ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಲುಪೇಟೆಯ ಮುಗಿಲು... ಕೊಡಗು ಜಿಲ್ಲೆಯ 'ಮಾಂದಲಪಟ್ಟಿ'ಯ ಸೊಬಗು

Last Updated 20 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಮುಗಿಲು ಬೆಟ್ಟ, ಮಂಜು... ಈ ಪದಗಳು ಹಸಿರು ಪ್ರೇಮಿಗೆ ಸಾಧಾರಣವಾದವು. ಆದರೆ ಆ ಪದಗಳಲ್ಲಿ ಅಡಗಿರುವ ಅನಂತತೆಯ ಅಮೂರ್ತಗಳು ವಿಶ್ವರೂಪಿಯಾದವು. ನನ್ನ ಭಾಷೆ ಕಠಿಣವೆನಿಸುತ್ತಿರಬಹುದು. ಮುಗಿಲ ವ್ಯಾಪಾರವೂ ಕೂಡ ಅಷ್ಟೇ ಜಟಿಲವಾದುದು. ಅದಕ್ಕೆ ನನ್ನ ಇಷ್ಟೆಲ್ಲಾ ಪೀಠಿಕೆಗಳು !

ಮುಗಿಲ ವ್ಯಾಪಾರಕ್ಕೆ ತೆರಳಿ ಮುಗಿಲಿಗೆ ಮುತ್ತುಕೊಟ್ಟು, ಹಸಿರು ಹಾಸಿನ ಮೇಲೆ ಮಲಗಿ ಮಂಜಿನ ಹನಿಗಳೊಂದಿಗೆ ರಾಸಲೀಲೆಯಾಡಬೇಕೆಂದರೆ ಮಲೆನಾಡಿನ ‘ಮುಗಿಲುಪೇಟೆ’ಗೆ ಹೋಗಬೇಕು. ಈ ಸುಂದರ ನಿಸರ್ಗ ತಾಣಕ್ಕೆ ಸಿನಿಮಾದವರು ‘ಮುಗಿಲಪೇಟೆ’ ಎಂದು ಹೆಸರಿಟ್ಟುಬಿಟ್ಟರು. ಆದರೆ ಕೊಡಗಿನ ಜನ ಬಹಳ ಪ್ರೀತಿಯಿಂದ ‘ಮಾಂದಲಪಟ್ಟಿ’ ಎಂದು ಕರೆಯುತ್ತಾರೆ.

ಕೊಡಗಿನವರಿಗೆ ಈ ಸ್ಥಳ ವಿಶೇಷವಾಗೇನೂ ಕಾಣುವುದಿಲ್ಲ, ಅವರಿಗೆ ಎಲ್ಲ ಬೆಟ್ಟಗಳಂತೆ ಅದೂ ಒಂದು ಬೆಟ್ಟ. ದಿನನಿತ್ಯ ಬರೀ ಬದುಕಿನ ಜಂಜಾಟದಲ್ಲಿ ತೊಳಲಾಡುವ ನಮ್ಮ ನಿಮ್ಮಂತಹವರಿಗೆ ಮಾತ್ರ ಸ್ವರ್ಗ... ಹಸಿರು ಸ್ವರ್ಗ !

ಮಡಿಕೇರಿಗೆ ಸುಮಾರು 20 ಕಿ.ಮೀ. ದೂರದಲ್ಲಿರುವ ‘ಮಾಂದಲಪಟ್ಟಿ’ ಪುಷ್ಪಗಿರಿ ಎಂಬ ವನ್ಯಜೀವಿಧಾಮಕ್ಕೆ ಸೇರಿದೆ. ಅರಣ್ಯ ಇಲಾಖೆಯ ಅಧೀನದಲ್ಲಿರುವುದರಿಂದ ಪ್ರವಾಸಿಗರು ಅಲ್ಲಿಗೆ ಹೋಗಬೇಕಾದರೆ ಅನುಮತಿ ಪಡೆಯಲೇಬೇಕು.

ಮಡಿಕೇರಿಯಿಂದ ಅಬ್ಬಿಫಾಲ್ಸ್ ರಸ್ತೆಯಲ್ಲಿ ಹಾಗೂ ಮಡಿಕೇರಿಯಿಂದ ಸೋಮವಾರಪೇಟೆಗೆ ಹೋಗುವ ರಸ್ತೆಯಲ್ಲಿ ಸಾಗಿದರೆ ಎಂಟು ಕಿ.ಮೀ. ದೂರದಲ್ಲಿ ಮಕ್ಕಂದೂರು ಎಂಬ ಗ್ರಾಮ ಸಿಗುತ್ತದೆ. ಅಲ್ಲಿಂದ ಎಡಕ್ಕಿರುವ ರಸ್ತೆಯಲ್ಲಿ ಕ್ರಮಿಸಿದರೆ ‘ಮಾಂದಲಪಟ್ಟಿ’ ಗೆ ಹೋಗಬಹುದು.

