂತ ಸುಂದರ ಕಡಲ ತೀರ. ಈಜು, ಮೋಜು, ಸೂರ್ಯಸ್ನಾನ (ಸನ್‌ ಬಾತ್‌) ಸಾಹಸ ಕ್ರೀಡೆಗಳಿಗೆ ಇಲ್ಲಿ ಅವಕಾಶವಿದೆ. ಅರಬಿ ಸಮುದ್ರದ ತುಸು ಬೆಚ್ಚಗೆನಿಸುವ ನೀರಿನಲ್ಲಿ ಆನಂದಿಸಬಹುದು.

ಇಲ್ಲಿಯೂ ಉತ್ತಮ ಹೋಟೆಲ್‌ಗಳಿವೆ. ಒಂದು ರಾತ್ರಿ ವಾಸ್ತವ್ಯಕ್ಕೆ ಒಂದೂವರೆ ಸಾವಿರ ರೂಪಾಯಿಯಿಂದ ದರ ಆರಂಭ. ದಕ್ಷಿಣ ಭಾರತದ ಜನಪ್ರಿಯ ಖಾದ್ಯಗಳಾದ ಇಡ್ಲಿ, ದೋಸೆ, ವಡೆ, ಉತ್ತಪ್ಪ ಲಭ್ಯ. ಮತ್ಸಪ್ರಿಯರಿಗೆ ಸಮುದ್ರ ಮೀನುಗಳ ಖಾದ್ಯಗಳೂ ಸಿಗುತ್ತವೆ. ಬಿಡುವಿನ ವೇಳೆಯಲ್ಲಿ ಬೀಚ್‌ ಸುತ್ತಮುತ್ತಲಿನ ಮಳಿಗೆಗಳಲ್ಲಿ ಶಾಪಿಂಗ್ ಮಾಡಬಹುದು. ಈ ಸ್ಥಳಕ್ಕೆ ಭೇಟಿ ನೀಡಿದ ನೆನಪಿಗಾಗಿ ಕರಕುಶಲ ವಸ್ತುಗಳು, ಪುಸ್ತಕ, ಲುಂಗಿ, ಶಾಲು, ಚಿಪ್ಪಿನ ಆಭರಣಗಳನ್ನು ಖರೀದಿಸಬಹುದು.

ತಲುಪುವುದು ಹೇಗೆ?:‌ ಕೋವಲಂಗೆ ಹತ್ತಿರದಲ್ಲಿ ಅಂದರೆ ೧೫ ಕಿಲೋಮೀಟರ್‌ ದೂರದಲ್ಲಿ ತಿರುವನಂತಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ದೇಶದ ಎಲ್ಲ ಭಾಗಗಳಿಗೆ ಈ ನಿಲ್ದಾಣ ಸಂಪರ್ಕ ಕಲ್ಪಿಸುತ್ತದೆ. ಇಲ್ಲಿಯೇ ರೈಲು ನಿಲ್ದಾಣವೂ ಇದೆ. ವಿಮಾನ ನಿಲ್ದಾಣ ಅಥವಾ ರೈಲ್ವೆ ನಿಲ್ದಾಣದಿಂದ ಬೀಚ್ ತಲುಪಲು ಬಸ್ ಅಥವಾ ಟ್ಯಾಕ್ಸಿ ತೆಗೆದುಕೊಳ್ಳಬಹುದು. 

ಚೋಪ್ಟಾ (ಉತ್ತರಖಂಡ)

ಚೊಪ್ಟಾದಲ್ಲಿಯೂ ಹಿಮಾವೃತ ಪರ್ವತ ಪ್ರದೇಶಗಳಿವೆ. ನಂದಾ ದೇವಿ, ತ್ರಿಶೂಲ್ ಮತ್ತು ಚೌಖಂಬಾ ಪರ್ವತಗಳ ವಿಹಂಗಮ ನೋಟ ಕಾಣಬಹುದು. ಇಲ್ಲಿನ ಗಾಳಿಯೂ ತುಂಬಾ ಆಹ್ಲಾದಕರವಾಗಿದೆ. ಚಾರಣಪ್ರಿಯರಿಗೂ ಹೇಳಿ ಮಾಡಿಸಿದ ತಾಣ.

ಇಲ್ಲಿ ವಾಸ್ತವ್ಯಕ್ಕೆ ಉತ್ತಮ ಹೋಟೆಲ್‌ಗಳಿವೆ ಸಾವಿರ ರೂಪಾಯಿಯೊಳಗೆ ಒಂದು ರಾತ್ರಿಯ ವಸತಿ ಲಭ್ಯ. ನಾನ್‌ವೆಜ್‌ ಪ್ರಿಯರಿಗೆ ಕೋಳಿಪಲ್ಯ, ಸಸ್ಯ ಆಹಾರಿಗಳಿಗೂ ವಿಶೇಷ ಖಾದ್ಯಗಳಿವೆ.

ತಲುಪುವುದು ಹೇಗೆ?: ದೆಹಲಿಯಿಂದ ಹರಿದ್ವಾರದವರೆಗೆ ರೈಲಿನಲ್ಲಿ ಹೋಗಬಹುದು. ಜಾಲಿಗ್ರಾಂಟ್, ಹತ್ತಿರದ ವಿಮಾನ ನಿಲ್ದಾಣ. ಇಲ್ಲಿಂದ ರಸ್ತೆ ಮೂಲಕ ಚೋಪ್ಟಾ ತಲುಪಬಹುದು. ಉತ್ತಮ ರಸ್ತೆ ಸಂಪರ್ಕ ಇರುವ ತಾಣ ಇದು. ಸಾಕಷ್ಟು ಬಸ್‌ಗಳು ಲಭ್ಯವಿವೆ. ಕಾರು ಮೂಲಕ ಹೋಗಬಹುದು.  ಜಾಲಿ ಗ್ರಾಂಟ್‌ ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣ.

ಬಿನ್ಸರ್ (ಉತ್ತರಾಖಂಡ)
ಬಿನ್ಸಾರ್ ಚಳಿಗಾಲದಲ್ಲಿ ಭೇಟಿ ನೀಡುವ ಅತ್ಯಂತ ಅದ್ಭುತ ಸ್ಥಳಗಳಲ್ಲಿ ಒಂದು. ನಂದಾದೇವಿ, ಪಚ್ಚಾಚುಲಿ ಮತ್ತು ತ್ರಿಶೂಲ್‌ನ ಗಿರಿಶಿಖರಗಳು ಮುದ ನೀಡುತ್ತವೆ. ಬಿನ್ಸಾರ್ ವನ್ಯಜೀವಿ ಅಭಯಾರಣ್ಯ ಪ್ರಶಾಂತ ಮತ್ತು ದಟ್ಟ ಕಾಡುಗಳಿಗೆ ಹೆಸರುವಾಸಿ. ಹಿಮಾಲಯ ಶಿಖರಗಳಾದ ಕೇದಾರನಾಥ ಮತ್ತು ಬಿನ್ಸಾರ್‌ನ ಶೂನ್ಯ ಕೇಂದ್ರದಿಂದ (ಜೀರೋ ಪಾಯಿಂಟ್‌) ನಂದಾ ದೇವಿಯ ವಿಹಂಗಮ ನೋಟ ಕಾಣಬಹುದು.

ವಾಸ್ತವ್ಯಕ್ಕೆ ಉತ್ತಮ ಹೋಮ್‌ಸ್ಟೇಗಳಿವೆ. ಹೋಟೆಲ್‌, ಹೋಮ್‌ಸ್ಟೇಗಲಲ್ಲಿ ಮಡ್ವಾ ರೋಟ್ಟಿ, ಭಾಂಗ್‌ ಕಿ ಖತೈ, ಕೌಧ್‌ ದಾಲ್‌, ಕುಮಾವಾನಿ ರೊಟ್ಟಿ, ಆಲೂ ಗುಟ್ಕೆ, ಪಾಲಕ್‌ ಕಪಾಂತಹ ವಿಶೇಷ ಖಾದ್ಯಗಳ ರುಚಿ ನೋಡಬಹುದು. ಇಲ್ಲಿ, ನೈಸರ್ಗಿ ವಸ್ತುಗಳಿಂದ ತಯಾರಿಸಿದ ಕರಕುಶಲ ವಸ್ತುಗಳು ಮಾರಾಟಕ್ಕೆ ಲಭ್ಯ. ವಿಶೇಷವಾಗಿ ಸ್ಮರಣಿಕೆಗಳು, ಮರದ ವಸ್ತುಗಳು, ಸ್ವೆಟರ್‌, ಸ್ಕ್ವಾಷ್‌, ಹ್ಯಾಂಡ್‌ ಮೇಡ್‌ ಸೋಪ್‌, ಜೇನುತುಪ್ಪ ಸಿಗುತ್ತದೆ.

ತಲುಪುವುದು ಹೇಗೆ?: ಬಿನ್ಸಾರ್‌ ಪ್ರಮುಖ ನಗರಗಳಿಗೆ ರಸ್ತೆಯ ಸಂಪರ್ಕ ಹೊಂದಿದೆ. ಇಲ್ಲಿಂದ 152 ಕಿಲೋಮೀಟರ್‌ ದೂರದಲ್ಲಿ ಪಂತ್‌ನಗರದ ವಿಮಾನ ನಿಲ್ದಾಣ ಇದೆ. ಕಟ್ಗೋಡಂನಲ್ಲಿ ರೈಲು ನಿಲ್ದಾಣವಿದೆ. ಇದು ಬಿನ್ಸಾರ್‌ನಿಂದ 120 ಕಿಲೋಮೀಟರ್‌ ದೂರವಿದೆ.

ಇದನ್ನೂ ಓದಿ: ಭಾರತದ 15 ಪ್ರವಾಸಿ ಸ್ಥಳಗಳು...

ಪ್ರತಿಕ್ರಿಯಿಸಿ (+)