ಮಡಿಕೇರಿಯಿಂದ ಅಬ್ಬಿಫಾಲ್ಸ್‌ನ ಕಡಿದಾದ ರಸ್ತೆಯಲ್ಲಿ ‘ಜೀಪ್ ಸಫಾರಿ’ ಹೋಗುವುದೇ ರೋಚಕ ಅನುಭವ. ಬೆಟ್ಟವನ್ನು ಹಾಗೆಯೇ ಹತ್ತುವ ಜೀಪುಗಳು, ಕಲ್ಲುಗಳ ಮೇಲೆ ಸಾಗುವಾಗ ಒಂದು ರೀತಿ ಭಯ, ಕುತೂಹಲ, ಸಂತೋಷ ಮಿಶ್ರಿತ ಅನುಭವ. ಸುತ್ತಮುತ್ತಲಿನ ಕಾಫಿ, ಏಲಕ್ಕಿ ತೋಟಗಳು, ತೊರೆ, ಝರಿಗಳು, ಅಂಟಿಕೊಂಡು ನಿಂತಿರುವ ಪಶ್ಚಿಮಘಟ್ಟದ ಶ್ರೇಣಿಗಳು, ನಮ್ಮ ಅಹಂಕಾರವನ್ನು ತೊಡೆದು ಬಿಡುವ ಬೃಹದಾಕಾರವಾದ ಮರಗಳು....! ಯಾವುದೇ ಫಿಲಾಸಫಿ ಹೇಳಬೇಕೆಂದುಕೊಂಡು ಮನಸ್ಸು ನಿರ್ಧರಿಸುತ್ತಿರುವಂತೆಯೇ ವಾಸ್ತವಕ್ಕೆ ತಂದುಬಿಡುವ ಜೀಪ್ ಡ್ರೈವರ್‌ನ ವಾಸ್ತವ ಪ್ರಜ್ಞೆ, ಅದರೊಳಗಿನ ಚಾಕಚಕ್ಯತೆ, ಉಫ್! ಎಲ್ಲವೂ......ನನಗರಿಯದ ಅರಿವು !

ಮೊದಲೆಲ್ಲಾ ‘ಮಾಂದಲಪಟ್ಟಿ’ಗೆ ದನಮೇಯಿಸಲು ಅಥವಾ ಶಿಕಾರಿಗೆ ಜನ ಹೋಗುತ್ತಿದ್ದರಂತೆ. ಅಲ್ಲಿಗೆ ಹೋಗಲು ಯಾವುದೇ ರಸ್ತೆಗಳಿರಲಿಲ್ಲ, ಆದರೆ ಚಾರಣ ಪ್ರಿಯರು ನಿಸರ್ಗದ ಚೆಲುವಿಗೆ ಮನಸೋತು ಯಾವಾಗ ಅಲ್ಲಿಗೆ ಹೋಗಲು ಪ್ರಾರಂಭಿಸಿದರೋ, ಪ್ರವಾಸಿಗರಿಗೆ ಅನುಕೂಲವಾಗುವಂತೆ ಒಂದಷ್ಟು ದೂರ ಅರಣ್ಯ ಇಲಾಖೆಯ ವಸತಿ ಗೃಹದವರೆಗೆ ಡಾಂಬರು ಹಾಕಲಾಗಿದೆ. ಆ ನಂತರ ಮಣ್ಣು ರಸ್ತೆಯಲ್ಲಿ ಸಾಗಬೇಕಾಗುವುದು ಅನಿವಾರ್ಯ.

ಸಮುದ್ರ ಮಟ್ಟದಿಂದ ಸುಮಾರು ನಾಲ್ಕು ಸಾವಿರ ಅಡಿ ಎತ್ತರವಿರುವ ಮಾಂದಲಪಟ್ಟಿಗೆ ಇತ್ತೀಚೆಗೆ ಹೆಚ್ಚಾಗಿ ಪ್ರವಾಸಿಗರು ಬರುತ್ತಿದ್ದಾರೆ. ‘ಮಾಂದಲಪಟ್ಟಿ’ ಎಂದರೆ ಎತ್ತರವಾದ ಜಾಗ ಎಂದರ್ಥ. ಎತ್ತರೆತ್ತರ ಸಾಗುವುದೆಂದರೆ ಬಲು ತ್ರಾಸದ ಕೆಲಸ. ಗುರಿ ತಲುಪಿತೆಂದರೆ ಅಲ್ಲೊಂದು ಸಂಭ್ರಮ. ಮಾಂದಲಪಟ್ಟಿಗೆ ಹೋಗುವಾಗ ಇಂಥದ್ದೇ ಅನುಭವವಾಗುವುದು ಸಹಜ.

ನಿಸರ್ಗದ ಮುಂದೆ ನಾವೆಷ್ಟೇ ದರ್ಪ ತೋರಿದರೂ ಅತಿಕ್ರಮಣ ಮಾಡಿದರೂ ಮೌನವಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಾ, ಸರಿಯಾದ ಸಮಯದಲ್ಲಿ ತಕ್ಕಪಾಠವನ್ನು ಕಲಿಸುತ್ತಾ ವಿಶ್ವರೂಪ ದರ್ಶನವನ್ನು ಕೊಡುವುದೇ ಅದರ ಕಾಯಕ !

ಸಿನಿಮಾದ ಕ್ಯಾಮೆರಾ ಕಣ್ಣುಗಳು ತನ್ನ ನೋಟವನ್ನು ಮಾಂದಲಪಟ್ಟಿಗೆ ಹರಿಸಿದ್ದೇ ತಡ ಜನ ಕೌತುಕದಿಂದ ಇಲ್ಲಿಗೆ ದೌಡಾಯಿಸುತ್ತಿದ್ದಾರೆ. ಇದು ಸಂತಸದ ವಿಷಯವೇ . ಆದರೆ ಇಲ್ಲಿಗೆ ಬರುವವರು ತಿಂಡಿ, ತಿನಿಸುಗಳ ಚೀಲಗಳನ್ನು ಬಾಟಲಿಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದೊಂದು ನಿಗ್ರಹವಾಗಿಬಿಟ್ಟರೆ ನಿಜವಾಗಿಯೂ ಮುಗಿಲಿನ ವ್ಯಾಪಾರ ಸರಾಗವಾಗಿ ಆಗುತ್ತದೆ.

ಚಿತ್ರಗಳು : ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT